ADVERTISEMENT

ಸಂಗತ | ಹಾರುಹಾದಿ ನಿರ್ವಿಘ್ನವಾಗಿರಲಿ

ಎಗ್ಗಿಲ್ಲದೆ ಮೊಬೈಲ್‌ ಟವರ್‌ಗಳನ್ನು ನಿರ್ಮಿಸದಿದ್ದರೆ, ಕಟ್ಟಡಗಳಿಗೆ ದೀಪಾಲಂಕಾರ ಕೈಬಿಟ್ಟರೆ ಅದೇ ವಲಸೆ ಹಕ್ಕಿಗಳಿಗೆ ನಾವು ನೀಡುವ ಮಹತ್ತರ ಬಳುವಳಿ

ಯೋಗಾನಂದ
Published 11 ಮೇ 2024, 0:26 IST
Last Updated 11 ಮೇ 2024, 0:26 IST
   

ಪಕ್ಷಿಗಳ ವಲಸೆ ಶತಮಾನಗಳಿಂದಲೂ ಜನಸಂಸ್ಕೃತಿಯ ಕಲ್ಪನೆಗಳನ್ನು ಸೆರೆಹಿಡಿದಿರುವ ನೈಸರ್ಗಿಕ ವಿದ್ಯಮಾನ. ಖಗಮೃಗ ಲೋಕದ ವಿಸ್ಮಯಗಳಲ್ಲೊಂದಾದ ಅದು, ಭೂಗೋಳದ ಉತ್ತರ ಅಥವಾ ದಕ್ಷಿಣಕ್ಕೆ ಒಂದು ನಿರ್ದಿಷ್ಟ ಹಾರುಹಾದಿಯ ನಿಯಮಿತ ಯಾನ. ನಮಗೆ ತಿಳಿದಿರುವ 10 ಸಾವಿರ ಪಕ್ಷಿ ಪ್ರಭೇದಗಳಲ್ಲಿ ಅರ್ಧದಷ್ಟು ವಲಸೆಯವೆ. ವಲಸೆ ಹಕ್ಕಿಗಳು ಪರೋಕ್ಷವಾಗಿ ಪರಿಸರ ವ್ಯವಸ್ಥೆಯನ್ನು, ಜನರನ್ನು ಹಾಗೂ ದೇಶ ದೇಶಗಳನ್ನು ಒಗ್ಗೂಡಿಸುತ್ತವೆ. ಮನುಷ್ಯರು ಮತ್ತು ಪ್ರಕೃತಿಯನ್ನು ಬೆಸೆಯುವ ಅವು ವಿಶ್ವಶಾಂತಿ ಹಾಗೂ ಭೂಗ್ರಹದ ಸಮಗ್ರತೆಯ ದ್ಯೋತಕಗಳು.

ಪರಿಸರದ ಆಣತಿಯೊ, ಸಂತಾನೋತ್ಪತ್ತಿಗೆ ಸೂಕ್ತ ತಾಣದ ಹುಡುಕಾಟವೊ ಅಥವಾ ಬದುಕುಳಿಯುವ ತಂತ್ರವೊ ಹಕ್ಕಿಗಳ ಖಂಡಾಂತರ ಸಮೂಹ ಪ್ರಯಾಣ ಮನುಷ್ಯನ ಗ್ರಹಿಕೆಗೆ ಒಗಟು. ಪರಿಸರ ಮತ್ತು ವಿಕಸನದ ದೃಷ್ಟಿಯಿಂದ ಒಂದು ಪ್ರದೇಶದಿಂದ ಸಾವಿರಾರು ಕಿ.ಮೀ. ದೂರದ ಇನ್ನೊಂದು ಪ್ರದೇಶಕ್ಕೆ ಪಕ್ಷಿಗಳ ವಲಸೆ ಅತ್ಯಗತ್ಯ. ಅವು ಕಾಲಾನುಸಾರದ ಅತಿಥಿಗಳು. ಕನಿಷ್ಠ 4 ಸಾವಿರ ಪಕ್ಷಿ ಪ್ರಭೇದಗಳು ವಲಸೆ ಕೈಗೊಳ್ಳುತ್ತವೆ. ವಲಸೆ ಅವುಗಳ ಪಾಲಿಗೆ ದೀರ್ಘ ಹಾರಾಟಕ್ಕೂ ಮಿಗಿಲಾಗಿ ಅಕ್ಷರಶಃ ಬದುಕಿನ ಹೋರಾಟ.

‘ಹಾರುತಿರುವ ಹಕ್ಕಿಗಳೇ, ಯಾರ ತಡೆಯೂ ನಿಮಗಿಲ್ಲ...’ ಎಂಬ ಈ ಹಳೆಯ ಸಿನಿಮಾ ಹಾಡನ್ನು
ಪರಿಷ್ಕರಿಸಬೇಕಾದ ಸಂದರ್ಭ ಬಂದಿದೆ! ಏಕೆಂದರೆ ಪಕ್ಷಿಗಳ ವಲಸೆಗೆ ಈಗ ಸಂಚಕಾರ ಒದಗಿದೆ. ಜೀವವೈವಿಧ್ಯದ ಆಹಾರ ಸರಪಳಿಯಲ್ಲಿ ಕೀಟಗಳ ಪಾತ್ರ ಬಹು ನಿರ್ಣಾಯಕ. ವಲಸೆ ಪಕ್ಷಿಗಳ ಪ್ರಧಾನ ಆಹಾರವಾದ ಕೀಟಗಳ ಸಂಖ್ಯೆ ಕ್ರಮೇಣ ಕ್ಷೀಣಿಸುತ್ತಿದೆ. ತಮ್ಮ ದೂರ ಹಾರಾಟ ಮಾರ್ಗದ ಅಲ್ಲಲ್ಲಿ ನೀರು, ಆಹಾರ ಅನ್ವೇಷಣಾರ್ಥ ನಿಲುಗಡೆ ಪಕ್ಷಿಗಳಿಗೆ ಅನಿವಾರ್ಯ. ಹೊಲ, ಗದ್ದೆ, ಜೌಗುಪ್ರದೇಶ, ಅರಣ್ಯ ಹೀಗೆ ವಿವಿಧ ಆವಾಸಗಳಲ್ಲಿ ಅವು ಕೀಟಗಳ ಬೇಟೆಗೆ ಹಪಹಪಿಸುತ್ತವೆ. ಹಲವು ಪಕ್ಷಿಗಳ ವಲಸೆಯ ಅವಧಿಯು ಅವು ನಿಲ್ಲುವ ಸ್ಥಳಗಳಲ್ಲಿನ ಆಹಾರ ಮತ್ತು ನೀರಿನ ಸಮೃದ್ಧಿಯ ದಿನಮಾನಗಳಿಗೆ ಸರಿಹೊಂದುವುದು ವಿಶೇಷ.

ADVERTISEMENT

ಪಕ್ಷಿಗಳ ಸಮೂಹ ವಲಸೆಯಿಂದ ತಕ್ಕಮಟ್ಟಿಗೆ ನೊಣ, ಸೊಳ್ಳೆ, ಜೀರುಂಡೆ, ಚಿಟ್ಟೆಯಂಥ ಕೀಟಗಳ ನಿಯಂತ್ರಣವಾಗುತ್ತದೆ. ಅಳಿಲು, ಇಲಿ, ಹೆಗ್ಗಣಗಳ ಸಂಖ್ಯೆ ಗಮನಾರ್ಹವಾಗಿ ಇಳಿಮುಖವಾಗುತ್ತದೆ. ಅಲ್ಲದೆ ಸಸ್ಯಗಳ ಪರಾಗಸ್ಪರ್ಶ ಹಾಗೂ ವನ್ಯಮೃಗಗಳಿಗೆ ಆಹಾರ ಮೂಲವೂ ಪ್ರಾಪ್ತವಾಗುತ್ತದೆ. ಪಕ್ಷಿಗಳು ತಮ್ಮ ವಲಸೆಯ ಹಾದಿಯಲ್ಲಿ ಬೀಜಗಳನ್ನು ಪ್ರಸರಿಸಿ ಜೀವವೈವಿಧ್ಯವನ್ನು ಉತ್ತೇಜಿಸುತ್ತವೆ. ಪಕ್ಷಿಗಳ ವಲಸೆ ಸ್ಥಗಿತವಾದರೆ ಮಿಡತೆಗಳ ಹಾವಳಿ ಕಟ್ಟಿಟ್ಟ ಬುತ್ತಿ! ಪಕ್ಷಿಗಳ ದೇಶಾಂತರ ಸಂಚಾರ ಎನ್ನುವುದೇ ಪಕ್ಷಿವೀಕ್ಷಕರಿಗೆ ಪುಳಕ, ಮನರಂಜನೆ. ಆಗಸದಲ್ಲಿ ಹಕ್ಕಿಗಳು ಶಿಸ್ತಾಗಿ ಹಾರುತ್ತಾ ಬಿಡಿಸುವ ಬಗೆ ಬಗೆ ಚಿತ್ತಾರ ಕಣ್ಣಿಗೆ ಹಬ್ಬ. ಜೊತೆಗೆ ತಮ್ಮ ಮನೆಯ ಹಿತ್ತಿಲನ್ನು ವರ್ಷಪೂರ್ತಿ ಪಕ್ಷಿ ಪ್ರಭೇದಗಳನ್ನು ಆಕರ್ಷಿಸುವಂತೆ ವಿನ್ಯಾಸಗೊಳಿಸುವ ಉತ್ಸಾಹಿಗಳೆಷ್ಟೊ?

ಮೇ 11 ‘ವಿಶ್ವ ವಲಸೆ ಹಕ್ಕಿಗಳ ದಿನ’. ಈ ಬಾರಿ ‘ಕೀಟಗಳನ್ನು ಉಳಿಸಿ, ಪಕ್ಷಿಗಳನ್ನು ಸಂರಕ್ಷಿಸಿ’ ಎಂಬುದು ಧ್ಯೇಯವಾಕ್ಯ. ಹಮ್ಮಿಂಗ್‌ ವಲಸೆ ಹಕ್ಕಿಗಳಲ್ಲೇ ಅತಿ ಚಿಕ್ಕದು. ಬರೀ 28 ಗ್ರಾಂ ತೂಕದ ಅದು ತಾಸಿಗೆ 48 ಕಿ.ಮೀ. ವೇಗದಲ್ಲಿ, ತನಗೆ ಅಗತ್ಯವಿದ್ದರೆ ನೂರು ಕಿ.ಮೀ. ತನಕ ತಡೆರಹಿತವಾಗಿ ಹಾರಬಲ್ಲದು. ಕೆಲವು ಹಕ್ಕಿಗಳು ದಿನಕ್ಕೆ 8 ತಾಸುಗಳಂತೆ ಹಾರಿ 533 ತಾಸುಗಳು ಕ್ರಮಿಸಿ ನಿಮ್ಮ ಹಿತ್ತಿಲನ್ನು ತಲುಪಿರುತ್ತವೆ. ದಣಿದ ಅತಿಥಿಗಳಿಗೆ ಕಾಳು, ನೀರಿತ್ತು ನಿಮ್ಮ ಉಪಚಾರವಿರಲಿ. ತಂಗಲು ಅರ್ಹ ತಾಣಗಳ ಕಣ್ಮರೆ, ಗಗನಚುಂಬಿ ಕಟ್ಟಡಗಳ ಮೆರೆತ ಹಾಗೂ ಮಳೆ, ಮಾರುತಗಳ ಅಬ್ಬರವು ಪಕ್ಷಿಗಳ ವಲಸೆಗೆ ಅಡೆತಡೆಗಳಾಗಿವೆ.

ಎಗ್ಗಿಲ್ಲದೆ ಮೊಬೈಲ್‌ ಟವರ್‌ಗಳನ್ನು ನಿರ್ಮಿಸದಿದ್ದರೆ, ಕಟ್ಟಡಗಳಿಗೆ ದೀಪಾಲಂಕಾರ ಕೈಬಿಟ್ಟರೆ ಅದೇ ವಲಸೆ ಹಕ್ಕಿಗಳಿಗೆ ನಾವು ನೀಡುವ ಮಹತ್ತರ ಬಳುವಳಿ. ಏಕೆಂದರೆ, ಖಂಡಾಂತರ ಹೊರಟ ಹಕ್ಕಿಗಳು ಟವರ್‌, ಥಳಥಳ ಬಂಗಲೆಗಳ ದುರ್ದೆಸೆಯಿಂದ ದಿಕ್ಕೆಡುತ್ತವೆ. ವರ್ಷಕ್ಕೆ ಸರಾಸರಿ 65 ಕೋಟಿ ಹಕ್ಕಿಗಳು ಬಹುಮಹಡಿ ಕಟ್ಟಡಗಳಿಗೆ ಬಡಿದು ಅಸುನೀಗುತ್ತವೆ.

ವಲಸೆ ಹಕ್ಕಿಗಳು ದೇಶಗಳ ಗಡಿಗಳನ್ನು ಗುರುತಿಸಲಾರವು. ಹಾಗಾಗಿ, ಅವುಗಳ ರಕ್ಷಣೆಗೆ
ಅಂತರರಾಷ್ಟ್ರೀಯ ಮಟ್ಟದ ಸಹಕಾರ ಅಗತ್ಯ. ಗಡಿ, ಪ್ರಾಂತ್ಯ, ದೇಶವೆಂಬ ತರತಮವಿಲ್ಲದೆ ಪಕ್ಷಿಗಳು
ವಿಶ್ರಮಿಸಿಕೊಳ್ಳಬಹುದಾದ ನೆಲಹರವುಗಳನ್ನು ನೀರು, ನೆರಳಿನಿಂದ ಅಭಿವೃದ್ಧಿಪಡಿಸುವುದು, ಹಾರುಹಾದಿ
ಗಳನ್ನು ವಿಘ್ನರಹಿತವಾಗಿಸುವುದು ಮಹತ್ತರ ಹೆಜ್ಜೆಗಳು.

ಆಹಾರಕ್ಕೆ, ಗರಿಗಳಿಗೆ ಮತ್ತು ವೈಜ್ಞಾನಿಕ ಸಂಗ್ರಹಕ್ಕಾಗಿ ಲಕ್ಷಾಂತರ ಪಕ್ಷಿಗಳನ್ನು ಕೊಲ್ಲಲಾಗುತ್ತದೆ. ಸೆಪ್ಟೆಂಬರ್– ಅಕ್ಟೋಬರ್‌ನಲ್ಲಂತೂ 29 ದೇಶಗಳಿಂದ ಭಾರತಕ್ಕೆ ಪ್ರತಿವರ್ಷ ಗುಂಪು ಗುಂಪಾಗಿ ಪಕ್ಷಿಗಳು ಹಾರಿ ಬರುತ್ತವೆ. ಹಾರಲಾಗದ ಪೆಂಗ್ವಿನ್‌ಗಳು ಸಹ ಹತ್ತಾರು ಕಿ.ಮೀ. ನಡೆದೇ ವಲಸೆ ಹೋಗುತ್ತವೆ. ವಲಸೆ ಬಂದ ಸ್ಥಳದಲ್ಲಿ ದಿನಗಳೆದಂತೆ ಅವು ಸ್ಥಳೀಯ ಹಕ್ಕಿಗಳೊಂದಿಗೆ ನೀರು, ಹುಲ್ಲಿಗಾಗಿಯೂ ಸೆಣಸಾಡಬೇಕು, ಜೊತೆಗೆ ಆಯಾಸ, ಅನಾರೋಗ್ಯ. ಪಕ್ಷಿಗಳ ಸ್ಮರಣಶಕ್ತಿ ಮತ್ತೆ ಸ್ವಸ್ಥಾನಕ್ಕೆ ಹಾರುವಷ್ಟು ಪ್ರಖರವೆಂಬ ಮಾತಿರಲಿ, ವಲಸೆ ಹಕ್ಕಿಗಳಿಗೆ ಸರ್ವವಿಧಗಳಲ್ಲೂ ಮನುಷ್ಯನ ಸಹಾಯಹಸ್ತ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.