ADVERTISEMENT

ಸಂಗತ: ವೈಜ್ಞಾನಿಕ ತತ್ವ; ಕಸುಬಿಗೆ ಕಳಶ

ನಾವು ‘ವಿಜ್ಞಾನ ಸಾಕ್ಷರ’ರಾದರೆ ಪ್ರಾಕೃತಿಕ ವಿದ್ಯಮಾನಗಳನ್ನು ವಿವೇಚಿಸಲು, ಸಾಕ್ಷ್ಯಾಧಾರಗಳಿಂದ ಸತ್ಯಾಸತ್ಯತೆ ನಿಷ್ಕರ್ಷಿಸಲು ಸಾಧ್ಯವಾಗುತ್ತದೆ

ಯೋಗಾನಂದ
Published 28 ಫೆಬ್ರುವರಿ 2021, 19:30 IST
Last Updated 28 ಫೆಬ್ರುವರಿ 2021, 19:30 IST
ಸಂಗತ
ಸಂಗತ   

ಫೆಬ್ರುವರಿ 28, ಸರ್ ಸಿ.ವಿ. ರಾಮನ್ ಅವರು ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಪಾತ್ರರಾದ ‘ರಾಮನ್ ಪರಿಣಾಮ’ವನ್ನು ಆವಿಷ್ಕರಿಸಿದ ದಿನ. ‘ಪಾರಕ ಮಾಧ್ಯಮದ ಮೂಲಕ ಏಕವರ್ಣೀ ಬೆಳಕು ಹಾಯುವಾಗ ಅದರ ತರಂಗ ದೂರಕ್ಕೂ ಚೆದುರಿದ ಬೆಳಕಿನ ತರಂಗ ದೂರಕ್ಕೂ ವ್ಯತ್ಯಾಸವಿರುವುದು’- ಇದು ರಾಮನ್ ಪರಿಣಾಮ. ತನ್ನಿಮಿತ್ತ ಪ್ರತಿವರ್ಷವೂ ಅಂದು ಭಾರತದ ಪಾಲಿಗೆ ‘ರಾಷ್ಟ್ರೀಯ ವಿಜ್ಞಾನ ಹಬ್ಬ’. ಆ ದಿನ ಒಂದೊಂದು ವಿಷಯ ಆರಿಸಿಕೊಂಡು ಅಲ್ಲಲ್ಲಿ ಉಪನ್ಯಾಸ, ಸಂವಾದ, ಚರ್ಚೆ. ಈ ಬಾರಿ ಗ್ರಾಸವಾದ ವಿಷಯ ‘ಲೈಂಗಿಕ ಸಂಪರ್ಕದ ಮೂಲಕ ಹರಡಬಹುದಾದ ವ್ಯಾಧಿಗಳು ಮತ್ತು ಶಿಕ್ಷಣ ಕೌಶಲಗಳ ಮೇಲೆ ಅವುಗಳ ದುಷ್ಪರಿಣಾಮಗಳು’.

ವಿಜ್ಞಾನ ಕೇವಲ ಅಧ್ಯಯನ ಶಿಸ್ತಾಗದೆ ಬದುಕಿನ ಶೈಲಿಯಾಗಬೇಕಿದೆ. ಇಂದು ಸಾಮಾಜಿಕ ಸುಧಾರಣೆಗೆ ಎಷ್ಟು ಪ್ರಭಾವಯುತ ಎನ್ನುವ ದಿಸೆಯಲ್ಲಿ ಶಿಕ್ಷಣ ಸಾಮರ್ಥ್ಯದ ಮಾಪನವಾಗುತ್ತಿಲ್ಲ. ತರಗತಿಗೆ ಹಾಜರಿ, ಓದು, ಪರೀಕ್ಷೆಗಷ್ಟೇ ಜ್ಞಾನ ವಿಜ್ಞಾನ ಸೀಮಿತವಾಗಿದೆ. ವೈಚಾರಿಕತೆ ಪುಟಿಸದ ಪದವಿ, ಪ್ರಶಸ್ತಿಗಳು ಕಪಾಟಿನೊಳಗೆ ಮಾತ್ರ ಇರುತ್ತವೆ. ಸಮಷ್ಟಿ ಹಿತಕ್ಕಿರಲಿ, ಸ್ವತಃ ಅವನ್ನು ಗಳಿಸಿದ ವ್ಯಕ್ತಿಗೂ ಅವುಗಳಿಂದ ಪ್ರಯೋಜನವಾಗವು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗಿದ್ದ ಕನಸು, ಕಳಕಳಿಯೆಂದರೆ, ವೈಜ್ಞಾನಿಕ ಪ್ರಜ್ಞೆಯುಳ್ಳ ಪ್ರಬುದ್ಧ ಸಮಾಜ. ಅವರು ರಚಿಸಿದ ಸಂವಿಧಾನದಲ್ಲೇ ಅದು ವ್ಯಕ್ತವಾಗಿದೆ. ಐನ್‍ಸ್ಟೀನ್ ‘ಧರ್ಮರಹಿತ ವಿಜ್ಞಾನ ಕುರುಡು, ವಿಜ್ಞಾನರಹಿತ ಧರ್ಮ ಕುಂಟು’ ಎಂದರು. ರಸಋಷಿ ಕುವೆಂಪು, ನಮ್ಮ ಬದುಕಿನ ಹಾದಿ ಯಶಸ್ವಿಯಾಗಿ ಕ್ರಮಿಸಲು ವಿಜ್ಞಾನವೆಂಬ ದೀವಿಗೆ ಸರ್ವದಾ ನಮ್ಮ ಕೈಲಿರಬೇಕೆಂದು ಹಂಬಲಿಸಿದರು.

ಎರಡು ದಶಕಗಳಿಗೂ ಹಿಂದಿನ ಸಂಗತಿ. ಒಂದು ದಿನ ಬೆಳಗ್ಗೆ ಏಕಾಏಕಿ ದೈವ ಮೂರ್ತಿಯೊಂದು ಹಾಲು ಕುಡಿಯುತ್ತಿರುವುದಾಗಿ ಹಳ್ಳಿ, ಪಟ್ಟಣವೆನ್ನದೆ ಎಲ್ಲೆಡೆ ಸುದ್ದಿ ಗರಿಗೆದರಿತ್ತು. ದ್ರವಕ್ಕೆ ಸ್ವಭಾವತಃ ಮೇಲ್ಮುಖ ಒತ್ತಡವಿದೆ. ಯಾವುದೇ ವಸ್ತು ತನ್ನ ಮಟ್ಟಕ್ಕಿಂತಲೂ ತುಸು ಮೇಲಿದ್ದರೆ ಅದು ಅದಕ್ಕೆ ಲಗತ್ತಾಗುವುದು. ವಸ್ತುವು ದ್ರವ ಹೀರಿತೆನ್ನುತ್ತೇವೆ. ಆಗಿದ್ದು ಅದೇ. ಎಲ್ಲೋ ಒಂದೆಡೆ ಯಾರೋ ಆಕಸ್ಮಿಕವಾಗಿ ಮೂರ್ತಿಯ ಮುಖದ ಬಳಿ ಹಾಲು ತಂದಿದ್ದೇ ಬಂತು ವೈಜ್ಞಾನಿಕ ವಿದ್ಯಮಾನಕ್ಕೆ ರೆಕ್ಕೆ, ಪುಕ್ಕ! ಹೌದಾ? ಹೀಗಾ? ಅಂತೂ ಆಶ್ಚರ್ಯದ ಬೆನ್ನಲ್ಲೇ ಮನದಟ್ಟಾಗಿತ್ತು ವಾಸ್ತವ. ಛೆ! ಅಷ್ಟು ಹೊತ್ತಿಗೆ ಸಹಸ್ರಾರು ಲೀಟರು ಹಾಲು ವೃಥಾ ಹರಿದುಹೋಗಿತ್ತು.

ADVERTISEMENT

ಬೆಂಕಿಯನ್ನು ಆವಿಷ್ಕರಿಸಿದ ಆದಿಮಾನವನೂ ಒಬ್ಬ ವಿಜ್ಞಾನಿಯೆ. ಮುಚ್ಚಿದ ಪಾತ್ರೆಯಲ್ಲಿ ಕಾಳು ಬೇಗ ಬೇಯುತ್ತದೆ ಅಂತ ಮೊದಲಿಗೆ ಕಂಡುಕೊಂಡಾಕೆಯೂ ತಂತ್ರಜ್ಞಳೇ. ಹಾಗಾಗಿ ಯಾವುದೇ ಯುಗವನ್ನು ವಿಜ್ಞಾನ ಯುಗವೆನ್ನುವಂತಿಲ್ಲ. ಇಂದು ವಿಜ್ಞಾನ ಎದುರಿಸುತ್ತಿರುವ ಅಗ್ನಿಪರೀಕ್ಷೆಯೆಂದರೆ ಮೌಢ್ಯದ ಸಮರ್ಥನೆಗಾಗಿ ಅದರ ದುರುಪಯೋಗ. ವಿಜ್ಞಾನ ಏನಿದ್ದರೂ ವಿಜ್ಞಾನಿಗಳಿಗೆ, ವಿಜ್ಞಾನಾಸಕ್ತರಿಗೆ ಮಾತ್ರವೇ ಎನ್ನುವ ಧೋರಣೆ ಸಲ್ಲದು. ಅದು ಜನಸಾಮಾನ್ಯರ ಪ್ರಜ್ಞೆಯಾಗಬೇಕು. ನಮ್ಮ ಸುತ್ತಮುತ್ತಲಿನ ವಸ್ತು ವೈವಿಧ್ಯಗಳಲ್ಲಿನ ವಿಜ್ಞಾನವನ್ನು ಗುರುತಿಸಬೇಕಿದೆ. ಸರ್ವದಾ ಕುತೂಹಲದಿಂದ ಹೊಸದನ್ನು ಕಾಣುವ ಒಂದೊಂದು ಮಗುವೂ ಪುಟ್ಟ ವಿಜ್ಞಾನಿಯೇ. ಮಿಕ್ಸರ್‌ನ ಮೂಲ ಸ್ವರೂಪ ಒರಳುಕಲ್ಲೇ, ವಾಷಿಂಗ್ ಮಶೀನ್‍ನ ವಿನ್ಯಾಸ ಒಗೆಯುವ ಕಲ್ಲಿನದೇ. ನಮ್ಮ ಸಾಂಪ್ರದಾಯಿಕ ತಂತ್ರಜ್ಞಾನವನ್ನು ಆಧುನಿಕವಲ್ಲವೆಂಬ ಕಾರಣಕ್ಕೆ ಕಡೆಗಣಿಸಿದರೆ ಸೊನ್ನೆ, ದಶಮಾಂಶ ಪದ್ಧತಿಯೂ ವರ್ಜ್ಯವಾದೀತು. ಬೈಸಿಕಲ್ ದುರಸ್ತಿಪಡಿಸುವವನಿಗೆ ಅದರ ವಿವಿಧ ಘಟಕಗಳ ಕಾರ್ಯಗಳ ಹಿಂದಿನ ವೈಜ್ಞಾನಿಕ ತತ್ವ ತಿಳಿದಿದ್ದರೆ ಅದು ಅವನ ಕಸುಬಿಗೆ ಕಳಶ.

ಸ್ಮಾರ್ಟ್ ಫೋನ್, ಸಿ.ಸಿ. ಟಿ.ವಿ., ಐ ಪ್ಯಾಡ್, ಸಿ.ಟಿ. ಸ್ಕ್ಯಾನರ್... ಹೀಗೆ ವಿವಿಧ ಪರಿಕರಗಳನ್ನು ಒದಗಿಸಿರುವ ವಿಜ್ಞಾನವು ಭರವಸೆ ಮತ್ತು ಸ್ಫೂರ್ತಿಯ ಚಿಲುಮೆ. ಮೌಢ್ಯಕ್ಕೆ ಸಡ್ಡು ಹೊಡೆಯಬಲ್ಲ ವಿಜ್ಞಾನಕ್ಕೆ ಸಮೂಹ ಸನ್ನಿಗೆ, ಹುಸಿ ನಂಬಿಕೆಗೆ ಚಿಕಿತ್ಸೆ ನೀಡುವ ಶಕ್ತಿಯಿದೆ. ವಿಜ್ಞಾನದ ಪರಮ ಚೈತನ್ಯ ಅದರ ‘ಕಾರ್ಯ-ಕಾರಣ’ ವಿಶ್ಲೇಷಣೆಯಲ್ಲಿ ಸಾಂದ್ರಗೊಂಡಿದೆ. ‘ವಿಜ್ಞಾನ ಸಾಕ್ಷರ’ರಾದರೆ ಪ್ರಾಕೃತಿಕ ವಿದ್ಯಮಾನಗಳನ್ನು ವಿವೇಚಿಸಲು, ಸಾಕ್ಷ್ಯಾಧಾರಗಳಿಂದ ಸತ್ಯಾಸತ್ಯತೆ ನಿಷ್ಕರ್ಷಿಸಲು ಸಾಧ್ಯವಾಗುತ್ತದೆ. ನಮ್ಮ ಜನಪದರು ಅಕ್ಷರದ ಹಂಗಿಲ್ಲದೆ ವೈಜ್ಞಾನಿಕ ಮನೋವೃತ್ತಿ ರೂಢಿಸಿಕೊಂಡವರು. ‌‘ಎತ್ತು ಈತು, ಕೊಟ್ಟಿಗೆಗೆ ಕಟ್ಟು’ ಎನ್ನುವ ಗಾದೆ, ಯುಕ್ತಾಯುಕ್ತ ಆಲೋಚಿಸದೆ ಯಾವುದನ್ನೂ ತೀರ್ಮಾನಿಸಬಾರದು ಎನ್ನುವುದಕ್ಕೆ ಹಿಡಿದ ಕನ್ನಡಿ.

ಮೌಖಿಕ ಪರಂಪರೆಯಲ್ಲಿ ವಿಜ್ಞಾನ ಪ್ರಸರಣ ಸುಲಭ ಸಾಧ್ಯವಾದುದಕ್ಕೆ ಮೂರು ಮುಖ್ಯ ಕಾರಣಗಳಿವೆ. ಎಲ್ಲೆಂದರಲ್ಲಿ, ಯಾವುದೇ ಸಮಯದಲ್ಲಿ ಕಿರಿಯರಿಗೆ ತಿಳಿ ಹೇಳಬಹುದಿತ್ತು. ಕಡಿಮೆ ವೆಚ್ಚ. ತಿಳಿವಿನ ಆಸಕ್ತಿಯುಳ್ಳವರಿಗೆ ಓದು, ಬರಹ ಬರಬೇಕೆಂದಿರಲಿಲ್ಲ. ವಿಜ್ಞಾನದಲ್ಲಿ ಪವಾಡ ಎನ್ನುವುದಿಲ್ಲ. ವಿಜ್ಞಾನವೇ ಒಂದು ಅನನ್ಯ ಪವಾಡ. ವಿಜ್ಞಾನದಲ್ಲಿ ಪ್ರತಿಯೊಂದು ಆಗುಹೋಗುವಿಗೂ ವಿವರಣೆಯಿರುತ್ತದೆ, ವಿವರಣೆಗೆ ದಕ್ಕದ್ದನ್ನು ಪ್ರಾಮಾಣಿಕವಾಗಿ ಗೊತ್ತಿಲ್ಲ ಅಥವಾ ಇನ್ನೂ ತಿಳಿಯಬೇಕಿದೆ ಎನ್ನುವ ಷರಾ ಇರುತ್ತದೆ. ವಿಜ್ಞಾನ ಕಾರ್ಯ-ಕಾರಣ ಸಂಬಂಧಿತ. ಹುಸಿ ವಿಜ್ಞಾನ ಕಾಕತಾಳೀಯ ಘಟನೆಯನ್ನು ಸಮರ್ಥನೆಗೆ ಬಳಸಿಕೊಳ್ಳುವ ತೋರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.