ADVERTISEMENT

ಸಂಗತ | ಚೆಂದದ ಬಾಲ್ಯವೇ ಉಡುಗೊರೆ

ಸದಾಶಿವ ಸೊರಟೂರು
Published 14 ನವೆಂಬರ್ 2024, 23:05 IST
Last Updated 14 ನವೆಂಬರ್ 2024, 23:05 IST
   

‘ಈಗಿನ ಮಕ್ಕಳಿಗೆ ಒಳ್ಳೆಯ ಬಾಲ್ಯವಿಲ್ಲ’ ಎಂದು ದೊಡ್ಡವರು ಬೇಸರದಿಂದ ಹೇಳುವ ಮಾತನ್ನು ಆಲಿಸಿದಾಗ ಅಚ್ಚರಿಯಾಗುತ್ತದೆ.‌ ಇದು, ಈ ಕಾಲಘಟ್ಟದ ದೊಡ್ಡ ದನಿ. ‘ಈಗಿನ ಮಕ್ಕಳು ಸರಿಯಾಗಿ ತಮ್ಮ ಬಾಲ್ಯವನ್ನು ಕಳೆಯುತ್ತಿಲ್ಲ. ನಮ್ಮ ಬಾಲ್ಯ ಅದ್ಭುತವಾಗಿತ್ತು. ಪಾಪ, ನಮ್ಮ ಬಾಲ್ಯದಲ್ಲಿದ್ದಷ್ಟು ಖುಷಿ ಈಗಿನ ಮಕ್ಕಳಿಗಿಲ್ಲ...’ ಇಂಥವೇ ಕರುಣೆ ಉಕ್ಕಿಸುವ ಮಾತುಗಳು ದೊಡ್ಡವರಿಂದ ಬರುತ್ತವೆ.‌

ಸುಮ್ಮನೆ ಯೋಚಿಸಿ ನೋಡಿ. ಆಗ ನಿಮ್ಮ ಮನೆಗೊಂದು ಅಂಗಳವಿತ್ತು, ಹಿತ್ತಿಲೂ ಇತ್ತು. ಊರಲ್ಲಿ ಕೆರೆ ಇತ್ತು, ಹರಿಯುವ ನದಿ ಇತ್ತು. ಅಂಗಳದಲ್ಲಿ ಮಣ್ಣಿತ್ತು, ಪಕ್ಕದ ಮನೆಯ ಪುಟಾಣಿಗಳಿಗೂ ಸಮಯವಿತ್ತು. ಹಳ್ಳಿಯಲ್ಲೇ ಬದುಕಿತ್ತು, ನಗರದ ಬಗ್ಗೆ ಒಂದು ಕುತೂಹಲವಿತ್ತು. ಮಕ್ಕಳಲ್ಲಿ ಮುಗ್ಧ ಮನಸ್ಸು ಇತ್ತು, ಅವರಿಗೆ ಅವರದೇ ಕನಸಿತ್ತು. ಬೀದಿ ತುಂಬಾ ಅವರದೇ ಆಟವಿತ್ತು, ಪಾಠ ಕಲಿಸುವ ಶಾಲೆಯಿತ್ತು... ಈಗ ಏನಿದೆ? ಇಷ್ಟೆಲ್ಲಾ ಬದಲಾದರೂ ಮಕ್ಕಳ ಬಾಲ್ಯ ಮಾತ್ರ ಮೊದಲಿನಂತೆಯೇ ಇರಬೇಕೆಂದು ಬಯಸುತ್ತೇವೆ.

ಹಿತ್ತಿಲು ಮರೆಯಾಗಿದೆ. ಅಂಗಳವು ಕಾರು ಪಾರ್ಕಿಂಗ್ ಜಾಗವಾಗಿದೆ.‌ ಕೆರೆ ಮುಚ್ಚಿಹೋಗಿ ಅಲ್ಲಿ ಕಟ್ಟಡ ಬಂದಿದೆ. ನದಿಯು ಮಳೆಗಾಲದಲ್ಲಿ ಮಾತ್ರ ಹರಿಯುತ್ತದೆ! ಅಂಗಳದ ತುಂಬಾ ಸಿಮೆಂಟ್ ಹೊದಿಕೆ ಬಂದಿದೆ. ಈಗ ಯಾರಿಗೂ ಸಮಯವಿಲ್ಲ; ಆದರೆ ಮನೆಗಳಲ್ಲಿ ಒಳ್ಳೆಯ ಗಡಿಯಾರಗಳಿವೆ. ಮಕ್ಕಳ ಮುಗ್ಧ ಲೋಕಕ್ಕೆ ಕಲ್ಲು ಎಸೆಯಲಾಗಿದೆ. ಅವರ ಕನಸನ್ನು ಅವರ ಬದಲು ನಾವು ಕಾಣುತ್ತಿದ್ದೇವೆ. ಆಟವಿಲ್ಲ; ಮಕ್ಕಳನ್ನು ತುಂಬಿಸಿಕೊಂಡು ಹೋಗಲು ಶಾಲೆಯ ಹಳದಿ ಬಸ್ಸು ಸದಾ ಸಿದ್ಧವಿರುತ್ತದೆ. ಕಲಿಕೆ ಅನ್ನುವುದು ಮಗುವಿನ ಮುಂದಿನ ದೊಡ್ಡ ಸವಾಲು ಎನ್ನುವಂತೆ ಭಾಸವಾಗುತ್ತಿದೆ... ಹೇಳಿ ನಿಮ್ಮ ಬಾಲ್ಯವನ್ನು ಮಕ್ಕಳ ಈಗಿನ ಬಾಲ್ಯದ ಜೊತೆ ಹೇಗೆ ಹೋಲಿಸಿಕೊಳ್ಳುತ್ತೀರಿ?

ADVERTISEMENT

ಮಕ್ಕಳ ಮುಗ್ಧ ಬಾಲ್ಯದೊಳಗೆ ನಾವು ಪದೇ ಪದೇ ಇಣುಕುತ್ತಿದ್ದೇವೆ ಮತ್ತು ಅದನ್ನು ನಿಯಂತ್ರಿಸುತ್ತ ಇದ್ದೇವೆ. ಮಕ್ಕಳ ನಗು ನಮ್ಮ ಅಳತೆಯಲ್ಲಿಯೇ ಇರಬೇಕು. ಅವರ ಅಳು ಕೂಡ ನಮ್ಮ ನಿಲುಕಿನಲ್ಲೇ ಇರಬೇಕು. ನಾವು ‘ಅಂಕಲ್ ಮುಂದೆ ಹಾಡು ಹೇಳು’ ಅಂದಾಗ ಮಗು ಹಾಡಬೇಕು. ಕುಣಿ ಅಂದಾಗ ಕುಣಿಯಬೇಕು. ಮಕ್ಕಳು ಮಲಗುವುದನ್ನೂ ಏಳುವುದನ್ನೂ ನಾವೇ ನಿಯಂತ್ರಿಸುತ್ತೇವೆ.

ಹಾಗಾದರೆ ಮಕ್ಕಳ ಮೇಲೆ ನಮ್ಮ ನಿಯಂತ್ರಣ ಇರಬಾರದೇ ಎಂಬ ಪ್ರಶ್ನೆ ಮೂಡುತ್ತದೆ. ನಮ್ಮದು ನಿಯಂತ್ರಣ ಅಲ್ಲ; ಅದು ಸ್ವಾತಂತ್ರ್ಯಹರಣದ ಹದ್ದು ಮೀರಿದ ಕೆಲಸ. ನಾವು ನಮ್ಮ ಮಕ್ಕಳನ್ನು ನಮ್ಮ ಹೆಗ್ಗಳಿಕೆಯ ಆಟಿಕೆಯಾಗಿ ಬಳಸಿಕೊಳ್ಳುತ್ತ ಇದ್ದೇವೆ. ಮಗು ಬರೆಯುವ ಬರಹವನ್ನು, ಮುದ್ದಾಗಿ ಹಾಡುವ ಹಾಡನ್ನು ವಿಡಿಯೊ ಮಾಡಿ, ಇಂಟರ್ನೆಟ್ ವೇದಿಕೆಗಳ ಮೂಲಕ ಹಂಚಿಕೊಂಡು ಮೆಚ್ಚುಗೆ ಗಳಿಸುತ್ತೇವೆ.‌ ಹಾಡುವುದನ್ನು ನಾವೇ ಕಲಿಸಿರಬಹುದು, ಅದು ನಮ್ಮದೇ ಮಗು ಆಗಿರಬಹುದು. ಆದರೆ ಮಗುವು ಸಂಪೂರ್ಣವಾಗಿ ನಮಗೆ ಸೇರಿದ್ದು ಎಂದು ಭಾವಿಸಬಾರದು. ಮಗುವಿಗೂ ಅದರದೇ ಆದ ಖಾಸಗಿತನ ಇರುತ್ತದೆ.‌

ನನಗೆ ಪ್ರತಿಬಾರಿಯೂ ಖಲೀಲ್ ಗಿಬ್ರಾನ್‌ನ ಈ ಮಾತು ನೆನಪಾಗುತ್ತದೆ. ಇದು ಹಳೆಯದಾದರೂ ಮಕ್ಕಳನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಹವಣಿಸುವಾಗ ನೆನಪಾಗುತ್ತದೆ. ಆ ಮಾತು ಹೀಗಿದೆ: ‘ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ.‌ ಅವರು ನಿಮ್ಮ ಮೂಲಕ ಬರುತ್ತಾರೆಯೇ ವಿನಾ ನಿಮ್ಮಿಂದ ಅಲ್ಲ. ಅವರು ನಿಮ್ಮೊಂದಿಗೇ ಇದ್ದರೂ ನಿಮ್ಮ ಒಡೆತನಕ್ಕೆ ಒಳಪಟ್ಟವರಲ್ಲ. ನಿಮ್ಮ ಒಲವನ್ನು ಅವರಿಗೆ ನೀವು ನೀಡಬಹುದು, ಆಲೋಚನೆಗಳನ್ನಲ್ಲ. ಅವರಿಗಿದೆ ಅವರವೇ ಆದ ಆಲೋಚನೆಗಳು.‌..’

‘ನಿಮ್ಮ ಮಕ್ಕಳಿಗೆ ನೀವು ಏನಾದರೂ ಕೊಡಬೇಕು ಎಂದು ಬಯಸಿದರೆ ಅವರಿಗೆ ಒಳ್ಳೆಯ ಬಾಲ್ಯವನ್ನು ಕೊಡಿ. ಒಳ್ಳೆಯ ಬಾಲ್ಯ ಒಳ್ಳೆಯ ವ್ಯಕ್ತಿತ್ವ ರೂಪಿಸಬಲ್ಲದು. ನೀವು ಈಗ ಏನಾಗಿದ್ದರೂ ಅದು ನಿಮಗೆ ದಕ್ಕಿದ ಬಾಲ್ಯದ ಕಾಣಿಕೆಯೇ ಆಗಿದೆ...’ ಎನ್ನುತ್ತಾರೆ ಶಿಕ್ಷಣ ತಜ್ಞ ಜಾನ್ ಡ್ಯೂಯಿ. 

ಮಕ್ಕಳನ್ನು ಮಕ್ಕಳಂತೆ ನೋಡುವ ಹೊಸ ಕಾಲವೊಂದು ಬರಬೇಕಿದೆ. ಇಂದು ಬಾಲ್ಯ ಚೆನ್ನಾಗಿಲ್ಲ ಅನ್ನುವ ದೂರಿದೆ.‌ ಅದು ಮಕ್ಕಳ ದೂರಲ್ಲ, ಅದು ನಮ್ಮದೇ ದೂರು. ಯಾಕೆಂದರೆ ನಾವು ತಕ್ಕಮಟ್ಟಿಗೆ ಒಳ್ಳೆಯ ಬಾಲ್ಯವನ್ನು ಉಂಡು ಬಂದವರು. ಅದು ನಮ್ಮ ಮಕ್ಕಳಿಗೆ ಇಲ್ಲವೆಂದು ಅರಿವಾಗಿಯೂ ನಾವು ಸುಮ್ಮನೆ ದೂರುತ್ತಾ ಕೂರುವುದರಲ್ಲಿ ಅರ್ಥವಿಲ್ಲ.

ಲೇಖಕಿ ಬೆಲ್ ಹುಕ್ ‘ಪ್ರತಿನಿತ್ಯವೂ ಅದೆಷ್ಟು ಮಕ್ಕಳು ಹೆತ್ತವರ ಪ್ರೀತಿಗಾಗಿ ಹಸಿದು ಸಾಕಾಗಿ ಮಲಗುತ್ತಾರೋ ಏನೋ... ಅದರಲ್ಲೂ ಅಪ್ಪನ ಪ್ರೀತಿಗಾಗಿ ಮಕ್ಕಳು ಪ್ರತಿಕ್ಷಣ ಒದ್ದಾಡುತ್ತಾರೆ...’ ಎನ್ನುತ್ತಾರೆ.

ಮಕ್ಕಳಿಗೆ ಒಳ್ಳೆಯ ಶಾಲೆ ಹಾಗೂ ಓದು ಕೊಡಿಸಿದೆ ಅನ್ನುವುದಷ್ಟೇ ಆಗಬಾರದು. ಅವರಿಗೆಷ್ಟು ಪ್ರೀತಿ ಕೊಟ್ಟೆವು, ಅವರ ಬಾಲ್ಯವನ್ನು ಅವರಿಗೆ ಎಷ್ಟರ ಮಟ್ಟಿಗೆ ಬಿಟ್ಟುಕೊಟ್ಟೆವು, ಅವರನ್ನು ಅದೆಷ್ಟು ಪ್ರೀತಿಸಿದೆವು, ಮಕ್ಕಳನ್ನು ಬರೀ ಮಕ್ಕಳನ್ನಾಗಿ ಎಷ್ಟು ಕಂಡೆವು, ಅವರ ಜೊತೆ ಎಷ್ಟು ಹೊತ್ತು ಕಳೆದೆವು? ಇಂತಹ ಪ್ರಶ್ನೆಗಳನ್ನು ನಮಗೇ ಕೇಳಿಕೊಂಡರೆ, ಉತ್ತರ ಒಂದು ಸುದೀರ್ಘ ಮೌನವಷ್ಟೆ... ಮಕ್ಕಳ ದಿನಾಚರಣೆ ಸಂದಿದೆ. ದಿನಾಚರಣೆಯ ಮಾತು, ಭಾಷಣಗಳಲ್ಲಿ ನಮ್ಮ ಮಕ್ಕಳು ತೊಯ್ದುಹೋಗದೆ ಅವರತನ ಅವರಿಗೆ ದಕ್ಕಲಿ. ನಾಳಿನ ನಾಡು ಚೆಂದವಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.