ADVERTISEMENT

ಸಂಗತ | ಮಕ್ಕಳ ಆತ್ಮವಿಶ್ವಾಸ ಕಸಿಯದಿರಿ

ಪ್ರಜಾವಾಣಿ ವಿಶೇಷ
Published 7 ಅಕ್ಟೋಬರ್ 2024, 23:30 IST
Last Updated 7 ಅಕ್ಟೋಬರ್ 2024, 23:30 IST
   

ಮಗನ ಶಾಲೆಯಲ್ಲಿ ಮಧ್ಯವಾರ್ಷಿಕ ಪರೀಕ್ಷೆಗಳು ಶುರುವಾಗಿದ್ದವು. ಎರಡನೆಯ ತರಗತಿಯಲ್ಲಿ ಕಲಿಯುತ್ತಿದ್ದ ಅವನನ್ನು ಕುತೂಹಲಕ್ಕೆ ‘ಪಾಪು, ಹೇಗೆ ಓದಿದ್ದೀಯ? ಇವತ್ತು ಯಾವುದು ಪರೀಕ್ಷೆ’ ಎಂದು ಪ್ರಶ್ನಿಸಿದೆ. ‘ಹಿಂದಿ... ಆದರೆ ನಾನು ಹಿಂದಿಯಲ್ಲಿ ವೀಕ್’ ಅಂದ. ಪರೀಕ್ಷೆ ಬರೆಯುವ ಮುನ್ನವೇ ಮೌಲ್ಯಮಾಪನ ಮಾಡಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಕಾಡಿತು. ಅವನಲ್ಲಿ ಆತ್ಮವಿಶ್ವಾಸ ಮೂಡಿಸಲು ‘ನೀನು ಬುದ್ಧಿವಂತ. ಪರೀಕ್ಷೆ ಚೆನ್ನಾಗಿ ಬರೆಯುವೆ’ ಎಂದು ಉತ್ತೇಜಿಸಲು ಪ್ರಯತ್ನಿಸಿದೆ. ಅವನು ‘ಇಲ್ಲ ಅಪ್ಪ... ಅಮ್ಮ ಯಾವಾಗಲೂ ಹೇಳುತ್ತೆ, ನೀನು ಹಿಂದಿಯಲ್ಲಿ ವೀಕ್ ಇದ್ದೀಯ... ಅಂತ’ ಎಂದು ಹೇಳುತ್ತಿದ್ದಂತೆ ಅವನ ಶಾಲೆಯ ವಾಹನದ ಸದ್ದಾಯಿತು.

ಪೋಷಕರ ನಕಾರಾತ್ಮಕ ಮಾತುಗಳು ಮಕ್ಕಳ ಆತ್ಮವಿಶ್ವಾಸವನ್ನು ಹೇಗೆ ಚಿವುಟಿ ಹಾಕುತ್ತವೆ ಎಂಬುದಕ್ಕೆ ಇದೊಂದು ನಿದರ್ಶನ. ಮಕ್ಕಳ ಶಾಲೆ ಮನೇಲಲ್ವೇ ಎಂದು ಕೈಲಾಸಂ ಹೇಳಿದ್ದಾರೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತು ಇದೆ. ತಾಯಿಯೇ ಮೊದಲ ಗುರು ಎಂಬುದು
ಅಕ್ಷರಾಭ್ಯಾಸಕ್ಕೆ ಮಾತ್ರವಲ್ಲ; ಮಗುವಿನಲ್ಲಿನ ಆತ್ಮವಿಶ್ವಾಸ, ಸಕಾರಾತ್ಮಕ ಆಲೋಚನೆಗಳಿಗೂ ತಾಯಿಯೇ ಬುನಾದಿ. ಪೋಷಕರ ನಡವಳಿಕೆ, ಆಡುವ ಮಾತು ಮಗುವಿಗೆ ‘ನನ್ನಿಂದ ಸಾಧ್ಯ’ ಎಂಬ ಭಾವನೆ ಮೂಡಿಸಬೇಕು. ಮನೋಸ್ಥೈರ್ಯ ಕುಗ್ಗಿಸಬಾರದು. ಕೆಲವು ಸಂದರ್ಭಗಳಲ್ಲಿ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗಲು ಪೋಷಕರ ಋಣಾತ್ಮಕ ನುಡಿಗಳೇ ಕಾರಣ.

ಪೋಷಕರು ಮಕ್ಕಳ ಮುಂದೆ ಮಾತನಾಡುವಾಗ ಎಚ್ಚರ ವಹಿಸಬೇಕು. ‘ಕೆಲಸಕ್ಕೆ ಬಾರದವನು, ನಿನ್ನಿಂದ ಈ ಕೆಲಸ ಆಗದು, ನೀನು ದಡ್ಡ, ಈ ಸಲ ಖಂಡಿತ ಫೇಲಾಗುತ್ತೀಯ’ ಎಂದೆಲ್ಲ ಮಕ್ಕಳೆದುರು ಆಡುವ ಮಾತುಗಳು ಅವರ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರುತ್ತವೆ. ಮಗು ತಾನು ಅಸಮರ್ಥ ಎಂಬ ತೀರ್ಮಾನಕ್ಕೆ ಬರುತ್ತದೆ. ಅಪ್ಪಿತಪ್ಪಿಯೂ ಇಂತಹ ಯೋಚನೆಗಳು ಮಕ್ಕಳ ಮನಸ್ಸಿನಲ್ಲಿ ಬರಬಾರದು. ಆನೆಯ ಕಾಲಿಗೆ ಸರಪಳಿ ತೊಡಿಸಿ, ಗೂಟಕ್ಕೆ ಕಟ್ಟಿ ಹಾಕಿರುತ್ತಾರೆ. ಅದರ ದೈತ್ಯ ಶಕ್ತಿಯ ಮುಂದೆ ಅದು ಏನೇನೂ ಅಲ್ಲ. ಆದರೂ ಬಿಡಿಸಿಕೊಳ್ಳಲು ತನ್ನಿಂದ ಸಾಧ್ಯವಿಲ್ಲ ಎಂದು ಆನೆ ಭಾವಿಸಿರುತ್ತದೆ. ಕಾರಣ ಮರಿಯಾಗಿದ್ದಾಗ ಗೂಟದಿಂದ ಬಿಡಿಸಿಕೊಳ್ಳಲು ಯತ್ನಿಸಿ, ಸೋತಿರುತ್ತದೆ. ಆಗ ಅದರ ಮನಸ್ಸಿನಲ್ಲಿ ಮೂಡಿದ ‘ನನ್ನಿಂದ ಅಸಾಧ್ಯ’ ಎಂಬ ಭಾವನೆಯು ಅದು ಬೆಳೆದು ದೊಡ್ಡದಾದ ಮೇಲೂ ಕೂತಿರುತ್ತದೆ. ಆದ್ದರಿಂದ ಮಕ್ಕಳು ಬಾಲ್ಯದಲ್ಲಿ ಬೆಳೆಸಿಕೊಳ್ಳುವ ಭಾವನೆಗಳು ಅವರ ಮಾನಸಿಕ ಮತ್ತು ಬೌದ್ಧಿಕ ಬೆಳವಣಿ
ಗೆಯನ್ನು ನಿರ್ಧರಿಸುತ್ತವೆ.

ADVERTISEMENT

ಕೆಲವಷ್ಟು ವಿಷಯಗಳಲ್ಲಿ ಮಕ್ಕಳು ಹಿಂದಿರಬಹುದು ಅಥವಾ ಕೆಲವು ದೌರ್ಬಲ್ಯಗಳನ್ನು ಹೊಂದಿರಬಹುದು. ಇಂತಹ ದೌರ್ಬಲ್ಯಗಳನ್ನು ಅಗೌರವದಿಂದ ಕಂಡು ಮಗುವನ್ನು ನಿರುತ್ಸಾಹಗೊಳಿಸುವಂತೆ ನಡೆದುಕೊಳ್ಳ
ಬಾರದು. ಮಕ್ಕಳು ಓದುವುದಕ್ಕಷ್ಟೇ ಹುಟ್ಟಿದವರಲ್ಲ. ಇದನ್ನು ಹೆತ್ತವರು ಮನದಟ್ಟು ಮಾಡಿಕೊಳ್ಳಬೇಕು.

ಪಶ್ಚಿಮ ಲಂಡನ್‌ನಲ್ಲಿ ವಾಸಿಸುವ 125 ಇಂಗ್ಲಿಷ್ ಹಾಗೂ ಭಾರತೀಯ ಕುಟುಂಬದ
ವರನ್ನು ಸಂದರ್ಶಿಸಿರುವ ಮನಃಶಾಸ್ತ್ರಜ್ಞರು ಇಂಗ್ಲಿಷ್ ಸಂಸ್ಕೃತಿಯ ತಾಯಂದಿರು ಹೆಚ್ಚು ಋಣಾತ್ಮಕ ಪೋಷಕರ ಲಕ್ಷಣಗಳನ್ನು ಹೊಂದಿದ್ದು, ಅದು ಮಕ್ಕಳ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಎಂದು ಹೇಳಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ತಂದೆಯೇ ಕುಟುಂಬದ ಮುಖ್ಯಸ್ಥನಾಗಿದ್ದು ಮಕ್ಕಳ ಮೇಲೆ ತಂದೆಯ ವರ್ತನೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಪೋಷಕರ ಅಧಿಕಾರಯುತವಾದ ವರ್ತನೆ ಮಕ್ಕಳ ಆತ್ಮವಿಶ್ವಾಸವನ್ನೇ ಕಸಿಯುತ್ತದೆ ಎಂಬುದನ್ನು ಸಂಶೋಧಕರು ಗುರುತಿಸಿದ್ದಾರೆ.

ಪೋಷಕರ ಅತಿಯಾದ ನಿರೀಕ್ಷೆ ಮಕ್ಕಳನ್ನು ಒತ್ತಡಕ್ಕೆ ದೂಡುತ್ತದೆ. ಇಂದಿನ ಮಕ್ಕಳ ಮಾನಸಿಕ ಸ್ಥಿತಿ ಹೇಗಿದೆ ಎಂದರೆ ಪರೀಕ್ಷೆ ಬಂದರೆ ಸಾಕು ಭಯ ಬೀಳುತ್ತಾರೆ. ಕಡಿಮೆ ಅಂಕ ಬಂದರೆ ಅಪ್ಪ-ಅಮ್ಮ ಬಯ್ಯುತ್ತಾರೆ ಎಂದು ಯೋಚಿಸುತ್ತಾ, ಅಸಹಜವಾಗಿ ವರ್ತಿಸುತ್ತಾರೆ. ಮಕ್ಕಳು ಕಲಿಕೆಯಿಂದ ವಿಮುಖರಾಗಲು ಇದು ಕೂಡ ಕಾರಣ. ಲೇಖಕಿ ನೇಮಿಚಂದ್ರ ಅವರು ‘ಸೋಲಿನಾಚೆಗೂ ಒಂದು ಬದುಕು ಕಾದಿದೆ. ಅದು ಕೇವಲ ಕೆಲಸ ದೊರಕಿಸಿಕೊಳ್ಳವುದು, ಅಂಕ ಗಳಿಸುವುದು ಮಾತ್ರವಲ್ಲ. ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವುದು ಹೇಗೆ ಎನ್ನುವುದರ ಬಗ್ಗೆ ತಿಳಿಸುತ್ತದೆ’ ಎಂದಿದ್ದಾರೆ.

ಪೋಷಕರು ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಬೇಕು. ತಪ್ಪು ಮಾಡಿದಾಗ ತಿದ್ದಿ, ತಿಳಿಹೇಳಬೇಕು; ಮೂದಲಿಕೆಯ ಮಾತು ಆಡಬಾರದು. ಕಲಿಕೆಯಲ್ಲಾಗಲಿ, ಆಟದಲ್ಲಾಗಲಿ ಹಿಂದುಳಿದರೆ ತಪ್ಪು ಎಲ್ಲಿ ಆಗಿದೆ ಎಂದು ತೋರಿಸಿಕೊಡಬೇಕು. ಮೊದಲ ಸ್ಥಾನವೇ ಬರಬೇಕೆಂದು ಒತ್ತಡ ಹಾಕಬಾರದು. ಕಡಿಮೆ ಅಂಕ ಬಂದಾಗ ಬೇರೆ ಮಗುವಿನ ಜೊತೆ ಹೋಲಿಸಿ, ಹೀಯಾಳಿಸಿ ಮಾತನಾಡುವಂತಹ ತಪ್ಪನ್ನು ಮಾಡಲೇಬಾರದು.

ಮಕ್ಕಳು ಚೈತನ್ಯದ ಚಿಲುಮೆಯಂತಿರುತ್ತಾರೆ. ಅವರಿಗೆ ಬದುಕಿನ ಬಗ್ಗೆ ಭರವಸೆ ಮೂಡಿಸುವುದು ಪೋಷಕರ ಕರ್ತವ್ಯ. ಸೋಲಿನಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳದೇ, ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಲು ಪೋಷಕರು ವರ ಆಗಬೇಕು.

ಲೇಖಕ: ಕನ್ನಡ ಉಪನ್ಯಾಸಕ, ಬಸರಾಳು, ಮಂಡ್ಯ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.