ADVERTISEMENT

ಸಂಗತ: ಉತ್ತರಾಖಂಡದ ಉಕ್ಕಿನ ಮಹಿಳೆಯರು

ಕಬ್ಬಿಣದ ವಸ್ತುಗಳನ್ನು ತಯಾರಿಸುವ ಶ್ರಮದಾಯಕ ಕೆಲಸದಲ್ಲಿ ತೊಡಗಿಕೊಂಡಿರುವ ಇಲ್ಲಿನ ಮಹಿಳೆಯರು, ಈ ಕಾಯಕದಲ್ಲಿದ್ದ ಪುರುಷ ಪಾರಮ್ಯಕ್ಕೆ ಸಡ್ಡು ಹೊಡೆದಿದ್ದಾರೆ

ಪ್ರಜಾವಾಣಿ ವಿಶೇಷ
Published 16 ಜೂನ್ 2023, 19:40 IST
Last Updated 16 ಜೂನ್ 2023, 19:40 IST
ಸಂಗತ
ಸಂಗತ   

ಶ್ರೀಗುರು

ಅದೊಂದು ತೆರೆದ ಕುಲುಮೆ. ಕನಿಷ್ಠ ಒಂಬೈನೂರರಿಂದ ಸಾವಿರ ಡಿಗ್ರಿ ಸೆಂಟಿಗ್ರೇಡ್‍ಗಿಂತ ಹೆಚ್ಚಿನ ಶಾಖವಿರುವ ಜಾಗ. ಮೊದಲೆಲ್ಲ ಅಲ್ಲಿ ಪುರುಷರೇ ಕೆಲಸ ಮಾಡುತ್ತಿದ್ದರು. ಹಾರೆ, ಗುದ್ದಲಿ, ಕೊಡಲಿ, ಕುಡುಗೋಲು, ಬಾಂಡಲಿ, ಬಕೆಟ್ಟು, ಕೊಳಗಗಳನ್ನು ತಯಾರು ಮಾಡುತ್ತಿದ್ದ ಗಂಡಸರು ಭಾರದ ಲೋಹವನ್ನೆತ್ತಿ ಕುಟ್ಟುವುದು, ಸುರಿಯುವುದು, ಬಗ್ಗಿಸುವುದು, ಬೆಸೆಯುವುದು, ಹುಯ್ಯುವುದು, ಕತ್ತರಿಸುವುದನ್ನು ಅವ್ಯಾಹತವಾಗಿ ಮಾಡುತ್ತಿದ್ದರು. ಗಟ್ಟಿಮುಟ್ಟಾದವರಿಂದ ಹೆಚ್ಚಿನ ಶ್ರಮ ಬೇಡುತ್ತಿದ್ದ ಕೆಲಸ ಅದಾಗಿತ್ತು.

ಈಗ ಚಿತ್ರಣ ಬದಲಾಗಿದೆ. ಉತ್ತರಾಖಂಡ ರಾಜ್ಯದ ಚಂಪಾವತ್ ಜಿಲ್ಲೆಯ ಲೋಹಘಾಟ್ ತೆಹಶೀಲ್‍ನ ಪೂರ್ಣಗಿರಿ ಗ್ರಾಮದ ಮಹಿಳೆಯರು ‘ಕಬ್ಬಿಣ’ದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಪುರುಷ ಪಾರಮ್ಯವೇ ತುಂಬಿದ ಜಾಗಗಳಲ್ಲೀಗ ಕೈಬಳೆ, ಕಾಲ್ಗೆಜ್ಜೆಯ ನಾದ ಕೇಳಿಸುತ್ತಿದೆ. ಜೊತೆಗೆ ಠಣ್, ಠಣ್, ಟಕ್, ಟಕ್, ಧಡ್, ಧಡ್ ಎಂದು ಸುತ್ತಿಗೆಯಿಂದ ಕುಟ್ಟುವ, ಬಗ್ಗಿಸುವ, ಮೀಟುವ ಸದ್ದು ಕೇಳಿಸುತ್ತಿದೆ. ಕೃಷಿ ಕೆಲಸಗಳಲ್ಲಿ ಬಳಸಲಾಗುವ ಎಲ್ಲ ಪರಿಕರಗಳನ್ನು ಮಹಿಳೆಯರೇ ತಯಾರಿಸುತ್ತಿದ್ದಾರೆ.

ADVERTISEMENT

ಐದು ಸ್ವಸಹಾಯ ಗುಂಪುಗಳಿರುವ ಪ್ರಗತಿ ಗ್ರಾಮ ಸಂಘಟನ್ ಎಂಬ ಸಂಘದ ನೇತೃತ್ವ ವಹಿಸಿರುವ ನಾರಾಯಣಿ ದೇವಿ ‘ಕಳೆದ ಆರು ವರ್ಷಗಳಿಂದ ನಾವು ಕೆಲಸ ಮಾಡುತ್ತಿದ್ದೇವೆ, ಅಂಥ ಸುಸ್ತೇನೂ ಆಗುವುದಿಲ್ಲ’ ಎನ್ನುತ್ತಾರೆ. ಬಿಸಿ ಲೋಹದ ಕೆಲಸಗಳಿಗೆ ಗಂಡಸರು ಮಾತ್ರ ಸೂಕ್ತ ಎಂಬ ಪಾರಂಪರಿಕ ನಂಬಿಕೆಯನ್ನು ಮಹಿಳೆಯರು ಬದಲಾಯಿಸಿದ್ದಾರೆ. ಈ ಮೂಲಕ, ಮಹಿಳೆಯರು ಬಹುಕೌಶಲವುಳ್ಳವರು ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಸಾಮಾನ್ಯ ಮಹಿಳೆಯರು ‘ಉಕ್ಕಿನ ಮಹಿಳೆ’ಯರಾಗಿ ಬದಲಾಗಿದ್ದಾರೆ.

ಮೊದಲೆಲ್ಲ ಗಂಡಸರು ತಯಾರಿಸಿದ ವಸ್ತುಗಳನ್ನು ಹೆಂಗಸರು, ಮಕ್ಕಳು ಪೇಟೆ, ಊರಿನ ಸಂತೆಗಳಲ್ಲಿ ಮಾರುತ್ತಿದ್ದರು. ಆಗ ಬರೀ ಎರಡೋ ಮೂರೋ ಬಾಣಲೆ, ಗುಂಡಾಲುಗಳು ಮಾರಾಟವಾಗುತ್ತಿದ್ದವು. ಕೋವಿಡ್‍ನ ದಿನಗಳಲ್ಲಿ ಕ್ರಮೇಣ ಅದೂ ಕಡಿಮೆಯಾಯಿತು. ಐದು ವರ್ಷಗಳ ಹಿಂದೆ ಸ್ವಸಹಾಯ ಗುಂಪುಗಳನ್ನು ಉತ್ತೇಜಿಸಲು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ ಅಡಿಯಲ್ಲಿ ವಿಶೇಷ ಕಾರ್ಯಕ್ರಮ ಶುರುವಾದಾಗ ‘ಇದೇ ಸರಿಯಾದ ಅವಕಾಶ ಎಂದು ನಿರ್ಧರಿಸಿದ ನಾರಾಯಣಿ ದೇವಿ ಮತ್ತು ಇತರ ಆರು ಮಹಿಳೆಯರು ‘ನಾವೂ ಕುಲುಮೆಗಳಲ್ಲಿ ದುಡಿಯುತ್ತೇವೆ, ಪ್ರಾರಂಭದ ತರಬೇತಿ ಸಿಕ್ಕರೆ ಸಾಕು’ ಎಂದರು.

ತಮ್ಮ ಹೆಂಡತಿ ಮಕ್ಕಳೇ ಕೆಲಸಕ್ಕೆ ನಿಂತರೆ ಬೇಡ ಎನ್ನಲು ನಾವ್ಯಾರು ಎಂದ ಗಂಡಸರು, ಕಬ್ಬಿಣವನ್ನು ಹೇಗೆ, ಎಷ್ಟು ಕಾಯಿಸಬೇಕು, ಪಾಕ ಹೇಗಿರಬೇಕು, ಅಚ್ಚುಗಳನ್ನು ಸಿದ್ಧಮಾಡಿಕೊಳ್ಳುವುದು ಹೇಗೆ ಎಂಬೆಲ್ಲವನ್ನೂ ವಿವರವಾಗಿ ಮಾಡಿ ತೋರಿಸಿದರು. ಕಲಿಕೆಯಲ್ಲಿ ಹೆಣ್ಣುಮಕ್ಕಳು ಗಂಡಸರಿಗಿಂತ ಮುಂದಲ್ಲವೇ? ಶೀಘ್ರವಾಗಿ ಕುಲುಮೆ ಕೆಲಸ ಕಲಿತ ಮಹಿಳೆಯರು ಈಗ ಕಬ್ಬಿಣದ ಕೆಲಸಗಳನ್ನು ತಾವೇ ಮಾಡಿ ಮುಗಿಸುವಷ್ಟು ಕೌಶಲ ಗಳಿಸಿದ್ದಾರೆ. ಗಂಡಸರು ಕೃಷಿ ಕೆಲಸಗಳಲ್ಲಿ ತೊಡಗಿಕೊಂಡರೆ, ಮಹಿಳೆಯರು ಕುಲುಮೆಯ ಪೂರ್ಣ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದಾರೆ.

ಮೊದಮೊದಲು ಭಾರ ಎತ್ತಲು, ಸುತ್ತಿಗೆಯಿಂದ ಹಣಿಯಲು, ಕುದಿಸಲು ತುಂಬಾ ಭಯವಾಗುತ್ತಿತ್ತು. ಕುದಿಯುವ ಲೋಹ ಮೈಮೇಲೆ ಬಿದ್ದರೆ, ಸಿಡಿದರೆ ಗತಿಯೇನು ಎಂದು ಮೈತುಂಬಾ ಎರಡೆರಡು ಬಟ್ಟೆ ತೊಟ್ಟು, ಕೈಗವಸು, ಮುಖಕ್ಕೆ ಹೆಲ್ಮೆಟ್ ಹಾಕಿಕೊಂಡು ಕೆಲಸ ಕಲಿತೆವು. ಈಗ ಅಭ್ಯಾಸವಾಗಿದೆ, ಸಣ್ಣ ಪುಟ್ಟ ಗಾಯಗಳಾಗುತ್ತವೆ, ಅಂಥ ಭಯವೇನೂ ಇಲ್ಲ ಎನ್ನುತ್ತಾರೆ ರಾಖಿ ದೇವಿ.

ಸಾಮಾನುಗಳೇನೋ ತಯಾರಾದವು. ಅಲ್ಯೂಮಿನಿಯಂ, ಸ್ಟೀಲ್, ನಾನ್‌ಸ್ಟಿಕ್ ಕುಕ್‍ವೇರ್‌ಗಳ ಮುಂದೆ ಕಬ್ಬಿಣದ ಉತ್ಪನ್ನಗಳನ್ನು ಮಾರುವ ದೊಡ್ಡ ಸವಾಲು ಎದುರಾಯಿತು. ಮಾರುಕಟ್ಟೆಯಲ್ಲಿ ಸಿಗುವ ಬ್ರ್ಯಾಂಡೆಡ್ ಉತ್ಪನ್ನಗಳಿಂದ ರಾಸಾಯನಿಕಗಳು ಸೋರುತ್ತವೆ ಎಂದು ಗೊತ್ತಾದಂದಿನಿಂದ ಜನ ಬ್ರ್ಯಾಂಡೆಡ್ ಉತ್ಪನ್ನಗಳನ್ನು ತ್ಯಜಿಸಿ ಕಬ್ಬಿಣದ ಪಾತ್ರೆ, ಪಡಗಗಳ ಕಡೆ ಮುಖ ಮಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ನಾರಾಯಣಿ ದೇವಿ ಮತ್ತು ಸಂಗಡಿಗರು ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯ ತಹಶೀಲ್ದಾರರ ನೆರವಿನಿಂದ ರಾಜ್ಯ ಸರ್ಕಾರದ ಉಸ್ತುವಾರಿಯಲ್ಲಿ ಸ್ಥಾಪಿಸಲಾದ ‘ಬೆಳವಣಿಗೆ ಕೇಂದ್ರ’ದಲ್ಲಿ ಲೋಹ ಕತ್ತರಿಸುವ ಮತ್ತು ಅಚ್ಚು ಹಾಕುವ ಯಂತ್ರಗಳನ್ನು ಇಡಲಾಗಿದ್ದು, ಅವುಗಳನ್ನು ಬಳಸಿ ಹೆಚ್ಚಿನ ಉತ್ಪಾದನೆ ಮಾಡುವ ಕ್ಷಮತೆ ದೊರೆತಿದೆ.

ತಯಾರಾದ ಪರಿಕರಗಳನ್ನು ಸರಸ್ (ಸೇಲ್‌ ಆಫ್‌ ಆರ್ಟಿಕಲ್ಸ್‌ ಆಫ್‌ ರೂರಲ್‌ ಆರ್ಟಿಸಾನ್ಸ್‌ ಸೊಸೈಟಿ) ಮೇಳ, ಜಾತ್ರೆ ಮತ್ತು ಆನ್‍ಲೈನ್‍ನಲ್ಲಿ ಮಾರಾಟ ಮಾಡುತ್ತಿರುವ ಸಂಘಟನೆಯು ಪ್ರತಿ ವರ್ಷ ರಾಜ್ಯ ಕೃಷಿ ಇಲಾಖೆಗೆ ಪರಿಕರಗಳನ್ನು ಮಾರಿ ₹ 3 ಲಕ್ಷ ಸಂಪಾದಿಸುತ್ತಿದೆ. ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಮತ್ತು ಅಂಗನವಾಡಿಗಳಿಗೆ ರಾಜ್ಯ ಸರ್ಕಾರವೇ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುತ್ತದೆ. ಪೂರ್ಣಗಿರಿ ಘಟಕವು 2017ರಲ್ಲಿ ಬರೀ ₹ 60 ಸಾವಿರ ಸಂಪಾದಿಸಿತ್ತು. ಈಗ ಇಡೀ ಸಂಘಟನೆಯು ವಾರ್ಷಿಕ ₹ 7- 8 ಲಕ್ಷ ಗಳಿಸುತ್ತಿದೆ. ಸ್ತ್ರೀ ಸ್ವಸಹಾಯ ಗುಂಪುಗಳ ತಾಕತ್ತು ಏನು ಎಂಬುದನ್ನು ಪೂರ್ಣಗಿರಿಯ ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಮಹಿಳಾ ಸ್ವಾವಲಂಬನೆಯ ಕುರುಹಾಗಿ ಪೂರ್ಣಗಿರಿ ಸಂಪೂರ್ಣವಾಗಿ ಪ್ರಕಾಶಿಸುತ್ತಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.