ಮದುವೆ ಮನೆಯಲ್ಲಿ ನೆಂಟರೊಡನೆ ಹರಟುತ್ತಿದ್ದೆ. ಲಡ್ಡು ಘಮ ಘಮ ಪಾಕಶಾಲೆಯತ್ತ ಎಳೆದೊಯ್ದಿತು. ಕುತೂಹಲದಿಂದ ‘ತಯಾರಿಕೆ ಹೇಗೆ?’ ಎಂದು ವಿಚಾರಿಸಿದಾಗ ಬಾಣಸಿಗರ ಉತ್ತರ: ‘ಛೆ! ಬಹು ತ್ರಾಸ, ನಿಮಗಾಗದು ಬಿಡಿ’. ‘ಪಾಕ ಇಳಿಸೋದು ಬಹಳ ಸರಾಗ, ಯಾರಾದ್ರೂ ಲಡ್ಡು ಸಿದ್ಧ ಮಾಡಬಹುದು’ ಅಂತ ಆತ ಹೇಳಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು.
ನಾವು ಅದೆಷ್ಟೋ ಸನ್ನಿವೇಶಗಳಲ್ಲಿ ಸರಳತೆಗಿಂತ ಸಂಕೀರ್ಣತೆಯೇ ಶ್ರೇಷ್ಠ ಎಂಬ ನಿರ್ಧಾರಕ್ಕೆ ಬರುತ್ತೇವೆ. ಕಠಿಣವು ಘನತೆಯ ಪ್ರತೀಕ ಎಂಬುದೇ ನಮ್ಮ ಭಾವನೆ. ‘ಬದುಕು ಸರಳ, ಆದರೆ ಅದನ್ನು ಸಂಕೀರ್ಣಗೊಳಿಸುವವರು ನಾವೇ’ ಎಂದು ಚೀನಾದ ತತ್ವಜ್ಞಾನಿ ಕನ್‍ಫ್ಯೂಷಿಯಸ್ ಉದ್ಗರಿಸಿ ಎರಡೂವರೆ ಸಹಸ್ರಮಾನಗಳು ಸಂದಿವೆ. ಅವನ ಈ ನುಡಿಯು ಮಾಹಿತಿ ಸುನಾಮಿಯ ಈ ಯುಗದಲ್ಲಂತೂ ಹೆಚ್ಚು ಪ್ರಸ್ತುತ.
ಬಹುತೇಕ ಎಲ್ಲದರಲ್ಲೂ ಅನಗತ್ಯವಾಗಿ ಕಷ್ಟ, ಗೌಜು ಕಾಣುತ್ತ ವಿನಾಕಾರಣ ಕ್ಲಿಷ್ಟತೆಗೆ ರಂಗೋಲಿ ಹಾಕಿರುತ್ತೇವೆ. ವಾಸ್ತವವಾಗಿ ಪ್ರಕೃತಿಯಲ್ಲಿ ಸಂಕೀರ್ಣತೆ ಇಲ್ಲ. ತುಸು ಆಸ್ಥೆ ವಹಿಸಿದರೆ ಅದರ ಅನೇಕ ವಿದ್ಯಮಾನಗಳು ಕಾರ್ಯಕಾರಣ ಸಂಬಂಧಮುಖೇನ ದಕ್ಕುತ್ತವೆ, ಅರ್ಥವಾಗುತ್ತವೆ. ಸಂಕೀರ್ಣತೆ ಇರುವುದು ನಮ್ಮ ಮನಸ್ಸುಗಳಲ್ಲಿ. ಹಾಗಾಗಿ ಸರಳತೆಯನ್ನು ಒಂದು ಬಹುಮುಖ್ಯ ಮೌಲ್ಯವಾಗಿ ಆವಾಹಿಸಿಕೊಳ್ಳುವುದು ವಿವೇಕ.
ವಿಶ್ವಮಾನ್ಯ ವಿಜ್ಞಾನಿ ನ್ಯೂಟನ್‍ಗೂ ಸರಳತೆಯ ಕಿಮ್ಮತ್ತು ಕೈಗೂಡದೆ ನಗೆಪಾಟಲಾಗಿತ್ತು. ಒಂದು ಉದಾಹರಣೆಯಂತೂ ಬಲು ಸ್ವಾರಸ್ಯಕರ. ನ್ಯೂಟನ್ ಪ್ರಾಣಿಪ್ರಿಯ. ಒಮ್ಮೆ ಆಕಸ್ಮಿಕವಾಗಿ ಅವರ ಕೊಠಡಿಗೆ ಬಂದಿದ್ದ ಮಿತ್ರನೊಬ್ಬನಿಗೆ ಕಂಡಿದ್ದೇನು? ಗೋಡೆಯಲ್ಲಿನ ಎರಡು ಕಿಂಡಿಗಳು- ಒಂದು ದೊಡ್ಡದು, ಇನ್ನೊಂದು ಸಣ್ಣದು. ಚಿಕ್ಕದೇಕೆ? ದೊಡ್ಡ ಕಿಂಡಿಯ ಮೂಲಕವೇ ಬೆಕ್ಕು, ನಾಯಿ ಎರಡೂ ಓಡಾಡ
ಬಹುದಲ್ಲ ಎಂದು ಆಪ್ತ ಹೇಳಿದಾಗಲೇ ವಿಜ್ಞಾನಿಗೆ ಸರಾಗದ ಹಿರಿಮೆ ಅರಿವಾದದ್ದು!
ಸರಳತೆಯು ನಿರ್ದೇಶಿಸುವುದು ಬಡತನವನ್ನಲ್ಲ, ಬದಲಿಗೆ ಇರುವುದನ್ನು, ಕಿರಿಯದನ್ನು ಮೆಚ್ಚುವ ಮನಃಸ್ಥಿತಿಯನ್ನು. ಗೊತ್ತುಗುರಿಯಿಲ್ಲದೆ
ಬೇಕು ಬೇಡಗಳು ಅನಿವಾರ್ಯವೆಂಬ ಭ್ರಮೆ ನಮ್ಮನ್ನಾಳಿ ಸರಳತೆ ಸೊರಗುತ್ತದೆ. ಭಾವೋದ್ವೇಗ ಮತ್ತು ಅತಿಸಮೃದ್ಧಿಯಿಂದ ಹೊರಬಂದು ಆಳ, ನಿರಾಳ ಬದುಕನ್ನು ಆತುಕೊಳ್ಳುವುದೇ ಸರಳತೆ. ದುಂದುವ್ಯಯ, ಆಡಂಬರ, ಹುಸಿ ಹೆಮ್ಮೆ ಪರಿತಾಪದ ಬೇರುಗಳು. ಸರಳತೆಯನ್ನು ನಮ್ಮ ದಿನಮಾನಗಳ ಶೈಲಿಯಾಗಿಸಿಕೊಳ್ಳಬೇಕಿದೆ. ‘ಇದ್ರೆ ಹೋಳಿಗೆ, ಇಲ್ದಿದ್ರೆ ಜೋಳಿಗೆ’ ಗಾದೆಯು ಕೊಳ್ಳುಬಾಕ ಪ್ರವೃತ್ತಿಗೆ ಕನ್ನಡಿ ಹಿಡಿಯುವುದು!
ಜನಪದರು ತಮ್ಮ ವ್ಯಾಪಕ ಅನುಭವಗಳಿಂದಲೇ ನಯ, ನಾಜೂಕು ಸಾಧಿಸಿದವರು. ಗಾಂಧೀಜಿ ಅವರ ನಡೆ, ನುಡಿ, ರೀತಿ, ನೀತಿ, ಒಟ್ಟಾರೆ ಅವರು ಸಾಂಪ್ರತಗೊಳಿಸಿಕೊಂಡ ಬದುಕು ಸಾರ್ವಕಾಲಿಕ, ಸರ್ವಸಮ್ಮತ ಮಾದರಿ. ಸರಳಜೀವನ, ಉದಾತ್ತ ಚಿಂತನೆಯು ಗಾಂಧಿ ಮಾರ್ಗ. ಸಹಜತೆ, ನೇರ ನಡೆನುಡಿಯಿಂದ ನಾವು ದೂರ ಸರಿದಂತೆ ಮಾತಿನಲ್ಲಿ ನಯ, ವಿನಯ ಬೇರ್ಪಡುವುದು. ಪರೀಕ್ಷೆ, ಸಂದರ್ಶನಗಳಲ್ಲಿ ತಾನೆ ಏನು? ಪ್ರಶ್ನೆಗಳು ಸುತ್ತಿ ಬಳಸಿದಷ್ಟೂ ಪರೀಕ್ಷಾರ್ಥಿಗಳು ಗೊಂದಲಕ್ಕೆ ಒಳಗಾಗುತ್ತಾರೆ.
ಜಗತ್ತಿನ ಬಹುಮುಖ ಪ್ರತಿಭಾವಂತನೆಂದು ಪ್ರಸಿದ್ಧನಾದ ಅಮೆರಿಕದ ಹೆನ್ರಿ ಡೇವಿಡ್ ಥೋರೊ ಜನಿಸಿದ್ದು 1817ರಲ್ಲಿ. ಸರಳತೆಯ ಸೊಗಡು, ಸೊಬಗನ್ನು ಸಾರಿದ ದಾರ್ಶನಿಕ. ‘ನಮ್ಮ ಬದುಕನ್ನು ಸರಳಗೊಳಿಸಿದರೆ ಜಗತ್ತಿನ ನಿಯಮಗಳು ಸರಳ
ಗೊಳ್ಳುತ್ತವೆ’ ಎಂಬ ಅವನ ನುಡಿ ಮನನೀಯ. ವಿಶ್ವದೆಲ್ಲೆಡೆ ‘ರಾಷ್ಟ್ರೀಯ ಸರಳತೆಯ ದಿನ’ ಎಂದು ಪರಿಗಣಿತವಾಗಿರುವ ಆತನ ಜನ್ಮದಿನ (ಜುಲೈ 12) ಆಚರಣೆ ಇತ್ತೀಚೆಗಷ್ಟೇ ಮುಗಿದಿದೆ. ಪರಿಸರ ಜಾಗೃತಿಯ ಸಂದೇಶವೂ ಆ ಸಡಗರಕ್ಕೆ ಜೊತೆಯಾಗಿ ‘ಸರಳತೆ, ಪ್ಲಾಸ್ಟಿಕ್‌ರಹಿತ ದಿನ’ ಎಂದಾಗಿದೆ.
ರೈಲು ಬೋಗಿಯೊಳಗಿನ ಆ ಸೂಚನಾ ಫಲಕ ಆಗಾಗ ಕಣ್ಮುಂದೆ ಬರುತ್ತದೆ: ‘ಕಡಿಮೆ ಲಗೇಜಿದ್ದರೆ ಹೆಚ್ಚು ಅನುಕೂಲ, ಪ್ರಯಾಣವೂ ಸುಖಕರ’. ಪ್ರಯಾಣಿಕರಿಗೆ ಈ ಒಕ್ಕಣೆ ಒಂದು ಕರಾರೆನ್ನಿಸುವುದೇ ಇಲ್ಲ. ಬದುಕೆಂಬ ಪಯಣಕ್ಕೇನೆ ಅತಿಯಾಸೆ ಒಯ್ಯದೆ, ಸಂತೋಷದಿಂದಿರಿ ಎಂಬ ಅಮೂಲ್ಯ ದರ್ಶನವನ್ನು ಮಾಡಿಸುತ್ತದೆ.
ಸಂಪನ್ಮೂಲಗಳ ಪ್ರಜ್ಞಾಪೂರ್ವಕ ಬಳಕೆಯ ಉತ್ಪನ್ನವೇ ಇಂಗಾಲದ ಕನಿಷ್ಠತಮ ವಿಸರ್ಜನೆ. ಸೊಪ್ಪು, ತರಕಾರಿ ತರಲೂ ಕಾರು, ಸ್ಕೂಟರಿನ ಅವಲಂಬನೆ ಸರಳತೆಯನ್ನು ನಾವೆಷ್ಟು ಮೂಲೆಗುಂಪಾಗಿಸುತ್ತೇವೆ ಎನ್ನಲು ಒಂದು ನಿದರ್ಶನ ಮಾತ್ರ. ಗಮನಾರ್ಹ
ವೆಂದರೆ, ನೆದರ್‌ಲ್ಯಾಂಡ್ಸ್, ಫ್ರಾನ್ಸ್‌ನಲ್ಲಿ ‘ವಿಮಾನವೇಕೆ, ಕೇವಲ ಎರಡೂವರೆ ತಾಸುಗಳಲ್ಲಿ ನಿಮ್ಮ ಊರು ತಲುಪಿಸುವ ರೈಲುಂಟಲ್ಲ’ ಅಂತ ಖಡಕ್ಕಾಗಿ ಪ್ರಭುತ್ವವು ಜನರನ್ನು ತರಾಟೆಗೆ ತೆಗೆದುಕೊಂಡಿದೆ. ಕಡಿಮೆ ದೂರ ಹಾರುವ ವಿಮಾನಗಳನ್ನು ಅಲ್ಲಿ ರದ್ದುಪಡಿಸಲು
ಚಿಂತಿಸಲಾಗುತ್ತಿದೆ.
ಅಂದಹಾಗೆ ಯುರೋಪಿನ ಕೆಲ ದೇಶಗಳಲ್ಲಿ ನಿಯಮಿತವಾಗಿ ‘ಕಾರ್‌ಲೆಸ್ ಡೇ’ ಆಚರಣೆಯಿದೆ. ಜಕಾರ್ತ, ಇಂಡೊನೇಷ್ಯಾ, ನ್ಯೂಜಿಲೆಂಡ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಕಾರುಗಳ ಸಂಚಾರಕ್ಕೆ ನಿರ್ದಿಷ್ಟ ದಿನಗಳಂದು ಕ್ರಮಬದ್ಧ ನಿಷೇಧಗಳಿವೆ. ಉದ್ದೇಶ ನಿರಾಡಂಬರತೆ, ತನ್ಮೂಲಕ ಪರಿಯಾವರಣದ ಮೇಲೆ ಅನಗತ್ಯ ಒತ್ತಡಕ್ಕೆ ಅಷ್ಟಾದರೂ ತಡೆ.
ಮಿಕ್ಸರ್, ಗ್ರೈಂಡರ್, ಫ್ರಿಜ್ ವಗೈರೆ ಪರಿಕರಗಳ ಸಂಖ್ಯೆ ಮಿತಗೊಳಿಸುವುದು ಸರಿಯೆ. ಆದರೆ ಅದಕ್ಕೂ ಮುಖ್ಯವಾಗಿ ಅವಕ್ಕೆ ವ್ಯಯವಾಗುವ ವಿದ್ಯುತ್ತನ್ನು ಕಡಿಮೆಗೊಳಿಸುವುದು ಮುಖ್ಯವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.