ADVERTISEMENT

ಸಂಗತ | ಎಲ್ಲೆ ಮೀರುವ ‘ನಾಗರಿಕ’ರು

ತನ್ನ ಅನಾಗರಿಕ ವರ್ತನೆಗಳಿಂದ ಅನ್ಯರಿಗೆ ತೊಂದರೆಯಾಗುತ್ತಿದೆ ಎನ್ನುವ ಪ್ರಜ್ಞೆಯೇ ಇಲ್ಲದಂತೆ ಮನುಷ್ಯ ಅಸಂವೇದಿಯಾಗುತ್ತಿದ್ದಾನೆ

ರಾಜಕುಮಾರ ಕುಲಕರ್ಣಿ
Published 14 ಫೆಬ್ರುವರಿ 2022, 20:30 IST
Last Updated 14 ಫೆಬ್ರುವರಿ 2022, 20:30 IST
   

ನಮ್ಮ ಪಕ್ಕದ ಮನೆಯಲ್ಲಿ ಮಗುವಿನ ಹುಟ್ಟುಹಬ್ಬವನ್ನು ಇತ್ತೀಚೆಗೆ ಅತ್ಯಂತ ಸಡಗರದಿಂದ ಆಚರಿಸಿದರು. ಮನೆಯ ಮಾಳಿಗೆಯನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಿ ಸುಂದರ ವೇದಿಕೆಯನ್ನು ಸಜ್ಜುಗೊಳಿಸಿ ದ್ದರು. ಸಂಜೆ ಏಳು ಗಂಟೆಗೆ ಆರಂಭಗೊಂಡ ಆಚರಣೆ ಬೆಳಗಿನ ಎರಡು ಗಂಟೆಯವರೆಗೆ ಹಾಡು, ಕುಣಿತದಂಥ ಮನರಂಜನೆಗಳಿಂದ ಅವ್ಯಾಹತವಾಗಿ ಸಾಗಿತು. ಧ್ವನಿ ವರ್ಧಕ ಮತ್ತು ಸೇರಿದ್ದವರ ಜೋರಾದ ಸದ್ದುಗದ್ದಲಕ್ಕೆ ಅಕ್ಕಪಕ್ಕದ ಮನೆಯವರು ಅಷ್ಟೂ ಹೊತ್ತು ನಿದ್ದೆ ಇಲ್ಲದೆ ಜಾಗರಣೆ ಮಾಡಬೇಕಾಯಿತು.

ಪಕ್ಕದ ಕೆಲವು ಮನೆಗಳಲ್ಲಿ ಮಕ್ಕಳು ಪರೀಕ್ಷೆಗಾಗಿ ಓದಿಕೊಳ್ಳುತ್ತಿದ್ದರು, ಜ್ವರದಿಂದ ಬಳಲುತ್ತಿದ್ದ ಅಜ್ಜ ಆಸ್ಪತ್ರೆಯಿಂದ ಮರಳಿಬಂದು ವಿಶ್ರಾಂತಿ ಪಡೆಯುತ್ತಿದ್ದರು. ದಿನವಿಡೀ ದುಡಿದು ಹೈರಾಣಾದವರು ಹಾಸಿಗೆಗೆ ಮೈಚಾಚಿ ಮಲಗುವ ಸಿದ್ಧತೆಯಲ್ಲಿದ್ದರು. ಸಂಭ್ರಮಾಚರಣೆಯಲ್ಲಿ ಮೈಮರೆತಿದ್ದವರಿಗೆ ಈ ಯಾವ ಸಂಗತಿಗಳೂ ನೆನಪಿಗೆ ಬರಲಿಲ್ಲ. ವೈಯಕ್ತಿಕ ಖುಷಿಯ ಆದ್ಯತೆಯೊಂದೇ ಮುನ್ನೆಲೆಗೆ ಬಂದು, ಬೇರೆಯವರಿಗಾಗುತ್ತಿದ್ದ ಹಿಂಸೆಯ ಅರಿವು ಹಿನ್ನೆಲೆಗೆ ಸರಿದಿತ್ತು.

ನಿವೃತ್ತಿಯ ಅಂಚಿಗೆ ತಲುಪಿರುವ ನಮ್ಮ ಓಣಿಯಲ್ಲಿನ ಹಿರಿಯರೊಬ್ಬರು ಪ್ರತಿನಿತ್ಯ ತಮ್ಮ ಕಚೇರಿ ಯಿಂದ ಸಾಯಂಕಾಲ ಮನೆಗೆ ನಡೆದುಕೊಂಡು ಬರುವುದನ್ನು ರೂಢಿಸಿಕೊಂಡಿದ್ದಾರೆ. ಸಮೀಪದ ಕೆಲಸ ಕಾರ್ಯಗಳಿಗೂ ಅವರು ಕಾಲ್ನಡಿಗೆಯನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಕಚೇರಿಯಿಂದ ಹಿಂದಿ ರುಗುವ ವೇಳೆ ಓಣಿಯಲ್ಲಿ ಯಾರಾದರೂ ಎದುರಾದರೆ ‘ಇವತ್ತು ಜೀವಂತವಾಗಿ ಮನೆಗೆ ಬಂದೆ ನೋಡಿ’ ಎನ್ನುತ್ತಾ ಮುಗುಳ್ನಗುತ್ತಾರೆ. ಆ ಹಿರಿಯರು ಹೀಗೆ ಹೇಳುವುದಕ್ಕೂ ಕಾರಣವಿದೆ. ವಾಹನ ಸವಾರರು ಅದರಲ್ಲೂ ವಿಶೇಷವಾಗಿ ಯುವಕರು ರಸ್ತೆಯ ಮೇಲೆ ವಾಹನ ಓಡಿಸುವುದನ್ನು ನೋಡಿಯೇ ಆನಂದಿಸ ಬೇಕು. ದ್ವಿಚಕ್ರ ವಾಹನದ ಮೇಲೆ ಸಂಚರಿಸುವ ಯುವಕರಂತೂ ಇನ್ನೇನು ಪಾತಾಳವನ್ನೇ ಸ್ಪರ್ಶಿಸುತ್ತಿರುವರೇನೋ ಎನ್ನುವಂತೆ ವಾಹನವನ್ನು ಡೊಂಕಾಗಿಸಿ ಓಡಿಸುವುದು ಸಾಮಾನ್ಯ ದೃಶ್ಯವಾಗಿರುತ್ತದೆ. ಇಂಥ ಸಂದರ್ಭದಲ್ಲೆಲ್ಲ ಆ ಯುವಕರು ಅವರ ಜೊತೆಗೆ ತಮ್ಮನ್ನೂ ಅಪಘಾತಕ್ಕೆ ಒಳಗಾಗಿಸುವರೇನೋ ಎನ್ನುವಷ್ಟು ಭಯ ಪಾದಚಾರಿಗಳನ್ನು ಕಾಡುತ್ತದೆ.

ADVERTISEMENT

ಈ ನಡುವೆ ಮದ್ಯ ಸೇವಿಸಿ ಇಲ್ಲವೇ ಮೊಬೈಲ್‍ನಲ್ಲಿ ಮಾತನಾಡುತ್ತ ಸಂಚರಿಸುವ ವಾಹನ ಸವಾರರ ಸಂಖ್ಯೆಯೇನೂ ಕಡಿಮೆ ಇರುವುದಿಲ್ಲ. ಸಾರ್ವಜನಿಕ ರಸ್ತೆಯನ್ನೇ ಸರ್ಕಸ್ಸಿನ ಡೇರೆಯಾಗಿಸಿಕೊಂಡು, ಎರಡೂ ಕೈಗಳನ್ನು ಹಿಂದೆ ಕಟ್ಟಿಕೊಂಡು ವಾಹನ ಓಡಿಸುವ ಸಾಹಸಿಗರನ್ನು ಕಡೆಗಣಿಸುವಂತಿಲ್ಲ. ತಮ್ಮ ಎಂಟ್ಹತ್ತು ವರ್ಷದ ಪುಟಾಣಿಯ ಕೈಗೆ ವಾಹನದ ಲಗಾಮು ಕೊಟ್ಟು, ಹಿಂದೆ ಕುಳಿತು ಅತ್ಯಂತ ಉಮೇದಿಯಿಂದ ನಿರ್ದೇಶಿಸುವ ಪಾಲಕರೂ ಆಗಾಗ ಗೋಚರಿಸುತ್ತಾರೆ.

ನನ್ನ ಇನ್ನೊಬ್ಬ ಮಿತ್ರನಿಗಾದ ಅನುಭವ ತುಂಬ ವಿಭಿನ್ನವಾದದ್ದು. ನೀಟಾಗಿ ಡ್ರೆಸ್ ಮಾಡಿಕೊಂಡು ದ್ವಿಚಕ್ರ ವಾಹನದಲ್ಲಿ ಪ್ರತಿದಿನದಂತೆ ಕಚೇರಿಗೆ ಹೊರಟವನಿಗೆ ದಾರಿ ಮಧ್ಯದಲ್ಲಿ ತಲೆ ಮೇಲೆ ನೀರಿನ ಸಿಂಚನವಾದ ಅನುಭವವಾಯಿತು. ಮೋಡವಿಲ್ಲದ ಶುಭ್ರವಾದ ಆಕಾಶ, ಕಣ್ಣು ಕೋರೈಸುವ ಬಿಸಿಲಿದ್ದ ವಾತಾವರಣ ದಲ್ಲಿ ಇದೆಂಥ ಮಳೆ ಎಂದು ತಲೆ ಎತ್ತಿ ಪಕ್ಕಕ್ಕೆ ನೋಡಿದವನಿಗೆ ಸರ್ಕಾರಿ ಬಸ್ಸಿನ ಕಿಟಕಿ ಯೊಳಗಿಂದ ಹೊರಗೆ ಚಾಚಿದ ಮುಖ ಗೋಚರಿಸಿತು. ಆ ಮುಖದ ಬಾಯಿಯೊಳಗಿಂದ ಪಿಚಕಾರಿಯಂತೆ ಸಿಡಿದುಬಂದ ರಸೋತ್ಪತ್ತಿ ಮತ್ತೊಮ್ಮೆ ಅವನ ಶಿರದ ಮೇಲೆ ಶಿರಸ್ಥಾಯಿಯಾಯಿತು. ಅರ್ಧದಾರಿವರೆಗೂ ಬಂದಿದ್ದ ನನ್ನ ಸ್ನೇಹಿತನ ಪರಿಸ್ಥಿತಿ ವರ್ಣಿಸಲಸದಳವಾಗಿತ್ತು. ಅಂಥ ಸ್ಥಿತಿಯಲ್ಲೇ ಕಚೇರಿಗೆ ಹೋಗುವಂತಿಲ್ಲ, ಮನೆಗೆ ಹಿಂತಿರುಗಿ ಬಟ್ಟೆ ಬದಲಿಸಿಕೊಂಡು ಬರಲು ಸಮಯದ ಕೊರತೆ. ಜೊತೆಗೆ ತನ್ನದಲ್ಲದ ತಪ್ಪಿಗೆ ಎದುರಿಸಬೇಕಾದ ಅಪಮಾನದ ಭಾವದಿಂದ ಭೂಮಿ ಯೊಳಕ್ಕೆ ಹೂತುಹೋದ ಅನುಭವ ಅವನದಾಗಿತ್ತು.

ಖಾಸಗಿ ಸಮಾರಂಭಕ್ಕಾಗಿ ಮನೆಯ ಎದುರಿನ ರಸ್ತೆಯನ್ನು ಅತಿಕ್ರಮಿಸಿಕೊಳ್ಳುವುದು, ಅಮಾವಾಸ್ಯೆ- ಹಬ್ಬಗಳಂದು ವಾಹನಗಳನ್ನು ತೊಳೆಯಲು ಸಾವಿ ರಾರು ಲೀಟರ್ ನೀರು ವ್ಯರ್ಥ ಮಾಡುವುದು, ವಿದ್ಯುತ್ ಯಂತ್ರದಿಂದ ಸಾರ್ವಜನಿಕ ನಲ್ಲಿಯಿಂದ ಒಂದು ತೊಟ್ಟೂ ಬಿಡದಂತೆ ನೀರನ್ನು ಹೀರಿ ಉಳಿದ ಮನೆಗಳಲ್ಲಿ ನೀರಿನ ಕೊರತೆ ಹುಟ್ಟಿಸುವುದು... ಹೀಗೆ ಅದೆಷ್ಟೋ ಸಮಾಜವಿರೋಧಿ ಕೆಲಸಗಳಲ್ಲಿ ಮನುಷ್ಯರು ತೊಡಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ತನ್ನ ಇಂಥ ಅನಾಗರಿಕ ವರ್ತನೆಯಿಂದ ಬೇರೆಯವರಿಗೆ ತೊಂದರೆಯಾಗುತ್ತಿದೆ ಎನ್ನುವ ಕಿಂಚಿತ್ ಪ್ರಜ್ಞೆಯೂ ಇಲ್ಲದಂತೆ ಮನುಷ್ಯ ಅಸಂವೇದಿಯಾಗುತ್ತಿದ್ದಾನೆ.

ಭೈರಪ್ಪನವರ ‘ತಂತು’ ಕಾದಂಬರಿಯಲ್ಲಿ ಹೀಗೊಂದು ಮಾತಿದೆ: ‘ಜನರು ಮೂಲತಃ ಒಳ್ಳೆಯ ವರು, ಕೆಟ್ಟೋರು ಅನ್ನೂ ವಿಂಗಡಣೆ ಸರಿಯಲ್ಲ. ಅವರು ಗೊಬ್ಬರದ ಥರ ಇದ್ದಾರೆ. ಗೊಬ್ಬರ ಒಯ್ದು ತೆಂಗಿನ ಮರಕ್ಕೆ ಹಾಕಿದರೆ ಅದೂ ಫಲ ಕೊಡುತ್ತೆ, ಪಾಪಾಸು ಕಳ್ಳಿಗೆ ಹಾಕಿದರೆ ಅದೂ ಹೊರವಾಗಿ ಬೆಳೆಯುತ್ತೆ. ಗೊಬ್ಬರದ ಹಂಗಿರೊ ಅವರನ್ನು ನಿಜವಾದ ಜನರ ಹಂಗೆ ಮನುಷ್ಯರ ಹಂಗೆ ಮಾಡೂದೇ ಮೂಲ ಪ್ರಶ್ನೆ’.

ಮನುಷ್ಯನ ಆಲೋಚನಾ ಮಟ್ಟದಲ್ಲಿ, ಅವನ ವರ್ತನೆಯಲ್ಲಿ, ಬದುಕಿನ ರೀತಿಯಲ್ಲಿ, ಸಮಾಜವನ್ನು ನೋಡುವ ಕ್ರಮದಲ್ಲಿ ಬಹಳಷ್ಟು ಸುಧಾರಣೆಯಾಗ ಬೇಕಿದೆ. ವೈಯಕ್ತಿಕ ಆದ್ಯತೆಗಳಿಂದ ಸಮಾಜದ
ಸ್ವಾಸ್ಥ್ಯ ಕೆಡದಂತೆ ಮತ್ತು ಬೇರೆಯವರ ಬದುಕಿನ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಬದುಕುವ ಅತ್ಯಂತ ಮಹತ್ವದ ಸಾಮಾಜಿಕ ಜವಾಬ್ದಾರಿಯನ್ನು ನಾವೆಲ್ಲ ರೂಢಿಸಿಕೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.