ADVERTISEMENT

ಸಂಗತ | ಸಹಾನುಭೂತಿ, ಸಹಾಯ, ಸಂಯಮ

ಯಾರಿಗಾದರೂ ನೆರವು ನೀಡುವಾಗ ಸಹಾನುಭೂತಿ ಇರಬೇಕೆ ವಿನಾ ಕನಿಕರವಲ್ಲ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು

ಎಚ್.ಕೆ.ಶರತ್
Published 27 ಆಗಸ್ಟ್ 2024, 22:30 IST
Last Updated 27 ಆಗಸ್ಟ್ 2024, 22:30 IST
   

ಕಷ್ಟದಲ್ಲಿ ಇರುವವರಿಗೆ ಸಾಧ್ಯವಿರುವಷ್ಟು ನೆರವಾಗುವುದು ಮಾನವೀಯ ಮೌಲ್ಯ ಎನ್ನುವ ಕುರಿತು ಸಮಾಜದಲ್ಲಿ ಸಹಮತವಿದೆ. ಅನ್ಯರ ನೋವಿಗೆ ಮಿಡಿಯುವವರ ವರ್ತನೆ ಹೇಗಿರಬೇಕು ಎಂಬ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ಈ ಭಿನ್ನಾಭಿಪ್ರಾಯಗಳು ಕೆಲವೊಮ್ಮೆ ವಾಗ್ವಾದಕ್ಕೂ ಕಾರಣವಾಗುವುದಿದೆ.

ತಾವು ಮಾಡಿದ ಒಳ್ಳೆಯ ಕೆಲಸದ ಕುರಿತು ನಾಲ್ಕು ಮಂದಿಗೆ ತಿಳಿಸಿದರೆ ಏನು ತಪ್ಪು ಎನ್ನುವ ಧೋರಣೆ ಸಹಾಯಹಸ್ತ ಚಾಚುವ ಕೆಲವರದ್ದು. ಇತರರಿಗೆ ನೆರವಿನಹಸ್ತ ಚಾಚಿದ್ದನ್ನು ಜಗಜ್ಜಾಹೀರುಗೊಳಿಸುವಾಗ ಏನು ಮಾಡಬಾರದು ಎಂಬ ಕುರಿತು ನಮ್ಮಲ್ಲಿ ಸ್ಪಷ್ಟತೆ ಮೂಡಬೇಕಿದೆ. ಇಲ್ಲವಾದಲ್ಲಿ ನಮ್ಮಿಂದ ನೆರವು ಪಡೆದವರ ವ್ಯಕ್ತಿತ್ವದ ಘನತೆಯೊಂದಿಗೆ ಚೆಲ್ಲಾಟವಾಡಿದಂತೆ ಆಗುವ ಅಪಾಯವಿದೆ.

ಸಾಹಿತ್ಯಕ ವಲಯದಲ್ಲಿ ಗುರುತಿಸಿಕೊಂಡಿರುವ ಅಧ್ಯಾಪಕರೊಬ್ಬರು ತಮ್ಮಿಂದ ಆರ್ಥಿಕ ಹಾಗೂ ಬೌದ್ಧಿಕ ಸಂಪನ್ಮೂಲಗಳ ನೆರವು ಪಡೆದು, ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿಗಳ ಕುರಿತು, ಅವರ ಗುರುತು ಮತ್ತು ಪರಿಚಯದೊಂದಿಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸವಿವರವಾಗಿ ಬರೆದುಕೊಂಡಿದ್ದರು. ಅದಕ್ಕೆ ಬಹಳಷ್ಟು ಮಂದಿ ಪ್ರಶಂಸೆ ವ್ಯಕ್ತಪಡಿಸಿದರೆ, ಕೆಲವರು ವಿದ್ಯಾರ್ಥಿ
ಗಳಿಗೆ ನೆರವು ನೀಡಿದ ವಿಚಾರವನ್ನು ಅವರ ಫೋಟೊ ಸಮೇತ ಹಂಚಿಕೊಂಡಿರುವುದು ಸರಿಯಲ್ಲ ಎಂದು ನೇರವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದರು.

ADVERTISEMENT

ವಿದ್ಯಾರ್ಥಿಗಳಿಗೆ ಶಿಕ್ಷಕರು ವಿವಿಧ ಸಂದರ್ಭಗಳಲ್ಲಿ ನೆರವು ನೀಡುವುದು ಸಾಮಾನ್ಯ ಸಂಗತಿ. ಬಹುತೇಕ ಶಿಕ್ಷಕರು ಇದನ್ನು ತಮ್ಮ ಜವಾಬ್ದಾರಿ ಎಂದುಕೊಂಡೇ ಮಾಡುತ್ತಾರೆ ವಿನಾ ಪ್ರಚಾರಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ತಿಳಿಸಿದರು. ಹೀಗೆ ಹೇಳಿದವರದ್ದು ‘ಎಲ್ಲದರಲ್ಲೂ ತಪ್ಪು ಹುಡುಕುವ ಬುದ್ಧಿ’ ಎಂದು ಭಾವಿಸಿದ ಅಧ್ಯಾಪಕರು, ಕೊನೆಗೆ ಫೋಟೊ ಡಿಲೀಟ್ ಮಾಡಿದರು.

ಬೇರೆಯವರಿಗೆ ಸಹಾಯ ಮಾಡಿದ್ದನ್ನು ಜಗಜ್ಜಾಹೀರುಗೊಳಿಸುವ ಪ್ರವೃತ್ತಿಗೆ ಮೆಚ್ಚುಗೆ ಮತ್ತು ಸಹಮತ ದೊರೆಯುವುದೇ ಹೆಚ್ಚು. ಇದು ಈ ಕುರಿತು ಒಟ್ಟಾರೆ ಸಮಾಜದ ಧೋರಣೆಗೆ ಹಿಡಿದ ಕನ್ನಡಿ. ‘ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು’ ಎಂಬ ಹೇಳಿಕೆ ಜನಜನಿತವಾಗಿದ್ದರೂ, ಅದು ಪ್ರತಿಪಾದಿಸುವ ಮೌಲ್ಯ ಆಚರಣೆಗೆ ಬರುತ್ತಿರುವುದು ಅಪರೂಪ. ಬೇರೊಬ್ಬರ ನೋವಿಗೆ ಸ್ಪಂದಿಸಬೇಕೆನ್ನುವ ತುಡಿತ ಸ್ವಾರ್ಥ
ರಹಿತವೂ ಆಗಬೇಕಿದ್ದರೆ, ಅವರ ನೋವನ್ನು ಸ್ವಹಿತ ಸಾಧನೆಗೆ ಬಳಸಿಕೊಳ್ಳಬಾರದು ಎನ್ನುವ ಸೂಕ್ಷ್ಮ ಮನೋಭಾವವೂ ಇರಬೇಕು.

ಸಹಾಯ ನೀಡುವವರು ಮೇಲರಿಮೆ ಪ್ರದರ್ಶಿಸಿದಂತೆಲ್ಲ ಸಹಾಯ ಪಡೆಯುವವರಲ್ಲಿನ ಕೀಳರಿಮೆ ಉದ್ದೀಪನಗೊಳ್ಳುವುದಲ್ಲವೇ? ವ್ಯಕ್ತಿಗತ ನೆಲೆಗಟ್ಟಿನಲ್ಲಿ ಮತ್ತೊಬ್ಬರಿಗೆ ನೆರವು ನೀಡುವುದನ್ನು ನಾವು ನಮ್ಮ  ವಾಟ್ಸ್‌ಆ್ಯಪ್‌ ಸ್ಟೇಟಸ್‍ಗಳಲ್ಲಿಯೋ ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳ ಮೂಲಕವೋ ಹೇಳಿಕೊಳ್ಳುವುದರಿಂದ ಆಗುವ ಪ್ರಯೋಜನವಾದರೂ ಏನೆಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಲ್ಲವೇ? ಇಂತಹವರಿಗೆ ಈ ಕಾರಣಕ್ಕೆ ಸಹಾಯ ನೀಡಿದೆ ಎಂದು ಸಾರುವುದರ ಅಡ್ಡಪರಿಣಾಮಗಳತ್ತ ನಾವು ಸಂಯಮದಿಂದ ವಿವೇಚಿಸಬೇಕಿದೆ.

ಸಹಾಯ ಕೇಳುವುದು ಮತ್ತು ಸಹಾಯ ನೀಡುವುದು, ಎರಡರಲ್ಲಿ ಯಾವುದು ನಮ್ಮಲ್ಲಿ ಮೇಲರಿಮೆ ಉದ್ದೀಪಿಸಲಿದೆ ಎಂದು ವಿವೇಚಿಸಿದರೆ, ಮನುಷ್ಯ ಘನತೆಗೆ ಕುಂದುಂಟಾಗದ ರೀತಿಯಲ್ಲಿ ನೆರವಾಗುವುದು ಏಕೆ ಮುಖ್ಯ ಎಂಬುದರ ಅರಿವಾಗಲಿದೆ. ಅನ್ಯರಿಗೆ ನೆರವು ನೀಡುವಾಗ ಸಹಾನುಭೂತಿ ತೋರಬೇಕೆ ವಿನಾ ಕನಿಕರವನ್ನಲ್ಲ ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಮೊದಲಿಗೆ ಈ ಕುರಿತು ಸ್ಪಷ್ಟತೆ ಹೊಂದುವ ಅಗತ್ಯ ಇದೆ. ವೃದ್ಧಾಶ್ರಮ, ಅನಾಥಾಶ್ರಮ, ಬಾಲಮಂದಿರಗಳಲ್ಲಿ ಹುಟ್ಟಿದಹಬ್ಬ ಆಚರಿಸಿ, ತಾವೇನೋ ಮಹತ್ವದ ಕಾರ್ಯ ಮಾಡಿದೆವೆಂದು ಬೀಗುವುದು ನಮಗೆ ಸಮಸ್ಯಾತ್ಮಕವಾಗಿ ತೋರುವುದಿಲ್ಲ.

ಲಾಭದ ಬದಲಿಗೆ ಮನುಷ್ಯಕೇಂದ್ರಿತವಾಗಿ ಸಮಸ್ಯೆಯನ್ನು ವಿಶ್ಲೇಷಿಸಿ, ಪರಿಹರಿಸುವ ಪ್ರಕ್ರಿಯೆ ಯಾವೆಲ್ಲ ಅಂಶಗಳನ್ನು ಒಳಗೊಂಡಿರಲಿದೆ ಎಂಬುದನ್ನು ತಿಳಿಸಿಕೊಡುವ ‘ಡಿಸೈನ್ ಥಿಂಕಿಂಗ್’ ಎಂಬ ಪರಿಕಲ್ಪನೆಯನ್ನು ತಾಂತ್ರಿಕ ಶಿಕ್ಷಣ ಪಠ್ಯಕ್ರಮದಲ್ಲಿ ಸೇರಿಸಲಾಗಿದೆ. ಐದು ಹಂತಗಳನ್ನು ಒಳಗೊಂಡಿರುವ ಈ ಪರಿಕಲ್ಪನೆಯಲ್ಲಿ ಸರಿಯಾದ ರೀತಿಯಲ್ಲಿ ಯೋಚಿಸುವುದು ಎಂದರೆ ಏನು ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಈ ಪರಿಕಲ್ಪನೆಯ ಮೊದಲ ಹಂತ, ಸಮಸ್ಯೆ ಎದುರಿಸುತ್ತಿರುವವರ ಕುರಿತು ಸಹಾನುಭೂತಿ ಹೊಂದುವ ಮೂಲಕ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ಗುರುತಿಸುವುದಾಗಿದೆ. ಬೇರೊಬ್ಬರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಹೊರಡುವಾಗ ಮೇಲರಿಮೆಗೆ ಆಸ್ಪದ ನೀಡದೆ, ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಯ ಘನತೆಗೆ ಕುಂದುಂಟಾಗದ ರೀತಿಯಲ್ಲಿ ಅವರೊಂದಿಗೆ ಸಂವಹನ ನಡೆಸುವುದು ಹೇಗೆ ಎಂಬುದನ್ನು ಚರ್ಚಿಸಲಾಗುತ್ತದೆ. ಸಹಾನುಭೂತಿ ಮತ್ತು ಕನಿಕರ ಎರಡಕ್ಕೂ ಇರುವ ವ್ಯತ್ಯಾಸವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಲಾಗುತ್ತದೆ.

ಇತರರಿಗೆ ನೆರವು ನೀಡುವ ಪ್ರಕ್ರಿಯೆ ನಿಜವಾದ ಅರ್ಥದಲ್ಲಿ ಮಾನವೀಯ ಮೌಲ್ಯದ ದ್ಯೋತಕವಾಗುವುದು ಯಾವಾಗ ಎಂಬ ಕುರಿತು ಅರಿವು ಮೂಡಿಸುವ ಪ್ರಯತ್ನಗಳು ಹೆಚ್ಚೆಚ್ಚು ನಡೆಯಬೇಕಿದೆ. ಬೇರೆಯವರ ನೋವಿಗೆ ಮಿಡಿಯುವ ಗುಣದೊಂದಿಗೆ ಸಹಾನುಭೂತಿಯೂ ಸಹಬಾಳ್ವೆ ನಡೆಸುವಂತಾದರೆ, ಕೊಡುವ ಮತ್ತು ಪಡೆಯುವ ಮನಸ್ಸುಗಳೆರಡೂ ಏಕಕಾಲಕ್ಕೆ ನಿಟ್ಟುಸಿರು ಬಿಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.