ADVERTISEMENT

ಸಂಗತ| ಬದುಕೋಣ ವಿಭಜನೆಯ ಮೀರಿ

ಮನುಷ್ಯ ಬಾಹ್ಯಾಡಂಬರಕ್ಕೆ ನೀಡುವಷ್ಟು ಮಹತ್ವವನ್ನು ಆಂತರಿಕ ಸೌಂದರ್ಯಕ್ಕೂ ನೀಡಿದ್ದರೆ ಅವನಿಗೀಗ ಇಂತಹ ಒಂಟಿಭಾವ ಕಾಡುತ್ತಿರಲಿಲ್ಲ!

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 1 ಡಿಸೆಂಬರ್ 2022, 19:21 IST
Last Updated 1 ಡಿಸೆಂಬರ್ 2022, 19:21 IST
Sangatha==02122022
Sangatha==02122022   

ಚರಿತ್ರೆಯ ಅಧ್ಯಯನದಲ್ಲಿ ಕಂಡುಬರುವ ಸಂಗತಿ ಯೆಂದರೆ, ಮನುಷ್ಯ ಸ್ವಭಾವತಃ ಅಲೆಮಾರಿ. ಆಹಾರ ಹುಡುಕಿ ಅಲೆಯುತ್ತಿದ್ದವನು ಮುಂದೆ ಒಂದೆಡೆ ನೆಲೆ ನಿಂತು, ಬಿತ್ತಿಬೆಳೆದು ಕೃಷಿಕಸುಬನ್ನು ಆರಂಭಿಸಿದ. ಸಹಜವಾಗಿ ಎದುರಾಗುತ್ತಿದ್ದ ಪ್ರಕೃತಿ ವೈಪರೀತ್ಯ, ರೋಗರುಜಿನ, ಕಷ್ಟಕಾರ್ಪಣ್ಯಗಳನ್ನು ಮೀರಲು ಶಕ್ತಿಯೊಂದರ ಮೊರೆಹೋದ. ಪ್ರಕೃತಿಯ ಆರಾಧನೆಯೇ ಭಕ್ತಿಯ ಮೂಲವಾಗಿ ನೆಲ, ನೀರು, ಗಾಳಿ, ಸೂರ್ಯಚಂದ್ರರನ್ನು ಪೂಜಿಸಿದ, ಪ್ರಾರ್ಥಿಸಿದ. ಪೂರ್ವಜರ ಬದುಕಿನ ಭರವಸೆಯ ಊರುಗೋಲಾಗಿ ಒದಗಿದ ದೇವರೂ ಮುಂದೆ ಸ್ವಾರ್ಥಸಾಧನೆಗೆ ದಾಳವಾದದ್ದು ಇತಿಹಾಸ.

ಕತೆಯೊಂದರಲ್ಲಿ, ಭೂಲೋಕದ ಮನುಷ್ಯರ ಕರೆಗೆ ಓಗೊಟ್ಟ ಭಗವಂತ ಕುತೂಹಲದಿಂದ ಮನುಷ್ಯ
ಸ್ವರೂಪದ ಅಧ್ಯಯನ ಕೈಗೊಳ್ಳಲು ಧರೆಗಿಳಿದು ಬಂದ. ಬರುವ ಮಾರ್ಗದಲ್ಲಿ ಸ್ವಲ್ಪವೇ ಎತ್ತರದಿಂದ ನಿಂತು ಹಾಗೆಯೇ ನೋಡಿದ. ಕೆಲಸ ಮಾಡದೇ ಕೂತವರು, ಸೋಮಾರಿಗಳಂತೆ ನಿಂತವರು, ಯಾವುದೋ ದಿಗಿಲಲ್ಲಿ ಓಡುವವರು, ನೋವುಂಡವರು, ಭಾರ ಹೊತ್ತವರು, ಬಾಗಿದವರು, ಬೀಗುವವರು, ಗೆದ್ದವರು, ಬಿದ್ದವರು, ಉಳ್ಳವರು, ಇಲ್ಲದವರು, ಭಿಕ್ಷುಕರು, ಅಹಂಕಾರಿಗಳು, ಜ್ಞಾನಿಗಳು, ಅಜ್ಞಾನಿಗಳು, ಕಳ್ಳರು, ಕಳಕೊಂಡವರು, ಯೋಚಿಸುವವರು, ಯಾಚಿಸು ವವರು, ಶಾಂತಿದೂತರು, ಉಗ್ರವಾದಿಗಳು, ನೋಯಿಸುವವರು, ಸಾಯಿಸುವವರು, ಸಾಯಿಸಲು ಹೊಂಚುಹಾಕುವವರು, ಸಾವಿನ ವ್ಯಾಪಾರಿಗಳು, ಮನೆಮುರುಕರು, ಸಂಚುಕೋರರು, ಶಂಕಿತರು, ಸೋಂಕಿತರು, ನರಳುವವರು, ಅಳುವವರು, ಅಳಿಸು ವವರು, ಆಳುವವರು, ಉಳುವವರು, ಕೆಲವೇ ವರ್ಷ ಬದುಕಬಲ್ಲವರು, ಕಂಡೆಕಂಡೆ ಅನ್ನುವಷ್ಟರಲ್ಲಿ ಹೆಣವಾಗಿ ತಾನೇ ಕಟ್ಟಿದ ಮನೆಯಿಂದ ಹೊರಗಾಗ ಬಲ್ಲ ಮನುಷ್ಯನೆಂಬ ವಿಶಿಷ್ಟಜೀವಿಯ ವೈವಿಧ್ಯಮಯ ಸ್ವರೂಪ, ಬಣ್ಣಗಳು... ಎರಡು ಹೊತ್ತಿನ ತುತ್ತಿಗೆ ಪರದಾಡುವವರ ನಡುವೆಯೇ ಸಕಲ ವೈಭವಗಳಲ್ಲಿ ತಿಂದು ತೇಗುತ್ತಾ ಜೀರ್ಣಿಸಿಕೊಳ್ಳಲು ಒದ್ದಾಡುವವರು, ಬದುಕಿಡೀ ತಲೆಯ ಮೇಲೊಂದು ಸೂರು ಕಾಣದವರ ನಡುವೆಯೇ ಹತ್ತಾರು ತಲೆಮಾರು ಕೂತು ತಿಂದರೂ ಕರಗದಷ್ಟನ್ನು ಕೊಳೆಹಾಕುವವರು... ಬಹುಸಂಕೀರ್ಣ ಭೂಮಂಡಲದ ನಿಗೂಢ ಮನುಷ್ಯನ ಸ್ವಭಾವದ ಜಾಡು ಹುಡುಕುತ್ತಾ ಬಂದ ದೇವರೇ ಕೊನೆಗೆ ಕಂಗಾಲಾಗಿ ಹಿಂತಿರುಗಿದ!

ಕಾಲ ಸರಿದಂತೆ ಆವರಿಸಿಕೊಂಡ ದುರಾಸೆ, ದುರ್ಬುದ್ಧಿಗಳಿಂದ ಶಾಂತಿ, ನೆಮ್ಮದಿಗೆ ಭಂಗ ಬಂದು, ಮೋಸ, ವಂಚನೆಗಳ ಪಾಪಪ್ರಜ್ಞೆಯಲ್ಲಿ ಸೃಷ್ಟಿಯಾಗಿದ್ದೇ ಅನಾಗರಿಕತೆ. ಅದರ ಫಲವೇ ಹಸಿವು, ನಿರುದ್ಯೋಗ, ರೋಗ, ಜೀವಭಯ! ಇರುವ ನೆಲ-ನೀರು ಗಾಳಿಯ ಹಾಳುಗೆಡವಿ ಸ್ವಾರ್ಥ, ಧನದಾಹವನ್ನು ಉಸಿರಾಗಿಸಿ ಕೊಂಡು ಬದುಕುತ್ತಿರುವವರ ಕಂಡು ಸಂತರೊಬ್ಬರು ‘ಭೂಮಿ ಸತ್ತರೆ ಉಳಿಯುವುದೆಲ್ಲಿ’ ಅಂತ ಪ್ರಶ್ನಿಸುತ್ತಾರೆ. ಹಿಡಿಮಣ್ಣಿಗೆ ಇಷ್ಟು ತೇವ ಸಿಕ್ಕರೆ ಸಾಕು, ಅಲ್ಲಿ ಜೀವೋತ್ಪತ್ತಿಗೆ! ಅಂತಹ ನೆಲಕೀಗ ಇರವುಂಟೇ? ಅದೀಗ ನಿತ್ಯವೂ ಸಾಯಿಸಲ್ಪಡುತ್ತಿದೆ.

ADVERTISEMENT

ವಿಶ್ವಪರಿಧಿ ವಿಸ್ತರಿಸುತ್ತಿರುವಂತೆ ವಿಜ್ಞಾನ
ಬೆಳೆಯುತ್ತಿದ್ದರೂ ಮನುಷ್ಯನಲ್ಲಿ ಅರಿವು ಮಾತ್ರ ನಿಂತ ನೀರಾಗಿ ಬಗ್ಗಡವಾಗಿ ಕೊಳೆಯುತ್ತಿದೆ. ಈ ಕೊಳಕಲ್ಲಿ ವಿಷಕ್ರಿಮಿಗಳಂತೆ ದ್ವೇಷಾಸೂಯೆಗಳು ಮಾನಸಿಕ ರೋಗವನ್ನು ಸೃಜಿಸುತ್ತಿವೆ. ರೋಗಪೀಡಿತ ಮನಸುಗಳಲ್ಲಿ ಹಣ, ಅಧಿಕಾರ, ಮತಭೇದಗಳೆಲ್ಲವೂ ಹೆಡೆಯೆತ್ತಿ ಮಾನವ ಸಂಬಂಧವನ್ನು ಹಾಳುಗೆಡವುತ್ತಲೇ ಇವೆ. ಜೀವದಯೆ ಮಾಯವಾಗಿದೆ. ಮನುಷ್ಯನ ಜೀವತಣಿಸುವ ಸುಖಕ್ಕಾಗಿ ಇಲ್ಲಿ ಎಲ್ಲವೂ ಇದ್ದರೂ ಮುಖದ ಮೇಲೆ ಗಾಢ ವಿಷಾದವಿದೆ. ಆತ್ಮತೃಪ್ತಿಯ ನಗು ಅರಳುವ ಬದಲು ಅತೃಪ್ತಿಯ ಹೊಗೆ ಹೊರಳುತ್ತಿದೆ. ಅಂತಸ್ತು- ಮಹಲು ಕಟ್ಟಲು ಕೊಡುವಷ್ಟು ಮಹತ್ವವನ್ನು ಮನಸು- ಸಂಬಂಧ ಕಟ್ಟಲು ಕೊಟ್ಟಿದ್ದರೆ ಅವನಿಗೀಗ ಹೊರಗಿನಂತೆ ಅಂತರಂಗದಲ್ಲಿಯೂ ಒಂಟಿಭಾವ
ಕಾಡುತ್ತಿರಲಿಲ್ಲ!

ಋಗ್ವೇದದ ಪುರುಷ ಸೂಕ್ತಿಯಲ್ಲಿ ವಿಶ್ವಸೃಷ್ಟಿಯ ಬಗ್ಗೆ ಹೇಳುವಾಗ, ವಿಶ್ವದಲ್ಲಿ ಖಭೌತ ವಲಯದಲ್ಲಿರುವ ನಿಗೂಢತೆ, ಶಕ್ತಿ ಮನುಷ್ಯನ ಭೌತಿಕ ಶರೀರದಲ್ಲಿಯೂ ಇದೆಯೆಂಬ ಬಗ್ಗೆ ಉಲ್ಲೇಖವಿದೆ. ನಮ್ಮೊಳಗಿನ ಸುಪ್ತ ಇಂದ್ರಿಯಾತೀತ ಶಕ್ತಿಯನ್ನು ಬಳಸಿಕೊಂಡರೆ ಅಮೋಘ ವಾದುದನ್ನೇ ಸಾಧಿಸಬಹುದು. ಆಲೋಚನೆಗೆ ತಕ್ಕಂತೆ ಕೈಯಲ್ಲಿರುವ ಆಯುಧವೊಂದನ್ನು ವಿನಾಶಕ್ಕೂ ವಿಕಾಸಕ್ಕೂ ಬಳಸಬಹುದು. ಹಾಗೆಯೇ ವಿಜ್ಞಾನ- ತಂತ್ರಜ್ಞಾನಗಳು. ಮನುಷ್ಯನ ಜೀವಿತಾವಧಿ ಯನ್ನು ಸದ್ವಿನಿಯೋಗ, ದುರ್ವಿನಿಯೋಗಗಳೆರ
ಡಕ್ಕೂ ಬಳಸಬಹುದು ಅವನ ಆಂತರ್ಯದ ಗುಣಾ ವಗುಣಗಳ ಆಧಾರದ ಮೇಲೆಯೇ. ತಮ್ಮೆಲ್ಲಾ ಆಲೋ ಚನೆಗಳಿಗೆ ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ ಲೇಪ ನೀಡಿ ಹೊಸ ಹುಮ್ಮಸ್ಸಿನಲ್ಲಿ ಒಡಮೂಡುವುದು ಮತ್ತದೇ ಚೈತನ್ಯವನ್ನು ತಲೆಮಾರುಗಳಿಗೆ ಹಂಚುವುದು ಮೊದಲಾಗಬೇಕು.

ನಿಜ, ಬದಲಾವಣೆಯೊಂದೇ ಶಾಶ್ವತ. ಕಾಲ ಉರುಳುತ್ತಿದ್ದಂತೆ ನಾವೆಲ್ಲರೂ ನಮ್ಮ ನಮ್ಮ ಕೆಲಸ ಮುಗಿಸಿ ಎದ್ದು ಹೊರಡಬೇಕಾದ ಹೊತ್ತು ಒಂದು ದಿನ ಬಂದು ನಮ್ಮೆದುರು ನಿಂತು ಬಿಟ್ಟಿರುತ್ತದೆ. ಆಸ್ತಿ, ಹಣ, ಬಣ್ಣ, ರೂಪ, ಜಾತಿ, ಧರ್ಮ, ಲಿಂಗ, ವಯಸ್ಸು, ದೇಶ, ಭಾಷೆ, ಗಡಿಗಳೆಂಬ ಎಷ್ಟೊಂದು ಗೋಡೆಗಳು ನಮ್ಮನ್ನು ವಿಭಜಿಸುತ್ತಿವೆ ಎಂಬುದನ್ನರಿತು, ಅವನ್ನೆಲ್ಲಾ ಮೀರಿದ ವ್ಯಕ್ತಿತ್ವವೊಂದನ್ನು ಬದುಕುವುದು ನಮಗೀಗ ಸಾಧ್ಯವಾಗಬೇಕು. ಪ್ರೀತಿ-ಕರುಣೆಗಳು ಎಲ್ಲರೂ ಸಾಗಿ ಹೋಗಬೇಕಾದ ಹಾದಿಯಾಗಲಿ. ಅದುವೇ ಜೀವದೊಲವಿನ, ಜಗದ ಗೆಲುವಿನ ರಹದಾರಿಯಾಗಲಿ. ವಿಶ್ವವಿಸ್ತಾರ, ಚಲನೆ, ಕಾಲಮಾನಗಳ ತುಲನೆಯಲ್ಲಿ ನಶ್ವರದಂತಿರುವ ನರಜನ್ಮ ತನ್ನ ಕ್ಷಣಕ್ಷಣದ ಇರವನ್ನೂ ಇಲ್ಲಿ ಹೆಮ್ಮೆಯಿಂದ ಸಂಭ್ರಮಿಸಿ ತಣ್ಣಗೆ ತೆರಳುವಂತಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.