ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡಿ ವಾಹನಗಳಿಗೆ ಇಂಧನವಾಗಿ ಬಳಸುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದರಿಂದಾಗಿ ಕಚ್ಚಾ ತೈಲದ ಆಮದು ವೆಚ್ಚ ಗಣನೀಯವಾಗಿ ತಗ್ಗುತ್ತದೆ ಮತ್ತು ವಾಯುಮಾಲಿನ್ಯ ಕಡಿಮೆಯಾಗುತ್ತದೆ. ಆದರೆ ಪ್ರಮುಖ ಆಹಾರ ಪದಾರ್ಥವಾದ ಗುಣಮಟ್ಟದ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ಬಳಸುವುದು ಸರಿಯಾದ ಕ್ರಮವಲ್ಲ.
ರಾಜ್ಯ ಸರ್ಕಾರಗಳಿಗೆ ಅವಶ್ಯವಿರುವ ಹೆಚ್ಚುವರಿ ಅಕ್ಕಿಯನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್ಎಸ್) ಅಡಿಯಲ್ಲಿ ಪೂರೈಸುವುದನ್ನು ಕೇಂದ್ರ ಸರ್ಕಾರ ಏಕಾಏಕಿ ನಿಲ್ಲಿಸಿ, ಎಥೆನಾಲ್ ಉತ್ಪಾದನೆಗೆ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುತ್ತಿರುವುದು ಆಹಾರ ಭದ್ರತಾ ಕಾಯ್ದೆಗೆ ವ್ಯತಿರಿಕ್ತವಾಗಿದೆ ಮಾತ್ರವಲ್ಲ, ಜನವಿರೋಧಿಯಾಗಿದೆ.
ಎಥೆನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ 2022- 23ನೇ ಆರ್ಥಿಕ ವರ್ಷದಲ್ಲಿ ಸುಮಾರು 16 ಲಕ್ಷ ಟನ್ ಉತ್ತಮ ಗುಣಮಟ್ಟದ ಅಕ್ಕಿಯನ್ನು ಬಳಸಲು ಅವಕಾಶ ಕೊಟ್ಟಿದೆ. ಖಾಸಗಿ ಕಂಪನಿಗಳಿಗೆ ಗುಣಮಟ್ಟದ ಅಕ್ಕಿಯನ್ನು ಎಥೆನಾಲ್ ಉತ್ಪಾದನೆಗೆ ಪೂರೈಸತೊಡಗಿದ್ದರಿಂದ, ಇನ್ನು ಮುಂದೆ ರಾಜ್ಯ ಸರ್ಕಾರಗಳು ಹೆಚ್ಚುವರಿ ಅಕ್ಕಿಯನ್ನು ಪಡೆಯುವುದು ಕಷ್ಟಸಾಧ್ಯ.
ಮಾನವ ಬಳಕೆಗೆ ಯೋಗ್ಯವಲ್ಲದ ಅಕ್ಕಿ, ಜೋಳದಂತಹ ಆಹಾರಧಾನ್ಯವನ್ನು ಎಥೆನಾಲ್ ಉತ್ಪಾದನೆಗೆ ಬಳಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿತ್ತು. ಆದರೆ ಕೇಂದ್ರ ಸರ್ಕಾರ 2020ರಲ್ಲಿ ಈ ಕಾನೂನಿಗೆ ತಿದ್ದುಪಡಿ ತಂದು, ಗುಣಮಟ್ಟದ ಅಕ್ಕಿಯನ್ನು ಕೂಡ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ, ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ವಿತರಿಸುವ ಯೋಜನೆಗೆ ಕರ್ನಾಟಕ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ದೊರೆಯಲಿಲ್ಲ.
ಪಂಜಾಬ್, ತೆಲಂಗಾಣ, ಆಂಧ್ರಪ್ರದೇಶ ಮತ್ತು ಛತ್ತೀಸ್‌ಗಢ ರಾಜ್ಯಗಳಿಂದ ಅಕ್ಕಿ ಖರೀದಿಸಲು ಸರ್ಕಾರ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಕೆಲವು ರಾಜ್ಯಗಳು ತಮ್ಮ ಬಳಿ ಇಲ್ಲ ಎಂದು ಹೇಳಿದರೆ, ಇನ್ನುಳಿದ ರಾಜ್ಯಗಳು ಬೆಲೆ ಹೆಚ್ಚಿಗೆ ಬೇಕು ಎಂದು ಬೇಡಿಕೆ ಮಂಡಿಸಿದವು. ಹೀಗಾಗಿ, ರಾಜ್ಯ ಸರ್ಕಾರ ಜನರ ಕೈಗೆ ದುಡ್ಡು ಕೊಟ್ಟು ‘ನೀವೇ ಖರೀದಿಸಿ, ಊಟ ಮಾಡಿ’ ಎಂದು ಹೇಳಬೇಕಾದ ಪರಿಸ್ಥಿತಿ ಬಂದಿದೆ. ಅಕ್ಕಿಯ ಬೆಲೆ ಕೂಡ ಹೆಚ್ಚಾಗುವ ಭೀತಿ ಇದೆ.
ಎಥೆನಾಲ್ ಸರಳ ಜೈವಿಕ ಇಂಧನ. ಕಬ್ಬು, ಸಕ್ಕರೆ, ಅಕ್ಕಿ, ಗೋಧಿ, ಬಿದಿರು, ಬೆಳೆಗಳ ಹುಲ್ಲು, ಕೊಳೆತ ಅಥವಾ ಕೆಟ್ಟ ಆಹಾರಧಾನ್ಯ, ಬಯೊಮಾಸ್‌ನಿಂದ ಎಥೆನಾಲ್ ಉತ್ಪಾದಿಸಬಹುದಾಗಿದೆ.
ಕಬ್ಬು ಅಥವಾ ಸಕ್ಕರೆಯಿಂದ ಎಥೆನಾಲ್ ಉತ್ಪಾದಿಸುವುದು ಅತ್ಯಂತ ಸರಳ ಮತ್ತು ಕಡಿಮೆ ವೆಚ್ಚದ್ದಾಗಿದೆ. ದೇಶದಲ್ಲಿ ಕಬ್ಬಿನ ಬೆಳೆ ಹೆಚ್ಚಿಗಿದೆ. ಇನ್ನೂ ಹೆಚ್ಚಿಗೆ ಕಬ್ಬು ಬೆಳೆಯಲು ರೈತರು ಸಿದ್ಧರಿದ್ದಾರೆ. ದೇಶದಲ್ಲಿ ಸಕ್ಕರೆ ಉತ್ಪಾದನೆ ಅವಶ್ಯಕತೆಗಿಂತ ಬಹಳ ಹೆಚ್ಚಿಗಿದೆ. 55 ಲಕ್ಷ ಟನ್ ಸಕ್ಕರೆಯು ಗೋದಾಮುಗಳಲ್ಲಿ ಶೇಖರವಾಗಿ ಉಳಿದಿದೆ. ಪ್ರತಿ ವರ್ಷ ಈ ಪ್ರಮಾಣ ಬೆಳೆಯುತ್ತಿದೆ. ರಫ್ತು ಮಾರುಕಟ್ಟೆ ಬೇಡಿಕೆ ಕಡಿಮೆಯಾಗಿದೆ.
ಇಡೀ ಕಬ್ಬನ್ನು ನೇರವಾಗಿ ಬಳಸಿ ಎಥೆನಾಲ್ ಉತ್ಪಾದಿಸಬಹುದು. ಇದರಿಂದ ಶೇ 70ರಷ್ಟು ಎಥೆನಾಲ್ ಉತ್ಪಾದನೆಯಾಗುತ್ತದೆ. ಅಕ್ಕಿಯಿಂದ ಎಥೆನಾಲ್ ಉತ್ಪಾದಿಸುವ ವೈಜ್ಞಾನಿಕ ವಿಧಾನ ದೀರ್ಘವಾಗಿದೆ. ಇಳುವರಿ ಕೂಡ ಕಡಿಮೆ. ಆದ್ದರಿಂದಲೇ ಕೇಂದ್ರ ಸರ್ಕಾರ ಅಕ್ಕಿಯ ಬೆಲೆಯನ್ನು ಪ್ರತಿ ಕಿಲೊಗೆ ಹತ್ತು ರೂಪಾಯಿ ಕಡಿಮೆ ಮಾಡಿ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ.
ದೇಶದಲ್ಲಿ 750 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಅರ್ಧಕ್ಕೂ ಹೆಚ್ಚು ಕಾರ್ಖಾನೆಗಳು ಎಥೆನಾಲ್ ಉತ್ಪಾದನೆಯಲ್ಲಿ ತೊಡಗಿವೆ. 2025ರ ವೇಳೆಗೆ ದೇಶದ ಎಲ್ಲ ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದನೆಗೆ ಸಜ್ಜಾಗುತ್ತವೆ.
ದೇಶದ ಸಹಕಾರಿ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಗಳು ಸಂಯುಕ್ತವಾಗಿ ಸರ್ಕಾರಕ್ಕೆ 2025ರ ವೇಳೆಗೆ ಒಟ್ಟು ಬೇಕಾಗುವ ಒಂದು ಸಾವಿರ ಕೋಟಿ ಲೀಟರ್ ಎಥೆನಾಲ್ ಪೂರೈಸಲು ಒಪ್ಪಂದ ಮಾಡಿಕೊಂಡಿವೆ. ಕರ್ನಾಟಕದಲ್ಲಿ 37 ಸಕ್ಕರೆ ಕಾರ್ಖಾನೆಗಳು ನೇರವಾಗಿ ಕಬ್ಬಿನಿಂದ ಎಥೆನಾಲ್ ಉತ್ಪಾದಿಸುತ್ತಿವೆ. ರಾಜ್ಯದ ಉಳಿದ ಕಾರ್ಖಾನೆಗಳು ಕೂಡ ಉತ್ಪಾದನೆಗೆ ಸಿದ್ಧತೆ ಮಾಡಿಕೊಳ್ಳತೊಡಗಿವೆ.
ಕಬ್ಬಿನಿಂದ ಎಥೆನಾಲ್ ಮಾತ್ರ ಉತ್ಪಾದಿಸುವ ಕಾರ್ಖಾನೆಗಳನ್ನು ಕಟ್ಟುವ ಕೆಲಸ ದೇಶದಲ್ಲಿ ಆರಂಭವಾಗಿದೆ. ರಾಜ್ಯದಲ್ಲಿ 30 ಹೊಸ ಘಟಕಗಳು ನಿರ್ಮಾಣವಾಗತೊಡಗಿವೆ. ದೇಶದಲ್ಲಿ 2025ರ ವೇಳೆಗೆ ಬಹಳಷ್ಟು ಎಥೆನಾಲ್ ಘಟಕಗಳು ಬರಲಿವೆ.
ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಗೋಧಿ, ಭತ್ತದ ಹುಲ್ಲಿನಿಂದ ಎಥೆನಾಲ್ ಉತ್ಪಾದಿಸುವ ಘಟಕಗಳು ನಿರ್ಮಾಣವಾಗತೊಡಗಿವೆ. ಹರಿಯಾಣದ ಪಾಣಿಪತ್‌ನಲ್ಲಿ ಹುಲ್ಲಿನಿಂದ ಎಥೆನಾಲ್ ಉತ್ಪಾದಿಸುವ ದೊಡ್ಡ ಘಟಕ ಕಾರ್ಯ ಆರಂಭ ಮಾಡಿದೆ. ಇದೇ ಮಾದರಿಯಲ್ಲಿ ಗ್ರಾಮೀಣ ಭಾಗದಲ್ಲಿ ಸಣ್ಣ ಸಣ್ಣ ಎಥೆನಾಲ್ ಉತ್ಪಾದನೆಯ ಘಟಕಗಳನ್ನು ಕಟ್ಟುವುದಕ್ಕೆ ಸರ್ಕಾರ ನೆರವಾಗಬೇಕು. ಇದು ಕಡಿಮೆ ವೆಚ್ಚದಲ್ಲಿ ಎಥೆನಾಲ್ ಉತ್ಪಾದನೆಯ ಸರಳ ಮಾರ್ಗವಾಗಿದೆ ಮಾತ್ರವಲ್ಲ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಮತ್ತು ಕೃಷಿ ಚಟುವಟಿಕೆಗೆ ನೆರವಾಗುತ್ತದೆ.
ಯಾವುದೇ ಒಂದು ಯೋಜನೆ ಉತ್ತಮವಾಗಿದ್ದರೆ ಮಾತ್ರ ಸಾಲದು. ಅದನ್ನು ಸಮರ್ಪಕವಾಗಿ, ಜನಪರವಾಗಿ, ಆರ್ಥಿಕ ಶಿಸ್ತಿನಿಂದ, ಕಾಲಮಿತಿಯಲ್ಲಿ ಕಾರ್ಯರೂಪಕ್ಕೆ ತರಬೇಕು. ಹೀಗೆ ಅನುಷ್ಠಾನಕ್ಕೆ ಬಂದ ಯೋಜನೆಗಳು ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತವೆ. ಜನರ ಅನ್ನವನ್ನು ಎಥೆನಾಲ್ ಹೊಟ್ಟೆಗೆ ಹಾಕುವುದು ಹಿಂಸೆ ಎನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.