ದೆಹಲಿ ಮೆಟ್ರೊ ರೈಲುಗಳಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇತ್ತೀಚೆಗೆ ಹಾಕಿದ್ದ ಜಾಹೀರಾತೊಂದು ವಿವಾದಕ್ಕೆ ಕಾರಣವಾಯಿತು. ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಯುವಿಕ್ಯಾನ್ ಅನ್ನುವ ಎನ್‌ಜಿಒ ವತಿಯಿಂದ ಪ್ರಕಟಿಸಲಾಗಿದ್ದ ಈ ಜಾಹೀರಾತಿನಲ್ಲಿ ‘ನಿಮ್ಮ ಸ್ತನಗಳನ್ನು’ ಎನ್ನುವ ಬದಲು ‘ನಿಮ್ಮ ಕಿತ್ತಳೆಗಳನ್ನು ತಿಂಗಳಿಗೊಮ್ಮೆ ಪರೀಕ್ಷಿಸಿಕೊಳ್ಳಿ’ ಎಂದು ಬರೆಯಲಾಗಿತ್ತು!
ಚೆಕ್ ಯುವರ್ ಬ್ರೆಸ್ಟ್ಸ್ ಎನ್ನುವ ಬದಲು ಚೆಕ್ ಯುವರ್ ಆರೆಂಜಸ್ ಎಂದು ಬರೆಯಲಾಗಿದ್ದ ಈ ಜಾಹೀರಾತಿನ ಸಂಬಂಧ ವಿವಾದ ಸೃಷ್ಟಿಯಾಗುತ್ತಿದ್ದಂತೆಯೇ ದೆಹಲಿ ಮೆಟ್ರೊ ರೈಲು ನಿಗಮ (ಡಿಎಂಆರ್‌ಸಿ) ಇದೀಗ ಅದನ್ನು ವಾಪಸ್ ಪಡೆದಿದೆ. ಕ್ಯಾನ್ಸರ್‌ನಿಂದ ಬಳಲಿ ಗುಣಮುಖರಾಗಿರುವ ಯುವರಾಜ್ ಅವರ ಉದ್ದೇಶ ಒಳ್ಳೆಯದೇ. ಆದರೆ ಸೃಜನಶೀಲತೆಯ ಅತ್ಯುತ್ಸಾಹ ಎಂಬುದು ಹೇಗೆ ಹಿಮ್ಮುಖವಾಗಿ ಚಲಿಸಿ ಅಪಾಯವನ್ನು ಉಂಟು ಮಾಡಬಹುದು ಎನ್ನುವುದಕ್ಕೆ ಈ ಜಾಹೀರಾತಿನಲ್ಲಿ ಬಳಸಿದ್ದ ಪದವೇ ನಿದರ್ಶನ!
ಸರಿ, ಯಾರೋ ಈ ಬಗೆಯ ಯೋಚನೆ ಮಾಡಿದರು ಅಂದುಕೊಳ್ಳಿ. ಲಕ್ಷಾಂತರ ಮಂದಿ ನೋಡುವ ಮೆಟ್ರೊದಂತಹ ಜಾಗದಲ್ಲಿ ಅದನ್ನು ಹಾಕಲು ಅನುಮತಿ ಕೊಟ್ಟವರಿಗೆ, ಅದು ಅಲ್ಲಿ ಹಾಕಲು ಯೋಗ್ಯವೇ ಅಲ್ಲವೇ ಎಂದು ವಿವೇಚನೆಯಿಂದ ಯೋಚಿಸುವ ಸಾಮಾನ್ಯಜ್ಞಾನ ಮೊದಲಿಗೇ ಇರಲಿಲ್ಲವೆ? ಯಾರೋ ಎಷ್ಟೋ ದುಡ್ಡು ಕೊಡುತ್ತಾರೆ ಎಂದು ಏನನ್ನು ಬೇಕಾದರೂ ಹಾಕಲು ಜಾಗ ಕೊಡುವ ಅಧಿಕಾರವು ಮೆಟ್ರೊ ನಿರ್ವಾಹಕರಿಗಾಗಲಿ ಇನ್ಯಾವುದೋ ಸಾರ್ವಜನಿಕ ಸಂಸ್ಥೆಗಾಗಲಿ ಇದೆಯೇ? ನಿಜವಾಗಿಯೂ ಇದು ಮುಜುಗರ ತರಿಸುವ ವಿಷಯ.
ಸ್ತನಗಳನ್ನು ಸ್ತನ ಎಂದು ಕರೆಯಲು ಹಿಂಜರಿಯುವ ದೇಶದಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಹೇಗೆ ಸಾಧ್ಯ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಸತ್ಯವೇ! ಇಂದಿಗೂ ನಮ್ಮ ದೇಶ ಹೆಣ್ಣುಮಕ್ಕಳ ಆರೋಗ್ಯದ ವಿಚಾರದಲ್ಲಿ ಹಿಂದೆಯೇ ಇದೆ. ಅದರಲ್ಲೂ ಖಾಸಗಿ ಅಂಗಗಳಲ್ಲಿ ಏನಾದರೂ ಸಮಸ್ಯೆಯಾದರೆ ವೈದ್ಯರಿಗೆ ತೋರಿಸಿಕೊಳ್ಳುವುದಕ್ಕೇ ಸಂಕೋಚಪಡುವ ಹೆಣ್ಣುಮಕ್ಕಳಲ್ಲಿ ಹಳ್ಳಿಯವರು, ಪಟ್ಟಣದವರು, ಓದಿದವರು, ಓದದವರು ಎನ್ನುವ ಭೇದವಿಲ್ಲ.
ನಮ್ಮೂರಲ್ಲಿ ಆಗಾಗ್ಗೆ ಮ್ಯಾಮೊಗ್ರಫಿ ಅಂದರೆ ಸ್ತನಪರೀಕ್ಷೆಯ ಶಿಬಿರಗಳು ನಡೆಯುತ್ತಿರುತ್ತವೆ. ಪರೀಕ್ಷೆ ಉಚಿತವಾಗಿ ನಡೆದರೂ ಬರುವ ಮಹಿಳೆಯರ ಸಂಖ್ಯೆ ಕಡಿಮೆಯೇ. ಇನ್ನು ಶುಲ್ಕ ಇಟ್ಟರಂತೂ ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ಬರುವುದು ಎಂದು ನಮ್ಮ ವೈದ್ಯ ಮಿತ್ರರು ಹೇಳುತ್ತಾರೆ. ಅಂದರೆ ನಮ್ಮ ದೇಹದ ಅಂಗಗಳಿಗೆ ತೊಂದರೆಯಾದರೂ ಸಂಕೋಚವು ವೈದ್ಯಕೀಯ ನೆರವು ಪಡೆಯುವುದನ್ನು ತಡೆಯುತ್ತದೆ ಎಂದರೆ ಅದಕ್ಕಿಂತ ಮೂರ್ಖತನದ ವಿಷಯ ಬೇರೊಂದಿರಲಾರದು.
ಪರಿಸ್ಥಿತಿ ಹೀಗಿರುವಾಗ, ಸ್ತನಗಳನ್ನು ಹಾಗೆಂದು ಕರೆಯದೆ ಕಿತ್ತಳೆಗಳು ಎಂದು ಘಂಟಾಘೋಷವಾಗಿ ಸಾರುವುದೆಂದರೆ? ದಿನನಿತ್ಯ ಲಕ್ಷಾಂತರ ಜನ ಓಡಾಡುವ ಮೆಟ್ರೊದಂತಹ ಜಾಗದಲ್ಲಿ ಬ್ರೆಸ್ಟ್ ಎಂಬ ಪದ ಬಳಸಿದ್ದಿದ್ದರೆ ದಿನವೂ ಅದನ್ನು ಓದಿ ಓದಿ ಅದು ಒಂದು ಸಾಮಾನ್ಯ ಪದವಾಗುತ್ತಿತ್ತು ಮತ್ತು ಆ ಪದದ ಬಗೆಗಿರುವ ಮುಜುಗರ ಕೊಂಚವಾದರೂ ಹೋಗುತ್ತಿತ್ತೇನೊ!
ಒಂದು ಮಾಮೂಲಿ ಸ್ಯಾನಿಟರಿ ಪ್ಯಾಡ್ ತರಲು ಗಂಡಸರ ಹತ್ತಿರ ಹೇಳಲು ನಾಚಿಕೆ ಪಡುವ ಹೆಂಗಸರ ಸಂಖ್ಯೆ ಕಡಿಮೆಯೇನೂ ಆಗಿಲ್ಲ. ಯಾವುದೋ ಕಾನೂನುಬಾಹಿರವಾದ ವಸ್ತುವನ್ನು ಮಾರಾಟ ಮಾಡುವವರಂತೆ ಅಂಗಡಿಯವರು ಪ್ಯಾಡ್‌ಗಳನ್ನು ಕಾಗದದಲ್ಲಿ ಸುತ್ತಿ ಕೊಡುವುದೂ ನಿಂತಿಲ್ಲ. ಮನುಷ್ಯನ ದೇಹದ ಇತರ ಅಂಗಗಳಂತೆ ಖಾಸಗಿ ಅಂಗಗಳನ್ನು ನೋಡದೇ ಅವುಗಳ ಜತೆಗೆ ಲೈಂಗಿಕತೆ ಥಳಕು ಹಾಕಿಕೊಂಡೇ ಇರುವುದರಿಂದ ಇವೆಲ್ಲ ಸಮಸ್ಯೆ. ಹಿಂದೆಲ್ಲ ಮಹಿಳಾ ವೈದ್ಯರು ಸಿಗದೇ ಪುರುಷ ವೈದ್ಯರ ಹತ್ತಿರ ಹೋಗದೇ ಗರ್ಭಿಣಿಯರು ಮೃತಪಟ್ಟಿದ್ದೂ ಇತ್ತು! ಇಂದು ಹೆಣ್ಣುಮಕ್ಕಳ ಉಡುಗೆಯಿಂದ ಬ್ರಾದ ಪಟ್ಟಿ ಕೊಂಚವೇ ಇಣುಕಿದರೂ ಹೃದಯಾಘಾತವಾದಂತೆ ವರ್ತಿಸುವವರೂ ಬೇಕಾದಷ್ಟು ಮಂದಿ ಇದ್ದಾರೆ.
ಕುಟುಂಬದವರೆಲ್ಲ ಟಿ.ವಿ. ನೋಡುತ್ತಿದ್ದಾಗ ಸ್ಯಾನಿಟರಿ ನ್ಯಾಪ್‌ಕಿನ್ ಜಾಹೀರಾತು ಬಂದರೆ ಚಾನೆಲ್ ಬದಲಾಯಿಸುವುದೂ ಇದೆ. ಅಂಗಡಿಯಲ್ಲಿ ಕಾಂಡೋಮ್ ಅನ್ನು ಕೇಳಿ ಪಡೆಯಲು ಸಂಕೋಚಪಡುವ ಜನರಿಂದ ಅಸುರಕ್ಷಿತ ಲೈಂಗಿಕತೆ ಸಾಮಾನ್ಯ ಸಂಗತಿ ಎಂಬಂತಾಗಿದೆ. ಇದರ ಪರಿಣಾಮವೆಂದರೆ, ಎಷ್ಟೋ ವರ್ಷಗಳ ಹಿಂದೆ ಕೇಳಿದ್ದ ಏಡ್ಸ್ ಕಾಯಿಲೆ ಮತ್ತೆ ಸದ್ದೇ ಮಾಡದೆ ಹರಡುತ್ತಿದೆ. ಯುವಕ, ಯುವತಿಯರಲ್ಲಿ ಇದರ ಪ್ರಮಾಣ ಹೆಚ್ಚುತ್ತಿದ್ದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ.
ಮದುವೆಯಾಗದವರಷ್ಟೇ ಅಲ್ಲ, ಮದುವೆಯಾದ ಮಹಿಳೆಯರು ಕೂಡ ಬೇಡದ ಗರ್ಭ ತೆಗೆಸಿಕೊಳ್ಳಲು ವೈದ್ಯರ ಹತ್ತಿರ ಹೋಗದೆ ಗರ್ಭಪಾತದ ಮಾತ್ರೆಯನ್ನು ನುಂಗಿ, ಆ ಗರ್ಭ ಎಕ್ಟೋಪಿಕ್ ಪ್ರೆಗ್ನೆನ್ಸಿ, ಅಂದರೆ ಗರ್ಭನಾಳದಲ್ಲಿ ಗರ್ಭ ಕಟ್ಟಿ ಜೀವವೇ ಹೋದ ಉದಾಹರಣೆಗಳಿವೆ. ಪರಿಸ್ಥಿತಿ ಹೀಗಿರುವಾಗ ಸ್ತನಗಳನ್ನು ಕಿತ್ತಳೆಗಳೆಂದು ಕರೆದು ಹೆಣ್ಣುಮಕ್ಕಳನ್ನು ಮತ್ತಷ್ಟು ಕತ್ತಲಿಗೆ ನೂಕುವ ಕೆಲಸವು ಹಾಸ್ಯಾಸ್ಪದ ಮತ್ತು ಖಂಡನೀಯ.
ಮಹಿಳೆಯರನ್ನು ವಸ್ತುವಾಗಿ ಪರಿಗಣಿಸುವ ಈ ಅಸೂಕ್ಷ್ಮವಾದ ಜಾಹೀರಾತನ್ನು ದೆಹಲಿ ಮೆಟ್ರೊ ವಾಪಸ್ ಪಡೆದಿರುವುದು ಸಮಯೋಚಿತ ನಿರ್ಧಾರವೇ ಸರಿ. ಇನ್ನಾದರೂ ನಾವು ಬದಲಾಗಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.