ADVERTISEMENT

ಸಂಗತ: ಸಂಸ್ಕೃತ ಭಾಷೆ- ಹೀಗಿದೆ ವಾಸ್ತವಾಂಶ

ಜನಬಳಕೆಯಲ್ಲಿರುವ ಯಾವುದೇ ಭಾಷೆಯಲ್ಲಿ ಬದಲಾವಣೆ ಅನಿವಾರ್ಯ

ಡಾ.ಆರ್.ಲಕ್ಷ್ಮೀನಾರಾಯಣ
Published 26 ಆಗಸ್ಟ್ 2021, 23:30 IST
Last Updated 26 ಆಗಸ್ಟ್ 2021, 23:30 IST
ಜನಬಳಕೆಯಲ್ಲಿರುವ ಯಾವುದೇ ಭಾಷೆಯಲ್ಲಿ ಬದಲಾವಣೆ ಅನಿವಾರ್ಯ
ಜನಬಳಕೆಯಲ್ಲಿರುವ ಯಾವುದೇ ಭಾಷೆಯಲ್ಲಿ ಬದಲಾವಣೆ ಅನಿವಾರ್ಯ   

ಸಂಸ್ಕೃತ ಭಾಷೆಯ ಶ್ರೀಮಂತಿಕೆ, ಹಿರಿಮೆಯ ಬಗ್ಗೆ ಯೋಗಾನಂದ ಬಹಳ ಉತ್ಸಾಹ, ಅಭಿಮಾನಗಳಿಂದ ಬರೆದಿದ್ದಾರೆ (ಸಂಗತ, ಆ. 24). ಸಂಸ್ಕೃತ ಭಾಷೆಯಲ್ಲಿ ರಚಿತವಾಗಿರುವ ಶಾಸ್ತ್ರ ವಿಷಯಗಳು, ಅಡಕವಾಗಿರುವ ಜ್ಞಾನಭಂಡಾರ ಮಹತ್ವದವೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರ ಉಪಯೋಗವನ್ನು ನಾವೆಲ್ಲರೂ ಪಡೆದುಕೊಳ್ಳಬೇಕೆಂಬುದೂ ಸರಿಯೆ.

ಸಂಸ್ಕೃತ ಭಾಷೆಯ ಮೇಲಿನ ಪ್ರೀತಿಯಿಂದ ಅದನ್ನು ಕಲಿಯುವುದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದರೆ ಈಗಾಗಲೇ ವಿಜ್ಞಾನ, ತಾಂತ್ರಿಕ ವಿಷಯಗಳು, ಇನ್ನಿತರ ವಿಷಯಗಳ ಜ್ಞಾನಕ್ಕೆ ಬೆಳಕಿಂಡಿಯಾಗಿರುವ ಇಂಗ್ಲಿಷಿನ ಬದಲಾಗಿಯಾಗಲೀ, ಮಕ್ಕಳ ಸಹಜ ಬೌದ್ಧಿಕ ವಿಕಾಸಕ್ಕೆ ಮಾತೃಕಾ ಸ್ವರೂಪದಲ್ಲಿರುವ ಮಾತೃಭಾಷೆ ಅಥವಾ ಪ್ರಾಂತ್ಯಭಾಷೆಯ ಬದಲಾಗಿಯಾಗಲೀ ಸಂಸ್ಕೃತದ ಕಲಿಕೆ ಖಂಡಿತಾ ಅಲ್ಲ ಮತ್ತು ಆಗಬಾರದು.

ಸಂಸ್ಕೃತ ಎಂದರೇನೆ ಸಂಸ್ಕರಿಸಲ್ಪಟ್ಟದ್ದು ಎಂಬ ಅರ್ಥ ಬಂದದ್ದು, ಜನಭಾಷೆಯಾಗಿದ್ದ ಪ್ರಾಕೃತವು ಪಾಣಿನಿಯ ವ್ಯಾಕರಣದ ನಿಯಮಗಳಿಗೆ ಒಳಪಟ್ಟು ಹಲವಾರು ಸಂಸ್ಕಾರಗಳನ್ನು ಪಡೆದುಕೊಂಡಿತೆಂಬ ಕಾರಣಕ್ಕಾಗಿ. ಎಂದೇ ಸಂಸ್ಕೃತ ಎಂಬ ಹೆಸರು ಬಂದದ್ದು. ಹಾಗೆ ವ್ಯಾಕರಣದ ನಿಯಮಗಳಿಗೆ ಒಳಪಟ್ಟ ಮೇಲೆ ಅದರಲ್ಲಿ ಏನೊಂದು ವ್ಯತ್ಯಾಸವೂ ಆಗಿಲ್ಲ. ‘ಸಂಸ್ಕೃತ ಭಾಷೆ ಸಹಸ್ರಾರು ವರ್ಷಗಳಿಂದ ಬದಲಾಗದೆ ಉಳಿದಿದೆ’ ಎಂಬ ಲೇಖಕರ ಮಾತು ಅದನ್ನೇ ದೃಢಪಡಿಸುತ್ತದೆ. ಒಂದು ಭಾಷೆ ಹಾಗೆ ಸಹಸ್ರಾರು ವರ್ಷ ಬದಲಾಗದೆ ಉಳಿದಿದೆ ಎಂದರೆ ಅದು ಜನವ್ಯವಹಾರದಲ್ಲಿ ಉಳಿದಿಲ್ಲ ಮತ್ತು ಅದು ಯಾರ ಮಾತೃಭಾಷೆಯೂ ಆಗಿ ಉಳಿದಿಲ್ಲ ಎಂದೇ ಅರ್ಥ.

ADVERTISEMENT

ಜನಬಳಕೆಯಲ್ಲಿರುವ ಯಾವುದೇ ಭಾಷೆಯಲ್ಲಿ ಬದಲಾವಣೆ ಅನಿವಾರ್ಯ. ವ್ಯಾಕರಣದ ನಿಯಮಗಳನ್ನು ಜನಭಾಷೆ ಮೀರುತ್ತದಾದ ಕಾರಣ, ಜನರಾಡುವ ಭಾಷೆ ಹೀಗಿರಬೇಕೆಂದು ಹೇಳದೆ, ಜನರು ಆಡುತ್ತಿರುವ ಭಾಷೆಗೆ ವ್ಯಾಕರಣ
ವನ್ನು ವ್ಯಾಕರಣಕಾರರು ಕಾಲದಿಂದ ಕಾಲಕ್ಕೆ ರಚಿಸುತ್ತ ಹೋಗುತ್ತಾರೆ. ಹಾಗೆ ಭಾಷೆ ಬದಲಾಗದೆ ಉಳಿಯುವುದು ಅದರ ಶ್ರೇಷ್ಠತೆಯೂ ಅಲ್ಲ, ಅಪೇಕ್ಷಣೀಯವೂ ಅಲ್ಲ. ಯಾವತ್ತಾದರೂ ಸಂಸ್ಕೃತ ಜನಬಳಕೆಯಲ್ಲಿತ್ತೇ ಎಂಬುದೇ ಅನುಮಾನ. ಜನಬಳಕೆಯಲ್ಲಿದ್ದ ಭಾಷೆಗಳು ಪ್ರಾಕೃತಭಾಷೆಗಳು. ಮುಂದೆ ಇವು ಸಂಸ್ಕರಣಕ್ಕೆ ಒಳಗಾದುವು. ಹಾಗೆ ಜನಬಳಕೆಯಲ್ಲಿದ್ದದ್ದೇ ಸಂದೇಹವಾಗಿರುವ, ಯಾರ ಮಾತೃಭಾಷೆಯೂ ಯಾವ ಕಾಲಕ್ಕೂ ಬಹುಶಃ ಆಗಿರದ ಸಂಸ್ಕೃತವನ್ನು ಇಂದು ಮತ್ತೆ ಜನಬಳಕೆಯ ಭಾಷೆ ಮಾಡುತ್ತೇವೆಂದು ಹೊರಡುವುದು ಬೆಟ್ಟಕ್ಕೆ ಕಲ್ಲು ಹೊತ್ತಂತೆ. ಮತ್ತು ಅದೊಂದು ವ್ಯರ್ಥ ಸಾಹಸವಲ್ಲ
ದಿದ್ದರೂ ಅನಗತ್ಯ ಪ್ರಯತ್ನ.

ಭಾಷಾ ಸಂಸ್ಥೆಗಳಿಗೆ (ಲ್ಯಾಂಗ್ವೇಜ್ ಇನ್‍ಸ್ಟಿಟ್ಯೂಟ್) ಹೋಗಿ ಕಲಿತರೆ ಇಂಗ್ಲಿಷೂ ಸೇರಿದಂತೆ ಸಂಭಾಷಣೆ ಅಥವಾ ವ್ಯವಹಾರಕ್ಕೆ ಅಗತ್ಯವಾದಷ್ಟನ್ನು ಎರಡು ವರ್ಷಗಳೇಕೆ ಇನ್ನೂ ಕಡಿಮೆ ಅವಧಿಯಲ್ಲೇ ಕಲಿಯಬಹುದು ಎಂಬುದು ಭಾಷಾ ವಿಜ್ಞಾನಿಗಳ ಹೇಳಿಕೆ. ಕೇವಲ ಭಾವೇ ಪ್ರಯೋಗಗಳಿಗೆ ಸೀಮಿತಗೊಂಡ, ಇಲ್ಲವೆ ಕೃದಂತ ರೂಪಗಳ ಹಾಗೂ ಪರಿಮಿತ ಶಬ್ದಗಳ ಬಳಕೆಗೆ ಒಳಪಟ್ಟು ಮತ್ತೂರು, ಹೊಸಳ್ಳಿ ಅಥವಾ ಇನ್ನಿತರ ಒಂದೆರಡು ಪ್ರದೇಶಗಳಲ್ಲಿ ಸಂಸ್ಕೃತವನ್ನು ಜನ ತಮ್ಮ ನಿತ್ಯ ವ್ಯವಹಾರಕ್ಕೆ ಬಳಸುತ್ತಾರೆಂದರೆ ಅಂಥ ಗಿಳಿ ಪಾಠದ ಸಂಸ್ಕೃತದಿಂದ ಏನುತಾನೆ ಉಪಯೋಗ?

ಒಂದು ಜೀವಂತ ಭಾಷೆ ಜನಬಳಕೆಗೆ ಒಳಪಟ್ಟಾಗ ಅದರಲ್ಲಿ ಜನರ ಅನುಭವ ಬೆಳೆದಂತೆಲ್ಲ ಮತ್ತು ಅಗತ್ಯಕ್ಕೆ ತಕ್ಕಂತೆಲ್ಲ ಹೊಸ ಹೊಸ ಶಬ್ದಗಳು ರೂಪುಗೊಳ್ಳುತ್ತ ಹೋಗುತ್ತವೆ, ಸಿದ್ಧ ವ್ಯಾಕರಣದ ನಿಯಮಗಳನ್ನು ಆ ಭಾಷೆ ಮೀರುತ್ತ ಹೋಗುತ್ತದೆ ಎಂಬುದಕ್ಕೆ ಹೆಚ್ಚು ಪುರಾವೆಯೇನೂ ಬೇಕಾಗುವುದಿಲ್ಲ. ಸಹಸ್ರಾರು ವರ್ಷಗಳ ಯಾವುದೇ ದೇಶ ಭಾಷೆಯ ಇತಿಹಾಸವೂ ಅದಕ್ಕೆ ನಿದರ್ಶನವಾಗಬಲ್ಲುದು. ಬುದ್ಧ, ಮಹಾವೀರರ ಕಾಲಕ್ಕೇ ಸಂಸ್ಕೃತ ಜನಬಳಕೆಯಲ್ಲಿರಲಿಲ್ಲ. ಎಂದೇ ಅವರು ಪಾಳಿ ಮತ್ತು ಪ್ರಾಕೃತ ಭಾಷೆಗಳಲ್ಲಿ ತಮ್ಮ ಧರ್ಮಗಳನ್ನು ಬೋಧಿಸಿದರು.

ಸಂಸ್ಕೃತವನ್ನು ಲೀಲಾಜಾಲವಾಗಿ ಮಾತನಾಡಲು ಸಾಧ್ಯವಾಗಿದ್ದರೆ ಹಾಗೆ ಅದು ಜನಬಳಕೆಯಿಂದ ಮರೆಯಾಗಲು ಸಾಧ್ಯವೇ ಇರಲಿಲ್ಲ. ಆ ಕಾಲಕ್ಕೆ ಅದನ್ನು ಬಳಸದಿರಲು ಯಾವ ರಾಜಕೀಯ ಒತ್ತಡವೂ ಇದ್ದಂತಿಲ್ಲ. ಅದಕ್ಕೆ ಕಾರಣವೇನು ಎಂಬ ಬಗ್ಗೆ ಕುತೂಹಲಕ್ಕಾಗಿ ಸಂಶೋಧನೆ ಮಾಡಬಹುದು.

ಏಕಾಗ್ರತೆ, ಧ್ವನಿಶುದ್ಧಿ, ಸಹನಶೀಲತೆಯು ಸಂಸ್ಕೃತ ಕಲಿಕೆಯಿಂದ ಮಕ್ಕಳಲ್ಲಿ ಪ್ರಾಪ್ತವಾಗುತ್ತವೆ ಎಂಬ ಲೇಖಕರ ಹೇಳಿಕೆ ನಿರಾಧಾರವಾದ ಒಂದು ಬೀಸು ಹೇಳಿಕೆ. ನಮ್ಮ ಭಾಷೆಗಳಲ್ಲಿ ಸೇರಿಹೋಗಿರುವ ಸಂಸ್ಕೃತ ಶಬ್ದಗಳನ್ನು ಉಚ್ಚರಿಸುವ ಮಟ್ಟಿನ ಧ್ವನಿಶುದ್ಧಿ ಅದರಿಂದ ಬರಬಹುದು. ಅದರ ಕಠಿಣವಾದ ವ್ಯಾಕರಣ ನಿಯಮಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹನಶೀಲತೆ ಬರುತ್ತದೋ ಇಲ್ಲವೋ ತಿಳಿಯದು. ಆದರೆ ಜ್ಞಾಪಕಶಕ್ತಿ ಬೇಕು ಮತ್ತು ಅದು ಇನ್ನಷ್ಟು ಹೆಚ್ಚಬಹುದೇನೋ. ಏನನ್ನು ಕಲಿಯಬೇಕಾದರೂ ಏಕಾಗ್ರತೆ ಬೇಕೇ ಬೇಕು. ಅದು ಸಂಸ್ಕೃತ ಕಲಿಕೆಯಿಂದ ಬರುತ್ತದೆಂಬುದಕ್ಕೆ ಯಾವ ಪುರಾವೆಯೂ ಇಲ್ಲ. ಶಾಲಾ ಕಾಲೇಜುಗಳಲ್ಲಿ ಸಂಸ್ಕೃತವನ್ನು ಈಗ ಕಲಿಸುತ್ತಿರುವ ರೀತಿಯಲ್ಲಿ ಕಲಿಸುತ್ತಾ ಹೋದರೆ ಅವರೆಂದೆಂದೂ ಸ್ವತಂತ್ರವಾಗಿ ಸಂಸ್ಕೃತದಲ್ಲಿ ನಿರರ್ಗಳವಾಗಿ ಮಾತನಾಡಲು ಅಸಾಧ್ಯ ಎಂಬುದಂತೂ ನಿಜ.

ಸದ್ಯ ಕನ್ನಡಿಗರು ಮೊದಲು ಕನ್ನಡದ ವಿಷಯಕ್ಕೆ ಅತ್ಯುತ್ಸಾಹ ತೋರಿ ಆಪ್ತವಾಗಿಸಿಕೊಳ್ಳಲಿ. ಆಮೇಲೆ ಬೇಕಾದರೆ ಸಂಸ್ಕೃತವನ್ನೂ ಆಪ್ತವಾಗಿಸಿಕೊಳ್ಳಲಿ. ಯಾರು ಬೇಡ ಎನ್ನುತ್ತಾರೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.