ಗೆಳೆಯರೊಬ್ಬರಿಗೆ ಇಂಗ್ಲೆಂಡ್ ಮೂಲದ ಒಂದು ಸಂಸ್ಥೆಯಿಂದ ಪತ್ರ ಬಂದಿತ್ತು. ‘ವಿಶ್ವದ ಎಂಬತ್ತು ಮಂದಿ ಸಾಧಕರಲ್ಲಿ ನೀವೂ ಒಬ್ಬರೆಂದು ನಾವು ಗುರುತಿಸಿದ್ದೇವೆ. ಇದಕ್ಕಾಗಿ ಅಂತರರಾಷ್ಟ್ರೀಯ ಪ್ರಶಸ್ತಿಯೊಂದನ್ನು ನಿಮಗೆ ಕೊಡಲು ಬಯಸಿದ್ದೇವೆ. ಈ ಬಗ್ಗೆ ನಿಮ್ಮ ಸಮ್ಮತಿಯನ್ನು ತಿಳಿಸಬೇಕು’ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಗೆಳೆಯ ಸಂತೋಷದಿಂದ ಒಪ್ಪಿ ಅದಕ್ಕೆ ಮಾರೋಲೆಯನ್ನು ಬರೆದರು.
ಅದಾಗಿ ಕೆಲ ದಿನಗಳ ಬಳಿಕ ಅವರಿಗೆ ಎರಡನೆಯ ಪತ್ರ ಬಂದಿತು. ಅದರಲ್ಲಿ ‘ಪ್ರಶಸ್ತಿಯನ್ನು ಸ್ವರ್ಣಪತ್ರ, ರಜತಪತ್ರ ಅಥವಾ ತಾಮ್ರಪತ್ರದಲ್ಲಿ ನೀಡಲಾಗುತ್ತದೆ. ನಿಮಗೆ ಯಾವ ಪತ್ರದಲ್ಲಿ ಬೇಕು ಎಂಬುದನ್ನು ನೀವೇ ನಿರ್ಧರಿಸಿ, ಅದರ ಮುಂದೆ ಸೂಚಿಸಿರುವ ಮೊತ್ತವನ್ನು ನಮ್ಮ ಬ್ಯಾಂಕ್ ಖಾತೆಗೆ ತುಂಬಿ. ಆಗ ಪ್ರಶಸ್ತಿಯ ದಿನಾಂಕವನ್ನು ನಿರ್ಧರಿಸಿ ನಿಮಗೆ ತಿಳಿಸಲಾಗುತ್ತದೆ’ ಎಂದಿತ್ತು. ಅದನ್ನು ಓದಿ ಗೆಳೆಯ ಪೆಚ್ಚಾದರು.
ತಮಗೆ ವಿದೇಶದ ಸಂಸ್ಥೆಯೊಂದು ಪ್ರಶಸ್ತಿ ಕೊಡಮಾಡುತ್ತಿದೆ ಎಂದು ಅವರು ಅದಾಗಲೆ ಎಲ್ಲರ
ಲ್ಲಿಯೂ ಹೇಳಿಕೊಂಡಿದ್ದರು. ಸ್ಥಳೀಯ ಪತ್ರಿಕೆಗಳೂ ಈ ಕುರಿತು ವರದಿ ಮಾಡಿದ್ದವು. ಆಪ್ತರು ಶುಭಾಶಯ ಕೋರಿ ಕಟೌಟ್‌ಗಳನ್ನು ರಸ್ತೆಗಳಲ್ಲಿ ನಿಲ್ಲಿಸಿದ್ದರು. ಆದರೆ ಗೆಳೆಯರಲ್ಲಿ ಆ ಸಂಸ್ಥೆಯವರು ಪ್ರಶಸ್ತಿಗಾಗಿ ಕೇಳಿದ್ದಷ್ಟು ಹಣ ಇರಲಿಲ್ಲ. ಬಳಿಕ ಅವರು ಆ ಪ್ರಶಸ್ತಿಯನ್ನು ಪಡೆಯುವ ಬಯಕೆಯನ್ನು ಅಲ್ಲಿಗೇ ಕೈಬಿಟ್ಟರು.
ಪ್ರಶಸ್ತಿಗಾಗಿ ಹಪಹಪಿಸುತ್ತ ಅರ್ಜಿಗಳನ್ನು ಸಲ್ಲಿಸುತ್ತಲೇ ಹೋಗುವವರು ಇರುವ ಈ ಕಾಲದಲ್ಲಿ, ಪ್ರಶಸ್ತಿಗಳನ್ನು ಮಾರಾಟ ಮಾಡುವ ದಂಧೆ ಅನೇಕರಿಗೆ ಭಾರಿ ಲಾಭವನ್ನು ತಂದುಕೊಡುತ್ತಿದೆ. ಒಂದು ಶಾಲು, ಒಂದು ತಟ್ಟೆ, ಒಂದು ಹಾರ, ಒಂದು ಪತ್ರ ಇವಿಷ್ಟಕ್ಕೆ ಜೀವನದಲ್ಲಿ ಏನೋ ಮಹತ್ವವಾದುದನ್ನು ಪಡೆದಿರುವಂತೆ ಬೀಗುತ್ತ, ಮನೆಯ ಷೋಕೇಸ್ ತುಂಬ ಕೆಲಸಕ್ಕೆ ಬಾರದ ಸ್ಮರಣಿಕೆಗಳನ್ನು ತುಂಬಿಕೊಳ್ಳುವವರೇ ಅಂತಹವರ ಆದಾಯಕ್ಕೆ ಮೂಲವಾಗುತ್ತಿದ್ದಾರೆ.
ಕೆಲವು ಸಂಸ್ಥೆಗಳು ಪ್ರಶಸ್ತಿಗಳನ್ನು ಹೀಗೆ ಮಾರಾಟ ಮಾಡುವುದನ್ನೇ ತಮ್ಮ ದಂಧೆಯನ್ನಾಗಿ ಮಾಡಿಕೊಂಡಿವೆ. ಪ್ರಶಸ್ತಿ ಬೇಕು ಎಂದು ಬಯಸು ವವರಿಂದಲೇ ಒಂದು ಮೊತ್ತದ ಹಣ ಪಡೆದು, ಅದರಲ್ಲಿ ಅರ್ಧದಷ್ಟನ್ನು ವೇದಿಕೆಯಲ್ಲಿ ಪ್ರಶಸ್ತಿಯ ಜೊತೆಗೆ ಅವರಿಗೆ ಕೊಟ್ಟು, ಇನ್ನರ್ಧವನ್ನು ತಾವೇ ಉಳಿಸಿ ಕೊಳ್ಳುವ ತೆರೆಮರೆಯ ವಿದ್ಯಮಾನಕ್ಕೂ ಬರವಿಲ್ಲ.
ಪರಿಚಿತರೊಬ್ಬರು ತಾರಸಿಯ ತುಂಬ ವಿವಿಧ ಬಗೆಯ ಗಿಡಗಳನ್ನು ಬೆಳೆದಿದ್ದಾರೆ. ಇದು ಅಪರೂಪದ ಸಾಧನೆ ಖಂಡಿತ ಅಲ್ಲ. ಆದರೂ ಅವರು ಈ ಸಾಧನೆಗಾಗಿ ತಮಗೆ ಸಿಕ್ಕಿಂ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಲಭಿಸಿರುವುದಾಗಿ ಪದವಿ ಪತ್ರವನ್ನು ತೋರಿಸಿದರು. ಕರ್ನಾಟಕವಿರಲಿ, ನೆರೆಹೊರೆಯ ರಾಜ್ಯಗಳು ಕೂಡ ಅವರ ಸಾಧನೆಯನ್ನು ಗುರುತಿಸದೇ ಇರುವಾಗ, ದೇಶದ ಯಾವುದೋ ಮೂಲೆಯಲ್ಲಿರುವ ಪುಟ್ಟ ರಾಜ್ಯವೊಂದು ಅದನ್ನು ಗುರುತಿಸಿ ಗೌರವಿಸಲು ಮುಂದಾಗಿದೆ ಅಂದರೆ ಅದು ಅಭಿಮಾನದ ವಿಷಯವೇ ಸರಿ. ಆದರೆ ಈ ವಿಷಯವನ್ನು ಮುಕ್ತವಾಗಿ ಅವರಲ್ಲಿ ಹೇಳಿದಾಗ, ಅವರು ಪಿಸುದನಿಯಲ್ಲಿ ‘ಈ ಪ್ರಶಸ್ತಿ ಅಷ್ಟು ಸುಲಭದಲ್ಲಿ ಬಂದದ್ದಲ್ಲ. ಅದಕ್ಕೆ ಸುಮಾರು ಎರಡು ಲಕ್ಷ ರೂಪಾಯಿ ಕೊಡಬೇಕಾಗಿ ಬಂತು’ ಎಂದು ಹೇಳಿದರು.
ಸರ್ಕಾರಗಳು ಕೊಡುವ ಕೆಲವು ಪ್ರಶಸ್ತಿಗಳು ಪಾರದರ್ಶಕವೆಂದು ಎಷ್ಟೇ ಹೇಳಿಕೊಂಡರೂ ಅವುಗಳ ಬಗೆಗೆ ಅಪಸ್ವರವಂತೂ ಇದ್ದೇ ಇರುತ್ತದೆ. ಅರ್ಹರನ್ನು ಗುರುತಿಸಿ ನೀಡುತ್ತಿಲ್ಲ, ಯಾರ್‍ಯಾರಿಗೋ ಕೊಡುತ್ತಾರೆ ಎಂದು ಗೊಣಗುವವರ ಸಂಖ್ಯೆ ಕಡಿಮೆಯೇನಿಲ್ಲ. ಹಾಗೆಯೇ ಇನ್ನಿತರ ಅವೆಷ್ಟೋ ಸಂಸ್ಥೆಗಳ ಮೂಲಕ ಘೋಷಣೆಯಾಗುವ ವಾರ್ಷಿಕ ಪ್ರಶಸ್ತಿಗಳ ಹಿಂದೆಯೂ ಕಾಂಚಾಣದ ಕರಾಮತ್ತು ಇದೆ ಎಂಬ ಗುಮಾನಿ ಸಾರ್ವಜನಿಕರಿಗೆ ಬಂದರೆ ಅದು ಪೂರ್ಣ ನಿರಾಧಾರ ಎನ್ನುವಂತಹ ಸಂಗತಿಯಂತೂ ಅಲ್ಲ.
ಕೆಲವರಿಗೆ ಬಂದ ಪ್ರಶಸ್ತಿಗಳಂತೂ ಅವು ಯಾವ ಸಂಸ್ಥೆಗಳಿಂದ ಬಂದಿವೆ, ಆ ಸಂಸ್ಥೆಗಳು ಎಷ್ಟರಮಟ್ಟಿಗೆ ಪ್ರಖ್ಯಾತಿ ಪಡೆದಿವೆ, ನಿಜಕ್ಕೂ ಅವು ಅಸ್ತಿತ್ವದಲ್ಲಿ ಇವೆಯೇ ಎಂಬುದೇ ತಿಳಿಯದಷ್ಟು ಚಿತ್ರ ವಿಚಿತ್ರವಾದ ಹೆಸರುಗಳನ್ನು ಹೊಂದಿರುತ್ತವೆ. ಅವನ್ನು ಪಡೆಯಲು ತವಕಿಸುವ ಮಂದಿ ಅದಕ್ಕಾಗಿ ತೆರುವ ಹಣದ ಮೊತ್ತ ಸಣ್ಣದೇನೂ ಆಗಿರುವುದಿಲ್ಲ.
ಪ್ರಶಸ್ತಿಯನ್ನು ಪಡೆಯುವ ಸಲುವಾಗಿ
ನೂಕುನುಗ್ಗಲು, ಅದರ ಬಗೆಗೆ ಶಿಫಾರಸು ಮಾಡಿಸಲು ಪ್ರತಿಷ್ಠಿತ ವ್ಯಕ್ತಿಗಳ ಬಳಿಗೆ ಹೋಗಿ ಪೀಡಿಸುವ ಜನ, ಎಷ್ಟು ಹಣವನ್ನಾದರೂ ವೆಚ್ಚ ಮಾಡಲು ಸಿದ್ಧರಿರುತ್ತಾರೆ. ಕಡೆಗೂ ಪ್ರಶಸ್ತಿ ಬಂದಾಗ ಅವರಿಗೆ ಆಗುವ ಸಂತೋಷ, ಸಿಗಲಿಲ್ಲ ಅನ್ನುವಾಗ ಹೊರಹೊಮ್ಮುವ ನಿಟ್ಟುಸಿರನ್ನು ಕಂಡರೆ ನಿಜಕ್ಕೂ ಬೇಸರವಾಗುತ್ತದೆ. ಸನ್ಮಾನಗಳು, ಪ್ರಶಸ್ತಿಗಳು ಬಂದಾಗ ತಮ್ಮ ಬದುಕು ಸಾರ್ಥಕವಾಯಿತು ಎಂದುಕೊಂಡು ಬೀಗುವವರನ್ನು ಕಂಡರೆ ಅನುಕಂಪವೂ ಮೂಡುತ್ತದೆ.
ಪ್ರಶಸ್ತಿಯೇ ಸಾಧನೆಯ ಮಾನದಂಡವಲ್ಲ. ನಿಜವಾದ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಪ್ರಾಮಾಣಿಕ ಮನೋಭಾವ ಬತ್ತಿಹೋಗುತ್ತಿರುವುದು ವಿಷಾದನೀಯ. ಹಾಗೆಂದ ಮಾತ್ರಕ್ಕೆ ಪ್ರಶಸ್ತಿಯನ್ನು ಹಣ ಕೊಟ್ಟು ಪಡೆಯುವ ಜಾಯಮಾನ ಎಂದಿಗೂ ಸಲ್ಲದು. ಇಂತಹ ಬೆಳವಣಿಗೆಯು ಶ್ರಮವಿಲ್ಲದೆ ಹಣ ಗಳಿಸುವ ಒಂದು ಜಾಲವನ್ನು ಬಲಪಡಿಸುವ ಅಪಾಯವನ್ನು ಕಡೆಗಣಿಸುವಂತಿಲ್ಲ. ನಮ್ಮ ಮನೋನಿಗ್ರಹ ಮಾತ್ರ ಈ ಬಗೆಯ ದಂಧೆಗೆ ಕಡಿವಾಣ ಹಾಕಬಲ್ಲದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.