ADVERTISEMENT

ಸಂಗತ: ವಿಜ್ಞಾನ ಸೇವೆಯ ಜಾಡು ಹಿಡಿದು...

ವೈಜ್ಞಾನಿಕ ಜಾಗೃತಿ ಮೂಡಿಸುವ ಕಾರ್ಯ ಚುರುಕಾಗಲಿ

ಈ.ಬಸವರಾಜು
Published 9 ನವೆಂಬರ್ 2020, 19:30 IST
Last Updated 9 ನವೆಂಬರ್ 2020, 19:30 IST
ವಿಜ್ಞಾನ ಪುಸ್ತಕಗಳು–ಸಾಂದರ್ಭಿಕ ಚಿತ್ರ
ವಿಜ್ಞಾನ ಪುಸ್ತಕಗಳು–ಸಾಂದರ್ಭಿಕ ಚಿತ್ರ   

ಒಂದು ಮರವನ್ನು ಸುತ್ತುವರಿದಿರುವ ವಿದ್ಯಾರ್ಥಿಗಳು, ಆ ಮರದ ಗಾತ್ರ, ಎತ್ತರ, ಆಯಸ್ಸು, ಅದರ ಮೇಲೆ ವಾಸಿಸುವ ಪಕ್ಷಿ, ಕೀಟಗಳ ವಿವರ, ಮರದ ಬಗೆಗಿರುವ ಕಥೆ, ದಂತಕಥೆ... ಹೀಗೆ ಮರದ ಅಧ್ಯಯನದ ಮೂಲಕ ಸಸ್ಯ ಮತ್ತು ಪ್ರಾಣಿ ಸಂಕುಲದ ಪರಿಚಯ ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಒಂದು ತಂಡವು ಶಿಕ್ಷಕರ ಮಾರ್ಗದರ್ಶನದಲ್ಲಿ ತಮ್ಮ ಊರಿನ ಬೆಳೆಯ ಕುರಿತು ಅಧ್ಯಯನ ಮಾಡುತ್ತದೆ. ಬೆಳೆಯ ಇಳುವರಿ, ಬಿತ್ತನೆಬೀಜ, ಗೊಬ್ಬರ, ನೀರು, ಪರಿಸರ, ಇಳುವರಿಯ ಏರುಪೇರು ಮುಂತಾಗಿ ಅಧ್ಯಯನ ನಡೆಸುತ್ತದೆ. ಇದನ್ನು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಮಕ್ಕಳ ವಿಜ್ಞಾನ ಸಮ್ಮೇಳನದಲ್ಲಿ ಮಂಡಿಸುತ್ತಾರೆ. ಯುವ ವಿಜ್ಞಾನಿ ಪ್ರಶಸ್ತಿ ಪಡೆಯುತ್ತಾರೆ. ವಿಜ್ಞಾನ ಕಲಿಕೆಯತ್ತ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಅದರಲ್ಲಿ ಕೆಲವರು ವಿಜ್ಞಾನ ಸಂಶೋಧನಾ ಕ್ಷೇತ್ರವನ್ನೂ ಪ್ರವೇಶಿಸುತ್ತಾರೆ.

ಬಳಸಿ ಬಿಸಾಡುವ ವಸ್ತುಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿಜ್ಞಾನದ ವಿವಿಧ ಮಾದರಿಗಳನ್ನು ಸಿದ್ಧ
ಪಡಿಸುತ್ತಾರೆ. ಇಂಥ ಚಟುವಟಿಕೆಗಳಿಗೆ ಕಾರಣವಾದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಅಸ್ತಿತ್ವಕ್ಕೆ ಬಂದದ್ದು 1980ರ ನ. 11ರಂದು. ಕಳೆದ 40 ವರ್ಷಗಳಲ್ಲಿ ಪರಿಷತ್ತು ತನ್ನ ಚಟುವಟಿಕೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಿ, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸುವ ಹಾಗೂ ವೈಜ್ಞಾನಿಕ ಚಿಂತನೆಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿದೆ.

ಈ ದಿನಗಳಲ್ಲಿ ವಿಜ್ಞಾನ ಸಂವಹನ ಎಂದರೆ ಯಾರಿಗೂ ವಿಶೇಷವೆನಿಸದು. ಅನೇಕ ಸಂಸ್ಥೆಗಳು, ವ್ಯಕ್ತಿಗಳು, ಸರ್ಕಾರಗಳು ಈ ಕೆಲಸದಲ್ಲಿ ತೊಡಗಿವೆ. ಆದರೆ ಐವತ್ತು ವರ್ಷಗಳ ಹಿಂದೆ ಜನಸಾಮಾನ್ಯರಿಗೆ ವಿಜ್ಞಾನದ ಬಗ್ಗೆ ಸರಳವಾಗಿ ತಿಳಿಸಿಕೊಡುವ ಕೆಲಸ ಅಷ್ಟು ಸುಲಭವಾಗಿರಲಿಲ್ಲ. ತಮ್ಮ ಸಮಸ್ಯೆಗಳಿಗೆ ನೈಜ ಕಾರಣಗಳನ್ನು ತಿಳಿದು ಪರಿಹರಿಸಿಕೊಳ್ಳುವ ಬದಲು ಯಂತ್ರ, ಮಾಟ, ಮಂತ್ರದ ಕಡೆಗೆ ವಾಲುವ ಜನರೇ ಹೆಚ್ಚಾಗಿದ್ದ ಕಾಲವದು. ಜನರು ಸಮಾಜದ ಪ್ರಗತಿ ಹಾಗೂ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಅವರಿಗೆ ವಿಜ್ಞಾನದ ಮಾಹಿತಿಯನ್ನು ನೀಡುವ ಅಗತ್ಯವಿದೆ ಎಂದು ಚಿಂತಿಸಿದ ಕೆಲವು ವಿಜ್ಞಾನಿಗಳು ತಮ್ಮ ಸಂಶೋಧನೆಯ ಜೊತೆಗೆ ಹಳ್ಳಿಗಳಿಗೆ, ಕೊಳೆಗೇರಿಗಳಿಗೆ, ಶಾಲೆಗಳಿಗೆ ಭೇಟಿ ನೀಡಿ ವಿಜ್ಞಾನದ ಕುರಿತು ಚರ್ಚೆ, ಸಂವಾದ ನಡೆಸುವ ಕೆಲಸ ಪ್ರಾರಂಭಿಸಿದರು. ಮುಂಬೈನ ಭಾಭಾ ಅಣುಸಂಶೋಧನಾ ಕೇಂದ್ರದಲ್ಲಿ ವಿಜ್ಞಾನಿಯಾಗಿದ್ದ ಕೇರಳ ಮೂಲದ ಡಾ. ಎಂ.ಪಿ.ಪರಮೇಶ್ವರನ್ ‘ಜನರೆಡೆಗೆ ವಿಜ್ಞಾನ’ ಎಂಬ ಕಾರ್ಯ ಪ್ರಾರಂಭಿಸಿ, ಅದಕ್ಕೆ ಹೆಚ್ಚಿನ ಸಮಯ ಒದಗಿಸಲು ಸ್ವಯಂ ನಿವೃತ್ತಿ ಪಡೆದರು. ಕೇರಳಕ್ಕೆ ವಾಪಸಾಗಿ ಸಂಶೋಧಕರೊಂದಿಗೆ ನಿರಂತರ ಚರ್ಚಿಸಿ, ಜನರಿಗೆ ಸರಳವಾಗಿ ವಿಜ್ಞಾನವನ್ನು ತಿಳಿಸುವ, ಸಂಶೋಧನೆಯ ಮಾಹಿತಿಯನ್ನು ತಲುಪಿಸುವ ಕಾರ್ಯಕ್ಕಾಗಿ ಅಹರ್ನಿಶಿ ದುಡಿದರು. ಇದರ ಫಲವಾಗಿ ಕೇರಳದಲ್ಲಿ ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು ಪ್ರಾರಂಭಗೊಂಡಿತು. ಅದು ಈಗ ಕೇರಳದಲ್ಲಿ ಮನೆಮಾತಾಗಿದೆ.

ADVERTISEMENT

ಅಕ್ಕಪಕ್ಕದ ರಾಜ್ಯಗಳಿಗೆ ವಿಜ್ಞಾನ ಚಳವಳಿಯನ್ನು ವಿಸ್ತರಿಸುವ ಆಶಯದೊಂದಿಗೆ ಕರ್ನಾಟಕಕ್ಕೆ ಭೇಟಿ ನೀಡಿದ ಪರಮೇಶ್ವರನ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿದ್ದ ಪ್ರೊ. ಸತೀಶ್ ಧವನ್, ಅಸ್ತ್ರ ಸಂಸ್ಥೆಯ ಸ್ಥಾಪಕರಾದ ಪ್ರೊ. ಎ.ಕೆ.ಎನ್.ರೆಡ್ಡಿ, ಪ್ರೊ. ಎಂ.ಎ.ಸೇತುರಾವ್, ಪ್ರೊ. ಜೆ.ಆರ್.ಲಕ್ಷ್ಮಣರಾವ್, ಡಾ. ಎಚ್.ನರಸಿಂಹಯ್ಯ ಮುಂತಾದವರನ್ನು ಭೇಟಿ ಮಾಡಿ ಚರ್ಚಿಸಿದರು. ಮಾತೃಭಾಷೆಯಲ್ಲಿ ವಿಜ್ಞಾನ ಸಂವಹನದ ಪ್ರಾಮುಖ್ಯವನ್ನು ಅವರೊಂದಿಗೆ ಹಂಚಿಕೊಂಡರು. ಇದರ ಫಲವಾಗಿ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ– ಕೆಎಸ್‌ಸಿಎಸ್‌ಟಿ ಮೂಲಕ 1978ರಲ್ಲಿ ‘ಬಾಲ ವಿಜ್ಞಾನ’ ಮಾಸಪತ್ರಿಕೆ ಪ್ರಕಟಣೆ ಪ್ರಾರಂಭವಾಯಿತು. ಇದಾಗಿ ಎರಡು ವರ್ಷಗಳಾಗುತ್ತಲೇ ಅದರ ನಿರ್ವಹಣೆಗಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತನ್ನು ಪ್ರಾರಂಭಿಸಲಾಯಿತು. ಮೊದಲ ಅಧ್ಯಕ್ಷರಾಗಿ ಎಚ್.ನರಸಿಂಹಯ್ಯ ಹಾಗೂ ಕಾರ್ಯದರ್ಶಿಯಾಗಿ ಎಂ.ಎ.ಸೇತುರಾವ್ ಜವಾಬ್ದಾರಿ ವಹಿಸಿಕೊಂಡರು. ನಂತರದ ವರ್ಷಗಳಲ್ಲಿ ಪ್ರೊ. ಎಂ.ಐ.ಸವದತ್ತಿ, ಹಾ.ಮಾ.ನಾಯಕ, ಜೆ.ಆರ್.ಲಕ್ಷ್ಮಣರಾವ್, ಶ್ರೀಮತಿ ಹರಿಪ್ರಸಾದ್, ಡಾ. ಸ.ಜ.ನಾಗಲೋಟಿಮಠ ಮುಂತಾದವರು ಪರಿಷತ್ತನ್ನು ಮುನ್ನಡೆಸಿದರು.

ಸರಳ ವಿಜ್ಞಾನ ಪ್ರಯೋಗಗಳು, ಕನ್ನಡ ವಿಜ್ಞಾನ ಸಮ್ಮೇಳನಗಳು, ನೀನೇ ಮಾಡಿ ನೋಡು, ಆಕಾಶ ವೀಕ್ಷಣೆ, ವಿಜ್ಞಾನ ರಸಪ್ರಶ್ನೆ, ವಿಜ್ಞಾನಿ- ವಿದ್ಯಾರ್ಥಿ ನೇರ ಸಂವಾದ, ಪವಾಡ ರಹಸ್ಯ ಬಯಲು ಸೇರಿದಂತೆ ಅನೇಕ ವೈವಿಧ್ಯಮಯ ವೈಜ್ಞಾನಿಕ ಕಾರ್ಯಕ್ರಮಗಳನ್ನು
ಪರಿಷತ್ತು ಆಯೋಜಿಸುತ್ತಾ ಬಂದಿದೆ.

ನಲವತ್ತನೇ ವರ್ಷದಲ್ಲಿ ನಾಡಿನಾದ್ಯಂತ ವೈಜ್ಞಾನಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಾಗಬೇಕಿದೆ. ವೈಜ್ಞಾನಿಕ ಕ್ಷೇತ್ರದಲ್ಲಿ, ಅದರಲ್ಲಿಯೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯೇ ಆಗಿದೆ. ವಿಪರ್ಯಾಸವೆಂದರೆ ಈ ತಂತ್ರಜ್ಞಾನವನ್ನೇ ಉಪಯೋಗಿಸಿಕೊಂಡು ಮೌಢ್ಯ ಬಿತ್ತುವ ಕೆಲಸವೂ ನಡೆದಿದೆ. ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಜನರ ಶೋಷಣೆ ಮುಂದುವರಿದಿದೆ. ಇಂಥ ಸಂದರ್ಭದಲ್ಲಿ ಜನವಿಜ್ಞಾನ ಚಳವಳಿ ಬಲಗೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಪರಿಷತ್ತು ಮತ್ತಷ್ಟು ಸಕ್ರಿಯವಾಗಬೇಕಾಗಿದೆ. ಸಾಗಬೇಕಾದ ದಾರಿ ದೂರವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.