ADVERTISEMENT

ಸಂಗತ | ಮಕ್ಕಳಿಗೂ ಇರುತ್ತದೆ ಖಾಸಗಿತನ

ಮಕ್ಕಳು ನಮ್ಮವು ಅಂದಮಾತ್ರಕ್ಕೆ ಅವರ ಮೇಲೆ ನಾವು ನಮ್ಮ ವಿಚಾರಗಳನ್ನು ತುರುಕಿ ತುರುಕಿ ಹಾದಿ ತಪ್ಪಿಸುವುದು ಸಲ್ಲ

ಸದಾಶಿವ ಸೊರಟೂರು
Published 18 ಫೆಬ್ರುವರಿ 2022, 20:54 IST
Last Updated 18 ಫೆಬ್ರುವರಿ 2022, 20:54 IST
   

ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಎರಡು ವಿಡಿಯೊಗಳು ಮಿಂಚಿನಂತೆ ಹರಿದಾಡಿದವು. ಮೊದಲನೆಯದು, ಪುಟ್ಟ ಮಗುವೊಂದು ತನ್ನ ಶಿಕ್ಷಕಿಯೊಂದಿಗೆ ಮಾತನಾಡಿದ ವಿಡಿಯೊ. ಅದರಲ್ಲಿ ಆ ಮಗು ತರಗತಿ ಕೋಣೆಯಲ್ಲೇ ಶಿಕ್ಷಕಿಯೊಂದಿಗೆ ತುಂಬಾ ತರಲೆಯಾಗಿ ಮಾತನಾಡುತ್ತದೆ. ‘ರೆಸ್ಪೆಕ್ಟ್ ಕೊಡಿ, ನನಗೆ ರೆಸ್ಪೆಕ್ಟ್’ ಅಂತ ಜೋರು ಮಾಡುತ್ತದೆ. ಆ ವಿಡಿಯೊವನ್ನು ತರಗತಿ ಶಿಕ್ಷಕರೇ ಮಾಡಿರುವುದಂತೂ ನಿಶ್ಚಿತ.

ಎರಡನೇ ವಿಡಿಯೊ ಮನೆಯಲ್ಲಿ ಬಹುಶಃ ಅವರ ತಾಯಿಯೇ ಮಾಡಿರುವಂತಹದ್ದು. ಆ ಮಗು ಕೂಡ ತಾಯಿಯೊಂದಿಗೆ ಜಗಳಕ್ಕೆ ಇಳಿಯುತ್ತದೆ. ಓದುವುದು ಬೋರು, ಇವತ್ತೊಂದಿನ ಬಿಡಿ ಅನ್ನುತ್ತದೆ. ಅಳುತ್ತಾ ಗೋಗರೆಯುತ್ತದೆ. ಮಗುವಿನ ಮುಂದೆ ಮೊಬೈಲ್ ಹಿಡಿದು ಪ್ರಶ್ನೆಗಳನ್ನು ಕೇಳುತ್ತಾ ರೆಕಾರ್ಡ್ ಮಾಡಲಾಗಿದೆ. ಮಗು ‘ನೀವು ಕೇಳಿ-ಕೇಳಿ ನಗ್ತೀರಿ’ ಅಂತ ಸಂಕಟದಲ್ಲಿ‌ ಒತ್ತಿ ಹೇಳುತ್ತದೆ.

ಇದು ಮಗುವಿನ ಖಾಸಗಿತನದ ವಿಚಾರ. ಚಿತ್ರೀಕರಿಸುವುದರಿಂದ ಮಗುವಿನ ಖಾಸಗಿತನವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಅಲ್ಲದೆ ಅದೊಂದು ಅಪರಾಧ ಕೂಡ. ಇಲ್ಲಿ ಮಗು ತನ್ನ ಭಾವನೆ, ಪ್ರತಿಕ್ರಿಯೆಯನ್ನು ಸಾಂದರ್ಭಿಕವಾಗಿ ತೋರಿದೆ. ಅದನ್ನು ರೆಕಾರ್ಡ್ ಮಾಡಿ ತೋರಿಸುವುದರಿಂದ ಮಗು ತನ್ನ ಭಾವನೆಯನ್ನು ಬದಲಿಸಿಕೊಳ್ಳದೇ ಹೋಗಬಹುದು. ಮುಂದೆ ಅದೇ ಅದರ ವ್ಯಕ್ತಿತ್ವವಾಗಿ ರೂಪುಗೊಳ್ಳಬಹುದು.
ಅವರು ಮನೆಯ ಸದಸ್ಯರೇ ಆಗಲಿ, ಪೋಷಕರೇ ಆಗಲಿ, ಶಿಕ್ಷಕರೇ ಆಗಲಿ ಮಗುವಿನ ಖಾಸಗಿತನವನ್ನು ಗೌರವಿಸಬೇಕಾಗುತ್ತದೆ. ಮಕ್ಕಳ ಅನುಮತಿ ಇಲ್ಲದೆ ಫೋಟೊ ತೆಗೆಯುವುದು, ವಿಡಿಯೊ ಮಾಡುವುದು, ಶೇರ್ ಮಾಡುವುದು ಮಕ್ಕಳ ಹಕ್ಕಿನ ಉಲ್ಲಂಘನೆ.

ADVERTISEMENT

‘ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ. ಜೀವನದ ಸ್ವಪ್ರೇಮದ ಮಕ್ಕಳು. ಅವರು ನಿಮ್ಮ ಮೂಲಕ ಬರುತ್ತಾರೆಯೇ ವಿನಾ ನಿಮ್ಮಿಂದ ಅಲ್ಲ. ಅವರು ನಿಮ್ಮೊಂದಿಗೇ ಇದ್ದರೂ ನಿಮ್ಮ ಒಡೆತನಕ್ಕೆ ಒಳಪಟ್ಟವರಲ್ಲ. ನಿಮ್ಮ ಒಲವನ್ನು ಅವರಿಗೆ ನೀಡಬಹುದು, ಆಲೋಚನೆಗಳನ್ನಲ್ಲ, ಅವರಿಗೆ ಅವರದೇ ಆದ ಆಲೋಚನೆಗಳಿರುತ್ತವೆ’ ಎನ್ನುತ್ತಾನೆ ಸಾಹಿತಿ ಖಲೀಲ್ ಗಿಬ್ರಾನ್.

ಮಕ್ಕಳು ನಮ್ಮವು ಅಂದಮಾತ್ರಕ್ಕೆ ನಾವು ಅವುಗಳ ಮೇಲೆ ಹಕ್ಕು ಸಾಧಿಸುವುದಲ್ಲ. ಒತ್ತಡ ಹೇರುವುದಲ್ಲ. ಒಂದೇ ಸಮನೆ ದಂಡಿಸುವುದೂ ಸರಿಯಲ್ಲ. ನಮ್ಮ ವಿಚಾರಗಳನ್ನು ತುರುಕಿ ತುರುಕಿ ಹಾದಿ ತಪ್ಪಿಸುವುದಲ್ಲ.‌ ಅತೀ ಮುದ್ದು ಮಾಡಿ ಕೆಲಸಕ್ಕೆ ಬಾರದವರಂತೆ ಸಿದ್ಧಗೊಳಿಸುವುದೂ ಅಲ್ಲ. ನಮ್ಮೆಲ್ಲಾ ಆಸೆಗಳನ್ನು ಅವರ ಮೇಲೆ ಹೇರಿ ಅವರ ಬೆನ್ನುಗಳನ್ನು ಬಾಗಿಸುವುದಲ್ಲ. ನೌಕರಿಗಾಗಿಯೇ ಓದಿ ಎಂದು ಹಿಂಸೆ ನೀಡಿ ಬದುಕಿನ ರುಚಿಯನ್ನು ಕೆಡಿಸುವುದಲ್ಲ.

ನಾವು ಮಗುವಿನ ನೆಲೆಯಲ್ಲಿ ಆ ವಿಡಿಯೊ ತುಣುಕುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅನೇಕ ಒಳನೋಟಗಳು ಸಿಗುತ್ತವೆ. ಮಗುವಿನ ಮೇಲೆ ಹೇರಲಾದ ಒತ್ತಡ ಕಣ್ಣಿಗೆ ರಾಚುತ್ತದೆ. ಒತ್ತಡದ ಭಾರ ಹೊರಲಾರದೆ ಭಾವನೆಯ ಕಟ್ಟೆ ಒಡೆದು ಮಗು ಅಂತಹ ವರ್ತನೆಗೆ ಇಳಿದಿದೆ. ಪದೇ‌ ಪದೇ ಅದನ್ನು ಪುನರಾವರ್ತಿಸಿದರೆ ಮಗು ಆ ವರ್ತನೆಯನ್ನೇ ತನ್ನ ರಕ್ಷಣಾ ತಂತ್ರವನ್ನಾಗಿ ಬಳಸಿಕೊಳ್ಳಬಹುದು. ಕೊನೆಯವರೆಗೂ ಮಗುವಿನಲ್ಲಿ ಆ ವರ್ತನೆಯೇ ಉಳಿದು ಹೋಗಬಹುದು.‌ ಇದೊಂದು ಅಪಾಯಕಾರಿ ನಡೆ. ಈ ವಿಡಿಯೊ ನೋಡಿದ ಬೇರೆ ಮಕ್ಕಳೂ ಅದನ್ನೇ ಅನುಕರಿಸುವ ಅಪಾಯವಿದೆ.

ಹೀಗೆ ವಿಡಿಯೊ ಮಾಡಿ ಹರಿಯಬಿಟ್ಟು ‘ನೋಡಿ ಈ ಕಾಲದ ಮಕ್ಕಳು ಹೇಗೆ ಕೆಟ್ಟು ಹೋಗ್ತಿದಾವೆ’ ಎಂದು ಷರಾ ಬರೆಯುವ ಮಂದಿಯೇ ಹೆಚ್ಚು.‌ ಯಾವ ಮಗುವೂ ಹುಟ್ಟುವಾಗಲೇ ಕೆಟ್ಟ ಗುಣಗಳನ್ನು ಹೊತ್ತುಕೊಂಡೇ ಹುಟ್ಟುವುದಿಲ್ಲ. ಅವೆಲ್ಲಾ ಮಗು ಈ ಪರಿಸರದಲ್ಲೇ ಕಲಿತುಕೊಂಡಿದ್ದು. ‌ಅದಕ್ಕೆ ಮಗು ಕಾರಣವಲ್ಲ. ನಾವು ಮತ್ತು ನೀವೆಲ್ಲರೂ ಕಾರಣ. ನಮ್ಮ ಈ ಹೊತ್ತಿನ ದುರಾಸೆ ಕಾರಣ. ಮಕ್ಕಳು ಅಂಕದ ಮೂಟೆಗಳಾಗಬೇಕು, ದುಡಿಯುವ ಯಂತ್ರಗಳಾಗಬೇಕು, ಹಣ ಮಾಡುವ ಸ್ಕೀಮುಗಳಾಗಬೇಕು, ಹೇಗಾದರೂ ಸರಿ ಸಿರಿವಂತಿಕೆ ಮೈವೆತ್ತಬೇಕು ಅನ್ನುವ ನಮ್ಮ ಈ ಐಲು ಮನಃಸ್ಥಿತಿಯೇ ಇದಕ್ಕೆಲ್ಲಾ ಕಾರಣ. ‘ಮಗಾ ನಿನ್ನ ಬದುಕು ಒಳ್ಳೆಯದಾಗಿರಲಿ...’ ಅನ್ನುವ ಹಾರೈಕೆ ಎಲ್ಲೋ ಕಳೆದುಹೋಗಿದೆ. ಬದುಕಿನ ಖುಷಿ ಹಣದಲ್ಲಿ, ಅಧಿಕಾರದಲ್ಲಿದೆ ಎಂದು ಈಗೀಗ ಮಕ್ಕಳ ತಲೆಗೆ ತುಂಬಲಾಗುತ್ತಿದೆ. ಅದರ ಫಲವೇ ಇದು.

ಅಬ್ರಹಾಂ ಲಿಂಕನ್ ತಮ್ಮ ಮಗನ ಶಿಕ್ಷಕನಿಗೆ ಬರೆದ ಪತ್ರದ ಸಾಲುಗಳು ಇವು: ‘ಪ್ರತಿಯೊಬ್ಬ ಮುಠ್ಠಾಳನಿಗೂ ಪ್ರತಿಯಾಗಿ ಒಬ್ಬ ಧೀರೋದಾತ್ತನನ್ನು,ಪ್ರತಿಯೊಬ್ಬ ಸ್ವಾರ್ಥ ರಾಜಕಾರಣಿಗೆ ಬದಲು ಒಬ್ಬ ನಿಷ್ಠಾವಂತನನ್ನು, ಪ್ರತೀ ಶತ್ರುವಿಗೆ ಬದಲು ಒಬ್ಬ ಸನ್ಮಿತ್ರನಿದ್ದಾನೆ ಎಂಬುದನ್ನು ಕಲಿಸಿರಿ. ಶ್ರಮವಹಿಸಿ ಗಳಿಸಿದ ಹಣ ಹೆಚ್ಚು ಬೆಲೆಯುಳ್ಳದ್ದು ಎಂಬುದನ್ನು, ಸೋಲು ಗೆಲುವಿನಲ್ಲಿ ಸಮಚಿತ್ತದಿಂದ ಇರುವುದನ್ನು, ಸೃಷ್ಟಿಯ ಕೌತುಕವನ್ನು ಕಂಡು ಧ್ಯಾನಿಸುವುದನ್ನು ಕಲಿಸಿರಿ. ತನ್ನ ವಿಚಾರಗಳ ಬಗ್ಗೆ ತನಗೇ ನಂಬಿಕೆ ಗಳಿಸಿಕೊಳ್ಳುವುದನ್ನು ಕಲಿಸಿರಿ. ಹಾಗಾದಾಗ ಅವರು ಮಾನವೀಯ ವ್ಯಕ್ತಿಗಳಾಗಿ ಬೆಳೆಯುತ್ತಾರೆ’. ಈ ಮಾತು ಎಲ್ಲ ಕಾಲಕ್ಕೂ ಮನನೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.