ADVERTISEMENT

ಸಂಗತ | ಕಾಲೆಳೆತದ ನಡುವಿನ ಜಯ

ಒಳಮೀಸಲಾತಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ ತೀರ್ಪು, ಸಬೂಬು ಹುಡುಕದೆ ಅದನ್ನು ಜಾರಿ ಮಾಡುವ ಅವಕಾಶವನ್ನು ರಾಜ್ಯ ಸರ್ಕಾರಕ್ಕೆ ಒದಗಿಸಿದೆ

ವಾದಿರಾಜ್
Published 13 ಆಗಸ್ಟ್ 2024, 0:00 IST
Last Updated 13 ಆಗಸ್ಟ್ 2024, 0:00 IST
   

ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ಸಂವಿಧಾನ ಪೀಠ ನೀಡಿರುವ ತೀರ್ಪು, ಈ ಕುರಿತ ಹೋರಾಟವನ್ನು ತಾರ್ಕಿಕ ಅಂತ್ಯದ ಕೊನೆಯ ಮೆಟ್ಟಿಲಿಗೆ ತಂದು ನಿಲ್ಲಿಸಿದೆ. ಅಶಕ್ತ ಸಮುದಾಯವೊಂದು ರಾಜಕೀಯ ಕಾಲೆಳೆತದ ನಡುವೆ ಮೂರು ದಶಕಗಳ ಕಾಲ ನಿರಂತರ ಹೋರಾಟ ನಡೆಸಿ ಕೊನೆಗೂ ಐತಿಹಾಸಿಕ ಜಯ ಪಡೆದುಕೊಂಡಿದೆ.

2004ರಲ್ಲಿ ಬಂದಿದ್ದ ಸುಪ್ರೀಂ ಕೋರ್ಟ್‌ನ ಪಂಚಪೀಠದ ತೀರ್ಪು, ಎರಡು ಮುಖ್ಯ ಕಾರಣಗಳನ್ನು ಮುಂದಿಟ್ಟು, ಒಳಮೀಸಲಾತಿ ಜಾರಿಯನ್ನು ತಡೆಹಿಡಿದಿತ್ತು. ಪರಿಶಿಷ್ಟ ಜಾತಿಗಳೆಂದರೆ, ಅದು ಸಮಾನ ಸುಖದುಃಖ, ಸಂಕಟಗಳಿರುವ ಏಕಸ್ವರೂಪದ ಜಾತಿಗಳ ಪಟ್ಟಿ, ಅದನ್ನು ಮತ್ತೆ ವರ್ಗೀಕರಿಸುವ ಅಗತ್ಯವಿಲ್ಲ ಎನ್ನುವುದು ಒಂದು ಕಾರಣವಾದರೆ, ಸಂವಿಧಾನದ 341ನೇ ವಿಧಿಯು ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ವರ್ಗೀಕರಿಸುವ ಅಧಿಕಾರವನ್ನು ರಾಜ್ಯಗಳಿಗೆ ಕೊಟ್ಟಿಲ್ಲ ಎಂಬುದು ಎರಡನೇ ಕಾರಣ. ‌ಈ ತೀರ್ಪಿನಿಂದಾಗಿ ಆಗಿನ ಅವಿಭಜಿತ ಆಂಧ್ರಪ್ರದೇಶ ಹಾಗೂ ಪಂಜಾಬ್, ಹರಿಯಾಣ ರಾಜ್ಯಗಳು ಜಾರಿ ಮಾಡಿದ್ದ ಒಳಮೀಸಲಾತಿ ರದ್ದಾಗಿತ್ತು.

ಕರ್ನಾಟಕದಲ್ಲಿ ಒಳಮೀಸಲಾತಿ ಹೋರಾಟಕ್ಕೆ ಕಾವು ಬಂದಿದ್ದು 2004ರಲ್ಲಿ ಧರ್ಮಸಿಂಗ್ ನೇತೃತ್ವದ ಸರ್ಕಾರವು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ರಚಿಸಿದಾಗ. ಈ ಆಯೋಗ ಕೆಲಸ ಆರಂಭಿಸುವಾಗ ಕೋರ್ಟ್‌ ತೀರ್ಪು ಬಂದಾಗಿತ್ತು. ಹೀಗಾಗಿ, ಆಯೋಗಕ್ಕೆ ವರ್ಗೀಕರಣದ ಸೂತ್ರವನ್ನು ಕೋರ್ಟ್‌ ತೀರ್ಪಿನ ನೆಲೆಯಲ್ಲಿ ರೂಪಿಸುವ ಹೊಣೆಗಾರಿಕೆಯೂ ಇತ್ತು. ಆದರೆ ಆಯೋಗಕ್ಕೆ ಅಗತ್ಯ ಸಿಬ್ಬಂದಿ, ಹಣಕಾಸಿನ ನೆರವು ಸಿಕ್ಕಿದ್ದು 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ.

ADVERTISEMENT

ಈ ನಡುವೆ, ಆಂಧ್ರಪ್ರದೇಶದ ಒತ್ತಡಕ್ಕೆ ಮಣಿದು ಅಂದಿನ ಯುಪಿಎ ಸರ್ಕಾರ ಒಳಮೀಸಲಾತಿಯ ಮುಂದಿನ ಹಾದಿಯನ್ನು ಪರಿಶೀಲಿಸಲು 2006ರಲ್ಲಿ ನ್ಯಾಯಮೂರ್ತಿ ಉಷಾ ಮೆಹ್ರಾ ಆಯೋಗ ರಚಿಸಿತು. 2008ರಲ್ಲಿ ವರದಿ ಸಲ್ಲಿಸಿದ ಆಯೋಗ, 341ನೇ ವಿಧಿಗೆ ತಿದ್ದುಪಡಿ ತರುವುದೊಂದೇ ದಾರಿ ಎಂದು ಹೇಳಿತು. ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು 2010ರ ಮಹತ್ವದ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಿ, ಮೆಹ್ರಾ ಆಯೋಗದ ಶಿಫಾರಸನ್ನು ತಿರಸ್ಕರಿಸಿತು. ಕೇಂದ್ರ ಸರ್ಕಾರ 2011ರ ಜೂನ್‌ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಮೆಹ್ರಾ ಆಯೋಗದ ಶಿಫಾರಸಿನ ಬಗ್ಗೆ ರಾಜ್ಯಗಳ ಅಭಿಪ್ರಾಯ ಕೇಳಲು ನಿರ್ಧರಿಸಿತು.

ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸಗಢ, ಜಾರ್ಖಂಡ್, ಕರ್ನಾಟಕ, ಹರಿಯಾಣ, ಪಂಜಾಬ್ ಸಮ್ಮತಿಸಿದವು. ಆದರೆ ಕೇರಳ, ಪಶ್ಚಿಮ ಬಂಗಾಳ, ಗುಜರಾತ್ ಸೇರಿದಂತೆ 14 ರಾಜ್ಯಗಳು ವಿರೋಧಿಸಿದವು. ಪರಿಶಿಷ್ಟ ಜಾತಿಗಳ ಜನಸಾಂದ್ರತೆ ಅಧಿಕವಾಗಿರುವ ಬಿಹಾರ, ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು ತಮ್ಮ ಅಭಿಪ್ರಾಯ ರವಾನಿಸಲಿಲ್ಲ. ಕನಿಷ್ಠ 15 ರಾಜ್ಯಗಳ ಸಮ್ಮತಿ ಸಿಗದೇಹೋದದ್ದು ತಿದ್ದುಪಡಿ ತರುವ ವಿಷಯವನ್ನು ನನೆಗುದಿಗೆ ತಳ್ಳಿತು.

ಈ ಸಂದರ್ಭದಲ್ಲೇ 2012ರ ಜೂನ್‌ನಲ್ಲಿ ಸದಾಶಿವ ಆಯೋಗ, ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದ ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತು. 2013ರಿಂದ ಐದು ವರ್ಷ ಪೂರ್ಣ ಬಹುಮತದ ಸರ್ಕಾರ ನಡೆಸಿದ ಸಿದ್ದರಾಮಯ್ಯ ಆಂತರಿಕ ಒತ್ತಡದಿಂದಾಗಿ ಏನೂ ಮಾಡಲಿಲ್ಲ.

ಕಗ್ಗಂಟಾಗಿದ್ದ ಒಳಮೀಸಲಾತಿಯನ್ನು ನವಿರಾಗಿ ಬಿಡಿಸಿ ಬೆಳಕು ಹೊತ್ತಿಸಿದ ಕೀರ್ತಿ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್‌ನ ಪಂಚಪೀಠಕ್ಕೆ ಸಲ್ಲುತ್ತದೆ. 2020ರ ಆಗಸ್ಟ್‌ನಲ್ಲಿ ಹೊರಬಿದ್ದ ಈ ತೀರ್ಪು, ಡಿಸ್ಟ್ರಿಬ್ಯುಟಿವ್‌ ಜಸ್ಟಿಸ್‌ ಮತ್ತು ಸಬ್‌ಸ್ಟ್ಯಾಂಟಿವ್‌ ಈಕ್ವಾಲಿಟಿಯನ್ನು ಆಳವಾಗಿ
ವಿಶ್ಲೇಷಿಸಿ, ಒಳಮೀಸಲಾತಿಗೆ ರಹದಾರಿಯನ್ನು ತೆರೆದಿಟ್ಟಿತು. ಇದೀಗ ಸಂವಿಧಾನ ಪೀಠವು 6:1ರ ಅನುಪಾತದಲ್ಲಿ ಮಿಶ್ರಾ ಪೀಠದ ತೀರ್ಪನ್ನು ಎತ್ತಿ ಹಿಡಿದಿದೆ. 341ನೇ ವಿಧಿಗೆ ತಿದ್ದುಪಡಿ ಅಪ್ರಸ್ತುತ ಎಂದು ಸ್ಪಷ್ಟಪಡಿಸಿ, ರಾಜ್ಯಗಳಿಗೆ ಒಳಮೀಸಲಾತಿ ಜಾರಿ ಮಾಡುವ ಅಧಿಕಾರ ಕೊಟ್ಟಿದೆ.

ಮಿಶ್ರಾ ಪೀಠದ ತೀರ್ಪಿನ ತಿರುಳನ್ನಾಗಲಿ, ಸುಪ್ರೀಂ ಕೋರ್ಟ್ 2023ರಲ್ಲಿ 7 ಸದಸ್ಯರ ಸಂವಿಧಾನ ಪೀಠ ರಚಿಸಿದ್ದಾಗಲಿ, ಕೇಂದ್ರ ಸರ್ಕಾರವೇ ಒಳ ಮೀಸಲಾತಿಯ ಪರವಾಗಿ ವಕಾಲತ್ತು ವಹಿಸಿರುವುದನ್ನಾಗಲಿ ಗಮನಕ್ಕೆ ತಂದುಕೊಳ್ಳದ ರಾಜ್ಯ ಸರ್ಕಾರ, 341ನೇ ವಿಧಿಗೆ ತಿದ್ದುಪಡಿ ತರುವಂತೆ ಈ ವರ್ಷದ ಜ. 17ರಂದು ಕೇಂದ್ರಕ್ಕೆ ಪತ್ರ ಬರೆಯಿತು. ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದ ನ್ಯಾಯಿಕ ಬೆಳವಣಿಗೆಗಳ ಬಗ್ಗೆ ರಾಜ್ಯ ಸರ್ಕಾರ ನಿಗಾ ಇಟ್ಟಿಲ್ಲ ಎಂಬುದು ಆಗ ಬಯಲಾಗಿತ್ತು.

ಇದೀಗ ರಾಜ್ಯ ಸರ್ಕಾರಕ್ಕೆ ಸಬೂಬು ಹುಡುಕದೆ ಒಳಮೀಸಲಾತಿ ಜಾರಿ ಮಾಡುವ ಅವಕಾಶ ಒದಗಿದೆ. ಸದಾಶಿವ ಆಯೋಗದ ವರದಿ ಶೇ 15ರ ಮೀಸಲಾತಿಯನ್ನು ವರ್ಗೀಕರಣ ಮಾಡಿತ್ತು. ಆದರೆ ಈಗ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣ ಶೇ 17ಕ್ಕೆ ಏರಿದೆ. ಬಿಜೆಪಿ ನೇತೃತ್ವದ ಈ ಹಿಂದಿನ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿ ನೇತೃತ್ವದ ಸಂಪುಟ ಉಪಸಮಿತಿ ಶೇ 17ರ ಮೀಸಲಾತಿಯನ್ನು ವರ್ಗೀಕರಿಸಿ ಕೇಂದ್ರಕ್ಕೆ ಕಳುಹಿಸಿತ್ತು. ಈಗ ಸಿದ್ದರಾಮಯ್ಯ ಎತ್ತ ಹೆಜ್ಜೆ ಇಡುತ್ತಾರೆ? ಕಾದು ನೋಡಬೇಕಿದೆ.

ಲೇಖಕ: ಆರ್‌ಎಸ್‌ಎಸ್‌ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.