ADVERTISEMENT

ಸಂಗತ | ನಕಲಿ ದಾಖಲೆ: ಇರಲಿ ಕಡಿವಾಣ

ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ನಕಲಿ ದಾಖಲೆ ಸೃಷ್ಟಿಸುವ ಜಾಲ ರಾಜ್ಯದಾದ್ಯಂತ ಹರಡಿಕೊಂಡಿದೆ

ಮಲ್ಲಿಕಾರ್ಜುನ ಹೆಗ್ಗಳಗಿ
Published 22 ಮೇ 2023, 0:20 IST
Last Updated 22 ಮೇ 2023, 0:20 IST
   

ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು 2007ರಲ್ಲಿ ‘ಕಾರ್ಮಿಕರ ಕಾರ್ಡ್’ ಯೋಜನೆಯನ್ನು ಆರಂಭಿಸಿದೆ. ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿ 1,28,255 ನೋಂದಾಯಿತ ಕಾರ್ಮಿಕರು ಕಾರ್ಡ್ ಪಡೆದಿದ್ದಾರೆ. ಇಲಾಖೆ ಈಚೆಗೆ ನಡೆಸಿದ ತನಿಖೆಯಲ್ಲಿ, ಇವರಲ್ಲಿ 5,693 ಜನರು ನಕಲಿ ದಾಖಲೆ ಸೃಷ್ಟಿಸಿ ಸೌಲಭ್ಯಗಳನ್ನು ಪಡೆದಿರುವುದು ದೃಢಪಟ್ಟಿರುವುದಾಗಿ ವರದಿಯಾಗಿದೆ (ಪ್ರ.ವಾ., ಮೇ 18). ನಕಲಿ ಕಾರ್ಡ್‌ ಪಡೆದವರ ಸಂಖ್ಯೆ ಜಿಲ್ಲೆಯಲ್ಲಿ ಇನ್ನೂ ಹೆಚ್ಚು ಇರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಹಳಷ್ಟು ಅನುಕೂಲಸ್ಥ ಕುಟುಂಬಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಪಿಎಲ್ ಕಾರ್ಡ್‌ ಪಡೆದುಕೊಂಡಿವೆ. ಬಾಗಲಕೋಟೆ ಜಿಲ್ಲೆಯಲ್ಲಿ 9,000ದಷ್ಟು ಇಂಥ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿದ್ದರ ಬಗ್ಗೆ ನಾಲ್ಕು ತಿಂಗಳ ಹಿಂದೆ ವರದಿಯಾಗಿತ್ತು. ನೋವಿನ ಸಂಗತಿ ಎಂದರೆ, ತಾವು ಸ್ವಾತಂತ್ರ್ಯ ಯೋಧರು ಎಂದು ಹೇಳಿ, ನಕಲಿ ದಾಖಲೆ ಸಲ್ಲಿಸಿ ಪಿಂಚಣಿಯನ್ನು ಕೂಡ ಪಡೆದವರಿದ್ದಾರೆ. ತನಿಖೆ ನಂತರ ಅಂತಹವರಿಗೆ ಈ ಸೌಲಭ್ಯ ರದ್ದಾದ ಸಂಗತಿ ಈಗ ನೆನಪಾಗುತ್ತಿದೆ.

ಸರ್ಕಾರಿ  ಸೌಲಭ್ಯಗಳನ್ನು ಪಡೆಯಲು ನಕಲಿ ದಾಖಲೆ ಸೃಷ್ಟಿಸುವ ಜಾಲಗಳು ರಾಜ್ಯದಾದ್ಯಂತ ಹರಡಿಕೊಂಡಿವೆ. ಸೌಲಭ್ಯಗಳನ್ನು ಕೊಡಿಸುವ ಮಧ್ಯವರ್ತಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಈ ವಂಚನೆಯ ಜಾಲದ ಪಾಲುದಾರರಾಗಿದ್ದಾರೆ.

ADVERTISEMENT

ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರವು ಮನೆಯ ಯಜಮಾನಿಗೆ ಪ್ರತಿ ತಿಂಗಳು ₹ 2,000 ನೆರವು, ನಿರುದ್ಯೋಗಿ ಯುವಕರಿಗೆ ಮಾಸಿಕ ಭತ್ಯೆ, 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಸೌಲಭ್ಯ, ಬಿಪಿಎಲ್‌ ಕುಟುಂಬದ ಸದಸ್ಯರಿಗೆ ತಿಂಗಳಿಗೆ ತಲಾ 10 ಕೆ.ಜಿ. ಅಕ್ಕಿ ನೀಡುವ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸುವುದಾಗಿ ಪ್ರಕಟಿಸಿದೆ. ಈ ಸೌಲಭ್ಯಗಳು ನಿಜವಾದ ಅರ್ಹರಿಗೆ ಮಾತ್ರ ದಕ್ಕುವಂತೆ ಸರ್ಕಾರ ಜಾಗ್ರತೆ ವಹಿಸುವುದು ಅವಶ್ಯ.

ನಕಲಿ ದಾಖಲೆಗಳನ್ನು ಸಲ್ಲಿಸಿ ಕಾರ್ಮಿಕರ ಕಾರ್ಡ್, ಬಿಪಿಎಲ್ ಕಾರ್ಡ್‌ ಹೊಂದಿರುವ ಅನರ್ಹರಿಗೆ ಶಿಕ್ಷೆಯಾದ ನಿದರ್ಶನಗಳು ವಿರಳ. ಅವರ ಕಾರ್ಡ್‌ಗಳನ್ನು ಮಾತ್ರ ರದ್ದುಪಡಿಸಲಾಗಿದೆ. ಮನುಷ್ಯರು ಮೂಲಭೂತವಾಗಿ ಸ್ವಾರ್ಥಿಗಳು. ಕಟ್ಟುನಿಟ್ಟಿನ ಕ್ರಮಗಳಿಲ್ಲದಿದ್ದರೆ ವಂಚನೆಯ ಜಾಲಗಳನ್ನು ರೂಪಿಸುತ್ತಾರೆ. ಆಸ್ತಿ, ಸಂಪತ್ತು ವಿಸ್ತರಣೆಗೆ ಒಳಮಾರ್ಗಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ವೇದಿಕೆಯ ಮೇಲೆ ಬಡವರು, ಅಸಹಾಯಕರ ಬಗ್ಗೆ ಅನುಕಂಪ ವ್ಯಕ್ತಪಡಿಸುವ ಗಣ್ಯರು, ಖಾಸಗಿಯಾಗಿ ಸ್ವಾರ್ಥಿಗಳಾಗಿ ವರ್ತಿಸುತ್ತಾರೆ.

ನಿವೃತ್ತ ಶಿಕ್ಷಕ ಮಿತ್ರರೊಬ್ಬರು ತಿಂಗಳಿಗೆ ₹ 40,000 ಪಿಂಚಣಿ ಪಡೆಯುತ್ತಿದ್ದಾರೆ. ಅವರ ಮಕ್ಕಳು ಉತ್ತಮ ಸ್ಥಿತಿಯಲ್ಲಿದ್ದಾರೆ. ಆದರೆ ಅವರು ವೃದ್ಧಾಪ್ಯ ವೇತನವನ್ನು ಯಾವ ಮುಜುಗರವೂ ಇಲ್ಲದೆ ಪಡೆಯುತ್ತಿದ್ದಾರೆ. ಅವರು ಸಮರ್ಥಿಸಿಕೊಳ್ಳುವ ರೀತಿ ತುಂಬ ವಿಚಿತ್ರವಾಗಿದೆ. ‘ಸರ್ಕಾರ ನನಗೆ ಕೊಡುವ ವೃದ್ಧಾಪ್ಯ ವೇತನವನ್ನು ನನ್ನ ಕುಟುಂಬಕ್ಕೆ ಬಳಸುವುದಿಲ್ಲ. ಬಡವರಿಗೆ, ದೇವಸ್ಥಾನಗಳಿಗೆ ದಾನ ಮಾಡುತ್ತೇನೆ’ ಎನ್ನುತ್ತಾರೆ. ಅಕ್ರಮವಾಗಿ ಸರ್ಕಾರದ ಸೌಲಭ್ಯ ಪಡೆಯುವ ಅನೇಕರು ಇಂತಹುದೇ ಸಬೂಬು ಹೇಳಿ ದಾಟಿಕೊಳ್ಳುತ್ತಿದ್ದಾರೆ.

ಸಂಪತ್ತು ಜನರ ಜೀವನಮಟ್ಟವನ್ನು ನಿರ್ಧರಿಸುತ್ತದೆ. ಹೆಚ್ಚು ಸಂಪತ್ತು ಹೊಂದಿದವರು ಎಲ್ಲ ಮೂಲಗಳ ಸವಲತ್ತುಗಳನ್ನು ಸುಲಭವಾಗಿ ಪಡೆಯುತ್ತಾರೆ, ಬಡವರಿಗೆ ಸವಲತ್ತುಗಳು ಸರಿಯಾಗಿ ಸಿಗುವುದಿಲ್ಲ ಎನ್ನುತ್ತದೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ ವರದಿಯ ದತ್ತಾಂಶ. ಬಡವರಿಗೆ ಸರ್ಕಾರವು ಸವಲತ್ತುಗಳನ್ನು ನೀಡಿದರೂ ಪೂರ್ಣ ಪ್ರಮಾಣದಲ್ಲಿ ಅವುಗಳನ್ನು ಪಡೆದುಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಈ ವರದಿ ವಿಶ್ಲೇಷಿಸಿದೆ.

ಬಡವರಿಗೆ ಮೀಸಲಾದ ಸೌಲಭ್ಯಗಳನ್ನು ಉಳ್ಳವರು ಅಕ್ರಮವಾಗಿ ಪಡೆಯುತ್ತಿರುವ ಸಂಗತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ನಿರ್ಬಂಧಿಸಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಕ್ರಮ ಜಾರಿಗೆ ಬರಬೇಕು. ಇಂಥವರ ಹೆಸರುಗಳನ್ನು ಅವರ ಭಾವಚಿತ್ರ ಸಮೇತ ಪತ್ರಿಕೆಗಳಲ್ಲಿ ಪ್ರಕಟಿಸಬೇಕು. ಇಲ್ಲದಿದ್ದರೆ ಸಿಕ್ಕವರಿಗೆ ಸುರಂಗಿ ಎನ್ನುವಂತೆ ಸರ್ಕಾರದ ಉಚಿತ ಕೊಡುಗೆಯ ಯೋಜನೆಗಳು ಅರ್ಹರಲ್ಲದವರ ಪಾಲಾಗುತ್ತವೆ.

ಆಸ್ಟ್ರೇಲಿಯಾದಲ್ಲಿ ಸರ್ಕಾರಿ ಸೌಲಭ್ಯವನ್ನು ಅಕ್ರಮವಾಗಿ ಪಡೆಯುವುದಕ್ಕೆ ಅವಕಾಶವೇ ಇಲ್ಲ. ಬಡವರಿಗೆ ಮೀಸಲಾದ ಸೌಲಭ್ಯ ಪಡೆಯುವುದನ್ನು ಅಲ್ಲಿ ಜೀವವಿರೋಧಿ ನಡೆ ಎಂದು ಭಾವಿಸಲಾಗುತ್ತದೆ. ಅಕ್ರಮವಾಗಿ ಸರ್ಕಾರಿ ಸೌಲಭ್ಯವನ್ನು ಪಡೆದದ್ದು ಮೇಲ್ನೋಟಕ್ಕೆ ಸ್ಪಷ್ಟವಾದ ತಕ್ಷಣ, ಸೌಲಭ್ಯ ಪಡೆದ ವ್ಯಕ್ತಿಯ ಭಾವಚಿತ್ರ ಮತ್ತು ಆತನ ಒಟ್ಟು ಆದಾಯ ಮೂಲಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ. ಈ ಅಪಮಾನದಿಂದ ಆ ವ್ಯಕ್ತಿ ಸಮಾಜದಲ್ಲಿ ತಲೆಯೆತ್ತಿ ಬದುಕುವುದಕ್ಕೆ ಸಾಧ್ಯವಾಗುವುದಿಲ್ಲ. ಅವರಿಗೆ ಸಾರ್ವಜನಿಕರಂಗದಲ್ಲಿ ಮಾನ್ಯತೆ ಸಿಗುವುದಿಲ್ಲ.

ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಬಡ ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಿಸುವ ಯೋಜನೆ ಜಾರಿಗೆ ತಂದಿದ್ದರು. ಅರಸು ಒಮ್ಮೆ ಧಾರವಾಡ ಜಿಲ್ಲೆಯ ಒಂದು ಹಳ್ಳಿಗೆ ಭೇಟಿ ನೀಡಿದಾಗ, ಗ್ರಾಮದ ನೂರಾರು ಬಡ ಹೆಣ್ಣುಮಕ್ಕಳು ಬಂದು ಅರಸು ಅವರ ಪಾದ ಮುಟ್ಟಿ ನಮಸ್ಕರಿಸಿ, ತಮಗೆ ಸರ್ಕಾರಿ ಸೀರೆ ದೊರೆತಿಲ್ಲ, ಈ ಸೀರೆಗಳೆಲ್ಲ ಶ್ರೀಮಂತರ ಮನೆ ಸೇರಿವೆ ಎಂದು ತಿಳಿಸಿದರು. ಭಾವುಕರಾದ ಅರಸು ಕಣ್ಣಲ್ಲಿ ನೀರು ಬಂದಿತು. ಪರಿಶೀಲಿಸಿದಾಗ, ಆ ಗ್ರಾಮದಲ್ಲಿ 300ಕ್ಕೂ ಹೆಚ್ಚು ಸೀರೆಗಳನ್ನು ಹಂಚಲಾಗಿತ್ತು, ಆದರೆ ಅವೆಲ್ಲ ಉಳ್ಳವರ ಪಾಲಾಗಿದ್ದವು.
    
ಕಾಂಗ್ರೆಸ್‌ ನೇತೃತ್ವದ ಸರ್ಕಾರ ಉತ್ಸುಕತೆಯಿಂದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಆದರೆ ಅವು ಅರ್ಹರಿಗೆ ಸರಿಯಾಗಿ ದಕ್ಕುವಂತೆ ಕಾಳಜಿ ವಹಿಸಬೇಕು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.