ADVERTISEMENT

ಸಂಗತ | ರೀಲ್ಸ್ ಕಿರಿಕಿರಿ: ಹೊಸ ಸವಾಲು

ಸಾರ್ವಜನಿಕ‌ ಸ್ಥಳಗಳಲ್ಲಿ ಜೋರು ದನಿಯಿಟ್ಟು ರೀಲ್ಸ್ ವೀಕ್ಷಿಸುತ್ತಾ ಸುತ್ತಮುತ್ತಲಿನವರಿಗೆ ಕಿರಿಕಿರಿ ಉಂಟು ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ.

ಸದಾಶಿವ ಸೊರಟೂರು
Published 6 ಆಗಸ್ಟ್ 2024, 23:41 IST
Last Updated 6 ಆಗಸ್ಟ್ 2024, 23:41 IST
   

ಬಹುಶಃ ಇದು ನಿಮ್ಮ ಗಮನಕ್ಕೆ ಬಂದಿರಬಹುದು. ನೀವು ಬಸ್ಸಿನಲ್ಲಿ ಕೂತಿರುತ್ತೀರಿ. ನಿಮ್ಮ ಹಿಂದಿನ ಸೀಟಿನಲ್ಲೊ ಪಕ್ಕದ ಸೀಟಿನಲ್ಲೊ ಯಾರೋ ಒಬ್ಬ ತನ್ನ ಮೊಬೈಲ್‌ ಫೋನ್‌ನಲ್ಲಿ ಜೋರು ದನಿ ಇಟ್ಟುಕೊಂಡು ತುಣುಕು ಹಾಡೊ, ಕುಹಕ ನಗುವೊ, ವಿಚಿತ್ರ ಮಾತುಗಳನ್ನೊ ಕೇಳಿಸಿಕೊಳ್ಳುತ್ತಿರುತ್ತಾನೆ.‌ ಅದನ್ನು ಕೇಳಿಸಿಕೊಳ್ಳಲು ನಿಮಗೆ ಹಿಂಸೆಯೆನಿಸಬಹುದು. ಮನಸ್ಸಿಗೆ ಕಿರಿಕಿರಿ ಆಗಬಹುದು. ‘ಆಫ್‌ ಮಾಡಿ’ ಅಂತ ಜೋರು ಮಾಡುತ್ತೀರಿ... ಬೆಳಿಗ್ಗೆ ಕೆಲಸಕ್ಕೆ ಹೊರಟ ನಿಮಗೆ ದಿನಪೂರ್ತಿ ನಿರುತ್ಸಾಹ. 

ಬಸ್ ನಿಲ್ದಾಣ, ಹೋಟೆಲ್, ಉದ್ಯಾನ, ಯಾವುದೋ ಕಚೇರಿಯ ಆವರಣ, ಸರ್ಕಾರಿ ಆಸ್ಪತ್ರೆಯಲ್ಲಿ ಕಾದು ಕೂರುವ ಜಾಗ... ಹೀಗೆ ಎಲ್ಲೆಂದರಲ್ಲಿ ಇತ್ತೀಚೆಗೆ ಒಂದೆರಡು ಕ್ಷಣ ನಾವು ನಮ್ಮಷ್ಟಕ್ಕೆ ಕೂರಲು ಸಾಧ್ಯ
ವಾಗುತ್ತಿಲ್ಲ. ಈ ಹುಚ್ಚು ರೀಲ್ಸ್ ಕಾಟ. ಅದು ಕೂಡ ಜೋರು ದನಿಯಲ್ಲಿ. ಇತ್ತ ಅವರೊಂದಿಗೆ ಜಗಳ ಮಾಡಲಾಗದೆ, ಅತ್ತ ಅದನ್ನು ಕೇಳಿಸಿಕೊಳ್ಳಲಾಗದೆ ಅಸಹನೆಯಿಂದ ಒದ್ದಾಡುವಂತಹ ಸ್ಥಿತಿ.‌ 

ನಾವು ಕೇಳುವ ಹಾಡಿನ ತುಣುಕು, ಜೋಕು, ಹರಟೆ... ಇವೆಲ್ಲ ನಮ್ಮ ಖಾಸಗಿ ಸಂಗತಿಗಳು. ಅವು ನಮಗೆ ಮಾತ್ರ ಬೇಕಾದಂತಹವು, ಇಡೀ ಲೋಕಕ್ಕೆ ಅಲ್ಲ. ಅವು ನಮಗೆ ಮಾತ್ರ ಕೇಳಿಸಿದರೆ ಸಾಕು. ಆ ಹಾಡನ್ನೋ ಹರಟೆಯನ್ನೋ ಪಕ್ಕದವರು ಏಕೆ ಕೇಳಿಸಿಕೊಳ್ಳಬೇಕು? ಅದರಿಂದ ಅವರಿಗೆ ಕಿರಿಕಿರಿಯಾಗುವುದಾದರೆ ಅವರು ನಮ್ಮ ಬಗ್ಗೆ ಏನಂದುಕೊಂಡಾರು? ಇಂತಹ ಸಣ್ಣಪುಟ್ಟ ಸೂಕ್ಷ್ಮಗಳನ್ನೂ ರೂಢಿಸಿಕೊಳ್ಳದಿದ್ದರೆ ಹೇಗೆ? 

ADVERTISEMENT

ಇತ್ತೀಚೆಗಂತೂ ಇದು ಅತಿಯಾಗುತ್ತಿದೆ. ಬಸ್ಸುಗಳಲ್ಲಿ ಈ ಬಗ್ಗೆ ಸೂಚನಾಫಲಕ ಹಾಕಿದರೂ ಅದನ್ನು ಪಾಲಿಸುವುದಿಲ್ಲ. ಕೆಲವೊಮ್ಮೆ ಬಸ್‌ ಕಂಡಕ್ಟರ್ ಕೂಡ ಜೋರಾಗಿ ರೀಲ್ಸ್ ನೋಡುತ್ತಾ ಕೂತಿರುವುದುಂಟು. ಗರಿಗರಿ ದಿರಿಸು ಧರಿಸಿ ಸುಶಿಕ್ಷಿತರಂತೆ, ಸಭ್ಯರಂತೆ ಕಾಣುವವರು ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಜೋರಾಗಿ ರೀಲ್ಸ್ ನೋಡುತ್ತಾ ಮೈಮರೆತಿರುತ್ತಾರೆ. ಯಾವ ಸಂದರ್ಭದಲ್ಲಿ, ಯಾವ ಸ್ಥಳದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಅರಿತು, ಅದರಂತೆ ವರ್ತಿಸುವುದು ನಾಗರಿಕತೆಯ ಮೊದಲ ಪಾಠ. ಅದನ್ನು ಎಲ್ಲರೂ ಕಲಿಯಬೇಕು.

ಮೊಬೈಲ್ ಫೋನ್‌ ಅವರದಾಗಿರಬಹುದು. ಸಮಯ ಮತ್ತು ಮೊಬೈಲ್‌ ಫೋನ್‌ನ ಡೇಟಾ ಕೂಡ ಅವರದೇ ಆಗಿರಬಹುದು.‌ ಆದರೆ ಅವರು ಕೂತಿರುವ ಜಾಗ ಅವರ ಖಾಸಗಿ ಸ್ವತ್ತಲ್ಲ. ಸಾರ್ವಜನಿಕ ಸ್ಥಳ. ಅಲ್ಲಿ ಅವರಂತಹ ನೂರಾರು ಜನರಿರುತ್ತಾರೆ. ಬೇರೊಬ್ಬರ ನೆಮ್ಮದಿಗೆ ಭಂಗ ತರುವ ಹಕ್ಕು ಯಾರಿಗೂ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಒಬ್ಬರು ಇನ್ನೊಬ್ಬರ ನೆಮ್ಮದಿಗೆ ಭಂಗ ತರಬಾರದು.

ಕೆಲವು ಬಸ್ಸುಗಳಲ್ಲಿ ಪ್ರಯಾಣಿಕರಿಗೆ ಪಯಣ ಹಿತಕರವಾಗಿರಲಿ ಎಂದು ಹಾಡು ಹಾಕುತ್ತಾರೆ. ಕೆಲವೊಮ್ಮೆ ನಿರ್ದಿಷ್ಟ ಹಾಡೊಂದು ನಿಮಗೆ ಇಷ್ಟವಿಲ್ಲದಿದ್ದರೂ ತುಂಬ ಕಿರಿಕಿರಿ ಅನ್ನಿಸುವುದಿಲ್ಲ. ಸಹ
ಪ್ರಯಾಣಿಕರ ಸಲುವಾಗಿ ಅದನ್ನು ಸಹಿಸಿಕೊಳ್ಳಬಹುದು. ನಿಲ್ದಾಣಗಳಲ್ಲಿ ವಾಹನಗಳ ಬರುವಿಕೆ, ಹೊರಡುವ ವೇಳೆಯ ಬಗ್ಗೆ ಕೊಡುವ ಮಾಹಿತಿ ಎಲ್ಲರಿಗೂ ಉಪಯುಕ್ತ. ಆದರೆ ಪಕ್ಕದಲ್ಲೇ ಕೂತು ಬೇಡವೆನ್ನಿಸಿದರೂ ಕೇಳಿಸಿಕೊಳ್ಳಬೇಕಾದ ರೀಲ್ಸ್‌ ಸದ್ದು ಕರ್ಕಶವೆನಿಸುತ್ತದೆ.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯರೊಬ್ಬರು, ‘ಈ ರೀಲ್ಸ್ ಸದ್ದಿನ ಕಿರಿಕಿರಿಯಿಂದ ನನಗೆ ಈ ನಡುವೆ ಉದ್ವೇಗ ಉಂಟಾಗುತ್ತಿದೆ. ವಿನಾಕಾರಣ ಕಚೇರಿಯಲ್ಲಿ ಕೋಪ ಬರುತ್ತದೆ. ಈ ಕಿರಿಕಿರಿಯಿಂದ ಮೆದುಳು ನರಳುತ್ತದೆ’ ಎಂದು ಹೇಳುತ್ತಿದ್ದರು.‌

ಬೇರೆ ಬೇರೆ ಬಗೆಯ ಚಟಗಳಂತೆ ರೀಲ್ಸ್ ಕೂಡ ಈಗ ಚಟವಾಗಿದೆ. ಸಾರ್ವಜನಿಕ ಸ್ಥಳಗಳಿಂದ ಧೂಮಪಾನವನ್ನು ಆಚೆಗಿಡಲು ಎಷ್ಟೋ ವರ್ಷಗಳು ಬೇಕಾದವು. ಈಗ ರೀಲ್ಸ್‌ ರೂಪದಲ್ಲಿ ಹೊಸ ಸವಾಲು ಎದುರಾಗಿದೆ. ಸಾರ್ವಜನಿಕ‌ ಸ್ಥಳಗಳಲ್ಲಿ ಜೋರು ದನಿಯ ರೀಲ್ಸ್ ಸಹಿಸಿಕೊಳ್ಳುವುದು ಧೂಮಪಾನ ಸಹಿಸಿ
ಕೊಳ್ಳುವಷ್ಟೇ ಕಿರಿಕಿರಿ ಉಂಟುಮಾಡುತ್ತದೆ. ಅದಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಲಗಾಮು ಹಾಕಲು ಇನ್ನೆಷ್ಟು ದಿನಗಳು ಬೇಕೋ? 

ಹೊತ್ತು ಕಳೆಯಲು ಆಗುತ್ತಿಲ್ಲ, ಬಸ್ ಇನ್ನೂ ಬಂದಿಲ್ಲ, ಬರಬೇಕಾದವರು ಬರುವುದು ತಡವಾಗುತ್ತಿದೆ, ಊರು ದೂರ... ಇಂತಹ ಸಂದರ್ಭಗಳಲ್ಲಿ ಸಮಯವೂ ಸಾಗಬೇಕು, ಮನರಂಜನೆಯೂ ಸಿಗಬೇಕು ಎಂದಿದ್ದಾಗ ರೀಲ್ಸ್ ನೋಡುತ್ತೀರಿ. ನಿಮ್ಮ ಉದ್ದೇಶ ಸರಿ ಇದೆ. ಆದರೆ, ಬೇರೆಯವರಿಗೆ ತೊಂದರೆಯಾಗದಂತೆ, ನಿಮ್ಮಷ್ಟಕ್ಕೆ ನೀವು ಕೇಳಿಸಿಕೊಳ್ಳಲು ಅನೇಕ ಸಾಧನಗಳಿವೆ. ಅವುಗಳನ್ನು ಬಳಸಿಕೊಂಡು ಕೇಳಿದರೆ ನಿಮಗೂ ನೆಮ್ಮದಿ, ಬೇರೆಯವರಿಗೂ ನೆಮ್ಮದಿ. 

ಇಂತಹದೊಂದು ಸೂಕ್ಷ್ಮವನ್ನು ನಮ್ಮ ಪರಿಸರ, ಹಿರಿಯರು, ಶಿಕ್ಷಣ ಹೇಳಿಕೊಡಬೇಕಿತ್ತು. ಅವು ಯಾವಾಗಲೋ ಅಂತಹ ಪ್ರಯತ್ನವನ್ನು ಕೈಬಿಟ್ಟಿವೆ. ಕೆಲವರಿಂದ ಹೆಚ್ಚು ಜನರಿಗೆ ತೊಂದರೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ರವಷ್ಟು ಮೌನವೂ ದುಬಾರಿಯಾಗಬಹುದು. ಬರೀ ಸದ್ದೇ ಮೇಲುಗೈ ಸಾಧಿಸಬಹುದು. ಇನ್ನು ಮುಂದೆ, ರೀಲ್ಸ್‌ ಹಾವಳಿಗೆ ಕಡಿವಾಣ ಹಾಕಲು ದಂಡದ ಪ್ರಯೋಗ ಮಾಡಬೇಕಾದ ಕಾಲವೂ ಬರಬಹುದು! ಎಚ್ಚೆತ್ತುಕೊಳ್ಳಲು ಇನ್ನೂ ಕಾಲ ಮಿಂಚಿಲ್ಲ. ಈ ದಿಸೆಯಲ್ಲಿ ಪ್ರಯತ್ನ ಆಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.