ADVERTISEMENT

ಸಂಗತ: ಬರವಣಿಗೆ ಹಿಂದಿನ ಬವಣೆ

ಆರ್ಥಿಕ ಶೋಷಣೆ ಮತ್ತು ವಿಮರ್ಶೆಯ ಕಾಕದೃಷ್ಟಿಗೆ ಲೇಖಕ ಒಳಗಾಗುತ್ತಿರುವ ಸನ್ನಿವೇಶ ಇದು. ಇಂತಲ್ಲಿ, ಸತ್ವಯುತ ಬರವಣಿಗೆ ಸೃಷ್ಟಿಯಾಗುವುದಾದರೂ ಹೇಗೆ?

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 20:10 IST
Last Updated 4 ಫೆಬ್ರುವರಿ 2024, 20:10 IST
<div class="paragraphs"><p>ಸಂಗತ</p></div>

ಸಂಗತ

   

ನನ್ನ ಸ್ನೇಹಿತರೊಬ್ಬರದೂ ಸೇರಿದಂತೆ ಕೆಲವು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಪ್ರಕಾಶಕರು ಇತ್ತೀಚೆಗೆ ತುಂಬ ಅದ್ದೂರಿಯಾಗಿ ಆಯೋಜಿಸಿದ್ದರು. ಅಂದು ಹಲವು ಪುಸ್ತಕಗಳನ್ನು ಅತಿಥಿಗಳಿಂದ ಲೋಕಾರ್ಪಣೆಗೊಳಿಸಲಾಯಿತು. ವೇದಿಕೆಯಲ್ಲಿ ಲೇಖಕರಿಗೆ ಹಾರ, ಫಲತಾಂಬೂಲ, ಶಾಲು ಮತ್ತು ಪುಸ್ತಕದ ಇಪ್ಪತ್ತೈದು ಪ್ರತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಬಂದಿದ್ದವರು ತಮ್ಮ ತಮ್ಮ ಪರಿಚಯದ ಲೇಖಕರಿಂದ ಗೌರವಪ್ರತಿಗಳನ್ನು ಪಡೆದು ತೆರಳಿದರು. ಸಭಾಂಗಣದ ಬಾಗಿಲ ಬಳಿ ಮಾರಾಟಕ್ಕೆಂದು ಇಟ್ಟಿದ್ದ, ಅಂದು ಬಿಡುಗಡೆಗೊಂಡ ಪುಸ್ತಕಗಳತ್ತ ಬಹುತೇಕರು ಕಣ್ಣು ಹಾಯಿಸಲಿಲ್ಲ. ಲೇಖಕರು ಪುಸ್ತಕದ ಪ್ರತಿಗಳನ್ನೇ ತಮಗೆ ದೊರೆತ ಗೌರವಧನ ಎಂದು ತೃಪ್ತಿಪಟ್ಟುಕೊಳ್ಳಬೇಕಾಯಿತು.

ಕನ್ನಡದಲ್ಲಿ ಬರವಣಿಗೆಯಿಂದಲೇ ಬದುಕು ಕಟ್ಟಿಕೊಂಡ ಲೇಖಕರ ಸಂಖ್ಯೆ ಬಲು ವಿರಳ. ಶಿವರಾಮ ಕಾರಂತ, ಅನೃಕ, ತರಾಸು ಅಂಥವರು ಈ ಮಾತಿಗೆ ಅಪವಾದವಾಗಿರಬಹುದು. ಹಾಗೆಂದು ಅಂತಹ ಲೇಖಕರ ಸಂಖ್ಯೆ ಕನ್ನಡಿಗರು ಹೆಮ್ಮೆಪಡುವಷ್ಟೇನಿಲ್ಲ. ಇಲ್ಲಿ ಲೇಖಕ ತನ್ನ ಪುಸ್ತಕ ಪ್ರಕಟಣೆಗಾಗಿ ಪ್ರಕಾಶಕರನ್ನು ಅವಲಂಬಿಸಬೇಕಾದ ಅನಿವಾರ್ಯ ಇದೆ. ಪ್ರಕಾಶಕರು ಪುಸ್ತಕಗಳ ಮಾರಾಟಕ್ಕಾಗಿ ಪುಸ್ತಕ ವ್ಯಾಪಾರಿಗಳು, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ಓದುಗರನ್ನು ಅವಲಂಬಿಸಿದ್ದಾರೆ.

ADVERTISEMENT

ಶಿಕ್ಷಣ ಸಂಸ್ಥೆಗಳು ಪಠ್ಯೇತರ ಪುಸ್ತಕಗಳನ್ನು ಖರೀದಿಸುವುದು ಕಡಿಮೆ. ಪುಸ್ತಕ ವ್ಯಾಪಾರಿಗಳು ಮುಂಗಡ ಹಣ ನೀಡಿ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸಲಾರರು. ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸಲು ಅನೇಕ ಪಟ್ಟುಗಳನ್ನು ಕರಗತ ಮಾಡಿಕೊಂಡಿರಬೇಕು. ಓದುಗರು ಪುಸ್ತಕಗಳನ್ನು ಖರೀದಿಸಿ ಓದುವ ಔದಾರ್ಯ ತೋರುತ್ತಿಲ್ಲ. ಇನ್ನು ಲೇಖಕನೇ ಪ್ರಕಾಶಕನಾಗಿ ಪುಸ್ತಕ ಪ್ರಕಟಿಸಲು ಮುಂದಾಗುವುದಾದರೆ ಪುಸ್ತಕ ಮಾರಾಟದ ವಿಭಿನ್ನ ತಂತ್ರಗಳ ಅರಿವಿರ
ಬೇಕು. ಒಟ್ಟಿನಲ್ಲಿ ಸನ್ನಿವೇಶವು ಲೇಖಕ ಗೌರವಧನವನ್ನು ಅಪೇಕ್ಷಿಸದಷ್ಟು ಪ್ರಕಾಶಕರಿಗೆ ಪೂರಕವಾಗಿದೆ.

ಕೃತಿಸ್ವಾಮ್ಯ ಕಾಯ್ದೆ ಪ್ರಕಾರ, ಬೌದ್ಧಿಕ ಸ್ವತ್ತಿನ ಕಾನೂನಾತ್ಮಕ ಹಕ್ಕು ಲೇಖಕನಿಗೆ ಸೇರಿದ್ದು. ಕೆಲವು ಪ್ರಕಾಶಕರು ನಿಯಮಬಾಹಿರವಾಗಿ ಕೃತಿಸ್ವಾಮ್ಯವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇದರ ಹಿಂದೆ ಆರ್ಥಿಕ ಲಾಭದ ಸಂಗತಿ ಅಡಕವಾಗಿದೆ. ಪುಸ್ತಕದ ಮೊದಲ ಆವೃತ್ತಿಯನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ಮಾರಾಟ ಮಾಡುವ ಪ್ರಕಾಶಕರು ಅದರ ಎರಡನೇ ಆವೃತ್ತಿಯನ್ನೂ ಪ್ರಕಟಿಸಿ ಮಾರಾಟ ಮಾಡುವ ಉದ್ದೇಶದಿಂದ ಪುಸ್ತಕದ ಹಕ್ಕನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಒಮ್ಮೆ ಪುಸ್ತಕದ ಹಕ್ಕು ಪ್ರಕಾಶಕರ ಪಾಲಾದರೆ ಆಗ ಲೇಖಕನ ಒಪ್ಪಿಗೆ ಇಲ್ಲದೆ ಅದರ ಎರಡನೇ ಆವೃತ್ತಿಯನ್ನು ಪ್ರಕಟಿಸಲು ಯಾವ ಅಡೆತಡೆಯೂ ಎದುರಾಗದು. ಒಂದರ್ಥದಲ್ಲಿ ಪ್ರಕಾಶಕರು ಲೇಖಕರನ್ನು ಆರ್ಥಿಕವಾಗಿ ಶೋಷಣೆಗೆ ಒಳಪಡಿಸುತ್ತಿದ್ದಾರೆ. ಹಾಗೆಂದು ಎಲ್ಲ
ಪ್ರಕಾಶಕರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ತಪ್ಪು ನಿರ್ಧಾರವಾಗುತ್ತದೆ. ಆದರೆ ಲೇಖಕರನ್ನು ಪೋಷಿಸಿ ಬೆಳೆಸುವ ಪ್ರಕಾಶಕರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ.

ಪ್ರಕಾಶಕರಿಂದ ಲೇಖಕನ ಶೋಷಣೆ ಒಂದು ಬಗೆಯಾದರೆ, ಅವನ ವೈಚಾರಿಕ ಪ್ರತಿಭೆಯನ್ನು ದಮನಗೊಳಿಸುವ ಪ್ರಭುತ್ವದ ಶೋಷಣೆ ಇನ್ನೊಂದು ಬಗೆ. ಪ್ರಭುತ್ವ ಎಂದಿಗೂ ತನ್ನನ್ನು ಪ್ರಶ್ನಿಸುವುದನ್ನು ಸಹಿಸಲಾರದು. ಬರಹಗಾರನ ವೈಚಾರಿಕ ಚಿಂತನೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ ಹುನ್ನಾರ ಕಾಲಕಾಲಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಅಟ್ಟಹಾಸವನ್ನು ಮೆರೆಯುತ್ತಾ ಬಂದಿದೆ. ‘ಸದಾಕಾಲ ಸಮಾಜಕ್ಕೆ ಪ್ರಿಯವಾದದ್ದನ್ನೇ ಹೇಳುವುದು ಲೇಖಕನ ಕೆಲಸವಲ್ಲ. ಪ್ರತಿರೋಧದ ಮೂಲಕವೇ ನಿಜವಾದ ಸತ್ವಯುತ ಬರವಣಿಗೆ ಹೊರಹೊಮ್ಮುತ್ತದೆ. ಆದ್ದರಿಂದ ಓದುಗರನ್ನು ನಾವು ಬದುಕುತ್ತಿರುವ ಪರಿಸರದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಮುಖಾಮುಖಿಯಾಗಿಸುವ ದಿಸೆಯಲ್ಲಿ ಬರವಣಿಗೆಯು ಪ್ರತಿರೋಧದ ನಡುವೆ ಹುಟ್ಟಿಕೊಳ್ಳುವ ಸೃಜನಶೀಲ ಸೃಷ್ಟಿ ಎನ್ನುವ ನಂಬಿಕೆ ನನ್ನದು’ ಎನ್ನುತ್ತಾರೆ ಲೇಖಕ ಅಮಿತಾವ್ ಘೋಷ್‌.

ಇಂತಹ ತೊಡರುಗಳ ಜೊತೆಗೆ ಲೇಖಕನು ವಿಮರ್ಶೆ ಎಂಬ ಅಗ್ನಿದಿವ್ಯವನ್ನು ಹಾಯ್ದು ಬರಬೇಕು. ಈಗ ವಿಮರ್ಶೆಗೆ ಕೊಡುಕೊಳ್ಳುವಿಕೆಯ ಮಾರುಕಟ್ಟೆ ಮೌಲ್ಯ ಪ್ರಾಪ್ತವಾಗಿದೆ. ವಿಮರ್ಶಕ ಎಂತಹ ಗಟ್ಟಿ ಸಾಹಿತ್ಯವನ್ನೂ ಪ್ರಪಾತಕ್ಕೆ ತಳ್ಳಬಹುದು ಮತ್ತು ಟೊಳ್ಳು ಬರವಣಿಗೆಯನ್ನು ಮೇಲ್ಪಂಕ್ತಿಗೆ ತರಬಹುದು. ಲೇಖಕನನ್ನು ವೈಚಾರಿಕವಾಗಿ ಹಣಿಯುವ ಷಡ್ಯಂತ್ರದಲ್ಲಿ ವಿಮರ್ಶಾಲೋಕದ ಪಾಲಿದೆ ಎನ್ನುವ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ.

ಒಟ್ಟಾರೆ, ಆರ್ಥಿಕ ಶೋಷಣೆ, ಪ್ರಭುತ್ವದ ಹಿಂಸೆ ಮತ್ತು ವಿಮರ್ಶೆಯ ಕಾಕದೃಷ್ಟಿಗೆ ಲೇಖಕ ಏಕಕಾಲಕ್ಕೆ ಒಳಗಾಗುತ್ತಿದ್ದಾನೆ. ಈ ನಡುವೆ ಕಥೆ, ಕವಿತೆ, ಪ್ರಬಂಧ, ಪುಸ್ತಕ ಸ್ಪರ್ಧೆಗಳ ಅಖಾಡದಲ್ಲಿ ಲೇಖಕ ಪ್ರತಿಸ್ಪರ್ಧಿಗಳ ವಿರುದ್ಧ ತೊಡೆ ತಟ್ಟಬೇಕು. ಪ್ರಶಸ್ತಿ, ಪುರಸ್ಕಾರಗಳಿಗಾಗಿ ಲಾಬಿ ಮಾಡುತ್ತ ಶಿಫಾರಸಿಗಾಗಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಓಲೈಕೆಯಲ್ಲಿ ತೊಡಗಬೇಕು. ತನ್ನ ನಡೆ, ನುಡಿಯನ್ನು ಹದ್ದಿನ ಕಣ್ಣಿನಿಂದ ಅವಲೋಕಿಸುತ್ತಿರುವ ಸಮಾಜದ ದೃಷ್ಟಿಗೆ ಬಲಿಪಶುವಾಗಬೇಕು.
ಇಂತಹ ಸನ್ನಿವೇಶದಲ್ಲಿ ನಿಜವಾದ ಸತ್ವಯುತ ಬರವಣಿಗೆ ಸೃಷ್ಟಿಯಾಗುವುದಾದರೂ ಹೇಗೆ?

ಯಶವಂತ ಚಿತ್ತಾಲರು ಹೇಳಿದಂತೆ, ಲೇಖಕನ ಸೃಷ್ಟಿಕಾರ್ಯಕ್ಕೆ ಬೇಕಾದದ್ದು ‘ನಿನ್ನ ಬರವಣಿಗೆ ಬೇಕು’ ಎನ್ನುವ ಇಷಾರೆ, ‘ಬರೆಯುವುದನ್ನು ನಿಲ್ಲಿಸಬೇಡ’ ಎನ್ನುವಂಥ ಪುಸಲಾಯಿಸುವಿಕೆ. ಇಂತಹ ವಾತಾವರಣ ನಿರ್ಮಾಣವಾಗುವುದೇ ಎನ್ನುವುದು ಸದ್ಯದ ಸಂದರ್ಭದಲ್ಲಿ ಒಂದು ಯಕ್ಷಪ್ರಶ್ನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.