ADVERTISEMENT

ಸಂಗತ | ನ್ಯಾಯವೂ ಅದರ ಭಾಷೆಯೂ

ಎಲ್ಲ ವಲಯಗಳಲ್ಲಿನ ಪ್ರಜೆಯ ಭಾಷಾ ಹಕ್ಕನ್ನು ಯಾರೂ ಕೇಳದಾಗಿದ್ದಾರೆ

ಡಿ.ಎಸ್.ನಾಗಭೂಷಣ
Published 26 ನವೆಂಬರ್ 2021, 20:25 IST
Last Updated 26 ನವೆಂಬರ್ 2021, 20:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಕಲಾಪ: ಕನ್ನಡಕ್ಕೆ ಸಲ್ಲುವುದೇ ನ್ಯಾಯ?’ ಎಂಬ ಕೆ.ಬಿ.ಕೆ. ಸ್ವಾಮಿ ಅವರ ಲೇಖನವು (ಪ್ರ.ವಾ., ನ. 23) ನಮ್ಮ ನ್ಯಾಯಾಂಗದಲ್ಲಿ ಸ್ಥಳೀಯ ಭಾಷೆಯನ್ನು ಬಳಸದೆ ಸಾಮಾನ್ಯ ಪ್ರಜೆಯ ಒಂದು ಪ್ರಜಾಸತ್ತಾತ್ಮಕ ಹಕ್ಕನ್ನು ನಿರಾಕರಿಸಲಾಗುತ್ತಿರುವ ವಿದ್ಯಮಾನದ ವಿಪರ್ಯಾಸ- ವಿರೋಧಾಭಾಸಗಳ ಮೇಲೆ ವಿಶೇಷ ಬೆಳಕು ಚೆಲ್ಲುವಂತಿದೆ. ದಿನೇ ದಿನೇ ನಮ್ಮ ಶಿಕ್ಷಣ ಕ್ರಮದಲ್ಲಿ ಕನ್ನಡ ಭಾಷೆಯ ಕಲಿಕೆಯ ಅವಕಾಶಗಳು ಕಮ್ಮಿಯಾಗುತ್ತಿರುವುದರ ಜೊತೆಗೆ ಈ ಕಲಿಕೆಯನ್ನೂ ವಿವಿಧ ಕಾನೂನುಗಳ ನೆಲೆಗಳಲ್ಲಿ ಪ್ರಶ್ನಿಸುವ ಪ್ರವೃತ್ತಿ ಹೆಚ್ಚುತ್ತಿರುವ ಕಾಲದಲ್ಲಿ ಇಂತಹ ವಿಶ್ಲೇಷಣೆಗಳು ವಿಚಿತ್ರವಾಗಿಯೂ ಆಶ್ಚರ್ಯಕರವಾಗಿಯೂ ಕಾಣುತ್ತವೆ.

ಕಕ್ಷಿದಾರನ ಭಾಷಾ ಹಕ್ಕನ್ನು ನಿರ್ಲಕ್ಷಿಸಿರುವ ಮತ್ತು ಹೈಕೋರ್ಟಿನಲ್ಲಿ ಕನ್ನಡವನ್ನು ಅಧಿಕೃತ ಕಲಾಪಗಳ ಭಾಷೆಯನ್ನಾಗಿ ಮಾಡಲು ನಮ್ಮ ಸಂವಿಧಾನದಲ್ಲಿ ಅವಕಾಶವಿದ್ದರೂ ಅದು ಅನುಷ್ಠಾನಗೊಳ್ಳದಿರುವ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಆದರೆ ಇದೆಲ್ಲದರ ಹಿಂದಿನ ಬೇರುಮಟ್ಟದ ಕಾರಣಗಳನ್ನು ಗುರುತಿಸದೇ ಹೋಗಿದೆ. ಇದು ನ್ಯಾಯಾಂಗದಲ್ಲಿ ಮಾತ್ರವಲ್ಲ, ಆಧುನಿಕ ಬದುಕಿನ ಎಲ್ಲ ವಲಯಗಳಲ್ಲಿ ಸ್ಥಳೀಯ ಭಾಷೆಯ ಬಳಕೆ ಕಮ್ಮಿಯಾಗಲು ಕಾರಣವಾಗಿದೆ. ಈ ಕಾರಣವೆಂದರೆ, ಕನ್ನಡ ಭಾಷೆ ಆಧುನಿಕ ಬದುಕಿನ ಭಾಷೆಯಾಗಿ ವಿಕಾಸವಾಗದಿರುವುದು. ಇದಕ್ಕೆ ಮೂಲ ಕಾರಣವೆಂದರೆ, ನಾವು ಆಧುನಿಕ ಎಂದು ಅನುಸರಿಸುತ್ತಿರುವ ಆಧುನಿಕ ಜೀವನಕ್ರಮವು ಪಶ್ಚಿಮದ ವಿದ್ಯೆಗಳ ಪರಿಣಾಮಗಳಾಗಿದ್ದು ಕನ್ನಡ ಅವುಗಳ ಪರಿಭಾಷೆಗಳಿಗೆ ಅಪರಿಚಿತವಾಗಿರುವುದು.

ಈ ವಿದ್ಯೆಗಳನ್ನು ಒಂದು ಮಟ್ಟದವರೆಗೆ ಕನ್ನಡ ಭಾಷೆಗೆ ಅನುವಾದಿಸಬಹುದೇ ಹೊರತು, ಅವುಗಳ ಎಲ್ಲ ಚಲನಶೀಲ ರೂಪಗಳನ್ನಲ್ಲ. ಹಾಗೇ ಅನುವಾದ ಯಾವಾಗಲೂ ಅನುವಾದವೇ. ಆದ್ದರಿಂದಲೇ ನಮ್ಮ ಬದುಕು ಕೂಡ ಪಶ್ಚಿಮದ ಅನುಕರಣೆ ಅನ್ನಿಸಿಕೊಂಡಿರುವುದು. ಈ ಬಗ್ಗೆ ನಮಗೇನೂ ಕೀಳರಿಮೆ ಇಲ್ಲದಿರುವುದರಿಂದ ಕಕ್ಷಿದಾರನ ಭಾಷೆಯ ಹಕ್ಕಿನಂತೆಯೇ ಬದುಕಿನ ಇತರೆಲ್ಲ ವಲಯಗಳಲ್ಲಿನ ಪ್ರಜೆಯ ಭಾಷಾ ಹಕ್ಕುಗಳನ್ನೂ ಯಾರೂ ಕೇಳದಾಗಿದ್ದಾರೆ.

ADVERTISEMENT

ನ್ಯಾಯಾಂಗದಲ್ಲಿ ಪ್ರಜೆಯ ಭಾಷಾ ಹಕ್ಕಿನ ಪ್ರಶ್ನೆಯನ್ನೇ ತೆಗೆದುಕೊಂಡರೆ, ಈ ಪ್ರಶ್ನೆಯ ಮೂಲ ಇರುವುದು ನಾವು ಕಟ್ಟಿಕೊಂಡ ರಾಷ್ಟ್ರಪ್ರಭುತ್ವದ ಸ್ವರೂಪ ಮತ್ತು ಅದನ್ನು ನಿರ್ವಹಿಸಲು ನಾವು ರೂಪಿಸಿಕೊಂಡ ಸಂವಿಧಾನ ಪಶ್ಚಿಮದಿಂದ ರಫ್ತು ಮಾಡಿಕೊಂಡಿದ್ದರಲ್ಲಿ ಎಂಬುದು ಗೊತ್ತಾಗುತ್ತದೆ. ಅಂದರೆ ಅಲ್ಲಿಂದ ಅದು ಅಲ್ಲಿನ ಭಾಷೆಯಲ್ಲಿ ಹೆಪ್ಪುಗಟ್ಟಿದ ಪರಿಕಲ್ಪನೆಗಳಲ್ಲಿ ಮತ್ತು ನುಡಿಗಟ್ಟುಗಳಲ್ಲಿ ನಮಗೆ ಬಂದಿದೆ. ಅವೆಲ್ಲ ನಮ್ಮ ಬದುಕಿನ ಸನ್ನಿವೇಶಗಳಲ್ಲಿ ರೂಪುಗೊಂಡ ನಮ್ಮ ಭಾಷೆಯಲ್ಲಿ ವ್ಯಕ್ತವಾಗುವುದು ಕಷ್ಟ. ಏಕೆಂದರೆ ಭಾಷೆ ಎಂಬುದು ಜ್ಞಾನದ ‘ಮಾಧ್ಯಮವಲ್ಲ’, ಬದಲಿಗೆ ಅದೇ ಜ್ಞಾನವಾಗಿರುತ್ತದೆ. ಅಂದರೆ ಜ್ಞಾನ ಮತ್ತು ಭಾಷೆ ಸಹವರ್ತಿಗಳು. ಹಾಗೆಂದೇ ನಮ್ಮ ಸಂವಿಧಾನದ ಅಧಿಕೃತ ಕನ್ನಡಾನು ವಾದ ಬಹುಕಾಲದಿಂದ ಲಭ್ಯವಿದ್ದರೂ ಅದು ಗ್ರಂಥಾಲಯದಾಚೆ ಹೊರಬರಲಾಗಿಲ್ಲ, ಹಾಗೇ ಕಕ್ಷಿದಾರನ ಭಾಷಾ ಹಕ್ಕು ಕೂಡ.

ಇದರ ಪರಿಣಾಮವೆಂದರೆ, ನಮ್ಮದು ಎಲ್ಲರಿಗೂ ಮತದಾನದ ಹಕ್ಕು ಇರುವ ಪ್ರಜಾಸತ್ತೆ ಎನಿಸಿದರೂ ಆ ಹಕ್ಕು ನಿಜವಾಗಿ ಚಲಾವಣೆಯಾಗುವುದು ‘ಕಲಿತವರ’ ರಾಜ್ಯಭಾರದ ಪ್ರಜಾಸತ್ತೆಗಾಗಿ! ಇಲ್ಲಿ ಕಲಿತವರ ಎಂದರೆ ಸ್ಥಳೀಯ ಭಾಷೆ ಕಲಿತವರ ಎಂದಂತೂ ಅಲ್ಲ. ಪ್ರಸಕ್ತ ರಾಷ್ಟ್ರಪ್ರಭುತ್ವದ ಸ್ವರೂಪವನ್ನು ಅರ್ಥ ಮಾಡಿಸುವ ಭಾಷೆಯನ್ನು ಕಲಿತವರು ಎಂದು. ಹಾಗಾಗಿಯೇ ಜನರ ಸಬಲೀಕರಣದ ಹೆಸರಿನಲ್ಲಿ ಈ ರಾಷ್ಟ್ರಪ್ರಭುತ್ವದ ಪಾತ್ರ ನಮ್ಮ ದೈನಂದಿನ ಬದುಕಿನ ಮೂಲೆ ಮೂಲೆಗಳಿಗೂ ಹಬ್ಬುತ್ತಿದ್ದಂತೆ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ನೂಕು ನುಗ್ಗಲು ಹೆಚ್ಚಾಗುತ್ತಿರುವುದು.

ಇಂತಹ ಪರಿಸ್ಥಿತಿಯಲ್ಲಿ ಉನ್ನತ ನ್ಯಾಯಾಂಗದಲ್ಲಿ ಸ್ಥಳೀಯ ಭಾಷೆಯ ಬಗ್ಗೆ ಮಾತನಾಡುವುದು ವ್ಯರ್ಥ ಎಂದೇ ನನಗನ್ನಿಸುತ್ತದೆ. ಹಾಗೆ ನೋಡಿದರೆ ನ್ಯಾಯಾಂಗದ ಕೆಳ ಹಂತಗಳಲ್ಲಿಯೂ ಸ್ಥಳೀಯ ಭಾಷೆ ಹೆಚ್ಚು ಕಾಲ ಉಳಿಯಲಾರದೆಂದೇ ಹೇಳಬೇಕು. ಆದರೆ ಕಲಿತ ಭಾಷೆಯೊದರ ಮೂಲಕ ನಿರ್ವಹಿಸಲ್ಪಟ್ಟ ವ್ಯಾಜ್ಯ ಮತ್ತು ಆ ಮೂಲಕ ದೊರೆಯುವ ನ್ಯಾಯ ಎಂತಹ ಗುಣಮಟ್ಟದ್ದು ಎಂಬ ಪ್ರಶ್ನೆಯನ್ನೂ ನಾವು ಕೇಳಿಕೊಳ್ಳಬೇಕಾಗಿದೆ. ಏಕೆಂದರೆ ಅದು ‘ಕಲಿತ’ ಅನ್ಯರಿಗೆ ನೀಡಲಾದ ಹೊರಗುತ್ತಿಗೆಯ ಮೂಲಕ ದೊರೆತ ‘ರಚಿಸಲ್ಪಟ್ಟ’ ನ್ಯಾಯವಾಗಿರುತ್ತದೆಯೇ ಹೊರತು ನೀನೇ ಸಹಜವಾಗಿ ಪಡಕೊಂಡ ನ್ಯಾಯವಾಗಿರುವುದಿಲ್ಲ. ಹಾಗಾಗಿ ಅದು ಪರಿಣಾಮದಲ್ಲಿ ಅನ್ಯಾಯವಾಗಿರುವ ಸಾಧ್ಯತೆಗಳೂ ಇರುತ್ತವೆ. ಹಾಗೆಂದೇ ನಮ್ಮ ಕೋರ್ಟುಗಳ ಬಗ್ಗೆ ‘ಗೆದ್ದವನು ಸೋತ, ಸೋತವನು ಸತ್ತ’ ಎಂಬ ನಾಣ್ನುಡಿ ಚಲಾವಣೆಗೆ ಬಂದಿರುವುದು.

ಇದಕ್ಕೆ ಮುಖ್ಯ ಕಾರಣ, ನಮ್ಮ ಸಾಮಾನ್ಯ ಜನರ ಬಹುತೇಕ ವ್ಯಾಜ್ಯಗಳು ಸ್ಥಳೀಯ ಭಾಷೆಯ ತೆಕ್ಕೆಗೆ ಸಿಗದ ಕಾನೂನು ಪರಿಭಾಷೆಯ ಗೊಂದಲದಲ್ಲಿ ಹುಟ್ಟಿ ಬೆಳೆಯುವಂತಹವು. ಇದಕ್ಕೆ ಮತ್ತೆ ಕಾರಣ, ಪರಭಾಷೆಯಲ್ಲಿ ಮಾತ್ರ ಕ್ರಿಯಾಶೀಲವಾಗಬಲ್ಲ ವಿಧಿ-ವಿಧಾನ-ಕಾನೂನುಗಳ ಮೂಲಕ ನಮ್ಮ ರಾಷ್ಟ್ರಪ್ರಭುತ್ವವನ್ನು ನಾವು ವಿನ್ಯಾಸಗೊಳಿಸಿಕೊಂಡಿರುವುದು. ಹಾಗಾಗಿ ನಮ್ಮದೇ ಭಾಷೆಯಲ್ಲಿ ನಾವೇ ಪಡೆದುಕೊಳ್ಳಬಹುದಾದ ಸಹಜ ಗುಣಮಟ್ಟದ ನ್ಯಾಯ ಬೇಕೆಂದರೆ ಈ ರಾಷ್ಟ್ರಪ್ರಭುತ್ವದ ಸಂಕೀರ್ಣತೆಯನ್ನು ಸರಳಗೊಳಿಸಿಕೊಳ್ಳುವುದೇ ಆಗಿದೆ. ಇದರ ಮೊದಲ ಹೆಜ್ಜೆ ಎಂದರೆ ರಾಜ್ಯಗಳಿಗೆ ಸ್ವಂತ ಉಸಿರಾಡುವಷ್ಟು ಸ್ವಾಯತ್ತತೆ ಇರುವ ಒಂದು ನಿಜವಾದ ಒಕ್ಕೂಟ ರಾಷ್ಟ್ರದ ರಚನೆಗಾಗಿ ಆಗ್ರಹಿಸುವುದು, ಅಂದರೆ ಪ್ರಭುತ್ವವನ್ನು ನಮ್ಮ ಭಾಷೆ-ನುಡಿಗಟ್ಟಿಗೆ ಪಳಗಿಸಿಕೊಳ್ಳುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.