ADVERTISEMENT

ಸಂಗತ | ಪರೀಕ್ಷೆಗಳ ‘ಪರೀಕ್ಷಾ ಕಾಲ’

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 0:13 IST
Last Updated 29 ನವೆಂಬರ್ 2023, 0:13 IST
.
.   

ರಾಜ್ಯದಲ್ಲಿ ಕೆಲವು ವರ್ಷಗಳಿಂದ ಸರ್ಕಾರಿ ಹುದ್ದೆಗಳ ನೇಮಕಾತಿಗಳಿಗಿಂತ ಅವುಗಳ ಆಯ್ಕೆ ಪ್ರಕ್ರಿಯೆಯ ಗೊಂದಲಗಳೇ ಹೆಚ್ಚು ಸುದ್ದಿ ಮಾಡಿವೆ. ನೇಮಕಾತಿ ಪರೀಕ್ಷಾ ಪ್ರಾಧಿಕಾರಗಳು, ಇಲಾಖಾ ಆಯ್ಕೆ ಸಮಿತಿಗಳು, ಯಾರೊಬ್ಬರೂ ‘ಚಾಪೆಯ ಕೆಳಗೆ ನುಸುಳದಂತೆ’ ಎಷ್ಟೆಲ್ಲ ಎಚ್ಚರ ವಹಿಸಿದರೂ ಇಂದಿಗೂ ಹಲವಾರು ಜನರು ‘ರಂಗೋಲಿ ಕೆಳಗೆ ನುಸುಳುವುದನ್ನು’ ತಡೆಯ ಲಾಗುತ್ತಿಲ್ಲ. ತತ್ಪರಿಣಾಮವಾಗಿ, ಪರಿಶ್ರಮಪಟ್ಟು ಅಭ್ಯಸಿಸಿ, ನಿರಂತರ ಪ್ರಯತ್ನಿಸುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇತ್ತೀಚೆಗೆ ನಡೆದಿರುವ ಕೆಲವು ಪರೀಕ್ಷಾ ಪ್ರಕ್ರಿಯೆಗಳ ಕುರಿತು ಹಲವಾರು ಅಭ್ಯರ್ಥಿಗಳು ವಿವಿಧ ವೇದಿಕೆಗಳಲ್ಲಿ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ, ವಸ್ತ್ರಸಂಹಿತೆಯ ಬಗ್ಗೆ ಹೆಚ್ಚು ಚರ್ಚೆಗಳು ನಡೆದಿವೆ.

ಪ್ರಸ್ತುತ ಕಾಲಮಾನದ, ಅತ್ಯಾಧುನಿಕ ತಂತ್ರಜ್ಞಾನದ ದುರ್ಬಳಕೆಯನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸಲು ಪರೀಕ್ಷಾ ಪ್ರಾಧಿಕಾರಗಳು ಪ್ರತಿ ಪರೀಕ್ಷೆಯಲ್ಲಿಯೂ ವಿವಿಧ ಬಗೆಯ ನಿಯಮಗಳನ್ನು ಜಾರಿಗೊಳಿಸುತ್ತಿವೆ. ಅದರಲ್ಲಿ ತುಂಬು ತೋಳಿನ ಅಂಗಿ ಧರಿಸುವುದನ್ನು ನಿರ್ಬಂಧಿಸುವುದೂ ಒಂದು. ನನಗೆ ತಿಳಿದಿರುವ ಪರೀಕ್ಷಾ ಮೇಲ್ವಿಚಾರಕರು ಗಮನಿಸಿದಂತೆ, ಈ ಕುರಿತು ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ಭದ್ರತಾ ಸಿಬ್ಬಂದಿಯೊಂದಿಗೆ ಬಹಳಷ್ಟು ಅಭ್ಯರ್ಥಿಗಳ ವಾಗ್ಯುದ್ಧ ಸರ್ವೇಸಾಮಾನ್ಯ. ತುಂಬು ತೋಳಿನ ಅಂಗಿ ಧರಿಸದಂತೆ ಪರೀಕ್ಷಾ ಪ್ರವೇಶ ಪತ್ರದಲ್ಲಿ, ಮಾಧ್ಯಮಗಳ ಮೂಲಕ, ಪ್ರಾಧಿಕಾರಗಳ ಜಾಲತಾಣಗಳಲ್ಲಿ ಸ್ಪಷ್ಟವಾದ ಸೂಚನೆ ನೀಡಲಾಗಿದ್ದರೂ ಮತ್ತೆ ತುಂಬು ತೋಳಿನ ಅಂಗಿ ಧರಿಸಿ ಬರುವುದು ಏಕೆಂಬುದೇ ಅರ್ಥವಾಗುವುದಿಲ್ಲ.

ಸೂಕ್ಷ್ಮ ಯಂತ್ರೋಪಕರಣಗಳ ಬಳಕೆಯ ಅವಕಾಶವನ್ನು ತಡೆಗಟ್ಟುವ ಸಲುವಾಗಿ, ಮಾಂಗಲ್ಯಸೂತ್ರ ಹೊರತುಪಡಿಸಿ, ಬೇರೆ ಯಾವ ಆಭರಣವನ್ನೂ ಧರಿಸಿಕೊಂಡು ಬರದಂತೆ ತಿಳಿಸ ಲಾಗಿರುತ್ತದೆ. ಕೆಲವು ಪುರುಷ ಅಭ್ಯರ್ಥಿಗಳು ಮಹಿಳೆಯರನ್ನೂ ನಾಚಿಸುವಂತೆ ಓಲೆ, ಕಡಗ, ಉಂಗುರ, ಕೊರಳಲ್ಲಿ ದಪ್ಪಚೈನು ಹಾಕಿಕೊಂಡು ಬರುತ್ತಾರೆ. ಭದ್ರತಾ ಸಿಬ್ಬಂದಿ ಪರಿಶೀಲನೆಗೆ ಒಳಪಡಿಸಿದಾಗ ವಾಗ್ವಾದ ಮಾಡುತ್ತಾರೆ. ಸೀಮಿತ ಸಮಯಾವಕಾಶದಲ್ಲಿ ಪ್ರತಿಯೊಬ್ಬರನ್ನೂ ಸಮಗ್ರವಾಗಿ ತಪಾಸಣೆ ಮಾಡಬೇಕಾದ ಒತ್ತಡದಲ್ಲಿರುವ ಭದ್ರತಾ ಸಿಬ್ಬಂದಿ ಸಹಜವಾಗಿ ವ್ಯಗ್ರಗೊಳ್ಳುತ್ತಾರೆ. ಪ್ರತಿ ಅಭ್ಯರ್ಥಿಗೂ ನ್ಯಾಯ ದೊರಕಲಿ, ನಕಲು, ಅವ್ಯವಹಾರ ದಂತಹ ಸಂದರ್ಭಗಳು ಉದ್ಭವಿಸದಿರಲಿ ಎಂಬ ಸದಾಶಯದಿಂದ ಜಾರಿಗೊಳಿಸಿದ ನಿಯಮಗಳನ್ನು ಪಾಲಿಸುವಲ್ಲಿ ಅಸಡ್ಡೆ ತೋರಿದರೆ ಪ್ರಾಧಿಕಾರಗಳು ಏನು ಮಾಡಬೇಕು?

ADVERTISEMENT

ಪರೀಕ್ಷಾ ಕೊಠಡಿಯೊಳಗೆ ಕೈಗಡಿಯಾರ, ಬೂಟು ಹಾಕಿಕೊಂಡು ಪ್ರವೇಶಿಸುವುದನ್ನು, ಕಾಲುಚೀಲ, ಸ್ವೆಟರ್ ಧರಿಸುವುದನ್ನು ನಿರ್ಬಂಧಿಸಿದ್ದರೂ ಹಲವಾರು ಅಭ್ಯರ್ಥಿಗಳು ಈ ನಿಯಮ ಉಲ್ಲಂಘಿಸಲೆಂದೇ ಪಣ ತೊಟ್ಟಿರುವಂತೆ ವರ್ತಿಸುತ್ತಾರೆ. ಇನ್ನು ಕೆಲವು ಅಭ್ಯರ್ಥಿಗಳು ಇರುತ್ತಾರೆ. ಇವರು ಮೂಲ ಗುರುತಿನ ಚೀಟಿ, ಮೂಲ ಪ್ರವೇಶಪತ್ರ, ಭಾವಚಿತ್ರದಂತಹ ಪರೀಕ್ಷೆಗೆ ಅಗತ್ಯವಾದ ದಾಖಲಾತಿ ಗಳನ್ನು ತರದೆ ಪರೀಕ್ಷಾ ಕೇಂದ್ರದ ಬಳಿ ಹಿರಿಯ ಅಧಿಕಾರಿಗಳನ್ನು ಹೇಗಾದರೂ ಮಾಡಿ ಪರೀಕ್ಷೆಗೆ ಹಾಜರಾಗಲು ಅನುಮತಿಸುವಂತೆ ಪರಿಪರಿಯಾಗಿ ಪ್ರಾರ್ಥಿಸುತ್ತಿರುತ್ತಾರೆ. ಇಲ್ಲಿ ಮಾನವೀಯತೆ ಮೆರೆಯಬೇಕೋ ಅದನ್ನು ಮರೆತು ಕಾನೂನು ಪಾಲಿಸಬೇಕೋ ಎಂಬ ಜಿಜ್ಞಾಸೆ ಈ ಅಧಿಕಾರಿಗಳಿಗೆ!

ಪ್ರಶ್ನೆಪತ್ರಿಕೆಯ ಒಳಗೆ ಏನನ್ನೂ ಬರೆಯದಂತೆ ಪ್ರಶ್ನೆಪತ್ರಿಕೆಯ ಮುಖಪುಟದಲ್ಲಿ ಅತ್ಯಂತ ಸ್ಪಷ್ಟವಾಗಿ ಸೂಚನೆ ನೀಡಿದ್ದರೂ ಬಹಳಷ್ಟು ಅಭ್ಯರ್ಥಿಗಳು ಪ್ರಶ್ನೆಪತ್ರಿಕೆಯಲ್ಲಿ ಸರಿ ಉತ್ತರವನ್ನು ಗುರುತು ಹಾಕುತ್ತಾರೆ, ಚಿತ್ತುಬರಹಕ್ಕಾಗಿ ಮೀಸಲಿಟ್ಟ ಜಾಗವನ್ನು ಬಳಸದೇ ಪ್ರಶ್ನೆಪತ್ರಿಕೆಯ ತುಂಬೆಲ್ಲ ಲೆಕ್ಕ ಮಾಡುವ, ತಾರ್ಕಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಪ್ರತಿ ಅಭ್ಯರ್ಥಿಯೂ ಪ್ರಶ್ನೆಪತ್ರಿಕೆಯ ಮೇಲೆ ತನ್ನ ನೋಂದಣಿ ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸಿದ್ದರೂ ಬಹಳಷ್ಟು ಅಭ್ಯರ್ಥಿಗಳು ಆ ಬಗ್ಗೆ ಗಮನಹರಿಸುವುದೇ ಇಲ್ಲ.

ಪಾರದರ್ಶಕತೆ, ಅಭ್ಯರ್ಥಿಗಳಲ್ಲಿ ಪ್ರಾಮಾಣಿಕತೆ ಇದ್ದಿದ್ದರೆ, ಅವ್ಯವಹಾರಗಳಿಗೆ ಆಸ್ಪದ ಇರದಿದ್ದರೆ ಇಂಥ ಕಠಿಣ ನಿಯಮಗಳ ಅವಶ್ಯಕತೆ ಇರುತ್ತಿರಲಿಲ್ಲ. ಪರೀಕ್ಷಾ ಪ್ರಾಧಿಕಾರಗಳಾಗಲೀ ನೇಮಕಾತಿ ಸಂಸ್ಥೆಗಳಾಗಲೀ ಪಾರದರ್ಶಕವಾದ ಪರೀಕ್ಷಾ ಪ್ರಕ್ರಿಯೆ ಯನ್ನು ಮಾಡಲು ಮುಂದಾದಾಗ ಕೆಲವೊಂದು ಸಣ್ಣಪುಟ್ಟ ತೊಂದರೆಗಳಾಗುವುದು ಸ್ವಾಭಾವಿಕ. ಇಂತಹ ಸನ್ನಿವೇಶದಲ್ಲಿ, ಪರೀಕ್ಷಾ ಕರ್ತವ್ಯದ ಹೊಣೆಗಾರಿಕೆ ಹೊಂದಿರುವ ಸಂಸ್ಥೆಯೊಂದಿಗೆ, ಅಧಿಕಾರಿಗಳೊಂದಿಗೆ ಪ್ರತಿಯೊಬ್ಬರೂ ಸಹಕರಿಸಿದಲ್ಲಿ ನ್ಯಾಯಪರತೆಯನ್ನು ವರ್ಧಿಸಬಹುದು.

ನಿಯಮಾವಳಿಗೆ ಅನುಸಾರವಾಗಿ ಅನಗತ್ಯ ಆಭರಣ, ವಸ್ತ್ರಗಳನ್ನು ತೆಗೆದು ಪರೀಕ್ಷಾ ಸಮಯಕ್ಕೆ ಮುಂಚಿತವಾಗಿಯೇ ಕೇಂದ್ರದ ಬಳಿ ಹಾಜರಿರುವುದು ಅವಶ್ಯಕ. ವಿಳಂಬವಾಗಿ ಹಾಜರಾಗುವುದರಿಂದ ಆತಂಕ, ಒತ್ತಡ ಉಂಟಾಗಿ, ಎಷ್ಟೇ ಪೂರ್ವಸಿದ್ಧತೆ ಮಾಡಿಕೊಂಡಿದ್ದರೂ ಪರೀಕ್ಷೆಗಳಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯದಿರುವ ಸಾಧ್ಯತೆಯೂ ಉಂಟು. ಬರುವ ದಿನಗಳಲ್ಲಿ ಪರೀಕ್ಷಾ ನಿಯಮಾವಳಿಗಳು ಇನ್ನೂ ಬಿಗಿಯಾಗುತ್ತವೆ ಎಂಬ ವರದಿಗಳಿದ್ದು, ನೇಮಕಾತಿ ಆಕಾಂಕ್ಷಿಗಳು ಸಮಯಪಾಲನೆ, ನಿಯಮಪಾಲನೆಯ ಬಗ್ಗೆ ಹೆಚ್ಚು ಜಾಗರೂಕರಾಗಿ, ಜವಾಬ್ದಾರಿಯುತವಾಗಿ ಇರಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.