ADVERTISEMENT

ಸಂಗತ: ನಾವು ಮತ್ತು ನಮ್ಮ ಸಂವಿಧಾನ

ಸಂವಿಧಾನದ ಪ್ರಸ್ತಾವನೆಯನ್ನು ನಾವು ಓದಿ ಅರ್ಥ ಮಾಡಿಕೊಂಡರೆ, ಅದರ ಇತರ ಭಾಗಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು ಹೆಚ್ಚು ಸುಗಮವಾಗುತ್ತದೆ

ಎಂ.ಅಬ್ದುಲ್ ರೆಹಮಾನ್ ಪಾಷ
Published 22 ನವೆಂಬರ್ 2024, 20:07 IST
Last Updated 22 ನವೆಂಬರ್ 2024, 20:07 IST
.
.   

ಪ್ರತಿವರ್ಷ ನವೆಂಬರ್ 26ರಂದು ಇಡೀ ಭಾರತವು ‘ರಾಷ್ಟ್ರೀಯ ಸಂವಿಧಾನ ದಿನ’ವನ್ನು ಆಚರಿಸುತ್ತದೆ. 2015ರವರೆಗೆ ಇದನ್ನು ‘ರಾಷ್ಟ್ರೀಯ ಕಾನೂನು ದಿನ’ ಎಂದು ಆಚರಿಸಲಾಗುತ್ತಿತ್ತು. ಎರಡರ ಉದ್ದೇಶವೂ ಒಂದೇ: ಸಾರ್ವಜನಿಕರಲ್ಲಿ ನಮ್ಮ ಸಂವಿಧಾನದ ಬಗ್ಗೆ ಅರಿವು, ಜಾಗೃತಿ ಮೂಡಿಸುವುದು ಮತ್ತು ನಮ್ಮ ನಮ್ಮ ವೈಯಕ್ತಿಕ ನೆಲೆಯಲ್ಲಿಯೂ ಸಾಂವಿಧಾನಿಕ ಮೌಲ್ಯಗಳಾದ ಸಾಮಾಜಿಕ ನ್ಯಾಯ, ಸಮಾನತೆ, ಸ್ವಾತಂತ್ರ್ಯ, ಬಂಧುತ್ವ, ಸಾರ್ವಜನಿಕ ವಲಯದಲ್ಲಿ ಮತಧರ್ಮ ನಿರಪೇಕ್ಷತೆ ಮತ್ತು ವೈಜ್ಞಾನಿಕ ಮನೋವೃತ್ತಿ ಅನುಸರಿಸುವುದನ್ನು ರೂಢಿಸಿಕೊಳ್ಳು ವಂತೆ ಮಾಡುವುದೇ ಆಗಿದೆ.

ಈ ದಿಸೆಯಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತವೆ. ದೇಶದ ವಿವಿಧ ಪ್ರಾಂತ್ಯ, ಪ್ರದೇಶಗಳ ಜನರಿಂದ (ಪರೋಕ್ಷವಾಗಿ) ಆಯ್ಕೆಯಾಗಿ ಬಂದಿದ್ದ 299 ಸದಸ್ಯರು ಸಂವಿಧಾನ ಸಭೆಯನ್ನು ರಚಿಸಿಕೊಂಡರು. ದೆಹಲಿಯ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸೇರಿ, 1946ರ ಡಿಸೆಂಬರ್‌ 9ರಿಂದ ಆರಂಭಿಸಿ, ಸುಮಾರು 3 ವರ್ಷ ಶ್ರಮವಹಿಸಿ ‘ಭಾರತ ಸಂವಿಧಾನ’ವನ್ನು ರಚಿಸಿದರು. ಅಂತಿಮವಾಗಿ ಅದನ್ನು ಸಂವಿಧಾನ ಸಭೆಯಲ್ಲಿ ಅಂಗೀಕರಿಸಿದ್ದು, 1949ರ ನವೆಂಬರ್‌ 26ರಂದು. ಆ ಚಾರಿತ್ರಿಕ ಮಹತ್ವದ ಸಂದರ್ಭದ ನೆನಪಿನಲ್ಲಿ ನಾವು ‘ರಾಷ್ಟ್ರೀಯ ಸಂವಿಧಾನ’ ದಿನವನ್ನು ಆಚರಿಸುತ್ತೇವೆ. ನಂತರ, 1950ರ ಜನವರಿ 24ರಂದು ಎಲ್ಲಾ ಸದಸ್ಯರು, ಇಂಗ್ಲಿಷ್‌ನಲ್ಲಿದ್ದ ಮೂಲ ಸಂವಿಧಾನ ಮತ್ತು ಅದರ ಹಿಂದಿ ಅನುವಾದದ ಪ್ರತಿಗಳಲ್ಲಿ ತಮ್ಮ ಸಹಿಯನ್ನು ಹಾಕಿದರು. ಸಂವಿಧಾನದ ಈ ಮೂಲ ಪ್ರತಿಗಳು ಎಲ್ಲಿವೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಬಹುದು.

ನಮ್ಮ ಬಳಿ ಈಗ ಇರುವುದು, ನಂತರ ಸಂಸದೀಯ ವ್ಯವಹಾರಗಳ ಇಲಾಖೆಯಿಂದ ಅಧಿಕೃತವಾಗಿ ಪ್ರಕಟವಾದ ಇಂಗ್ಲಿಷ್ ಮತ್ತು ಇತರ ಭಾರತೀಯ ಭಾಷೆಗಳ ಆವೃತ್ತಿಗಳು. ಮೂಲ ಸಂವಿಧಾನದ ಪ್ರತಿಗಳನ್ನು ಸಂಸತ್ತಿನ ಗ್ರಂಥಾಲಯದಲ್ಲಿ ಹೀಲಿಯಂ ತುಂಬಿದ ಕೋಶದಲ್ಲಿ ಸಂರಕ್ಷಿಸಿ ಇಡಲಾಗಿದೆ. ಹೀಗಾಗಿ, ಅವನ್ನು ಮುಟ್ಟಲು, ತೆರೆದು ನೋಡಲು ನಮಗೆಲ್ಲಾ ಅವಕಾಶ ಇರುವುದಿಲ್ಲ. ಆದರೆ, ಒಂದು ಉಪಾಯವಿದೆ. ಶ್ಯಾಮ್ ಬೆನಗಲ್ ನಿರ್ದೇಶನದಲ್ಲಿ ನಿರ್ಮಾಣವಾಗಿ, ರಾಜ್ಯಸಭಾ ಟಿ.ವಿ. ಮೂಲಕ ಪ್ರಸಾರವಾದ 10 ಎಪಿಸೋಡುಗಳ ‘ಮೇಕಿಂಗ್ ಆಫ್‌ ಕಾನ್‍ಸ್ಟಿಟ್ಯೂಷನ್’ ಎಂಬ ವಿಡಿಯೊ ಸರಣಿಯ ಮೊದಲ ಸಂಚಿಕೆಯಲ್ಲಿ ನಮಗೆ ಮೂಲ ಸಂವಿಧಾನವನ್ನು ತೆರೆದು ತೋರಿಸಲಾಗುತ್ತದೆ– ಯೂಟ್ಯೂಬಿನಲ್ಲಿ ಹುಡುಕಿದರೆ ಈ ಸರಣಿ ಸಿಗುತ್ತದೆ.

ADVERTISEMENT

ಮೂಲ ಸಂವಿಧಾನದ ಪ್ರಸ್ತಾವನೆಯಲ್ಲಿ, ನಾವು ಕಟ್ಟಲಿರುವ ದೇಶದ ಸ್ವಭಾವದ ಬಗ್ಗೆ, ‘ಸಾರ್ವಭೌಮ, ಲೋಕತಂತ್ರಾತ್ಮಕ ಗಣರಾಜ್ಯ’ ಎಂದು ಮಾತ್ರ ಇತ್ತು. 1976ರಲ್ಲಿ ತರಲಾದ 42ನೇ ಸಂವಿಧಾನ ತಿದ್ದುಪಡಿಯ ಅನ್ವಯ ಇನ್ನೆರಡು ಪದಗಳನ್ನು ಸೇರಿಸಿ, ‘ಸಾರ್ವಭೌಮ, ಸಮಾಜವಾದಿ, ಮತಧರ್ಮ ನಿರಪೇಕ್ಷ, ಲೋಕತಂತ್ರಾತ್ಮಕ ಗಣರಾಜ್ಯ’ ಎಂದು ಮಾಡಲಾಗಿದೆ.

ಮೂಲ ಇಂಗ್ಲಿಷ್ ಮತ್ತು ಹಿಂದಿ ಆವೃತ್ತಿಯಲ್ಲಿ ಪ್ರತಿ ಭಾಗದ ಆರಂಭದಲ್ಲಿ ಒಂದು ಚಿತ್ರವಿದೆ. ಸರಣಿಯ 22 ಚಿತ್ರಗಳಲ್ಲಿ ಭಾರತದ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ವರ್ಣಚಿತ್ರಗಳಿವೆ. ಅವುಗಳಲ್ಲಿ ಸಿಂಧೂ ಕಣಿವೆ, ಗೀತೆ, ನಟರಾಜ, ರಾಮಾಯಣ, ಮಹಾಭಾರತ, ಬುದ್ಧ, ಮಹಾವೀರ, ಅಶೋಕ, ಅಕ್ಬರ್, ರಾಣಿ ಲಕ್ಷ್ಮಿಬಾಯಿ, ಟಿಪ್ಪು ಸುಲ್ತಾನ್, ಸುಭಾಷ್‌ಚಂದ್ರ ಬೋಸ್, ಮಹಾತ್ಮ ಗಾಂಧಿ ಅವರಿರುವಂತಹ ದೃಶ್ಯಗಳಿವೆ. ಈ ಚಿತ್ರಗಳನ್ನು ರಚಿಸಿದವರು ಕೋಲ್ಕತ್ತದ ಶಾಂತಿನಿಕೇತನದ ನಂದಲಾಲ್ ಬೋಸ್ ಮತ್ತು ಅವರ ಶಿಷ್ಯಂದಿರು. ಮೂಲ ಇಂಗ್ಲಿಷ್ ಮತ್ತು ಹಿಂದಿ ಆವೃತ್ತಿಗಳನ್ನು ಯಂತ್ರಗಳ ಸಹಾಯದಿಂದ ಮುದ್ರಿಸಲಾಗಿಲ್ಲ. ಬದಲಿಗೆ, ಅವುಗಳನ್ನು ಇಡಿಯಾಗಿ ಸುಂದರ ಕಲಾತ್ಮಕ ಕೈಬರಹದಲ್ಲಿ ಬರೆಯಲಾಗಿದೆ. ಇಂಗ್ಲಿಷ್ ಆವೃತ್ತಿಯನ್ನು ಪ್ರೇಮ್ ಬಿಹಾರಿ ನಾರಾಯಣ ರಾಯ್‌ಜಾದ ರಚಿಸಿದರೆ, ಹಿಂದಿ ಆವೃತ್ತಿಯನ್ನು ವಸಂತ್ ಕೃಷ್ಣ ವೈದ್ಯ ಅವರು ಕೈಯಿಂದ ಬರೆದಿದ್ದಾರೆ.

ಸಂವಿಧಾನದ ಪ್ರಸ್ತಾವನೆಯನ್ನು ಸಂವಿಧಾನದ ಹೆಬ್ಬಾಗಿಲು, ಸಂವಿಧಾನದ ಓದಿಗೊಂದು ಕೈದೀವಿಗೆ ಎನ್ನಲಾಗುತ್ತದೆ. ನಿಜ, ಕನ್ನಡದಲ್ಲಿ ಪ್ರಸ್ತಾವನೆಯು ಸುಮಾರು 57 ಪದಗಳಲ್ಲಿ ರಚನೆಯಾಗಿರುವ ಒಂದೇ ಒಂದು ಅಖಂಡ ವಾಕ್ಯ. ಅದನ್ನು ಓದಿ ಅರ್ಥ ಮಾಡಿಕೊಂಡರೆ ಸಂವಿಧಾನದ ಇತರ ಭಾಗಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು ಹೆಚ್ಚು ಸುಗಮ ವಾಗುತ್ತದೆ. ಅಲ್ಲದೆ, ನಮ್ಮಂಥ ಸಾರ್ವಜನಿಕರು ಸಂವಿಧಾನದ ಮೊದಲ ನಾಲ್ಕು ಭಾಗಗಳನ್ನು ಓದಿ ಅರ್ಥ ಮಾಡಿಕೊಂಡರೂ ನಮ್ಮ ಸಾಮಾನ್ಯ ಅರಿವಿನ ಅಗತ್ಯಕ್ಕೆ ಬಹಳಷ್ಟಾಗುತ್ತದೆ.

ರಾಷ್ಟ್ರೀಯ ಸಂವಿಧಾನ ದಿನದಂದು ನಾವು ಇಷ್ಟನ್ನಾದರೂ ಮಾಡಬಹುದು. ಪ್ರಸ್ತಾವನೆಯ ಕನ್ನಡ ಆವೃತ್ತಿಯನ್ನು ಸೂಕ್ತ ಅಳತೆಯಲ್ಲಿ ಮುದ್ರಿಸಿಕೊಂಡು, ಫೋಟೊ ಫ್ರೇಮ್ ಹಾಕಿಸಿ, ಮನೆ, ಅಂಗಡಿ, ಕಚೇರಿ, ಕಾರ್ಖಾನೆಗಳಲ್ಲಿ ಎದ್ದು ಕಾಣುವ ಹಾಗೆ ತೂಗು ಹಾಕಿ, ಆ ಸ್ಥಳಕ್ಕೆ ಒಂದು ಸಾಂವಿಧಾನಿಕ ಘನತೆಯನ್ನು ಒದಗಿಸಬಹುದು ಮತ್ತು ಆ ಭಿತ್ತಿಚಿತ್ರ ನಮಗೆ ಸಾಂವಿಧಾನಿಕ ಮೌಲ್ಯಗಳ ಬದ್ಧತೆಯನ್ನು ನೆನಪಿಸುತ್ತಲೇ ಇರಲು ಪ್ರೇರಣೆಯಾಗಬಹುದು. ನಾನಂತೂ ಮಾಡಿದ್ದೇನೆ, ನೀವೂ ಮಾಡುವಿರಾ? ನಾವು ಭಾರತೀಯರು ಎಂಬುದಕ್ಕೆ ಇದೊಂದು ಉತ್ತಮ ಪ್ರತೀಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.