‘ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ದೇವಸ್ಥಾನ ನಿರ್ಮಿಸಬೇಕು, ಅದರಿಂದ ಪಾಸಿಟಿವ್ ಎನರ್ಜಿ ಸಿಗುತ್ತದೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಈಚೆಗೆ ಹೇಳಿಕೆ ನೀಡಿದ್ದರು. ಇದಕ್ಕೆ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾದವು.
ಆಸ್ಪತ್ರೆಗಳಿಗೆ ಬರುವ ಬಡವರು ರಸ್ತೆಬದಿಯ ತಳ್ಳುಗಾಡಿಯಲ್ಲೋ ಇಲ್ಲವೇ ಸಣ್ಣ ಹೋಟೆಲ್‌ಗಳಲ್ಲೋ ಸಿಕ್ಕಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಇದೆ. ತಮ್ಮ ಕಡೆಯ ರೋಗಿ ಶಸ್ತ್ರಚಿಕಿತ್ಸೆಗೆ ಅಥವಾ ತೀವ್ರ ಕಾಯಿಲೆಗೆ ಒಳಗಾಗಿದ್ದರೆ, ಅವರು ಒಂದೆರಡು ವಾರ ಆಸ್ಪತ್ರೆಯಲ್ಲೇ ಕಳೆಯಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ, ರಸ್ತೆ ಬದಿಯ ಆಹಾರವನ್ನು ವಾರಗಟ್ಟಲೆ ಸೇವಿಸಿದವರು ಅನಾರೋಗ್ಯಕ್ಕೆ ಈಡಾಗುವುದೂ ಉಂಟು.
ಇತ್ತ, ಎಷ್ಟೋ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಕೊಡುವ ಊಟದ ಗುಣಮಟ್ಟವು ರಸ್ತೆ ಬದಿಯ ಆಹಾರಕ್ಕಿಂತ ಉತ್ತಮವಾಗೇನೂ ಇರುವುದಿಲ್ಲ! ರೋಗಿಗಳ ರೋಗ ನಿರೋಧಕ ಸಾಮರ್ಥ್ಯ ಕಡಿಮೆ ಇರುತ್ತದೆ. ಅವರಿಗೆ ಪೌಷ್ಟಿಕ ಆಹಾರ ಬೇಕು. ಆಸ್ಪತ್ರೆಗಳಲ್ಲಿ ನೀಡುವ ಆಹಾರವು ಇಂತಹ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ ಎಂದು ಹೇಳಲಾಗದು. ಹೀಗಿರುವಾಗ, ರೋಗಿ ಮತ್ತು ಅವರ ಆರೈಕೆಗಾಗಿ ಬರುವ ಸಹಾಯಕರಿಗೆ ರಾಸಾಯನಿಕಮುಕ್ತ ಅನ್ನ, ತಾಜಾ ತರಕಾರಿ, ಹಣ್ಣು, ಮೊಳಕೆ ಕಟ್ಟಿದ ಕಾಳು, ಮೊಟ್ಟೆ, ಮೀನು, ಹಣ್ಣಿನ ಜ್ಯೂಸ್‌ನಂತಹ ಆಹಾರ ಸಿಗುವಂತಿದ್ದರೆ?
ಥಾಯ್ಲೆಂಡ್ ದೇಶದಲ್ಲಿ ಇಂಥ ‘ಪಾಸಿಟಿವ್’ ಚಿಂತನೆ ಸಾಕಾರವಾಗಿದೆ. ಅಲ್ಲಿನ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ‘ರೈತರ ಸಂತೆ’ಗಳನ್ನು ನಡೆಸಲಾಗುತ್ತದೆ. ಸಾವಯವ ಕೃಷಿಕರು, ಮಹಿಳಾ ಸಂಘಗಳ ಪ್ರತಿನಿಧಿಗಳು, ಸಣ್ಣಪುಟ್ಟ ವ್ಯಾಪಾರಸ್ಥರು ತಮ್ಮ ತೋಟದ ಉತ್ಪನ್ನಗಳು ಹಾಗೂ ಮೌಲ್ಯವರ್ಧಿತ ಪದಾರ್ಥಗಳನ್ನು ಸಂತೆಗೆ ತರುತ್ತಾರೆ. ಕೈಗೆಟುಕುವ ದರದಲ್ಲಿ ಮಾರಾಟ ಮಾಡುತ್ತಾರೆ. ವಾರಕ್ಕೊಮ್ಮೆ ಅಥವಾ ವಾರದಲ್ಲಿ ಎರಡು- ಮೂರು ಬಾರಿ ಸಂತೆ ನಡೆಯುತ್ತದೆ. ಮಹಿಳೆಯರ ನೇತೃತ್ವದಲ್ಲಿ ಈ ಸಂತೆಗಳು ನಡೆಯುತ್ತವೆ ಎಂಬುದೊಂದು ಹೆಗ್ಗಳಿಕೆ.
ಕಳೆದ ತಿಂಗಳು, ಥಾಯ್ಲೆಂಡಿನ ಚೆಚಾಂಗ್ ಸಾವ್ ಪ್ರಾಂತ್ಯದ ಸನಮ್ ಚೈಕೆತ್ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆಯುವ ರೈತ ಮಾರುಕಟ್ಟೆ ನೋಡುವ ಅವಕಾಶ ಸಿಕ್ಕಿತು. ಆಸ್ಪತ್ರೆಯ ಕಾರಿಡಾರಿನಲ್ಲಿ 15 ಮಳಿಗೆಗಳಿದ್ದವು. ತಾಜಾ ಸೊಪ್ಪು, ಹಣ್ಣು, ತರಕಾರಿ, ಗೆಡ್ಡೆ-ಗೆಣಸು, ಬಿದಿರು ಕಳಲೆ, ಅಣಬೆ, ಬಾಳೆ ಕಂದು- ಹೂವು, ಶಂಕಪುಷ್ಪಿಯಂಥ ಮೂಲಿಕೆಗಳು ಮಾರಾಟಕ್ಕಿದ್ದವು. ರೇಷ್ಮೆ, ಕವಳೆ ಮೊದಲಾದ ಹಣ್ಣುಗಳ ಜ್ಯೂಸ್ ಇತ್ತು. ಬಾಳೆ ಎಲೆಯಲ್ಲಿ ಸುತ್ತಿಟ್ಟ ಅನ್ನ, ಬೇಯಿಸಿದ ಮೊಟ್ಟೆ, ದೊನ್ನೆಗೆ ತುಂಬಿದ ಮೊಳಕೆ ಕಾಳು, ನ್ಯೂಡಲ್ಸ್ ಬಾಯಿ ಚಪ್ಪರಿಸಲು ಸಿಗುತ್ತಿದ್ದವು. ದೇಸಿ ಅಕ್ಕಿ, ಬೇಳೆಕಾಳು ಮತ್ತು ಮೌಲ್ಯವರ್ಧಿತ ಪದಾರ್ಥಗಳು ಮಾರಾಟಕ್ಕಿದ್ದವು. ಬಗೆ ಬಗೆಯ ಹಣ್ಣುಗಳ ಐಸ್‌ಕ್ರೀಂನ ಮಳಿಗೆ ಇತ್ತು. ನಾನು ಅಕ್ಕಿಯ ಐಸ್‌ಕ್ರೀಂ ರುಚಿ ನೋಡಿದ್ದು ಅದೇ ಮೊದಲು! ಎಲೆಯ ಜೊತೆಗೆ ವಿವಿಧ ಮೂಲಿಕೆಗಳನ್ನು ಬೆರೆಸಿ ಸುತ್ತಿಕೊಟ್ಟ ‘ಹರ್ಬಲ್ ಪಾನ್’ ಆಹಾ ಅನ್ನುವಂತಿತ್ತು!
ರೋಗಿಗಳು, ಅವರ ಬಂಧು ಬಾಂಧವರು, ಆಸ್ಪತ್ರೆಯ ಸಿಬ್ಬಂದಿಯೇ ಈ ಮಾರುಕಟ್ಟೆಯ ಗ್ರಾಹಕರು. ‘ಸಂತೆಯ ದಿನ ವಾರಕ್ಕಾಗುವಷ್ಟು ಹಣ್ಣು, ತರಕಾರಿ ಇಲ್ಲಿಂದಲೇ ಖರೀದಿಸುತ್ತೇನೆ. ಕಾಡುಸೊಪ್ಪುಗಳ ಪಲ್ಯ ನನಗಿಷ್ಟ’ ಎಂದು ಶುಶ್ರೂಷಕಿ ವನ್ ಆಮ್ಮನಿಯಮ್ ಖುಷಿಯಿಂದ ಹೇಳಿದರು. ಆಸ್ಪತ್ರೆಯ ಆಸುಪಾಸಿನ ನಿವಾಸಿಗಳು ಕೂಡ ರೈತ ಸಂತೆಗೆ ಬರುತ್ತಾರೆ. ‘ನಗರಸಭೆಗಳು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ರೈತರ ಮಾರುಕಟ್ಟೆ ಆಯೋಜಿಸುತ್ತವೆ. ಪ್ರಾಮಾಣಿಕ ರೈತರು ಮತ್ತು ಗುಂಪುಗಳ ಆಯ್ಕೆ ಹಾಗೂ ಮಾರುಕಟ್ಟೆ ಉಸ್ತುವಾರಿಯನ್ನು ಗ್ರಾಹಕ– ರೈತರ ಸಮಿತಿಯೊಂದು ನೋಡಿಕೊಳ್ಳುತ್ತದೆ. ಈ ಪ್ರಯತ್ನ ಥಾಯ್ಲೆಂಡ್‌ನಲ್ಲಿ ಜನಪ್ರಿಯವಾಗಿದೆ’ ಎಂದು ರೈತ ಮಾರುಕಟ್ಟೆ ಜಾಲವಾದ ‘ಮೈಂಡ್‌ಫುಲ್ ಮಾರ್ಕೆಟ್’ನ ಮುಖ್ಯಸ್ಥೆ ವಾಲಪ ವನ್ ವಿವರಿಸಿದರು.
ಇಂಥ ರೈತ ಮಾರುಕಟ್ಟೆಗಳನ್ನು ಜಿಲ್ಲಾ ಕೇಂದ್ರದ ಆಸ್ಪತ್ರೆಯ ಆವರಣದಲ್ಲಿ ಏರ್ಪಡಿಸಿದರೆ ರೋಗಿಗಳು, ಅವರ ಸಹಾಯಕರು ಮತ್ತು ಸಿಬ್ಬಂದಿಗೆ ಅನುಕೂಲವಾಗುತ್ತದೆ. ನೇರ ಮಾರಾಟದಿಂದ ರೈತರಿಗೂ ಲಾಭ ಸಿಗುತ್ತದೆ. ಸ್ಥಳೀಯ ಕೃಷಿ ವೈವಿಧ್ಯ ಮತ್ತು ಆಹಾರ ಸಂಸ್ಕೃತಿಗೆ ಒತ್ತು ನೀಡುವುದರಿಂದ, ದಿನನಿತ್ಯ ಆಸ್ಪತ್ರೆಗೆ ಬರುವ ನೂರಾರು ಜನರಲ್ಲಿ ವಿಷಮುಕ್ತ ಆಹಾರದ ಬಗ್ಗೆ ಅರಿವು ಮೂಡುತ್ತದೆ. ಶುದ್ಧ ಆಹಾರದ ಮಹತ್ವ ತಿಳಿಯುತ್ತದೆ. ಜಡ್ಡು ಬಿದ್ದವರಿಗೆ ಚಿಕಿತ್ಸೆ ನೀಡುವುದಲ್ಲ, ಜಡ್ಡು ಬೀಳದ ಹಾಗೆ ಜನರಲ್ಲಿ ಎಚ್ಚರ ಮೂಡಿಸುವುದು ಕೂಡ ಆರೋಗ್ಯ ಇಲಾಖೆಯ ಜವಾಬ್ದಾರಿ.
ಮಹಿಳಾ ಸಂಘಗಳ ಸದಸ್ಯರು ಮತ್ತು ಯುವ ರೈತರನ್ನು ಈ ಕಾರ‍್ಯಕ್ರಮದಲ್ಲಿ ತೊಡಗಿಸಿ, ರೈತ ಮಾರುಕಟ್ಟೆಯನ್ನು ವಾರದ ಎಲ್ಲ ದಿನವೂ ಇರುವಂತೆ ನೋಡಿಕೊಳ್ಳಬಹುದು. ಕೃಷಿಯಿಂದ ವಿಮುಖರಾಗುತ್ತಿರುವ ಯುವಕರನ್ನು ಮತ್ತೆ ಕೃಷಿಗೆ ಸೆಳೆಯಲು ಇದು ಸಹಾಯಕವಾಗಬಲ್ಲದು.
ಅನ್ನ ದೇವರ ಮುಂದೆ ಇನ್ನಾವ ದೇವರೂ ಇಲ್ಲ ಎಂಬ ಸತ್ಯ ನಮಗೆ ತಿಳಿಯಲಿ. ಆಸ್ಪತ್ರೆ ಆವರಣದಲ್ಲಿ ದೇವಸ್ಥಾನದ ಬದಲಿಗೆ ರೈತರ ಸಂತೆ ನಡೆಯುವಂತಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.