ಕೇಂದ್ರ ಸರ್ಕಾರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡದಲ್ಲೂ ಬರೆಯಲು ಅವಕಾಶ ಇರಬೇಕು ಎಂಬುದು ಸರಿಯಾದ ಹಕ್ಕೊತ್ತಾಯ. ಇಂಗ್ಲಿಷ್ ಮೇಲೆ ಹಿಡಿತ ಹೊಂದಿಲ್ಲದ ಗ್ರಾಮೀಣ ಪ್ರದೇಶದ ಆಕಾಂಕ್ಷಿಗಳಿಗೆ ಇದರಿಂದ ನೆರವಾಗುತ್ತದೆ. ಆದರೆ, ಕನ್ನಡದಲ್ಲಿ ತರಬೇತಿ ಮತ್ತು ಪರೀಕ್ಷೆ ಬರೆಯಲು ಅವಕಾಶ ಎರಡೂ ಇಲ್ಲದೇ ಇದ್ದರೆ ಇಂತಹ ಅಭ್ಯರ್ಥಿಗಳಿಗೆ ಹೆಚ್ಚು ತೊಂದರೆ ಆಗಲಿದೆ.
ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಸಿಕ್ಕರೆ ಕನ್ನಡಿಗರಿಗೆ ಉದ್ಯೋಗ ಸಿಗುವ ಖಾತರಿ ಇದೆಯೇ? ಅಂತಹ ಅವಕಾಶವನ್ನು ಎಷ್ಟು ಜನ ಬಳಸಿಕೊಂಡಿದ್ದಾರೆ ಎಂಬುದನ್ನು ಗಮನಿಸಬೇಕಿದೆ. ರೈಲ್ವೆ ಆಯ್ಕೆ ಮಂಡಳಿಯು ಶೆಡ್ಯೂಲ್ 8ರಲ್ಲಿರುವ ಎಲ್ಲ ಭಾಷೆಗಳಲ್ಲೂ ಬರೆಯಲು ಅವಕಾಶ ನೀಡಿದಾಗ, ಕುತೂಹಲದಿಂದ ಸಂಬಂಧಿಸಿದವರನ್ನು ವಿಚಾರಿಸಿದೆ. ಸಾವಿರಕ್ಕಿಂತ ಕಮ್ಮಿ ಅಭ್ಯರ್ಥಿಗಳು ಕನ್ನಡದಲ್ಲಿ ಬರೆಯುವ ಆಯ್ಕೆ ಮಾಡಿಕೊಂಡಿದ್ದರು. ಇದಕ್ಕೆ ಕಾರಣ, ಕೆಲವು ನಗರಗಳನ್ನು ಬಿಟ್ಟರೆ ಉಳಿದವರಿಗೆ ಇಂತಹ ಪರೀಕ್ಷೆ ನಡೆಯುವುದು ತಿಳಿಯುವುದೇ ಇಲ್ಲ. ಇನ್ನು ನಗರ ಮೂಲದ ಹೆಚ್ಚು ಅಭ್ಯರ್ಥಿಗಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರಾಗಿರುವುದರಿಂದ ಕನ್ನಡದಲ್ಲಿ ಬರೆಯವ ಆತ್ಮವಿಶ್ವಾಸ ಇರಲು ಸಾಧ್ಯವೇ?
ಈ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಬಹುದು ಎಂದಾದರೆ, ಪ್ರಶ್ನೆಪತ್ರಿಕೆಯು ಇಂಗ್ಲಿಷ್, ಹಿಂದಿಯ ಹಾಗೆ ಇತರ ಪ್ರಾದೇಶಿಕ ಭಾಷೆಗಳಲ್ಲೂ ಮುದ್ರಣವಾಗುತ್ತದೆ. ನಮ್ಮ ಹುಡುಗರಿಗೆ ಸಾಮಾನ್ಯ ಜ್ಞಾನ, ಗಣಿತ ಇತ್ಯಾದಿಯೆಲ್ಲವನ್ನೂ ಕನ್ನಡದಲ್ಲಿ ಅರ್ಥ ಮಾಡಿಕೊಂಡು ಉತ್ತರ ಬರೆಯುವುದು ಸುಲಭದ ಸಂಗತಿಯಲ್ಲ. ಅಗತ್ಯ ವಿದ್ಯಾರ್ಹತೆಯ ಜೊತೆಗೆ ಬಹಳಷ್ಟು ಸಿದ್ಧತೆ ಬೇಕಾಗುತ್ತದೆ. ಆಂಧ್ರಪ್ರದೇಶ, ಬಿಹಾರದಂತಹ ರಾಜ್ಯಗಳಲ್ಲಿ ಅಭ್ಯರ್ಥಿಗಳನ್ನು ಸಜ್ಜುಗೊಳಿಸುವ ಬಹಳಷ್ಟು ಸಂಸ್ಥೆಗಳಿವೆ. ಅವು ಹಿಂದಿ, ಇಂಗ್ಲಿಷ್‌ನಲ್ಲಿ ತರಬೇತಿ ನೀಡುತ್ತವೆ. ಈಗ ನಮ್ಮ ರಾಜ್ಯದ ಬೆಂಗಳೂರು ಮತ್ತು ಇತರ ಕೆಲವು ನಗರಗಳಲ್ಲಿ ಮಾತ್ರ ಇಂತಹ ಸಂಸ್ಥೆಗಳು ಆರಂಭವಾಗುತ್ತಿವೆ. ಅವುಗಳ ಗುಣಮಟ್ಟ ಸುಧಾರಿಸಲು ಕೆಲವು ಕಾಲ ಬೇಕು ಎನ್ನುತ್ತಾರೆ ತಜ್ಞರು.
ಹಿಂದೆ ಬ್ಯಾಂಕಿಂಗ್ ಸರ್ವಿಸ್ ರೆಕ್ರೂಟ್‌ಮೆಂಟ್ ಬೋರ್ಡ್ (ಬಿಎಸ್ಆರ್‌ಬಿ) ಪರೀಕ್ಷೆ ನಡೆಸುತ್ತಿದ್ದಾಗ ಆಯಾ ಪ್ರದೇಶದ ಭಾಷೆಗಳನ್ನು ಅರಿತಿರುವುದೇ ಉದ್ಯೋಗಕ್ಕೆ ಅರ್ಜಿ ಹಾಕುವ ಮೊದಲ ಅರ್ಹತೆ ಆಗಿತ್ತು. ಹಾಗಾಗಿ ಬ್ಯಾಂಕ್‌ಗಳಲ್ಲಿ ಕನ್ನಡಿಗರಿಗೆ ಕೆಲಸ ಸಿಗುತ್ತಿತ್ತು. ಐಬಿಪಿಎಸ್ ವ್ಯವಸ್ಥೆ ಬಂದಮೇಲೆ ಪ್ರಾದೇಶಿಕತೆಯ ಜಾಗದಲ್ಲಿ ಅರ್ಹತೆ ಅನ್ನುವ ಮಾನದಂಡ ತರಲಾಯಿತು. ಪರೀಕ್ಷೆಗಳು ಅಖಿಲ ಭಾರತ ಮಟ್ಟದಲ್ಲಿ ನಡೆಯುವುದರಿಂದ ಹುದ್ದೆಗೆ ತಕ್ಕ ವಿದ್ಯಾರ್ಹತೆ ಇದ್ದವರೆಲ್ಲ ಅರ್ಜಿ ಹಾಕಬಹುದು. ಇದರ ಪರಿಣಾಮ ಬ್ಯಾಂಕ್‌ಗಳಲ್ಲಿ ಕ್ಲಾರ್ಕ್ ಹುದ್ದೆಗೂ ಕನ್ನಡ ಬಾರದ ಪರ ಪ್ರಾಂತದವರು ಬರುತ್ತಿದ್ದಾರೆ.
ಇಲ್ಲಿ ನಾವು ಗಮನಿಸಬೇಕಾದ ಸಂಗತಿಯೊಂದಿದೆ. ಬ್ಯಾಂಕಿಂಗ್, ವಿಮೆ, ಸಿಬ್ಬಂದಿ ಆಯ್ಕೆ ಸಮಿತಿಗಳು (ಎಸ್ಎಸ್‌ಸಿ) ನಡೆಸುವ ಎಲ್‌ಡಿಸಿ ಮತ್ತು ಯುಡಿಸಿ ಪರೀಕ್ಷೆಗಳಲ್ಲಿ ಕೇಳುವ ಪ್ರಶ್ನೆ ಯಾವ ಭಾಷೆಯಲ್ಲಿದ್ದರೂ ಉತ್ತರಿಸುವವರಿಗೆ ಅತಿ ಕ್ಷಿಪ್ರವಾಗಿ ಉತ್ತರಿಸುವ ಸಾಮರ್ಥ್ಯ ಇರಲೇಬೇಕು. ಗಣಿತ (ನ್ಯೂಮರಿಕಲ್ ಎಬಿಲಿಟಿ), ಸಾಮಾನ್ಯ ಜ್ಞಾನ, (ಟೆಸ್ಟ್ ಆಫ್ ರೀಸನಿಂಗ್) ಮತ್ತು ವೇಗ ನಿಷ್ಕರ್ಷಗಳೆಂದು (ಆ್ಯಪ್ಟಿಟ್ಯೂಡ್ ಟೆಸ್ಟ್) ಮೂರು ವಿಭಾಗಗಳಲ್ಲಿ ಹೆಚ್ಚು ಪ್ರಶ್ನೆಗಳಿಗೆ ನಿಗದಿತ ಸಮಯದಲ್ಲಿ ಉತ್ತರಿಸಿದರಷ್ಟೇ ಅವಕಾಶ. ಸಾಮಾನ್ಯ ಇಂಗ್ಲಿಷ್ ಪರೀಕ್ಷೆಯಲ್ಲೂ ಕನಿಷ್ಠ ಅಂಕ ಪಡೆಯಬೇಕಾಗುತ್ತದೆ. ಅಂದರೆ, ಇಂಗ್ಲಿಷ್ ಗೊತ್ತಿದ್ದರೆ ಸಾಕು ಎಲ್ಲವೂ ಸುಲಭ. ಈಗಸಂದರ್ಶನ ಕೂಡ ರದ್ದಾಗಿರುವುದರಿಂದ ಕನಿಷ್ಠ ವಿದ್ಯಾರ್ಹತೆ ಇದ್ದರೆ, ಯಾವುದೇ ರಾಜ್ಯದವರಾದರೂ ಅರ್ಜಿ ಹಾಕಬಹುದು. ಇಲ್ಲಿ ಕೇಳಲಾಗುವ ಪ್ರಶ್ನೆಗಳು ಆಬ್ಜೆಕ್ಟಿವ್ ಆಗಿರುವುದರಿಂದ ಸರಿ ಉತ್ತರ ಇರುವ ಆಯ್ಕೆಗೆ ಗುರುತು ಮಾಡುವುದಷ್ಟೇ ಆಗಿರುತ್ತದೆ. ಈ ಬಗೆಯ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಾದೇಶಿಕ ಭಾಷೆಗಳಿಗಿಂತಲೂ ಇಂಗ್ಲಿಷ್ ಹೆಚ್ಚು ಅನುಕೂಲಕರ.
ಸ್ಥಳೀಯರಿಗೆ ಕೆಲಸ ಸಿಗಬೇಕೆಂದರೆ, ಕೇಂದ್ರ ಸರ್ಕಾರದ ಎಲ್ಲ ಅಧೀನ ಸಂಸ್ಥೆಗಳ ಕೆಳ ಹಂತದ ಹುದ್ದೆಗಳನ್ನು ಆಯಾ ರಾಜ್ಯದವರಿಗೇ ಮೀಸಲು ಇರಿಸಬೇಕಾಗುತ್ತದೆ. ಎಲ್ಲ ನೇಮಕಾತಿ ಪರೀಕ್ಷೆಗಳು ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿರುವ ಎಲ್ಲ ಭಾಷೆಗಳಲ್ಲೂ ನಡೆಯುವುದರ ಜೊತೆಗೆ ಆಯಾ ರಾಜ್ಯದ ಆಡಳಿತ ಭಾಷೆಯನ್ನು 10ನೇ ತರಗತಿಯವರೆಗೆ ಒಂದು ಭಾಷೆಯಾಗಿ ಓದಿರುವುದನ್ನು ಕಡ್ಡಾಯ ಮಾಡಬೇಕು. ಸ್ಥಳೀಯ ಭಾಷೆಯನ್ನು ಓದದವರಿಗೆ ಭಾಷಾ ಜ್ಞಾನವನ್ನು ಪರೀಕ್ಷಿಸುವ ಲಿಖಿತ ಪರೀಕ್ಷೆ ನಡೆಸುವುದರ ಜೊತೆಗೆ ಸಂದರ್ಶನವೂ ಇರಬೇಕು.
ಕೇಂದ್ರ ಸರ್ಕಾರವು ಹಿಂದಿ, ಇಂಗ್ಲಿಷ್ ಜೊತೆಗೆ ಇತರ ಭಾರತೀಯ ಭಾಷೆಗಳಲ್ಲೂ ಇತ್ತೀಚೆಗೆ ಪ್ರಕಟಣೆ ನೀಡುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಆದರೆ, 8ನೇ ಶೆಡ್ಯೂಲ್‌ನಲ್ಲಿರುವ ಎಲ್ಲ ಭಾಷೆಗಳನ್ನು ಬಳಸುತ್ತಿಲ್ಲ ಎಂಬುದು ಅಪಾಯಕಾರಿ ಬೆಳವಣಿಗೆ. ಬಹಳಷ್ಟು ಸಂದರ್ಭಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ಸರ್ಕಾರ ತಾರತಮ್ಯ ನಡೆಯನ್ನು ಬಿಟ್ಟು, ಎಲ್ಲ ವೆಬ್ ಮತ್ತು ಪ್ರಕಟಣೆಗಳಲ್ಲಿ 8ನೇ ಶೆಡ್ಯೂಲ್‌ನಲ್ಲಿರುವ ಎಲ್ಲ ಭಾಷೆಗಳನ್ನೂ ಬಳಸುವಂತೆ ನೀತಿಯನ್ನು ರೂಪಿಸಿ ಆದೇಶ ಹೊರಡಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.