ADVERTISEMENT

ಸಂಗತ: ಸ್ವಾಮೀಜಿಗಳು ಮತ್ತು ರಾಜಕಾರಣ

ರಾಜಕಾರಣದ ಒಳಸುಳಿಗಳೆಲ್ಲ ಕರತಲಾಮಲಕ ಆಗಿರುವ ಈಗಿನ ಕಾವಿಧಾರಿಗಳಿಗೆ ಯಾವ ‘ಉಸಾಬರಿ’ ಬೇಕಿಲ್ಲ ಎಂದು ಕೇಳಬೇಕಾಗಿದೆ

ಆರ್.ಲಕ್ಷ್ಮೀನಾರಾಯಣ
Published 27 ಅಕ್ಟೋಬರ್ 2024, 21:11 IST
Last Updated 27 ಅಕ್ಟೋಬರ್ 2024, 21:11 IST
<div class="paragraphs"><p>ಸಂಗತ</p></div>

ಸಂಗತ

   

ಪೇಜಾವರ ಮಠಾಧೀಶರು ಹೇಳಿದರು ಎನ್ನಲಾದ ಒಂದು ಮಾತಿನ ನೆಪ ಮಾಡಿಕೊಂಡು ನಾರಾಯಣ ಎ. ಅವರು ‘ಜಾತ್ಯತೀತತೆ ಮತ್ತು ಜಾತಿಗಣತಿ’ ಎಂಬ ಲೇಖನದಲ್ಲಿ (ಪ್ರ.ವಾ., ಅ. 25) ಜಾತಿಗಣತಿಯ ಬಗ್ಗೆ ಹೇಳಿರುವ ಮಾತುಗಳು ಬಹುಶಃ ಪ್ರಸ್ತುತವಾಗಿಯೇ ಸಮಂಜಸವಾಗಿಯೇ ಇವೆ. ಆದರೆ ಅವರು ಹೇಳಿರುವ ಒಂದೆರಡು ಮಾತುಗಳು ತುಂಬ ಸೋಜಿಗ ಉಂಟುಮಾಡಿದವು. ಅವೆಂದರೆ, ‘ಸ್ವಾಮೀಜಿ ಅಂತ ಕರೆಸಿಕೊಳ್ಳುವ ಅವರಿಗೆ ಅಪ್ಪಟ ಲೌಕಿಕ ವ್ಯವಹಾರಗಳಿಗೆ ಸಂಬಂಧಿಸಿದ ಜಾತಿ ಜನಗಣತಿ, ಅದರೊಳಗಣ ರಾಜಕಾರಣದ ಒಳಸುಳಿಗಳಂತಹವನ್ನು ಪ್ರಶ್ನಿಸುವ ಉಸಾಬರಿ ಬೇಕೆ ಎನ್ನುವ ಮರುಪ್ರಶ್ನೆಯನ್ನು ಯಾರಾದರೂ ಕೇಳಬೇಕಲ್ಲವೆ?’ ಎಂಬ ಮತ್ತು ನಿಜಕ್ಕೂ ‘ಸ್ವಾಮೀಜಿಗಳು’ ಅಂತ... ಎಂದು ಪ್ರಾರಂಭವಾಗುವ ದೀರ್ಘ ಪ್ಯಾರಾದಲ್ಲಿ ಬರುವ... ‘ಲೋಕಾತೀತ ಪ್ರಜ್ಞೆ ಇರುವ ಸಂತರು ಈ ದೇಶಕ್ಕೆ ಬೇಕಾಗಿದೆ’ ಎಂಬ ಮಾತುಗಳು. ಅವರ ಎರಡನೇ ಮಾತೇ ಅಂಥ ಲೋಕಾತೀತ ಪ್ರಜ್ಞೆ ಇರುವ ‘ಸಂತರು’ ಸದ್ಯಕ್ಕೆ ಇಲ್ಲ ಅಥವಾ ಅಂಥವರು ಕಾಣುತ್ತಿಲ್ಲ ಎಂಬ ಅರ್ಥವನ್ನು ಹೊರಡಿಸುತ್ತಿದೆ. ಅದನ್ನು ಕುರಿತೇ ಈ ಬರಹ.

ನಮ್ಮ ದೇಶದಲ್ಲಿ ಸರ್ವಸಂಗ ಪರಿತ್ಯಾಗದ, ವೈರಾಗ್ಯದ, ತ್ಯಾಗದ, ಸಕಲ ಜೀವಾತ್ಮರಿಗೆ ಲೇಸನೇ ಬಯಸುವಂಥ ಗುಣಗಳನ್ನು ಸಂಕೇತಿಸುವ ಕಾಷಾಯ ವಸ್ತ್ರವನ್ನು ಧರಿಸಿದವರನ್ನು ಎಲ್ಲಿಲ್ಲದ ಗೌರವ, ಮರ್ಯಾದೆ, ಶ್ರದ್ಧಾಭಕ್ತಿಯಿಂದ ಕಾಣುವುದು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಈಗ ಅವರು ಕೇಳಿರುವ ‘... ಉಸಾಬರಿ ಬೇಕೆ?’ ಎಂಬಂಥ ಪ್ರಶ್ನೆಯೇ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿರುವ ರೀತಿಯಲ್ಲಿ ಬಹುಪಾಲು ಕಾಷಾಯ ಅಥವಾ ಕಾವಿಧಾರಿಗಳ ನಡೆ ಇರುವುದನ್ನು ನಮ್ಮ ದೇಶದ ಜನ ಕಾಣುತ್ತ ಬಂದಿದ್ದಾರೆ. ಅವರಿಗೆ ಯಾವ ‘ಉಸಾಬರಿ’ ಬೇಕಿಲ್ಲ? ಎಂದು ಕೇಳಬೇಕಾಗಿದೆ.

ADVERTISEMENT

ತಮ್ಮ ಜೀವಮಾನದ ಕಡೆಯ ಉಸಿರಿರುವ ತನಕವೂ ರಾಜಕಾರಣವನ್ನು ಬಿಟ್ಟು ಇನ್ನೇನನ್ನೂ ಮಾಡದ, ಮಾಡಲರಿಯದ, ರಾಜಕಾರಣವನ್ನು ಬಿಟ್ಟರೆ ನೀರಿನಿಂದ ಹೊರತೆಗೆದ ಮೀನಿನಂತಾಗಿ ಬಿಡುವ ನುರಿತ ವಯೋವೃದ್ಧ ರಾಜಕಾರಣಪಟು
ಗಳಿಗೂ ಅರ್ಥವಾಗದಂಥ ರಾಜಕಾರಣದ ಒಳಸುಳಿಗಳೆಲ್ಲ ಕರತಲಾಮಲಕವಾಗಿರುವ; ಅಷ್ಟೇ ಏಕೆ ಆ ವಿಷಯಗಳಲ್ಲಿ ಬೇಕಾದರೆ ಅವರಿಗೂ ಪಾಠ ಹೇಳಿಕೊಡುವಷ್ಟು ಪ್ರಬುದ್ಧರಾದ ಕಾವಿಧಾರಿಗಳ ಸಂಖ್ಯೆ ಅಪಾರವಾಗಿಯೇ ಇದೆ ಎನ್ನುವುದನ್ನೂ ನಮ್ಮ ಜನ ಚೆನ್ನಾಗಿ ಬಲ್ಲರು.

ಪ್ರತಿ ಚುನಾವಣೆಯ ಸಂದರ್ಭದಲ್ಲಿ, ತಮ್ಮ ಸಮುದಾಯದ ವೋಟು ಬೇಕಿದ್ದರೆ ತಮ್ಮ ಮಾತು ಗಳನ್ನು ನಡೆಸಿಕೊಡಬೇಕೆಂದು ಎಲ್ಲ ರಾಜಕೀಯ ಪಕ್ಷಗಳಿಗೆ ತೀವ್ರ ಒತ್ತಡ ಹಾಕುವುದರಿಂದ ಆರಂಭಿಸಿ, ಮುಖ್ಯಮಂತ್ರಿ ಸಂಪುಟ ರಚಿಸುವಾಗ ತಮ್ಮ ಸಮುದಾಯದ ಇಂಥಿಂಥ ವ್ಯಕ್ತಿಯನ್ನೇ ಮಂತ್ರಿ ಮಾಡಬೇಕು, ಇಂಥಿಂಥ ಸಮೃದ್ಧವಾದ ಖಾತೆಗಳನ್ನೇ ಕೊಡಬೇಕು ಎಂದು ಒತ್ತಾಯಿಸುವ, ಪ್ರಭಾವ ಬೀರುವ ಸಂದರ್ಭಗಳಲ್ಲಿ ಅದು ನಿಚ್ಚಳವಾಗಿ ವ್ಯಕ್ತವಾಗುತ್ತಿರುವುದು ಸೂರ್ಯ ಸತ್ಯ. ಹಾಗಾಗಿ, ಬಹಳಷ್ಟು ಕಾಷಾಯಧಾರಿಗಳಿಗೆ ‘ಲೌಕಿಕ ವ್ಯವಹಾರಗಳಿಗೆ ಸಂಬಂಧಿಸಿದ’ ಎನ್ನುವ ಮಾತನ್ನು ಬಳಸುವುದೇ ಸರಿಯಾಗಲಾರದು. ಅವರು ಮುಳುಗಿರುವುದೇ ಪರಮ ಲೌಕಿಕದಲ್ಲಿ.

ಆಧ್ಯಾತ್ಮಿಕ ಚಿಂತನೆ, ಧಾರ್ಮಿಕ ಚಿಂತನೆ ಎಂಬುದು ಬಹಳಷ್ಟು ಕಾಷಾಯಧಾರಿಗಳಿಗೆ ಮತ್ತು ಅವರು ಅಧ್ಯಕ್ಷರಾಗಿರುವ ಮಠಗಳಿಗೆ ‘ನರ್ಮದೆಯಿಂ ಗೆಂಟು’- ಅಂದರೆ ಬಹಳ ದೂರ. ಅವು ನೆಪಮಾತ್ರವಾಗಿ ಹೊರ ಆವರಣಗಳಾಗಿರುತ್ತವೆ. ಅವುಗಳಿಗೆ ಕೂಡ ಅವರು ಧರಿಸಿರುವ ಕಾವಿಯ ಹಾಗೆಯೇ ಜನರನ್ನು ಸೆಳೆಯುವ ಲಾಂಛನಗಳಿಗಿಂತ ಹೆಚ್ಚಿನ ಅರ್ಥವಿಲ್ಲ. ಕೆಲವರಂತೂ ಸಮಾಜದ ತಿರಸ್ಕಾರಕ್ಕೆ ಒಳಗಾಗುವಂಥ ಕಾರಣಗಳಿಗಾಗಿ ಕೋರ್ಟಿನ ಕಟಕಟೆಯನ್ನು ಏರಿರುವುದು, ಏರುತ್ತಿರುವುದು ದಿನನಿತ್ಯದ ಸುದ್ದಿಗಳಾಗುತ್ತಿವೆ. ಬಹುಪಾಲು ಮಠಗಳೆಲ್ಲ ಆಯಾ ಸಮು
ದಾಯದವರನ್ನು ಒಟ್ಟುಗೂಡಿಸುವ ಕೇಂದ್ರಗಳು ಮತ್ತು ಮಠಾಧೀಶರೆಂಬುವವರು ಅವುಗಳ ನೇತಾರರು.

ಅವು ತಮ್ಮ ಸಮುದಾಯಗಳ ಸಂಖ್ಯಾಬಲವನ್ನು ಸಂದರ್ಭ ಬಂದಾಗ ಇನ್ನಿಲ್ಲದಂತೆ ಮೆರೆಸುವ ಶಕ್ತಿಕೇಂದ್ರಗಳೆಂದರೂ ನಡೆಯುತ್ತದೆ. ಅವುಗಳಿಗಿಂತ ಹೆಚ್ಚಿನದನ್ನು ಸದ್ಯದಲ್ಲಿ ಅವುಗಳಿಂದ ನಿರೀಕ್ಷಿಸುವುದೂ ವ್ಯರ್ಥ ಎನ್ನುವ ರೀತಿಯಲ್ಲಿರುವುದು ದುರ್ದೈವವೇ ಸರಿ.

ಕಾಷಾಯಧಾರಿಗಳ ಈ ಪ್ರಾಬಲ್ಯವನ್ನು ಅರಿತೇ ಈ ಜಾತ್ಯತೀತ ದೇಶ ಮತ್ತು ರಾಜ್ಯದಲ್ಲೂ ಜನರ ಕಷ್ಟದ ಗಳಿಕೆಯ ತೆರಿಗೆಯ ಹಣವನ್ನು ನಿರ್ಯೋಚನೆಯಿಂದ ಅವರು ಪ್ರತಿನಿಧಿಸುವ ಸಮುದಾಯದ ಮಠಗಳಿಗೆ ಹಂಚುವುದರಲ್ಲಿ ಅಧಿಕಾರ ಕೇಂದ್ರದಲ್ಲಿ ಇರುವವರಿಗೆ ಎಲ್ಲಿಲ್ಲದ ಔದಾರ್ಯ. ಸಮುದಾಯಗಳನ್ನು ಪ್ರತಿನಿಧಿಸುವ ಮಠಮಾನ್ಯಗಳಿಂದ ಕಡೆಯಪಕ್ಷ ಆಯಾ ಸಮುದಾಯಗಳಿಗೆ ಸೇರಿದ ಜನರಿಗೆ ಶಿಕ್ಷಣದ ಅಗತ್ಯಗಳನ್ನು ಪೂರೈಸಿ ಅವರನ್ನು ಶಿಕ್ಷಿತರನ್ನಾಗಿಸುವ ಕೆಲಸದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುವಂಥ ಒಳ್ಳೆಯ ಕೆಲಸಗಳು ನಡೆದಿರುವುದು ನಿಜವೇ ಆದರೂ ನಾರಾಯಣ ಅವರು ಹೇಳುವಂತೆ ಲೋಕಾತೀತ ಪ್ರಜ್ಞೆ ಇರುವಂಥ ಸಂತ ಮನೋಧರ್ಮದ ಕಾಷಾಯಧಾರಿಗಳ ಸಂಖ್ಯೆ ಈಗ ಇಲ್ಲವೇ ಇಲ್ಲ ಎಂದು ಹೇಳುವಂತಿಲ್ಲ. ಆದರೆ ಅಂಥ ವಿರಳಾತಿವಿರಳ ಸಂತರ ಸಮಾಜ ನೂರ್ಮಡಿಸಬೇಕಾದರೆ, ಈಗಿನ ಕಾಷಾಯಧಾರಿಗಳೆಲ್ಲರಿಗೂ ಅಂಥ ಮನೋಧರ್ಮ ಬರಲೆಂಬುದೇ ಪ್ರಜ್ಞಾವಂತ
ಭಾರತೀಯರೆಲ್ಲರ ಹೃದಯದಾಳದ ಆಕಾಂಕ್ಷೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.