ADVERTISEMENT

ಸಂಗತ | ಮನುಕುಲ–ಅಣ್ವಸ್ತ್ರ: ಸಹಬಾಳ್ವೆ ಅಸಾಧ್ಯ

ಶಾಂತಿ ಸ್ಥಾಪನೆಗೆ ಜರೂರಾದ ಪ್ರಯತ್ನ ಅಗತ್ಯ ಎಂಬುದನ್ನು ಮನಗಾಣಬೇಕಿದೆ

ಪ್ರೊ.ಎಂ.ಎಸ್.ರಘುನಾಥ್
Published 24 ಅಕ್ಟೋಬರ್ 2024, 0:30 IST
Last Updated 24 ಅಕ್ಟೋಬರ್ 2024, 0:30 IST
   

ಅಮೆರಿಕದ ಲೇಖಕ ಮಾರ್ಕ್ ಟ್ವೈನ್‌ನ ಒಂದು ಯುದ್ಧವಿರೋಧಿ ಕಾವ್ಯ, ‘ದ ವಾರ್ ಪ್ರೇಯರ್’. ಮೊದಲ ಮಹಾಯುದ್ಧದ ಸಮಯ, 1916ರ ಆಸುಪಾಸಿನಲ್ಲಿ ಇದು ಪ್ರಕಟವಾಯಿತು. ಇದರಲ್ಲಿ, ಯುದ್ಧ ಹೂಡಲು ಹೊರಟಿರುವ ಯೋಧರ ಒಳಿತಿಗಾಗಿ ಜನರ ಸಮೂಹವೊಂದು ಪ್ರಾರ್ಥನೆ ಸಲ್ಲಿಸುವ ದೃಶ್ಯ ಬರುತ್ತದೆ. ಚರ್ಚ್‌ನಲ್ಲಿ ಪಾದ್ರಿಯು ಪ್ರಾರ್ಥನೆ ಸಲ್ಲಿಸುವಾಗ, ತಮ್ಮ ದೇಶದ ಸೈನಿಕರು ಯುದ್ಧದಲ್ಲಿ ಜಯಶಾಲಿಗಳಾಗಲಿ ಎಂದು ಹಾರೈಸಲು ಅಧಿಕ ಸಂಖ್ಯೆಯಲ್ಲಿ ಜನ ಸೇರಿರುತ್ತಾರೆ. ಅವರಿಗೋ ಎಲ್ಲಿಲ್ಲದ ಉದ್ವೇಗ, ತವಕ. ಯುದ್ಧಸನ್ನದ್ಧರಾಗಿ ಹೊರಟಿರುವ ಯೋಧರಿಗೆ ತಮ್ಮ ಇಂಗಿತವನ್ನು ತಿಳಿಯಪಡಿಸುವ ಕಳಕಳಿ.

ಆಗ ಇದ್ದಕ್ಕಿದ್ದಂತೆ ಒಬ್ಬ ವೃದ್ಧ ಆ ಗುಂಪಿನಿಂದ ಎದ್ದು ನಿಂತು, ಏನೋ ಹೇಳಲು ಮುಂದೆ ಬರುತ್ತಾನೆ. ಎಲ್ಲರೂ ಕುತೂಹಲದಿಂದ ಅವನನ್ನು ನೋಡುತ್ತಾರೆ. ತಾನು ದೇವರ ಕಡೆಯಿಂದ ಬಂದವನೆಂದು ಮೊದಲು ಹೇಳುವ ಆತ ನಂತರ ವಿಷಾದದ ಧ್ವನಿಯಲ್ಲಿ, ‘ಯಾರಿಗಾಗಿ ಈ ಪ್ರಾರ್ಥನೆ?’ ಎಂದು ಕೇಳುತ್ತಾನೆ. ‘ನಿಮ್ಮ ಯೋಧರಿಗೆ ಜಯವಾಗಲಿ ಎಂದರೆ, ಮತ್ತೊಂದು ಗುಂಪಿನ ಜನ ಸಾಯಲಿ ಎಂದಲ್ಲವೇ? ಅದೇ ಯುದ್ಧದ ವ್ಯಂಗ್ಯ ಹಾಗೂ ಆತ್ಮವಂಚನೆ’ ಎಂದು ಹೇಳುತ್ತಾನೆ. ಯುದ್ಧದ ಕಠಿಣ ವಾಸ್ತವಿಕ ಚಿತ್ರಣವನ್ನು ಬಿಚ್ಚಿಡುತ್ತಾನೆ. ಈ ಮೂಲಕ, ಅಲ್ಲಿ ಸೇರಿದ್ದವರ ದೇಶಭಕ್ತಿಯ ಪ್ರದರ್ಶನದಲ್ಲಿ ಅಡಗಿದ್ದ ವಿರೋಧಾಭಾಸಗಳನ್ನು ಅನಾವರಣಗೊಳಿಸುತ್ತಾನೆ. ಅದು ಕೇಳುಗರನ್ನು ತಲ್ಲಣಗೊಳಿಸುತ್ತದೆ.

ಅಲ್ಲಿ ಸೇರಿದ್ದವರಿಗೆ ಬೇಕಾಗಿದ್ದುದು ಯುದ್ಧವೇ ವಿನಾ ಆ ವ್ಯಕ್ತಿಯ ಮಾತುಗಳಲ್ಲ. ಅದಕ್ಕಾಗಿ ಅಲ್ಲಿನ ಗಣ್ಯ ವ್ಯಕ್ತಿಗಳು ಮಾಡಿದ್ದೇನು ಗೊತ್ತೇ? ಅವನೊಬ್ಬ ಹುಚ್ಚ ಎಂದು ಅವನನ್ನು ಹೀಯಾಳಿಸಿ ಹೊರಗೆ ಕಳುಹಿಸುವ ಹುನ್ನಾರ. ಈ ಕವಿತೆ ಇಂದಿನ ದುರಿತ ಪರಿಸ್ಥಿತಿಗೆ ಬಹಳ ಪ್ರಸ್ತುತವಾಗಿದೆ. ಈಗಲೂ ಕೆಲವು ರಾಷ್ಟ್ರಗಳು ಹಿಂದೆ ಕಂಡರಿಯದ ರೀತಿಯಲ್ಲಿ ಯುದ್ಧದ ಬೇಗುದಿಗೆ ಒಳಗಾಗಿದ್ದರೂ, ಜಗತ್ತಿನ ಬಹುಪಾಲು ರಾಷ್ಟ್ರಗಳು ಅದನ್ನು ಕಂಡೂ ಕಾಣದಂತೆ ತಟಸ್ಥವಾಗಿವೆ ಅಥವಾ ಅದೇನಿದ್ದರೂ ಆ ರಾಷ್ಟ್ರಗಳ ಆಂತರಿಕ ವಿಚಾರ, ಮಧ್ಯ ಪ್ರವೇಶಿಸುವಂತಿಲ್ಲ ಎಂಬಂತೆ ಸೋಗು ಹಾಕಿಕೊಂಡಿವೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ‘ಇದು ಯುದ್ಧದ ಸಮಯ ಅಲ್ಲ’ ಎಂಬ ಹೇಳಿಕೆಯನ್ನು ಬೃಹತ್  ರಾಷ್ಟ್ರಗಳೆದುರೇ ನೀಡಿದ್ದರು. 

ADVERTISEMENT

ರಷ್ಯಾವನ್ನು ಎದುರು ಹಾಕಿಕೊಳ್ಳಲು ಬಹುಶಃ ಯಾವ ರಾಷ್ಟ್ರಕ್ಕೂ ಇಷ್ಟವಿಲ್ಲವೆಂಬಂತೆ ಮೇಲ್ನೋಟಕ್ಕೆ ತೋರುತ್ತದೆ. ರಷ್ಯಾ– ಉಕ್ರೇನ್ ನಡುವಿನ ಯುದ್ಧಕ್ಕೆ ಆಗಲೇ ಎರಡು ವರ್ಷ ಎಂದು ಯುದ್ಧವನ್ನು ವೈಭವೀ ಕರಿಸುವಂತೆ ವರದಿ ಮಾಡಲಾಯಿತು. ಇದೀಗ ಇಸ್ರೇಲ್ ಹಾಗೂ ಇರಾನ್ ನಡುವೆಯೂ ಸಂಘರ್ಷ ನಡೆದಿದೆ.

ಇದು ಹೀಗೆಯೇ ಮುಂದುವರಿದರೆ, ಅದು ಜಗತ್ತಿನ ಮೂರನೇ ಮಹಾಯುದ್ಧಕ್ಕೆ ನಾಂದಿಯಾಗಬಹುದು ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸೇರಿದಂತೆ ವಿಶ್ವದ ಅನೇಕ ನಾಯಕರು ನೀಡಿರುವ ಎಚ್ಚರಿಕೆಯನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಈ ಘರ್ಷಣೆಯನ್ನು ನಿವಾರಿಸಲು ಬೃಹತ್ ರಾಷ್ಟ್ರಗಳು ಏಕೆ ಸಫಲವಾಗಿಲ್ಲ ಎಂಬುದು ಮನುಜಕುಲವನ್ನೇ ಕಲಕಬೇಕಾದ ಗಂಭೀರ ಪ್ರಶ್ನೆ.

ಹಾಗೆ ನೋಡಿದರೆ, ವಿಶ್ವಶಾಂತಿ ಸ್ಥಾಪನೆಗೋಸ್ಕರ ಆರಂಭವಾದ ವಿಶ್ವಸಂಸ್ಥೆಯೂ ಆ ಮಹೋದ್ದೇಶವನ್ನು ಸಾಧಿಸುವ ದಿಸೆಯಲ್ಲಿ ಗಮನಾರ್ಹ ಕೊಡುಗೆಯನ್ನೇನೂ ನೀಡಿಲ್ಲ. ಯುದ್ಧಗಳು ನಡೆಯುತ್ತಲೇ ಇವೆ. ಎರಡು ಮಹಾಯುದ್ಧಗಳ ನಂತರವೂ ಮನುಷ್ಯ ಪಾಠ ಕಲಿತಿಲ್ಲ. ಆದರೆ, ಆ ಪ್ರಯತ್ನಗಳು ನಿಂತಿವೆಯೆಂದೇನೂ ಅಲ್ಲ. ಸುರಂಗ ಮುಗಿಯುತ್ತಿದ್ದಂತೆ ಬೆಳಕು ಮೂಡಿಯೇ ತೀರುತ್ತದೆ.

ಈ ವರ್ಷದ ನೊಬೆಲ್ ಶಾಂತಿ ಪುರಸ್ಕಾರವನ್ನು, ಜಪಾನ್‌ನಲ್ಲಿನ ಅಣುಬಾಂಬ್‌ ದಾಳಿಯಲ್ಲಿ ಬದುಕುಳಿದ ಗುಂಪನ್ನು ಪ್ರತಿನಿಧಿಸುವ ನಿಹಾನ್‌ ಹಿಡಾಂಕ್ಯೊ ಸಂಸ್ಥೆಗೆ ಪ್ರದಾನ ಮಾಡಲಾಗಿದೆ. ಈ ಹೆಜ್ಜೆಯು ಅಣ್ವಸ್ತ್ರ
ಗಳು ಜಗತ್ತಿಗೆ ನೀಡುವ ಘೋರ ಬೆದರಿಕೆಯ ಸಕಾಲಿಕ ನೆನಪೋಲೆಯಾಗಿದೆ.

ಶಾಂತಿ ಸ್ಥಾಪನೆಗಾಗಿ ಮಾಡಬೇಕಾದ ಪ್ರಯತ್ನವು ಹವಾಮಾನ ಬದಲಾವಣೆ, ಬಡತನ ಹಾಗೂ ಅಸಮಾನತೆಯ ವಿರುದ್ಧ ನಡೆಸಬೇಕಾದ ಹೋರಾಟದಷ್ಟೇ ಜರೂರು ಎಂಬುದನ್ನು ಮನಗಾಣಬೇಕಿದೆ. ರಷ್ಯಾದ ಅಧ್ಯಕ್ಷ ಪುಟಿನ್ ಅಣ್ವಸ್ತ್ರ ಬಳಕೆಯ ಬೆದರಿಕೆಯನ್ನು ಉಕ್ರೇನ್ ಮೇಲಿನ ಯುದ್ಧ ದುದ್ದಕ್ಕೂ ಮಾಡಿಕೊಂಡೇ ಬಂದಿದ್ದಾರೆ. ಇನ್ನೂ ಕೆಲವು ದೇಶಗಳ ಅಣ್ವಸ್ತ್ರ ಬಳಕೆ ಸಾಧ್ಯತೆಗಳ ಬಗ್ಗೆ ಎಲ್ಲೆಡೆ ಕಳವಳ ವ್ಯಕ್ತವಾಗುತ್ತಿದೆ. ಈ ಕಾರಣದಿಂದ, ನೊಬೆಲ್ ಶಾಂತಿ ಪುರಸ್ಕಾರವನ್ನು ನಿಹಾನ್‌ ಹಿಡಾಂಕ್ಯೊಗೆ ನೀಡಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಅಷ್ಟೇ ಅಲ್ಲ, ಇದು ವಿಶ್ವದ ನಾಯಕರಿಗೆ ನೀಡಿದ ಸಂದೇಶವೂ ಆಗಿದೆ ಎನ್ನಬಹುದು.

ನಿಹಾನ್‌ ಹಿಡಾಂಕ್ಯೊಗೆ ಶಾಂತಿ ಪುರಸ್ಕಾರ ನೀಡಿದ ಮಾತ್ರಕ್ಕೆ ಅಣ್ವಸ್ತ್ರಗಳ ಭಯ ಕಡಿಮೆಯಾಗದೇ ಇರಬಹುದು. ಆದರೆ, ಅವುಗಳಿಂದ ಜಗತ್ತಿಗೆ ಉಂಟಾಗಿರುವ ಬೆದರಿಕೆ ಹಾಗೂ ಅವುಗಳ ವಿರುದ್ಧ ಹೂಡಬೇಕಾದ ಚಳವಳಿಯನ್ನು ಗಟ್ಟಿಗೊಳಿಸುವ ಅನಿವಾರ್ಯವನ್ನು ಮುನ್ನೆಲೆಗೆ ತರಲು ಸಹಾಯ ಆಗಬಹುದು. ಮಾನವಕುಲ ಹಾಗೂ ಅಣ್ವಸ್ತ್ರಗಳು ಸಹಬಾಳ್ವೆ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ವಿಶ್ವ ನಾಯಕರಿಗೆ ರವಾನೆ ಮಾಡುವುದೇ ತನ್ನ ಉದ್ದೇಶ ಎಂಬುದನ್ನೂ ನೊಬೆಲ್ ಶಾಂತಿ ಪುರಸ್ಕಾರ ಸಮಿತಿಯು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.