ADVERTISEMENT

ಸಂಗತ | ಅಲೆಮಾರಿ ಆಯೋಗ: ವ್ಯಾಪ್ತಿ ವಿಸ್ತರಿಸಿ 

ಅಲೆಮಾರಿ ಸಮುದಾಯಗಳ ಕುರಿತು ವೈಜ್ಞಾನಿಕ ಅಧ್ಯಯನ ಸಮಗ್ರವಾಗಿ ನಡೆಯಬೇಕು, ಗೊಂದಲ ನಿವಾರಣೆಯಾಗಬೇಕು

ಪ್ರಜಾವಾಣಿ ವಿಶೇಷ
Published 23 ಸೆಪ್ಟೆಂಬರ್ 2024, 20:33 IST
Last Updated 23 ಸೆಪ್ಟೆಂಬರ್ 2024, 20:33 IST
ಸಂಗತ
ಸಂಗತ   

ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ನೇಮಿಸಿದ್ದ ಬಾಲಕೃಷ್ಣ ರೇಣುಕೆ ಆಯೋಗ ದೇಶದಾದ್ಯಂತ ಸಂಚರಿಸಿ, ಅಲೆಮಾರಿ ಬುಡಕಟ್ಟುಗಳನ್ನು ಮೊದಲ ಬಾರಿಗೆ ಗುರುತಿಸಿ ಅವರಿಗೆ ಅಸ್ಮಿತೆ ನೀಡಿತು. ಈ ಸಮುದಾಯಗಳ ರಾಜ್ಯವಾರು ಜನಸಂಖ್ಯೆಯ ಮಾಹಿತಿ ಸಂಗ್ರಹಿಸಿತು. ಅದರ ಪ್ರಕಾರ, ದೇಶದ ಒಟ್ಟು ಅಲೆ
ಮಾರಿ ಬುಡಕಟ್ಟು ಜನಸಂಖ್ಯೆಯ ಪೈಕಿ ಕರ್ನಾಟಕದಲ್ಲಿ ಸುಮಾರು ಶೇ 10ರಷ್ಟು ಮಂದಿ ನೆಲಸಿದ್ದಾರೆ. ಈ ಮೂಲಕ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮುದಾಯ
ದವರನ್ನು ಹೊಂದಿರುವ ಎರಡನೇ ರಾಜ್ಯ ಇದಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಅಲೆಮಾರಿ, ಅರೆಅಲೆ
ಮಾರಿ ಬುಡಕಟ್ಟುಗಳೂ ಸೇರಿದಂತೆ ರಾಜ್ಯದಲ್ಲಿ ವಿವಿಧ ಪಟ್ಟಿಗಳಲ್ಲಿ ಗುರುತಿಸಲಾಗಿರುವ ಅಲೆಮಾರಿ, ಆದಿ
ವಾಸಿ ಬುಡಕಟ್ಟಿನ ಸುಮಾರು 120 ಸಮುದಾಯ
ಗಳಿರಬಹುದು. ಮಿಕ್ಕಂತೆ ಪಟ್ಟಿಯೊಳಗೇ ಬಾರದಿರುವ ಸಮುದಾಯಗಳ ವಿವರ ಸರ್ಕಾರದ ಬಳಿ ಲಭ್ಯವಿಲ್ಲ!

ಈ ಸಮುದಾಯಗಳ ಕುರಿತು ವೈಜ್ಞಾನಿಕ ಅಥವಾ ಕುಲಶಾಸ್ತ್ರೀಯ ಅಧ್ಯಯನ ನಡೆದಿಲ್ಲವಾದ್ದರಿಂದ ಈ ಪಟ್ಟಿಗಳಲ್ಲಿ‌ ಅನೇಕ ಗೊಂದಲಗಳು ನುಸುಳಿವೆ. ಕೆಲ ಸಮುದಾಯಗಳು ಮತ್ತು ಅವುಗಳ ಉಪಜಾತಿಗಳು ಎರಡು– ಮೂರು ಪಟ್ಟಿಗಳಲ್ಲಿ ಸೇರಿಹೋಗಿವೆ. ಆ ಸಮುದಾಯಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಹಿಂದುಳಿದ ವರ್ಗಗಳ ಪೈಕಿ ಯಾವ ಪ್ರವರ್ಗದ ಅಡಿ ಪ್ರಮಾಣಪತ್ರ ನೀಡಬೇಕೆಂದು ತಿಳಿಯದೆ ಕಂದಾಯ ಅಧಿಕಾರಿಗಳಲ್ಲಿ ಗೊಂದಲ ಉಂಟಾಗಿದೆ. ಈ ಕಾರಣಕ್ಕೆ ಅನೇಕ ಸಮುದಾಯಗಳಿಗೆ ಜಾತಿ ಪ್ರಮಾಣಪತ್ರವೇ ಸಿಗುತ್ತಿಲ್ಲ! ಅದಿಲ್ಲದೆ ಅವರ ಮಕ್ಕಳಿಗೆ ಶಾಲೆಗಳು ಮತ್ತು ಹಾಸ್ಟೆಲ್‌ಗಳಲ್ಲಿ ದಾಖಲಾತಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಸವಲತ್ತು, ಸಾಲ ಸೌಲಭ್ಯ, ಅನುದಾನ, ಸಬ್ಸಿಡಿ, ಭೂಮಿ, ನಿವೇಶನ ಏನೂ ದೊರಕುತ್ತಿಲ್ಲ. ಇವನ್ನೆಲ್ಲ ಕಾನೂನಾತ್ಮಕವಾಗಿ ಪಡೆಯಲು ಈ ಸಮುದಾಯಗಳು ಸಂಘಟಿತವಾಗಿಲ್ಲ, ಶಿಕ್ಷಣದ ಅರಿವನ್ನೂ ಪಡೆದಿಲ್ಲ. ಈ ಮುಗ್ಧ ಜನರ ಹೆಸರಿನಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಈ ಸಮುದಾಯಗಳ‌ ಮಧ್ಯವರ್ತಿಗಳು ಎಲ್ಲಾ ಸವಲತ್ತುಗಳನ್ನು ತಿಂದು ತೇಗುತ್ತಿದ್ದಾರೆ.

ADVERTISEMENT

ಅಲೆಮಾರಿ, ಅರೆಅಲೆಮಾರಿ ಎಂದು ಪರಿಗಣಿತವಾದ ಎಲ್ಲ ಸಮುದಾಯಗಳ ಕುರಿತು ಆಯೋಗದ ಮೂಲಕ ಅಧ್ಯಯನ ನಡೆಸಬೇಕು. ಅದು ಈ ಸಮುದಾಯಗಳ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಹಿನ್ನೆಲೆಯನ್ನು ಅಧ್ಯಯನ ಮಾಡಿ, ಕುಲಶಾಸ್ತ್ರೀಯ ಹಿನ್ನೆಲೆಯಲ್ಲಿ ಪರಿಶೀಲಿಸಿ ವರದಿ ಕೊಟ್ಟರೆ, ಈ ಸಮುದಾಯಗಳ ಬಹುಪಾಲು ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆಯಿದೆ. ಇದನ್ನು ಅರಿತೇ ಸಿ.ಎಸ್.ದ್ವಾರಕಾನಾಥ್‌ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2010ರಲ್ಲೇ ಒಂದು ವರದಿ ನೀಡಿ, ‘ಅಲೆಮಾರಿ ಬುಡಕಟ್ಟುಗಳ ಆಯೋಗ’ ರಚಿಸಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿತು.‌ ಈ ಶಿಫಾರಸು ಸುಮಾರು ವರ್ಷ ದೂಳು ತಿನ್ನುತ್ತಾ ಕಡತಗಳಲ್ಲಿ ಮರೆಯಾಗಿತ್ತು. ಅಲೆಮಾರಿ ಬುಡಕಟ್ಟು ಮಹಾಸಭಾ 2012ರಲ್ಲಿ ಅಲೆಮಾರಿ ಸಮುದಾಯಗಳನ್ನು ಸಂಘಟಿಸಿ, ಈ ದಿಸೆಯಲ್ಲಿ ಹೋರಾಟಗಳನ್ನು ನಡೆಸತೊಡಗಿತು. ಆಯಾ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದವರಿಗೆ ಮನವಿ ನೀಡಿತು. ಕಡೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಮಹಾಸಭಾ ಸುಮಾರು 32 ಅಲೆಮಾರಿ, ಆದಿವಾಸಿ ಸಮುದಾಯಗಳನ್ನು ಸಂಘಟಿಸಿ, ಅವರನ್ನು ಭೇಟಿ ಮಾಡಿತು. ಆಯೋಗ ರಚಿಸುವುದಾಗಿ ಬಜೆಟ್‌ನಲ್ಲಿ ಸಿದ್ದರಾಮಯ್ಯ ಘೋಷಿಸಿದರು.

ದುರಂತವೆಂದರೆ, ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಲೆಮಾರಿ ಬುಡಕಟ್ಟು ಆಯೋಗ’ ರಚಿಸುವ ಬದಲು ಬರೀ ‘ಹಿಂದುಳಿದ ವರ್ಗಗಳ ಅಲೆಮಾರಿ, ಅರೆ–ಅಲೆಮಾರಿ ಆಯೋಗ’ ರಚಿಸಲಾಯಿತು! ಇದರ ವ್ಯಾಪ್ತಿಗೆ 46 ಸಮುದಾಯಗಳು ಮಾತ್ರ ಬರುತ್ತವೆ. ಇದರಿಂದ ಹೆಚ್ಚಿನ ಪ್ರಯೋಜನವಾಗದು. ಉದಾಹರಣೆಗೆ, ದೊಂಬಿದಾಸ ಸಮುದಾಯವು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದರೆ, ಚೆನ್ನದಾಸ ಸಮುದಾಯವು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದೆ. ವಾಸ್ತವದಲ್ಲಿ ಇವೆರಡೂ ಒಂದೇ ಜಾತಿಯಾಗಿವೆ. ಆದ್ದರಿಂದ ದೊಂಬಿದಾಸ, ಚೆನ್ನದಾಸ, ಮಾಲದಾಸ, ಚಕ್ರವಾದ್ಯದಾಸ, ಡಂಗ
ದಾಸ, ದಾಸರು ಎಂದೆಲ್ಲ ಕರೆಸಿಕೊಳ್ಳುವ ಈ ಸಮುದಾಯಗಳಿಗೆ ಯಾವ ಪಟ್ಟಿಯಲ್ಲಿ ಜಾತಿ ಸಿಂಧುತ್ವ ನೀಡಬೇಕೆಂಬ ಬಗ್ಗೆ ಗೊಂದಲ ಇದೆ.

ಇದೇ ರೀತಿ ಶಿಳ್ಳೇಕ್ಯಾತ, ಕಿಳ್ಳೇಕ್ಯಾತ, ಜೋಗಿ, ಮಸಣ
ಜೋಗಿ, ಕಿಂದರಜೋಗಿ, ಡಬ್ಬಾಜೋಗಿ, ಜೋಷಿ, ವಾಸುದೇವ, ಬುಡಬುಡಕಿ, ಗೋಂದಳಿಯಂತಹ ನೂರಾರು ಜಾತಿಗಳಿಗೆ ಸಂಬಂಧಿಸಿದಂತೆ ಗೊಂದಲ
ಇದೆ. ಇದನ್ನು ಪರಿಹರಿಸಲು ಎಲ್ಲಾ ಅಲೆಮಾರಿ ಬುಡಕಟ್ಟುಗಳನ್ನು ಒಂದೇ ಆಯೋಗದ ವ್ಯಾಪ್ತಿಗೆ ತರ
ಬೇಕು. ಇದಕ್ಕಾಗಿ ಹಿಂದುಳಿದ ವರ್ಗಗಳ ಅಲೆಮಾರಿ ಆಯೋಗದ ವ್ಯಾಪ್ತಿಯನ್ನು ವಿಸ್ತರಿಸಬೇಕು. ಅದ
ರಲ್ಲಿ ಎಲ್ಲ ಸಮುದಾಯಗಳೂ ಒಳಗೊಳ್ಳುವಂತೆ ಮಾಡ
ಬೇಕು. ಈ ಸಮುದಾಯಗಳ ಬಗ್ಗೆ ವಿಶೇಷ ಜ್ಞಾನ, ಕಾಳಜಿ, ಅರಿವು ಉಳ್ಳಂತಹ ಸಮರ್ಥ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕು.

ಸಿದ್ದರಾಮಯ್ಯ ಅವರು ರಾಜಕೀಯ ಇಚ್ಛಾಶಕ್ತಿ ತೋರಿ ಇಂತಹದ್ದೊಂದು ಕಾರ್ಯಕ್ಕೆ ಮುಂದಾದರೆ, ಈ ಅಸಹಾಯಕ ಜನ ಟೆಂಟು, ಗುಡಿಸಲು, ಗುಡಾರಗಳಿಂದ ಹೊರಬರುತ್ತಾರೆ. ಇವರ ಮಕ್ಕಳು ಶಾಲೆಯ ಕಡೆ ನಡೆಯುತ್ತಾರೆ.

ಲೇಖಕ: ಅಧ್ಯಕ್ಷ, ಅಲೆಮಾರಿ ಬುಡಕಟ್ಟು ಮಹಾಸಭಾ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.