ಶಾಲೆಯೊಂದರ ಪೋಷಕರ ಸಭೆಯಲ್ಲಿ ಇತ್ತೀಚೆಗೆ ಬಹುತೇಕ ತಾಯಂದಿರು ಒಂದು ಸರಳ ಕೋರಿಕೆಯನ್ನು ಮುಂದಿಟ್ಟರು: ‘ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ. ಯಾವ ಅಡುಗೆ ಮಾಡಿದರೂ ತಿನ್ನುವುದಿಲ್ಲ, ನೀವಾದರೂ ಹೇಳಿ. ತಿನ್ನಲು ತಾಕೀತು ಮಾಡಿ’. ಆಹಾರವನ್ನು ತಾಕೀತು ಮಾಡಿ ತಿನ್ನಿಸುವು ದಲ್ಲ. ಅದು ಇಷ್ಟಪಟ್ಟು ತಿನ್ನಬೇಕಾದದ್ದು. ಮಕ್ಕಳು ಹಾಗೆ ತಿನ್ನುವಂತೆ ಮಾಡಲು ನಾವೆಲ್ಲೋ ಸೋತಿದ್ದೇವೆ ಎಂಬುದನ್ನು ಶಿಕ್ಷಕರಾದ ನಾವು ಅವರಿಗೆ ಮನವರಿಕೆ ಮಾಡಿಸಬೇಕಾಯಿತು.
ಮಕ್ಕಳ ಆಹಾರದ ಶಿಸ್ತು ದಾರಿ ತಪ್ಪಿದೆ. ಅವರು ಸೇವಿಸುವ ಅಸಮರ್ಪಕ ಆಹಾರದಿಂದ ಅವರ ದೇಹಕ್ಕೆ ಸೇರಬೇಕಾದ ಕನಿಷ್ಠ ಪೋಷಕಾಂಶಗಳು ಸೇರುತ್ತಿಲ್ಲ. ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಮಕ್ಕಳಲ್ಲಿ ಅನೀಮಿಯಾ (ರಕ್ತಹೀನತೆ) ಸಮಸ್ಯೆ ಕಾಣಿಸಿಕೊಂಡಿದ್ದು, 13 ಸಾವಿರ ಮಕ್ಕಳನ್ನು ತೀವ್ರ ರೀತಿಯ ಸಮಸ್ಯೆಗಳು ಕಾಡುತ್ತಿವೆ ಎಂದು ಆರೋಗ್ಯ ಇಲಾಖೆಯ ವರದಿಯೊಂದು ಇತ್ತೀಚೆಗಷ್ಟೇ ತಿಳಿಸಿದೆ.
ತಿನ್ನಲು ಬಹಳಷ್ಟು ಒಳ್ಳೆಯ ಆಹಾರ ದೊರೆ ಯುತ್ತಿದ್ದರೂ ಅದನ್ನು ತಿನ್ನದ ಮತ್ತು ತಿನ್ನಲು ಒಳ್ಳೆಯ ಆಹಾರದ ಅಭಾವದಿಂದ ಬಳಲುತ್ತಿರುವ ಎರಡೂ ಸ್ತರದ ಮಕ್ಕಳನ್ನು ನಾವಿಲ್ಲಿ ಕಾಣಬಹುದು. ಈ ಎರಡು ರೀತಿಯ ಆಹಾರ ಕ್ರಮಗಳಿಂದಲೂ ಮಕ್ಕಳ ದೇಹದೊಳಗೆ ಸೇರಬೇಕಾದದ್ದು ಸೇರದೇ ಹೋಗುತ್ತದೆ. ಆಗ ಅವರು ಬೆಳೆಯಬೇಕಾದಂತೆ ಬೆಳೆಯದೆ, ಬಾಳಬೇಕಾದಂತೆ ಬಾಳದೆ ನಿಶ್ಶಕ್ತಿಯಿಂದ ಬಳಲಬೇಕಾಗುತ್ತದೆ. ಮಕ್ಕಳ ಆಹಾರ ಕ್ರಮದ ಮೇಲೆ ಅವರ ಕಲಿಕೆಯೂ ಅವಲಂಬಿಸಿರುತ್ತದೆ. ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯು ಮಗುವಿನಲ್ಲಿ ಆಲೋಚನಾ ಶಕ್ತಿ ಮತ್ತು ಉತ್ಪಾದಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಬುದ್ಧಿಶಕ್ತಿ ಮತ್ತು ಕಲಿಕೆಯ ವೇಗವನ್ನು ಚುರುಕುಗೊಳಿಸುತ್ತದೆ ಎಂದು ಹಲವು ವರದಿಗಳು ಹೇಳುತ್ತವೆ.
ದೀರ್ಘಕಾಲದ ರಕ್ತಹೀನತೆಯು ಮಕ್ಕಳ ನರಮಂಡಲದ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಬಹುದು. ಮಕ್ಕಳ ನಡವಳಿಕೆಯನ್ನೂ ಪ್ರಭಾವಿಸ ಬಹುದು. ಕೆಲವು ಕಾಯಿಲೆಗಳಿಗೆ ತುತ್ತಾಗುವ ಅಪಾಯ ಸಹ ಎದುರಾಗಬಹುದು.
ಕೀನ್ಯಾದ ಸರ್ಕಾರಿ ಶಾಲೆಯೊಂದರಲ್ಲಿ ಅಲ್ಲಿನ ಬಡ ಮಕ್ಕಳಿಗೆ ಎರಡು ವರ್ಷಗಳವರೆಗೆ ಸತತವಾಗಿ ಉತ್ತಮ ಪೌಷ್ಟಿಕಾಂಶವುಳ್ಳ ಸತ್ವಯುತ ಆಹಾರವನ್ನು ನೀಡಲಾಯಿತು ಮತ್ತು ಆರು ತಿಂಗಳಿಗೊಮ್ಮೆ ಜಂತುಹುಳುವಿನ ಮಾತ್ರೆಗಳನ್ನೂ ಕೊಡಲಾಯಿತು. ನಂತರದ ವರ್ಷಗಳಲ್ಲಿ ಅಚ್ಚರಿಯ ಫಲಿತಾಂಶ ಸಿಕ್ಕಿತು. ಇತರ ಶಾಲೆಗಳಿಗಿಂತ ಆ ಶಾಲೆಯ ಮಕ್ಕಳು ಕಲಿಕೆಯಲ್ಲಿ ಹೆಚ್ಚಿನದ್ದನ್ನು ಸಾಧಿಸಿದ್ದರು.
ಈ ಮೊದಲೇ ಹೇಳಿದಂತೆ, ಫಾಸ್ಟ್‌ಫುಡ್, ಜಂಕ್‌ಫುಡ್ ರುಚಿಯ ಹಿಂದೆ ಬಿದ್ದ ಮಕ್ಕಳು ಮನೆಯ ಉತ್ತಮ ಊಟದ ಕಡೆ ಮನಸ್ಸು ಮಾಡುವುದಿಲ್ಲ. ಪೋಷಕರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹೀಗೆ ಹೊರಗೆ ದುಬಾರಿಯಾದ ಆಹಾರ ತಿನ್ನುವುದು ಕೆಲವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಅದನ್ನು ತಿಂದೆವು, ಇದನ್ನು ತಿಂದೆವು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕೆಲವು ಪೋಷಕರು ಇದನ್ನು ಪ್ರೋತ್ಸಾಹಿಸುತ್ತಿರುವುದು ಮಾತ್ರ ಸೋಜಿಗ. ಮಕ್ಕಳಿಗೆ ಲಭ್ಯವಾಗುವ ‘ಪಾಕೆಟ್‌ಮನಿ’ ಸಂಸ್ಕೃತಿಯಿಂದ ಅವರ ಆಹಾರ ಕ್ರಮ ಕೆಡುತ್ತಿರುವುದಂತೂ ದಿಟ. ಮಕ್ಕಳ ಶಾಲಾ ಬ್ಯಾಗ್‌ಗಳು ಕುರುಕಲು ತಿಂಡಿಯಿಂದ ತುಂಬಿ ಹೋಗಿರುತ್ತವೆ.
ಇನ್ನೊಂದು ಬಹಳ ಮುಖ್ಯವಾದ ವಿಚಾರವೆಂದರೆ, ಎಷ್ಟೋ ಮಕ್ಕಳಿಗೆ ತಿನ್ನಲು ಸರಿಯಾದ ಊಟವಿಲ್ಲ. ಅಂತಹ ಬಡತನದ ಮಧ್ಯೆ ಪೋಷಕಾಂಶಗಳ ಕಡೆ ಗಮನ ಕೊಡುವುದಾದರೂ ಹೇಗೆ? ಏನೋ ಒಂದು ಹೊಟ್ಟೆ ತುಂಬಿದರೆ ಸಾಕು ಎನ್ನುವ ಹಸಿವಿನ ಕಷ್ಟ ಅದು. ಅಂತಹ ಬಡತನದಲ್ಲಿ ಸಮತೋಲಿತ ಆಹಾರ ಸಿಗುವುದು ಕಷ್ಟವೆ. ಬಡವರು ಬಡವರಾಗಿಯೇ ಉಳಿಯುವುದಕ್ಕೆ ಅವರು ಸೇವಿಸುವ ಆಹಾರ ಪದಾರ್ಥಗಳು ಒಂದು ಪ್ರಮುಖ ಕಾರಣವಾಗಿವೆ.
ನಾವು ಮಕ್ಕಳ ಭವಿಷ್ಯ ಎಂದರೆ ಅದು ಅವರು ತೆಗೆಯುವ ಅಂಕಗಳು ಎಂದೇ ಯೋಚಿಸುತ್ತೇವೆ. ಆ ಅಂಕಗಳನ್ನು ತೆಗೆಯಲು ಕೂಡ ಉತ್ತಮ ಆಹಾರವನ್ನು ಮಗು ಸೇವಿಸಬೇಕು ಎಂಬುದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಉತ್ತಮ ಆರೋಗ್ಯ ಒಂದು ಸಂಪತ್ತು. ಅದು ನಾಳೆಗಳಲ್ಲಿ ಹೂಡುವ ಅತಿ ದೊಡ್ಡ ಬಂಡವಾಳ ಎಂಬುದು ನಮಗೆ ತಿಳಿಯದೇ ಇರುವ ವಿಷಯವಲ್ಲ. ಒಮ್ಮೊಮ್ಮೆ ನಾವು ನಾಳೆಗೆ ದುರ್ಬಲ ಆರೋಗ್ಯದ ಮಾನವ ಸಂಪನ್ಮೂಲವನ್ನು ಕಾಣಿಕೆಯಾಗಿ ನೀಡುತ್ತಿದ್ದೇವೇನೊ ಅನಿಸುತ್ತದೆ.
ಸರ್ಕಾರವು ವಿವಿಧ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿನ ಪೋಷಕಾಂಶದ ಕೊರತೆಯನ್ನು ನೀಗಿಸಲು ಶ್ರಮಿಸುತ್ತದೆ. ವಾರದ ಆರು ದಿನವೂ ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು, ಮೊಟ್ಟೆ, ಬಾಳೆಹಣ್ಣು ನೀಡುವ ಯೋಜನೆ ತುಂಬಾ ಅದ್ಭುತವಾದದ್ದು. ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಮಕ್ಕಳ ಕಲಿಕೆಯಲ್ಲಿ ಮತ್ತು ಅವರ ಆರೋಗ್ಯದಲ್ಲಿ ನಾವು ಖಂಡಿತ ಕಾಣಬಹುದಾಗಿದೆ. ಆದರೆ ಅದು ತುಂಬಾ ಪ್ರಾಮಾಣಿಕವಾಗಿ ಅನುಷ್ಠಾನಗೊಳ್ಳಬೇಕಾಗಿದೆ ಅಷ್ಟೆ.
ಪೋಷಕರು ಮಕ್ಕಳಿಗೆ ಉತ್ತಮ ಆಹಾರ ಕ್ರಮವನ್ನು ರೂಢಿಸಬೇಕು. ಸದಾ ಹೊರಗೆ ತಿನ್ನುವುದು, ಕೌಮಾರ್ಯಕ್ಕೆ ಬಂದ ಮಕ್ಕಳು ದಪ್ಪ ಆಗುತ್ತೇವೆ ಎಂದು ಹೆದರಿ ಊಟ ಬಿಡುವುದು, ಸದಾ ಕುರುಕಲು ತಿಂಡಿಗೆ ಆತುಕೊಳ್ಳುವುದು, ಬೇಕರಿ ತಿಂಡಿಗಳ ಚಟ ಅಂಟಿಸಿಕೊಳ್ಳುವುದು, ಚಾಟ್ ತಿನ್ನುವುದನ್ನೇ ಊಟ ಎಂದು ಭಾವಿಸಿಕೊಳ್ಳುವುದು, ಸಮಯ ತಪ್ಪಿಸಿ ಊಟ ಮಾಡುವಂಥ ಅಭ್ಯಾಸಗಳನ್ನು ತಪ್ಪಿಸಬೇಕು.
ದುರ್ಬಲ ಆಹಾರವು ದುರ್ಬಲ ಕಲಿಕೆಗೆ ಮತ್ತು ಮಗುವಿನ ದುರ್ಬಲ ನಾಳೆಗಳಿಗೆ ಕಾರಣವಾಗಬಹುದು. ಹಾಗಾಗಿ, ನಾವು ಇಂದೇ ಎಚ್ಚೆತ್ತುಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.