‘ದೇವರನಾಡು’ ಕೇರಳದ ಬೆಟ್ಟ ಗುಡ್ಡಗಳ ನಡುವೆ ಸ್ವರ್ಗದ ತುಣುಕಿನಂತಿದ್ದ ವಯನಾಡ್ ಜಿಲ್ಲೆಯಲ್ಲಿ ಜನರ ಬದುಕೀಗ ಅಕ್ಷರಶಃ ನರಕವಾಗಿದೆ. ಭೂಕುಸಿತ, ಪ್ರವಾಹಕ್ಕೆ ಸಿಲುಕಿದವರ ರಕ್ಷಣೆ, ಕಾಣೆಯಾದವರಿಗಾಗಿ ಶೋಧ, ಮೃತದೇಹಗಳ ಪತ್ತೆ ಕಾರ್ಯದಲ್ಲಿ ಸೈನಿಕರು, ಪೊಲೀಸರು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು, ಸ್ವಯಂಸೇವಕರು ಹಗಲಿರುಳೆನ್ನದೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದೆಲ್ಲದರ ನಡುವೆ ಅಲ್ಲಿನ ಪೊಲೀಸರು ಸಾರ್ವಜನಿಕರಿಗೆ ಮಾಡಿರುವ ಮನವಿಯೆಂದರೆ: ‘ದುರಂತ ನಡೆದ ಸ್ಥಳಗಳ ವೀಕ್ಷಣೆಗೆ ದಯಮಾಡಿ ಬರಬೇಡಿ. ಇದರಿಂದ ರಕ್ಷಣಾ ಕಾರ್ಯಕ್ಕೆ ಅಡಚಣೆ ಉಂಟಾಗುತ್ತದೆ’.
ಈ ರೀತಿ ದುರಂತ ನಡೆದ ಸ್ಥಳಗಳ ವೀಕ್ಷಣೆಗೆ ತೆರಳುವುದನ್ನು ಡಾರ್ಕ್ ಟೂರಿಸಂ, ಥಾನಾ ಟೂರಿಸಂ ಅಥವಾ ಕರಾಳ ಪ್ರವಾಸೋದ್ಯಮ ಎಂದು ಕರೆಯಲಾಗುತ್ತದೆ. ಥಾನಾ ಎನ್ನುವ ಪದದ ಮೂಲವು ಗ್ರೀಕ್‌ನ ಥಾನಾಟೋಸ್, ಎಂದರೆ ಸಾವು. ಹಾಗಾಗಿಯೇ ಇದು ಸಾವು ಅಥವಾ ಶೋಕಕ್ಕೆ ಸಂಬಂಧಿಸಿದ ತಾಣಗಳನ್ನು ಸಂದರ್ಶಿಸುವ ಪ್ರವಾಸ. ಬದುಕಿನ ಏಕತಾನತೆಯನ್ನು ಕಳೆದು, ಉಲ್ಲಾಸ ಹೊಂದುವ ಪಯಣದಲ್ಲಿ ಮನರಂಜನೆ ಮುಖ್ಯ ಉದ್ದೇಶವಾದರೂ ಹೊಸತರ ಹುಡುಕಾಟ, ಕಲಿಕೆಯೂ ಅದರಲ್ಲಿ ಸೇರಿವೆ. ಅವರವರ ಅಗತ್ಯ, ಅಭಿರುಚಿ, ಅನುಕೂಲಕ್ಕೆ ತಕ್ಕಂತೆ ಪ್ರವಾಸದಲ್ಲಿಯೂ ಐತಿಹಾಸಿಕ, ಸಾಂಸ್ಕೃತಿಕ, ಶೈಕ್ಷಣಿಕ, ವೈದ್ಯಕೀಯ, ಆಹಾರ... ಹೀಗೆ ಅನೇಕ ಬಗೆ. ಹಾಗೆಯೇ ಡಾರ್ಕ್ ಟೂರಿಸಂ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನಪ್ರಿಯವಾಗಿರುವ ಒಂದು ಬಗೆ. ಇಂತಹ ಪ್ರವಾಸೋದ್ಯಮದ ಉದ್ದೇಶವಾದರೂ ಏನು?
ಜೈಲು, ಸ್ಮಾರಕ, ಯುದ್ಧಭೂಮಿ, ಸಮಾಧಿ ಸ್ಥಳದಂತಹವುಗಳಿಗೆ ಭೇಟಿಯನ್ನು ಈ ಪ್ರವಾಸ ಒಳಗೊಂಡಿರುತ್ತದೆ. ಉದಾಹರಣೆಗೆ, ಸ್ವಾತಂತ್ರ‍್ಯ ಸೇನಾನಿಗಳನ್ನು ಬಂಧಿಸಿಟ್ಟಿದ್ದ ಅಂಡಮಾನಿನ ಸೆಲ್ಯುಲರ್ ಜೈಲು, ಸಾವಿರಾರು ಜನರ ಹತ್ಯೆ ನಡೆದ ಅಮೃತಸರದ ಜಲಿಯನ್‌ವಾಲಾ ಬಾಗ್, ಅನಿಲ ದುರಂತ ಘಟಿಸಿದ ಭೋಪಾಲ್‌ನ ಕಾರ್ಬೈಡ್ ಕಾರ್ಖಾನೆಯಂತಹ ಸ್ಥಳಗಳು ಇದರಲ್ಲಿ ಸೇರುತ್ತವೆ. ಈ ಬಗೆಯ ಪ್ರವಾಸ ಮೇಲ್ನೋಟಕ್ಕೆ ವಿಚಿತ್ರವಾಗಿ ಕಂಡರೂ ಇದು ಜನಪ್ರಿಯವಾಗಲು ಅನೇಕ ಕಾರಣಗಳಿವೆ.
ಎಲ್ಲರೂ ಸಂದರ್ಶಿಸುವ ಮಾಮೂಲು ತಾಣಗಳಿಗಿಂತ ಭಿನ್ನವಾಗಿರುವುದು, ಸಾವಿನ ಜತೆಗೆ ಇರುವ ಸಂಬಂಧದಂತಹ ಸಂಗತಿಗಳು ಅವುಗಳೆಡೆಗಿನ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಚರಿತ್ರೆಯ ಅಧ್ಯಯನದ ದೃಷ್ಟಿಯಿಂದಲೂ ಇಂತಹ ಪ್ರವಾಸ ಮುಖ್ಯವಾದುದು. ಗತಕಾಲದ ದುರಂತಗಳಿಗೆ ಮೂಕಸಾಕ್ಷಿಗಳಂತೆ ನಿಂತಿರುವ ಈ ಸ್ಥಳಗಳಿಗೆ ಭೇಟಿಯಿತ್ತು, ಅವುಗಳ ಬಗ್ಗೆ ಅರಿಯುವುದು ಇತಿಹಾಸಪ್ರಿಯರಿಗೆ ಕಲಿಕೆಯ ಭಾಗವೇ ಆಗಿರುತ್ತದೆ. ಯುದ್ಧದಲ್ಲಿ ಅಥವಾ ಇನ್ಯಾವುದೋ ಕಾರಣಕ್ಕೆ ಬಲಿಯಾದವರಿಗೆ ಗೌರವ ಸಲ್ಲಿಸುವ ಅವಕಾಶವೂ ಸಿಗುತ್ತದೆ. ಹಾಗೆಯೇ ಈ ಸ್ಥಳಗಳು ವೈಯಕ್ತಿಕವಾಗಿ ಆತ್ಮವಿಮರ್ಶೆಗೂ ಸಹಕಾರಿಯಾಗ
ಬಲ್ಲವು. ನಾವು ಇಂದು ಸ್ವತಂತ್ರವಾಗಿ ಜೀವನ ನಡೆಸುತ್ತಿರುವುದಕ್ಕೆ ನಮ್ಮ ಪೂರ್ವಿಕರ ತ್ಯಾಗ, ಬಲಿದಾನ ಕಾರಣವೆಂಬ ಅರಿವೂ ಆಗುತ್ತದೆ. ಇತಿಹಾಸದ ಕರಾಳ ಚಿತ್ರಣವನ್ನು ನೆನೆಯುತ್ತಾ, ಭವಿಷ್ಯದಲ್ಲಿ ಹಾಗಾಗದಂತೆ ಜವಾಬ್ದಾರಿಯಿಂದ ನಡೆಯುವ ಎಚ್ಚರವೂ ಮೂಡುತ್ತದೆ.
ಇವೆಲ್ಲವೂ ಸರಿ. ಆದರೆ ಈ ಕರಾಳ ಪ್ರವಾಸೋದ್ಯಮಕ್ಕೆ ಮತ್ತೊಂದು ಮುಖವೂ ಇದೆ. ದುರಂತಗಳಿಗೆ ಸಾಕ್ಷಿಯಾದ ತಾಣಗಳ ಭೇಟಿಗಷ್ಟೇ ಇದು ಸೀಮಿತವಾಗಿಲ್ಲ. ಬರ, ಪ್ರವಾಹ, ಕಾಳ್ಗಿಚ್ಚು, ಚಂಡಮಾರುತದಂತಹ ನೈಸರ್ಗಿಕ ವಿಪತ್ತುಗಳನ್ನೂ ಇದು ಒಳಗೊಂಡಿದೆ. ಅಮೆರಿಕದಲ್ಲಿ ಕತ್ರಿನಾ ಚಂಡಮಾರುತ ಬೀಸಿದಾಗ, ಅದೆಷ್ಟೋ ಜನ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಆ ಸಂದರ್ಭದಲ್ಲಿ ಕೆಲವರು ಅಪಾಯಕ್ಕೂ ಒಳಗಾಗಿದ್ದು ಸುದ್ದಿಯಾಗಿತ್ತು. ಹಾಗೆಯೇ ಮುಂಬೈ ಮಹಾಮಳೆಯಲ್ಲಿ ಜನ ಪರದಾಡುತ್ತಿದ್ದ ಚಿತ್ರಗಳನ್ನು ಹಿನ್ನೆಲೆಯಾಗಿ ಇರಿಸಿಕೊಂಡು ಕೆಲವು ಯುವಕರು ನಗುತ್ತಾ ರೀಲ್ಸ್ ಮಾಡಿದ್ದಕ್ಕೆ ವಿರೋಧ ಎದುರಿಸಿದ್ದರು. ಹೀಗೆಲ್ಲಾ ಮಾಡಲು ಇರುವ ಪ್ರಮುಖ ಕಾರಣ, ಆದಷ್ಟೂ ಹೆಚ್ಚು ಲೈಕ್‌ಗಳನ್ನು ಪಡೆಯುವ ಬಯಕೆ!
ಸಾಮಾಜಿಕ ಜಾಲತಾಣಗಳಲ್ಲಿ ಈಗ ಸೆಲ್ಫಿ ಮತ್ತು ರೀಲ್ಸ್ ಭರಾಟೆ. ಮರ, ಮನೆ, ಹೂವು, ಉದ್ಯಾನವೆಲ್ಲಾ ಮಾಮೂಲು. ಆದಷ್ಟೂ ಅಪಾಯಕಾರಿ ಜಾಗ, ಚಿತ್ರವಿಚಿತ್ರ ಭಂಗಿಗಳಲ್ಲಿ ರೀಲ್ಸ್ ಮಾಡಬೇಕು. ನೋಡಿದೊಡನೆ ಅಬ್ಬಾ ಎನ್ನುವಂತಿದ್ದರೆ ಲೈಕ್ಸ್, ವ್ಯೂಸ್ ಹೆಚ್ಚು. ಹೀಗಾಗಿ, ರಭಸವಾಗಿ ಹರಿಯುವ ನೀರು, ಬೆಟ್ಟದ ತುದಿ, ಬೀಳುತ್ತಿರುವ ಮರ, ಚಲಿಸುವ ರೈಲು ಎಲ್ಲವೂ ಅವರಿಗೆ ‘ಉತ್ತಮ ಆಯ್ಕೆ’! ಜನರಲ್ಲಿ ಈ ರೀತಿಯ ಪ್ರವೃತ್ತಿ ಹೆಚ್ಚಿಸುವಲ್ಲಿ ಮಾಧ್ಯಮಗಳೂ ಪಾತ್ರ ವಹಿಸುತ್ತವೆ. ‘ನಮ್ಮಲ್ಲಿಯೇ ಮೊದಲು’ ಎಂದು ಬ್ರೇಕಿಂಗ್ ಸುದ್ದಿ ನೀಡುವ ವಾಹಿನಿಗಳಲ್ಲಿ ಈ ರೀತಿಯ ವಿಡಿಯೊ, ಫೋಟೊಗಳಿಗೆ ಎಲ್ಲಿಲ್ಲದ ಬೇಡಿಕೆ.
ಉದ್ದೇಶ ಏನೇ ಇದ್ದರೂ ಇದು ನೋವಿನಲ್ಲಿ ಇರುವವರಿಗೆ, ಮೃತರಿಗೆ ಮತ್ತು ಅವರ ಕುಟುಂಬದವರಿಗೆ ಸಲ್ಲಿಸುವ ಅಗೌರವ. ಸಾವು-ನೋವಿನ ಸುದ್ದಿಯನ್ನು ಜನರಿಗೆ ಮುಟ್ಟಿಸಬೇಕು, ಭೀಕರ ಪರಿಸ್ಥಿತಿಯನ್ನು ತೆರೆದಿಡಬೇಕು ನಿಜ. ಹಾಗೆಂದು ಮಾನವೀಯತೆಯೇ ಇಲ್ಲವಾಗಬಾರದು!
ಸದ್ಯಕ್ಕೆ ಕೇರಳ ಮಾತ್ರವಲ್ಲ ನಮ್ಮಲ್ಲಿಯೂ ಪೊಲೀಸರಿಗೆ ಪ್ರವಾಸಿಗರ ನಿಯಂತ್ರಣ ಕಷ್ಟವಾಗುತ್ತಿದೆ.
ಸುರಿಯುತ್ತಿರುವ ಮಳೆ, ಭೋರ್ಗರೆಯುತ್ತಿರುವ ನದಿಗಳು, ಕುಸಿಯುತ್ತಿರುವ ಬೆಟ್ಟಗಳಿಂದ ಪ್ರವಾಸಿಗರಿಗೆ ತೊಂದರೆಯಾಗುವ ಎಲ್ಲಾ ಸಾಧ್ಯತೆ ಇರುತ್ತದೆ. ಆದ್ದರಿಂದ ಅನಗತ್ಯ ಸಾಹಸಕ್ಕೆ ಮುಂದಾಗದೆ, ಅಗತ್ಯ ಇರುವವರಿಗೆ ಆದಷ್ಟು ನೆರವು ನೀಡೋಣ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.