ADVERTISEMENT

ಸಂಗತ: ದೇಹ ಚಿಗುರಲಿ ಎಲೆ ಎಲೆಯಲ್ಲಿ!

ಮನುಷ್ಯರ ಮೃತದೇಹವನ್ನು ಸಾವಯವ ಗೊಬ್ಬರ ಮಾಡುವ ಪ್ರಕ್ರಿಯೆಗೆ ಚಾಲನೆಯೇನೋ ದೊರೆತಿದೆ. ಆದರೆ...

ಸದಾಶಿವ ಸೊರಟೂರು
Published 5 ಜನವರಿ 2023, 19:45 IST
Last Updated 5 ಜನವರಿ 2023, 19:45 IST
ಸಂಗತ
ಸಂಗತ   

ಅದೊಂದು ದಿನಕರ ದೇಸಾಯಿ ಅವರ ಪದ್ಯ.‌ ಅದರ ಒಂದೆರಡು ಸಾಲುಗಳು ಹೀಗಿವೆ: ‘ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ, ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ; ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದುಬರೆ ಧನ್ಯವಾಯಿತು ಹುಟ್ಟು ಸಾವಿನಲ್ಲಿ’. ಸತ್ತ ಮೇಲೂ ದೇಹ ಸಾರ್ಥಕವಾಗಲಿ ಎಂಬ ಕವಿಯ ಆಶಯದ ಸಾಲುಗಳಿವು.

ಮಕ್ಕಳಿಗೆ ಪದ್ಯ ಬೋಧಿಸುವಾಗ, ದೇಹವು ಗೊಬ್ಬರವಾಗುವುದು ಮತ್ತು ಅದನ್ನು ನಮಗೆ ಬೇಕಾದಲ್ಲಿ ಬಳಸುವುದರ ಬಗ್ಗೆ ನನಗೆ ಸಮರ್ಥವಾಗಿ ವಿವರಿಸಲು ಆಗಿರಲಿಲ್ಲ. ‘ನ್ಯಾಚುರಲ್ ಆರ್ಗ್ಯಾನಿಕ್ ರಿಡಕ್ಷನ್’ ಪ್ರಕ್ರಿಯೆಯನ್ನು ಅಮೆರಿಕದ ನ್ಯೂಯಾರ್ಕ್‌ ಆಡಳಿತವು ಈಚೆಗೆ ಕಾನೂನುಬದ್ಧಗೊಳಿಸಿದೆ. ಈ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ವಿವರಗಳೂ ಲಭ್ಯವಾಗಿವೆ. ಮುಂದೊಮ್ಮೆ ದೇಹವು ಒಂದೊಳ್ಳೆ ಸಾವಯವ ಗೊಬ್ಬರವಾಗಬಹುದು ಎಂಬುದು ಆ ಕವಿಯ ಒಳಗಣ್ಣಿಗೆ ಹೇಗೆ ಹೊಳೆದಿತ್ತೊ!?

‘ನ್ಯಾಚುರಲ್ ಆರ್ಗ್ಯಾನಿಕ್ ರಿಡಕ್ಷನ್’ ಪ್ರಕ್ರಿಯೆ ಹೀಗಿರುತ್ತದೆ. ದೇಹವನ್ನು ಮಣ್ಣು, ಮರದ ಪುಡಿ ಯಂತಹವುಗಳೊಂದಿಗೆ ಕೂಡಿಸಿ ಒಂದೆರಡು ತಿಂಗಳು ಇಡಲಾಗುತ್ತದೆ. ಅದು ಸೂಕ್ಷ್ಮಾಣು ಜೀವಿಯ ವಿಘಟನೆಗೆ ಒಳಗಾಗುತ್ತದೆ. ನಂತರ ಸ್ವಲ್ಪ ಶಾಖ ನೀಡಿ, ಸಂಸ್ಕರಿಸಿ ಅಂತಿಮವಾಗಿ ಗೊಬ್ಬರ ತಯಾರು ಮಾಡಲಾಗುತ್ತದೆ. ಇದಿಷ್ಟು ಪ್ರಕ್ರಿಯೆ.

ADVERTISEMENT

ಒಂದು ದೇಹದಿಂದ 35ರಿಂದ 36 ಚೀಲಗಳಷ್ಟು ಗೊಬ್ಬರ ಲಭ್ಯವಾಗುತ್ತದೆ ಅನ್ನುತ್ತದೆ ಗೊಬ್ಬರ ತಯಾರಿಸುವ ‘ರೀಕಂಪೋಸ್’ ಕಂಪನಿ. ಆದರೆ ಈಗ ಎದ್ದಿರುವ ಚರ್ಚೆ ಗೊಬ್ಬರದ್ದಲ್ಲ ಮತ್ತು ಅದರ ಪರಿಣಾಮದ್ದೂ ಅಲ್ಲ, ನೈತಿಕತೆಯದ್ದು. ನಾಳೆ ಭಾರತದಲ್ಲೂ ಈ ತಂತ್ರಜ್ಞಾನ ಬರಬಹುದಾದ್ದರಿಂದ, ಜಗತ್ತಿನಲ್ಲಿ ಈ ವಿಷಯದ ಕುರಿತು ಆಗುತ್ತಿರುವ ಚರ್ಚೆಗೆ ನಾವು ಕಿವಿಗೊಡಲೇಬೇಕಾಗುತ್ತದೆ.‌

ಅಮೆರಿಕ ಸೇರಿದಂತೆ ಕೆಲವು ದೇಶಗಳ ಧಾರ್ಮಿಕ ಮುಖಂಡರು ದೇಹವನ್ನು ಗೊಬ್ಬರ ಮಾಡುವ ಈ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ವಾದವಿಷ್ಟೆ, ‘ಮಾನವ ದೇಹ ಪವಿತ್ರವಾದದ್ದು. ಅದನ್ನೊಂದು ಕಸವೆಂಬಂತೆ ಪರಿಗಣಿಸಬಾರದು’. ಭಾರತೀಯರು ಹೂಳುವುದು ಮತ್ತು ಸುಡುವುದನ್ನು ಸಂಸ್ಕಾರದ ಒಂದು ಭಾಗವಾಗಿ ಪರಿಗಣಿಸಿರುವಾಗ, ಹೀಗೆ ಗೊಬ್ಬರ ಮಾಡುವುದನ್ನು ಹೇಗೆ ಸ್ವೀಕರಿಸಿಯಾರು ಎಂಬುದು ಪ್ರಶ್ನೆ.

ಉಳಿದ ಜೀವಿಗಳಿಗಿಂತ ಮನುಷ್ಯ ಶ್ರೇಷ್ಠ, ಪವಿತ್ರವಾದವನು ಎಂದು ಹೇಳಿದವರು ಯಾರು? ಪ್ರಕೃತಿಯಲ್ಲಿ ಇರುವ ಎಲ್ಲಾ ಜೀವಿಗಳಿಗೂ ಮಹತ್ವವಿದೆ. ಅದರಂತೆ ಮನುಷ್ಯನೂ ಒಂದು ಜೀವಿ ಅನ್ನುವುದನ್ನು ಪ್ರಕೃತಿಯೇ ನಮಗೆ ಪದೇ ಪದೇ ಖಚಿತಪಡಿಸಿದೆ, ಅರ್ಥ ಮಾಡಿಸಿದೆ. ಆದರೆ ನಾವು ಶ್ರೇಷ್ಠತೆಯ ವ್ಯಸನದ ಗೋಪುರದಿಂದ ಆಚೆ ಬರುತ್ತಿಲ್ಲ.

ಹೂಳುವುದು ಮತ್ತು ಸುಡುವುದಕ್ಕಿಂತ ಗೊಬ್ಬರ ಮಾಡುವುದರಿಂದ ಹೆಚ್ಚು ಲಾಭಗಳಿವೆ, ಸುಡುವುದರಿಂದ ಒಂದು ಟನ್ ಇಂಗಾಲ ಪರಿಸರ ಸೇರುತ್ತದೆ ಎನ್ನುತ್ತಾರೆ ತಜ್ಞರು. ಹೆಚ್ಚು ಜನಸಂಖ್ಯೆ ಇರುವ ಭಾರತದಂತಹ ದೇಶದಲ್ಲಿ ಹೂಳುವುದಕ್ಕೆ ಜಾಗದ ಸಮಸ್ಯೆ ಕಾಡಬಹುದು. ಆದರೂ ನಮ್ಮಲ್ಲಿ ನಂಬಿಕೆ ಮತ್ತು ಧಾರ್ಮಿಕ ವಿಧಿವಿಧಾನಕ್ಕೆ ಹೆಚ್ಚು ಮಹತ್ವ ಕೊಡುವುದರಿಂದ ಈ ಪ್ರಕ್ರಿಯೆಯನ್ನು ಬಹುಶಃ ಹೆಚ್ಚಿನ ಜನ ಒಪ್ಪಿಕೊಳ್ಳಲಾರರು. ಆದರೆ ದೇಹ ಸುಮ್ಮನೆ ವ್ಯರ್ಥವಾಗಿ ಹೋಗುವುದು ನಷ್ಟವಲ್ಲವೆ?

ನಮ್ಮ ಪ್ರೀತಿಪಾತ್ರರು ನಮ್ಮನ್ನು ಅಗಲಿದಾಗ ಅವರನ್ನು ಸುಟ್ಟು ಬೂದಿ ಮಾಡಿ ಅದನ್ನು ಹರಿಯುವ ನೀರಿನಲ್ಲಿ ಹಾಕಿ, ಇಲ್ಲವೆ ಒಂದು ಸಮಾಧಿ ಮಾಡಿ ಪೂಜಿಸುವುದಕ್ಕಿಂತ ಗೊಬ್ಬರ ಮಾಡಿಕೊಂಡು ನಮ್ಮ ಮನೆಯ ಮುಂದಿನ ಗಿಡಕ್ಕೊ, ತೋಟದ ಮರಕ್ಕೊ ಹಾಕಿದರೆ ಮರದ ಪ್ರತೀ ಎಲೆಯಲ್ಲೂ ಚಿಗುರಿನಲ್ಲೂ ಹೂವಿನಲ್ಲೂ ಅವರನ್ನು ಕಾಣಬಹುದು. ಒಂದು ಜೀವವೇ ನಮ್ಮ ಜೊತೆಗಿರುವ ಭಾವ. ನಮ್ಮೊಂದಿಗೆ ಆ ಗಿಡ ಮರಗಳೂ ಬೆಳೆಯುವುದರಿಂದ ಒಂದು ವಿಶಿಷ್ಟ ಆಪ್ತಭಾವ ನಮ್ಮನ್ನು ಆವರಿಸಿಕೊಳ್ಳುತ್ತದೆ. ಎಂತಹ ಅವಕಾಶವಲ್ಲವೇ?

‘ನನ್ನ ದೇಹವನ್ನು ಸುಟ್ಟು, ಬೂದಿಯನ್ನು ನದಿಗೆ ಚೆಲ್ಲಿ’, ‘ನೆಲದಲ್ಲಿ ಹೂಳಿರಿ’ ಎಂದೆಲ್ಲ ಮರಣಪತ್ರದಲ್ಲಿ
ಬರೆಯುವುದಕ್ಕಿಂತ, ‘ನನ್ನ ದೇಹವನ್ನು ಗೊಬ್ಬರ ಮಾಡಿ ಮನೆಯ ಮುಂದಿನ ಮರ ಗಿಡಗಳಿಗೆ ಊಟ ಹಾಕಿ. ನಾನು ಎಲೆಯಾಗಿ ನಿಮ್ಮನ್ನು ನೋಡುತ್ತೇನೆ. ಹೂವಾಗಿ ಖುಷಿ‌ ಕೊಡುತ್ತೇನೆ’ ಎಂದು ಬರೆದಿಟ್ಟು ಹೋಗುವ ದಿನಗಳು ಬರಬಹುದೇ? ಬಂದರೆ ಸಾವು ಕೂಡ ಸಾರ್ಥಕವಾಗುವ ಕ್ಷಣ ಅದು.

ಸತ್ತ ಮೇಲೆ ಮಣ್ಣಾಗು ಅನ್ನುವುದು ಇನ್ನುಮೇಲೆ ಹಳೆಯ ಮಾತಾಗಬಹುದು. ಸತ್ತ ಮೇಲೆ ಗೊಬ್ಬರವಾಗು ಅನ್ನುವುದು ಸಾರ್ಥಕತೆಯ ಮಾತು. ‘ಸತ್ತ ಮೇಲಾದರೂ ದೇಹ ಸೇವೆಗೆ ನಿಲಲಿ’ ಎಂಬ ಕವಿಯ ಮಾತು ಎಷ್ಟೊಂದು ಅರ್ಥಪೂರ್ಣವಾಗಿದೆ.
ಸತ್ತ ಮೇಲೆ ಬೇರೆ ಏನಿರುತ್ತದೆ ಸೇವೆ ಮಾಡಲು ದೇಹವಲ್ಲದೆ?

ಇರುವಾಗ ಸ್ವಾರ್ಥದಲ್ಲಿ ಮುಳುಗುವ ನಾವು, ನಮ್ಮ ದೇಹವನ್ನಾದರೂ ಗಿಡಮರಗಳಿಗೆ ಹಂಚಿ ಹೋಗೋಣ. ‘ನೀ ಯಾರಿಗಾದೆ ಎಲೆ ಮಾನವಾ?’ ಅನ್ನುವ ಪ್ರಶ್ನೆಗೆ ‘ನಾನು ಚಿಗುರಿಗಾದೆ, ಎಲೆಗಾದೆ, ಹೂವಿಗಾದೆ ಮತ್ತು ತಿನ್ನುವ ಆಹಾರಕೂ ಆದೆ’ ಎನ್ನಬಹುದು ನಮ್ಮ ದೇಹ, ನಮ್ಮ ಉಸಿರು ಹೋದ ಬಳಿಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.