ADVERTISEMENT

ಸಂಗತ | ಶೌಚ ವ್ಯವಸ್ಥೆ: ಮುಗಿಯದ ಸವಾಲು

ಮಾನವತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿಯಿಂದ ನೆಲದಡಿಯ ನೀರು ಕಲುಷಿತಗೊಂಡಿದ್ದು ಸಮಸ್ಯೆ ಗಂಭೀರ ಸ್ವರೂಪ ತಾಳುತ

ಗುರುರಾಜ್ ಎಸ್.ದಾವಣಗೆರೆ
Published 18 ನವೆಂಬರ್ 2022, 20:44 IST
Last Updated 18 ನವೆಂಬರ್ 2022, 20:44 IST
1
1   

ಶಾಲೆಯೊಂದರ ವಿಜ್ಞಾನ ಚರ್ಚಾ ಸ್ಪರ್ಧೆಯ ಉದ್ಘಾಟನೆಗೆಂದು ಬೆಂಗಳೂರಿನ ಉತ್ತರ ಭಾಗದ ಹಳ್ಳಿಯೊಂದಕ್ಕೆ ಹೋದಾಗ, ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆಯೇ ಶೌಚ ಗುಂಡಿಯ ವಾಸನೆ ರಪ್ಪೆಂದು ಮೂಗಿಗೆ ರಾಚಿತು. ‘ಏನಿದು ವಾಸನೆ?’ ಎಂದು ಮುಖ್ಯ ಶಿಕ್ಷಕರನ್ನು ಕೇಳಿದಾಗ ‘ಸರ್, ಶಾಲೆಯಲ್ಲೇನೂ ಸಮಸ್ಯೆ ಇಲ್ಲ. ಇಲ್ಲೇ ಪಕ್ಕದಲ್ಲಿ ಸಾಮೂಹಿಕ ಶೌಚಾಲಯ ಕಟ್ಟಿದ್ದಾರೆ, ಅಲ್ಲಿ ನೀರಿನ ವ್ಯವಸ್ಥೆ ಇಲ್ಲ, ಅದಕ್ಕೇ ಈ ವಾಸನೆ, ಗಾಳಿ ಬಂದಾಗ ಮಾತ್ರ ವಾಸನೆ ಬರುತ್ತೆ, ಇಲ್ಲದಿದ್ರೆ ಇಲ್ಲ’ ಎಂದರು. ‘ಶಾಲೆಯ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಎಲ್ಲಿಂದ’ ಎಂದದ್ದಕ್ಕೆ, ಎದುರಿಗೇ ಇದ್ದ ಬೋರ್‌ವೆಲ್ ಕಡೆ ಕೈ ತೋರಿಸಿದರು. ‘ಅದರಲ್ಲಿ ನೀರು ಇದೆಯಾ’ ಎಂದು ಕೇಳಿದ್ದಕ್ಕೆ, ‘ಇದೆ, ಆದ್ರೆ ಕುಡಿಯಲು ಚೆನ್ನಾಗಿಲ್ಲ, ಶೌಚಾಲಯಗಳಿಗೆ ಬಳಸುತ್ತೇವೆ’ ಎಂದರು.

ಸಮಸ್ಯೆ ಇರುವುದೇ ಇಲ್ಲಿ. ಅಸಮರ್ಪಕ ಶೌಚ ನೈರ್ಮಲ್ಯ ವ್ಯವಸ್ಥೆಯಿಂದಾಗಿ ಅಂತರ್ಜಲ ಕಲುಷಿತ ಗೊಳ್ಳುತ್ತಿರುವುದು ವಿಶ್ವದಾದ್ಯಂತ ವರದಿಯಾಗಿದೆ. ಮಾನವತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿಯಿಂದ ನೆಲದಡಿಯ ನೀರು ಕಲುಷಿತಗೊಂಡಿದ್ದು ಸಮಸ್ಯೆ ಗಂಭೀರ ಸ್ವರೂಪ ತಾಳುತ್ತಿದೆ.

ವಿಶ್ವದ ಜನಸಂಖ್ಯೆ 800 ಕೋಟಿ ತಲುಪಿದೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ 360 ಕೋಟಿ ಜನರಿಗೆ ಸುರಕ್ಷಿತ ಶೌಚ ನೈರ್ಮಲ್ಯ ವ್ಯವಸ್ಥೆ ಇಲ್ಲ ಎಂಬ ವರದಿಯು ಆಳುವ ಸರ್ಕಾರಗಳನ್ನು ಹೈರಾಣ ಮಾಡಿಹಾಕಿದೆ. ಈ ನಡುವೆ ಮತ್ತೊಂದು ವಿಶ್ವ ಶೌಚಾಲಯ ದಿನಾಚರಣೆ (ನ. 19) ಬಂದಿದೆ. ಮನುಷ್ಯ ತ್ಯಾಜ್ಯದಿಂದ ಆಗುತ್ತಿರುವ ಅಂತರ್ಜಲ ಮಾಲಿನ್ಯ ಬರಿಗಣ್ಣಿಗೆ ಕಾಣಿಸುವುದಿಲ್ಲ, ಅದು ಹೇಗೆ ಅಲ್ಲಿಗೆ ಸೇರುತ್ತಿದೆ ಮತ್ತು ಕಲುಷಿತಗೊಳಿಸುತ್ತಿದೆ ಎಂಬುದನ್ನು ಎತ್ತಿ ತೋರಿಸುವುದೇ ದಿನಾಚರಣೆಯ ಮುಖ್ಯ ಉದ್ದೇಶ. ಆದ್ದರಿಂದ ಈ ಬಾರಿಯ ‘ವರ್ಲ್ಡ್‌ ಟಾಯ್ಲೆಟ್ ಡೇ’ ಅಭಿಯಾನದ ಧ್ಯೇಯವಾಕ್ಯ ‘ಮೇಕಿಂಗ್ ದ ಇನ್‍ವಿಸಿಬಲ್, ವಿಸಿಬಲ್’.

ADVERTISEMENT

ಒಂಬತ್ತು ವರ್ಷಗಳಿಂದ ವಿಶ್ವ ಶೌಚಾಲಯ ದಿನಾಚರಣೆ ನಡೆಯುತ್ತಿದೆ. ಮನುಷ್ಯನ ಆರೋಗ್ಯ ಸೂಚಕ ಅಂಶಗಳಲ್ಲಿ ಸರಿಯಾದ ನೈರ್ಮಲ್ಯ ವ್ಯವಸ್ಥೆಯೂ ಒಂದು ಎಂದು ಹೇಳುವ 6ನೆಯ ಸುಸ್ಥಿರ ಅಭಿವೃದ್ಧಿ ಗುರಿಯು, ಸುರಕ್ಷಿತ ಶೌಚಾಲಯ ನೈರ್ಮಲ್ಯ ವ್ಯವಸ್ಥೆಯ ಅಗತ್ಯವನ್ನು ವಿಶ್ವಮಟ್ಟದ ಎಲ್ಲ ವೇದಿಕೆಗಳಲ್ಲೂ 7 ವರ್ಷಗಳಿಂದ ಪುನುರುಚ್ಚರಿಸುತ್ತಾ ಬಂದಿದೆ. 2030ರ ವೇಳೆಗೆ ಶೌಚಾಲಯಗಳಿಂದ ನೀರಿನ ಮೂಲಗಳ ಮಾಲಿನ್ಯವನ್ನು ಸಂಪೂರ್ಣ ತಡೆಯಬೇಕಿದೆ.

ಸರ್ವರಿಗೂ ಸಮರ್ಪಕ ಶೌಚಾಲಯ- ನೈರ್ಮಲ್ಯ ವ್ಯವಸ್ಥೆ ಕಲ್ಪಿಸಲು ಇನ್ನು ಎಂಟೇ ವರ್ಷ ಬಾಕಿ ಇದೆ. ಡಿಸೆಂಬರ್ 7- 8ರಂದು ಪ್ಯಾರಿಸ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಶೃಂಗಸಭೆಯಲ್ಲಿ ಶೌಚ ನೈರ್ಮಲ್ಯ ವ್ಯವಸ್ಥೆಯಿಂದ ಅಂತರ್ಜಲ ರಕ್ಷಿಸುವ ಕುರಿತು ಮುಖ್ಯ ಚರ್ಚೆ ನಡೆಯಲಿದೆ.

ವಿಶ್ವದ ಶುದ್ಧ ನೀರಿನ ಅತಿದೊಡ್ಡ ಮೂಲ, ಅಂತರ್ಜಲ. ಕುಡಿಯಲು, ವ್ಯವಸಾಯ, ಉದ್ಯಮ, ಗೃಹ ಬಳಕೆಗೆ ಅವ್ಯಾಹತವಾಗಿ ಇದು ಬಳಕೆಯಾದರೂ ಬರಿದಾಗದ ಅಕ್ಷಯ ಪಾತ್ರೆಯಂತೆ ಕೊಡುತ್ತಲೇ ಇದೆ. ಒಂದು ದಿನ ಇದೂ ಮುಗಿದು ಹೋಗುತ್ತದೆ. ಜನಸಂಖ್ಯೆ ಹೆಚ್ಚಿ, ಬೇಡಿಕೆ ಮಿತಿಮೀರಿದರೆ ಮನುಕುಲದ ಉಳಿವಿಗೆ ಇರುವುದು ಅಂತರ್ಜಲವೊಂದೇ ಎಂಬುದು ತಜ್ಞರ ಮಾತು. ಏಕೆಂದರೆ ಭೂಮಿಯ ಮೇಲಿನ ಬಹುಪಾಲು ನೀರಿನ ತಾಣಗಳು ಈಗಾಗಲೇ ಮಿತಿಮೀರಿ ಮಲಿನಗೊಂಡಿವೆ.

ವಿಶ್ವದಾದ್ಯಂತ ಇಂದಿಗೂ 67 ಕೋಟಿ ಜನ ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ. ನಮ್ಮಲ್ಲಿ 30 ಕೋಟಿ ಮಹಿಳೆಯರಿಗೆ ಸಮರ್ಪಕ ಶೌಚಾಲಯ, ಸ್ನಾನದ ಮನೆಯ ವ್ಯವಸ್ಥೆ ಇಲ್ಲ.

ಎರಡು ವರ್ಷಗಳ ಹಿಂದೆ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯ ವರದಿ ಪ್ರಕಟವಾದಾಗ, ನೈರ್ಮಲ್ಯ ವ್ಯವಸ್ಥೆ ಕಲ್ಪಿಸುವ ಗುರಿಯ ದಾರಿಯಲ್ಲೇ ನಾವಿಲ್ಲ ಎಂದಿದ್ದ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರಸ್, ಗುರಿ ಸಾಧನೆಗೆ ಘೋಷಣೆಯಷ್ಟೇ ಸಾಲದು, ನೈಜ ಕಾಳಜಿ ಇರಬೇಕು ಎಂದಿದ್ದರು. ವಿಶ್ವ ಶೌಚಾಲಯ ದಿನದ ಆಚರಣೆಯ ಜವಾಬ್ದಾರಿ ಹೊತ್ತಿರುವ ವಿಶ್ವಸಂಸ್ಥೆಯ ನೀರಿನ ವಿಭಾಗವು ಸಾರ್ವಜನಿಕ ಆರೋಗ್ಯ, ಆತ್ಮಗೌರವ ಮತ್ತು ವೈಯಕ್ತಿಕ ಸುರಕ್ಷೆ ಕಡೆ ಎಲ್ಲರೂ ದುಡಿಯಬೇಕು ಮತ್ತು ಜನರನ್ನು ಕಾಯಿಲೆಗೀಡು ಮಾಡುವ ಮಾನವತ್ಯಾಜ್ಯವು ನೀರು, ಮಣ್ಣಿಗೆ ಸೇರದಂತೆ ತಡೆಯಲು ಎಲ್ಲರೂ ಶ್ರಮಿಸಬೇಕು ಎಂದಿದೆ.

ನಮ್ಮಲ್ಲಿ 2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ ಮಿಷನ್ ಜಾರಿಗೆ ಬಂದಿತು. ಹತ್ತು ಕೋಟಿ ಗ್ರಾಮೀಣ ಶೌಚಾಲಯ ನಿರ್ಮಾಣದ ಗುರಿ ಅದಕ್ಕಿತ್ತು. ಐದು ವರ್ಷಗಳ ನಂತರ ಗಾಂಧೀಜಿಯ 150ನೇ ಜನ್ಮದಿನದಂದು ನಮ್ಮ ದೇಶ ‘ಬಹಿರ್ದೆಸೆ ಮುಕ್ತ’ ಎಂದು ಘೋಷಿಸಲಾಗಿತ್ತು. ಈಗ ಜಲ ಜೀವನ್ ಮಿಷನ್ ಅಭಿಯಾನದಡಿ 10 ಕೋಟಿ ಗ್ರಾಮೀಣ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಬಾಕಿ ಇರುವ ಕೆಲಸ ಮುಗಿಸಲು ಎರಡನೇ ಹಂತದ ಯೋಜನೆ ಪ್ರಾರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.