ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು (ಎಸ್‌ಡಿಎಂಸಿ) ರಚಿಸಲಾಗಿದೆ. ಈ ಸಮಿತಿಗಳಿಗೆ ಪ್ರತೀ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ನಡೆಯುವ ಪೋಷಕರ ಸಭೆಯಲ್ಲಿ ಪದಾಧಿಕಾರಿಗಳು ಆಯ್ಕೆಯಾಗುತ್ತಾರೆ. ಪೋಷಕರಲ್ಲಿ ಒಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಮತ್ತು ಶಾಲೆಯ ಮುಖ್ಯ ಶಿಕ್ಷಕರು ಕಾರ್ಯದರ್ಶಿಯಾಗುತ್ತಾರೆ. ಇವರೊಂದಿಗೆ ಉಪಾಧ್ಯಕ್ಷರು, ಸದಸ್ಯರು, ಅಂಗನವಾಡಿ ಕಾರ್ಯಕರ್ತೆ, ಆರೋಗ್ಯ ಸಹಾಯಕರು ಮತ್ತು ಸ್ಥಳೀಯ ಶಿಕ್ಷಣಾಸಕ್ತರು ಇರುತ್ತಾರೆ.
ಎಸ್‌ಡಿಎಂಸಿಯ ಹಕ್ಕು ಮತ್ತು ಕರ್ತವ್ಯಗಳು ಬಹಳಷ್ಟಿವೆ. ಇಡೀ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲಾಭಿವೃದ್ಧಿ ಯೋಜನೆಯನ್ನು ತಯಾರಿಸುವುದು, ಶಾಲೆಯ ವಾರ್ಷಿಕ ಚಟುವಟಿಕೆಗಳ ನೀಲನಕ್ಷೆ ರೂಪಿಸುವುದು ಹಾಗೂ ಶೈಕ್ಷಣಿಕ ಯೋಜನೆಯನ್ನು ಸಿದ್ಧಪಡಿಸುವುದು ಮತ್ತು ಅದನ್ನು ಅನುಪಾಲನೆ ಮಾಡುವ ಜವಾಬ್ದಾರಿ ಎಸ್‌ಡಿಎಂಸಿ ಮೇಲಿದೆ. ಪ್ರತಿ ತಿಂಗಳು ಸಭೆ ನಡೆಸಿ, ಯೋಜನೆಯಲ್ಲಿ ಆಗಿರುವ ಪ್ರಗತಿ ಪರಿಶೀಲಿಸುವುದು, ಸರ್ಕಾರದಿಂದ ಬರುವ ಅನುದಾನದ ಸದ್ಬಳಕೆ ಹಾಗೂ ಸಾರ್ವಜನಿಕರಿಂದ ಅಗತ್ಯವಾದ ನೆರವು ಪಡೆದು ಶಾಲೆಯನ್ನು ಅಭಿವೃದ್ಧಿಪಡಿಸುವುದು ಪ್ರಮುಖ ಕರ್ತವ್ಯಗಳಾಗಿವೆ. ಮುಖ್ಯ ಶಿಕ್ಷಕರಿಗೆ ಸಾಂದರ್ಭಿಕ ರಜೆ ನೀಡುವ ಅಧಿಕಾರವನ್ನೂ ಎಸ್‌ಡಿಎಂಸಿ ಅಧ್ಯಕ್ಷರಿಗೆ ವಹಿಸಲಾಗಿದೆ.
ಇಷ್ಟೆಲ್ಲ ಕರ್ತವ್ಯ ಹಾಗೂ ಅಧಿಕಾರಗಳಿದ್ದರೂ ವಾಸ್ತವದಲ್ಲಿ, ಮುಖ್ಯ ಶಿಕ್ಷಕರಿಗೆ ಅಗತ್ಯವಿದ್ದಾಗ ಬಂದು ಬೇಕಾದ ಸಹಾಯ ಮಾಡಿಕೊಡುವುದು ಹಾಗೂ ಕರೆದಾಗ ಬಂದು ಸಹಿ ಹಾಕಬೇಕಾದ ಕೆಲಸವನ್ನು ಎಸ್‌ಡಿಎಂಸಿ ಅಧ್ಯಕ್ಷರಿಂದ ಬಹುತೇಕ ಕಡೆ ನಿರೀಕ್ಷಿಸಲಾಗುತ್ತಿದೆ. ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದ ಒಬ್ಬ ಅಧಿಕಾರಿ ಈ ವಿವರಗಳನ್ನು ನನ್ನೊಂದಿಗೆ ನೋವಿನಿಂದ ಹಂಚಿಕೊಂಡಿದ್ದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಎಂಬ ದೊಡ್ಡ ದೊಡ್ಡ ಪದಗಳನ್ನು ಹೊಂದಿರುವ ಈ ಸಮಿತಿಯ ಕಾರ್ಯನಿರ್ವಹಣೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು ಸೂಕ್ತ ರೀತಿಯಲ್ಲಿ ಒಳಗೊಳ್ಳುವುದಕ್ಕೆ ಪೂರಕವಾಗಿ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಒಂದು ವ್ಯವಸ್ಥೆಯಿಲ್ಲ. ಎಸ್‌ಡಿಎಂಸಿ ಕಾನೂನು ರೀತ್ಯ ರಚನೆಯಾಗಿದೆಯೇ ಇಲ್ಲವೇ ಎಂಬುದು ಪರಿಶೀಲನೆಗೆ ಒಳಪಡುತ್ತಿಲ್ಲ. ಮುಖ್ಯ ಶಿಕ್ಷಕರು ಏನು ಹೇಳುತ್ತಾರೋ ಬಹುತೇಕ ಅದನ್ನೇ ಅಧ್ಯಕ್ಷರು ಅನುಮೋದಿಸಬೇಕಾಗುತ್ತದೆ. ಎಸ್‌ಡಿಎಂಸಿಗಳು ರಚನೆಯಾದ ಕೂಡಲೇ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸದಸ್ಯರಿಗೆ ತರಬೇತಿ ನೀಡಿ, ಆ ಸಂದರ್ಭದಲ್ಲೇ ಮಾದರಿ ವಾರ್ಷಿಕ ಯೋಜನೆಯನ್ನೂ ರೂಪಿಸಿ ಅರ್ಥ ಮಾಡಿಸಿದಲ್ಲಿ ಅವರು ಇಡೀ ವರ್ಷ ಸಕ್ರಿಯವಾಗಿ ಕೆಲಸ ಮಾಡಬಹುದು. ಆದರೆ ವರ್ಷದ ಕೊನೆಯಲ್ಲಿ ಲೆಕ್ಕಕ್ಕೆ ಎಂಬಂತೆ ಅರ್ಧ ದಿನ ತರಬೇತಿ ನಡೆಯುತ್ತಿದೆ. ಹೀಗಾದಾಗ ಅವರು ಶಾಲೆಯ ಮೇಲ್ವಿಚಾರಣೆ ಮಾಡುವುದಾದರೂ ಹೇಗೆ?
ತಿಂಗಳಿಗೊಮ್ಮೆ, ಎರಡು ತಿಂಗಳಿಗೊಮ್ಮೆ ನಡೆಯುವ ಮುಖ್ಯ ಶಿಕ್ಷಕರ ಸಮಾಲೋಚನಾ ಸಭೆಗಳಿಗೂ ಎಸ್‌ಡಿಎಂಸಿ ಅಧ್ಯಕ್ಷರಿಗೆ ಆಹ್ವಾನ ಇರುವುದಿಲ್ಲ. ಇನ್ನು ಎಸ್‌ಡಿಎಂಸಿ ಅಧ್ಯಕ್ಷರ ಬಗ್ಗೆ ಇಲಾಖೆಯ ಜಾಲತಾಣದಲ್ಲಿ ಎಲ್ಲಿಯೂ ಮಾಹಿತಿ ಲಭ್ಯವಿಲ್ಲ. ಅಧ್ಯಕ್ಷರು ಮತ್ತೊಂದು ಶಾಲೆಯ ಅಧ್ಯಕ್ಷರನ್ನು ಸಂಪರ್ಕಿಸಲು, ಅನುಭವ ಹಂಚಿಕೊಳ್ಳಲು ವ್ಯವಸ್ಥೆಯಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಮಾತ್ರ ಈ ಬಗ್ಗೆ ಕಡತ ಇರುತ್ತದೆ. ಅದು ಸಹ ವ್ಯವಸ್ಥಿತವಾಗಿ ಇರುವುದಿಲ್ಲ. ಏನಾದರೂ ಪ್ರಶ್ನೆಗಳು ಬಂದಾಗ ಯಾವ ಅಧಿಕಾರಿಯನ್ನು ಸಂಪರ್ಕಿಸಬೇಕು ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಇರುವುದಿಲ್ಲ. ಹೀಗಾಗಿ ಬಹುತೇಕ ಅಧ್ಯಕ್ಷರು ಇದ್ದರೂ ಇಲ್ಲದಂತೆ ತಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಪೋಷಕರು ಸಾಮಾನ್ಯವಾಗಿ ಬಡವರು, ದಿನವಿಡೀ ದುಡಿಯುವವರು. ಅವರಿಗೆ ಶಾಲೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಅಧ್ಯಯನ ಮಾಡಿ, ಅದರ ಕಾಯಕಲ್ಪಕ್ಕೆ ಸಲಹೆ ನೀಡಲು ಸಾಧ್ಯವಾಗುವುದು ಕಡಿಮೆ. ಹೀಗಿರುವಾಗ ಒಬ್ಬಿಬ್ಬರು ಆಸಕ್ತಿ ತೋರಿದರೆ ಅದಕ್ಕೆ ವಿರೋಧ ವ್ಯಕ್ತವಾಗಿರುವುದೂ ಉಂಟು. ಹಾಗಾಗಿ ಶಿಕ್ಷಣ ಇಲಾಖೆಯು ಎಸ್‌ಡಿಎಂಸಿಗಳ ಸಬಲೀಕರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಎಸ್‌ಡಿಎಂಸಿಗಳು ರಚನೆಗೊಂಡ ಕೂಡಲೇ ಅಧ್ಯಕ್ಷರು ಹಾಗೂ ಸದಸ್ಯರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅಧಿಕೃತ ಪತ್ರ ತಲುಪಿಸಬೇಕು. ಇದರಲ್ಲಿ ಅವರ ಹಕ್ಕು ಮತ್ತು ಕರ್ತವ್ಯಗಳಿರುವ ಕಿರು ಪುಸ್ತಕ ನೀಡಬೇಕು.
ಇಲಾಖೆ ಕಳುಹಿಸುವ ಯಾವುದೇ ಸುತ್ತೋಲೆ ಹಾಗೂ ಮಾಹಿತಿಯನ್ನು ಮುಖ್ಯ ಶಿಕ್ಷಕರ ಜೊತೆಗೆ ಅಧ್ಯಕ್ಷರಿಗೂ ನೇರವಾಗಿ ಕಳುಹಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಶಾಲೆಗಳಲ್ಲಿ ಎಸ್‌ಡಿಎಂಸಿಗಾಗಿ ಪ್ರತ್ಯೇಕವಾದ ಸ್ಥಳಾವಕಾಶ ಇರಬೇಕು. ತಾಲ್ಲೂಕು ಮಟ್ಟದಲ್ಲಿ ವರ್ಷಕ್ಕೊಮ್ಮೆ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರ ಸಮಾವೇಶ ನಡೆಸಿ ಅನುಭವ ಹಂಚಿಕೆಗೆ ಅವಕಾಶ ನೀಡಬೇಕು. ಈ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು ಅದನ್ನು ಕಾಲಮಿತಿಯಲ್ಲಿ ಜಾರಿಗೊಳಿಸುವಂತೆ ಮುಖ್ಯೋಪಾಧ್ಯಾಯರಿಗೆ ಸೂಚಿಸಬೇಕು. ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರಾವಧಿ ಮುಗಿದ ನಂತರ ಅವರಿಗೆ ಅಭಿನಂದನಾ ಪತ್ರ ನೀಡಬೇಕು. ಇದು, ಅವರು ಹಿತೈಷಿಗಳಾಗಿ ಶಾಲೆಗೆ ತಮ್ಮ ಸಹಕಾರವನ್ನು ಮುಂದುವರಿಸಲು ಪ್ರೇರಣೆ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.