ADVERTISEMENT

ಸಂಗತ: ಮಹಿಳಾ ಸಬಲೀಕರಣಕ್ಕೆ ‘ಶಕ್ತಿ’

ಮಹಿಳೆಯರಿಗೆ ಒದಗಿಸಿರುವ ಉಚಿತ ಬಸ್‌ ಪ್ರಯಾಣ ಸೌಲಭ್ಯವು ಅವರ ಸಬಲೀಕರಣಕ್ಕೆ, ಆ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಕಾರಣವಾಗಿದೆ

ಎಸ್.ಆರ್.ವಿಜಯಶಂಕರ
Published 28 ಜೂನ್ 2024, 0:06 IST
Last Updated 28 ಜೂನ್ 2024, 0:06 IST
<div class="paragraphs"><p>ಸಂಗತ: ಮಹಿಳಾ ಸಬಲೀಕರಣಕ್ಕೆ ‘ಶಕ್ತಿ’</p></div>

ಸಂಗತ: ಮಹಿಳಾ ಸಬಲೀಕರಣಕ್ಕೆ ‘ಶಕ್ತಿ’

   

ರಾಜ್ಯ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳಲ್ಲಿ ಹೆಚ್ಚಿನವುಗಳ ಉದ್ದೇಶ ಮಹಿಳೆಯರ ಸಬಲೀಕರಣ. ಅವುಗಳಲ್ಲಿ ‘ಶಕ್ತಿ’ ಯೋಜನೆಯು ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಕಲ್ಪಿಸಿದೆ.

ಯಾವುದೇ ಯೋಜನೆ ಜನರನ್ನು ಎಷ್ಟರ ಮಟ್ಟಿಗೆ ತಲುಪಿದೆ ಎಂಬುದನ್ನು ಅಳೆಯುವುದು, ಆ ಯೋಜನೆಯ ಸೂಕ್ತ ಮುಂದುವರಿಕೆಗೆ ಮುಖ್ಯ. ಅದಕ್ಕಾಗಿ ಸರ್ಕಾರವು ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ ಜಸ್ಟ್ ಜಾಬ್ಸ್ ನೆಟ್‌ವರ್ಕ್ ಹಾಗೂ ಸರ್ಕಾರಿ ಸ್ವಾಮ್ಯದ ಫಿಸ್ಕಲ್ ಪಾಲಿಸಿ ಇನ್‌ಸ್ಟಿಟ್ಯೂಟ್ ಮೂಲಕ ಈ ಯೋಜನೆಯ ಸಮೀಕ್ಷೆ ನಡೆಸಿದೆ.

ADVERTISEMENT

ಈ ಸಂಸ್ಥೆಗಳು ಅಂತಿಮ ಸಮೀಕ್ಷಾ ವರದಿಯನ್ನು ಸಲ್ಲಿಸಿಲ್ಲವಾದರೂ ವರದಿಯ ಕರಡು ಆವೃತ್ತಿಯ ವಿವರ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಯೋಜನೆಯ ಸಾಮಾಜಿಕ ಹಾಗೂ ಆರ್ಥಿಕ ಯಶಸ್ಸು, ಆ ಮೂಲಕ ಮಹಿಳೆಯರ ಸಬಲೀಕರಣ, ಅವರಿಗೆ ಆಗಿರುವ ಆರ್ಥಿಕ ಅನುಕೂಲಗಳ ಬಗೆಗೆ ಅದು ಮಾಹಿತಿ ನೀಡಿದೆ. ಈ ಯೋಜನೆಯಿಂದ ಬೆಂಗಳೂರಿನಲ್ಲಿ ಮಹಿಳೆಯರಿಗೆ ತಿಂಗಳಿಗೆ ಸರಾಸರಿ ₹ 1,326  ಉಳಿತಾಯವಾದರೆ, ಉಡುಪಿ ಜಿಲ್ಲೆಯಲ್ಲಿ ಈ ಪ್ರಮಾಣ ಕನಿಷ್ಠ ಅಂದರೆ ₹ 681. ಉದ್ಯೋಗ, ಶಿಕ್ಷಣ, ಪ್ರವಾಸ, ತೀರ್ಥಕ್ಷೇತ್ರ ಪ್ರವಾಸ, ಮನರಂಜನಾ ತಿರುಗಾಟ, ಔಷಧಿಯಂತಹ ಅಗತ್ಯ ವಸ್ತುಗಳ ಕೊಳ್ಳುವಿಕೆ ಹಾಗೂ ಬಂಧುಮಿತ್ರರ ಭೇಟಿಗೆ ಅನುಕೂಲವಾಗುವಂತಹ ಸಂಚಾರಕ್ಕೆ ಮಹಿಳೆಯರು ಈ ಯೋಜನೆಯನ್ನು ಬಳಸಿಕೊಂಡಿರುವುದು ತಿಳಿದುಬಂದಿದೆ.‌

ಉಡುಪಿ ಸೇರಿದಂತೆ ಕೆಲವೆಡೆ ಖಾಸಗಿ ಬಸ್ಸುಗಳ ಮೇಲಿನ ಅವಲಂಬನೆ ಹೆಚ್ಚು. ಉಳಿದಂತೆ ಬಸ್ ಸಂಚಾರದಲ್ಲಿ ಒಟ್ಟು ಶೇ 7ರಷ್ಟು ಹೆಚ್ಚಳವಾಗಿದ್ದರೆ, ರೈಲು ಹಾಗೂ ಮೆಟ್ರೊ ಸಂಚಾರದಲ್ಲಿ ಕ್ರಮವಾಗಿ
ಶೇ 3.18 ಹಾಗೂ ಶೇ 1.28ರಷ್ಟು ಹೆಚ್ಚಳವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಮಹಿಳೆಯರ ಸಬಲೀಕರಣವು ಅವರ ಕರ್ತೃತ್ವ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಸಮಾಜಕ್ಕೆ ಹಲವು ಪರೋಕ್ಷ ಪ್ರಯೋಜನಗಳಾಗುವುದರ ಜೊತೆಗೆ ಕುಟುಂಬದ ಇತರ ಸದಸ್ಯರ ಮೇಲೂ ಮಹಿಳೆಯರು ಸಕಾರಾತ್ಮಕ ಪ್ರಭಾವ ಬೀರುತ್ತಾರೆ. ಉದಾಹರಣೆಗೆ, ಬೀದಿಬದಿ ವ್ಯಾಪಾರಿಯಾದ ಪರಿಚಿತ ಮಹಿಳೆಯೊಬ್ಬರು, ಗಂಡ ತೀರಿಕೊಂಡ ಬಳಿಕ ಮನೆ ಬಾಡಿಗೆ ಕಟ್ಟಲಾರದೆ ಬೆಂಗಳೂರಿನಿಂದ ನೆಲಮಂಗಲಕ್ಕೆ ಸ್ಥಳಾಂತರಗೊಂಡರು. ವ್ಯಾಪಾರಕ್ಕಾಗಿ ಪ್ರತಿನಿತ್ಯ ಆಕೆ ಬೆಂಗಳೂರಿಗೆ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಾರೆ.

‌ಇದರಿಂದ ಉಳಿತಾಯವಾಗುವ ಹಣದಲ್ಲಿ ಅವರು ತಮ್ಮ ಎರಡನೇ ಮಗನನ್ನು ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಂ. ಪದವಿಗೆ ಸೇರಿಸಿದ್ದಾರೆ. ಈ ಹಣ ಇಲ್ಲದಿದ್ದರೆ, ಹಿರಿಯ ಮಗನೊಡನೆ ಈ ಮಗನನ್ನೂ ಗಾರೆ ಕೆಲಸಕ್ಕೆ ಕಳುಹಿಸುವ ಯೋಚನೆ ಆಕೆಗಿತ್ತು.

ಒಂದು ವರ್ಷದಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ಸಂಚರಿಸಿದ್ದಕ್ಕಾಗಿ ಸಾರಿಗೆ ನಿಗಮಗಳಿಗೆ ಆಗಿರುವ ವೆಚ್ಚ ₹ 4,380 ಕೋಟಿ. ಅವು ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ಇದ್ದರೂ ಸಂಚರಿಸುವ ಬಸ್ಸುಗಳು. ಪ್ರವಾಸಿ ತಾಣಗಳು ಹಾಗೂ ತೀರ್ಥಕ್ಷೇತ್ರಗಳೂ ಹೆಚ್ಚಿನ ಆದಾಯ ಗಳಿಸಿವೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇದೇ ಮೊದಲ ಬಾರಿಗೆ ತಿಂಗಳಿಗೆ ₹ 20 ಕೋಟಿಗೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ. ಭಕ್ತರಿಗೆ ಆದ ಅನುಕೂಲವನ್ನು ವಿವರಿಸಿ ಧರ್ಮಸ್ಥಳದ ಧರ್ಮಾಧಿಕಾರಿಯವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ರಾಜ್ಯದ ₹ 3.71 ಲಕ್ಷ ಕೋಟಿ ಮೊತ್ತದ ವಾರ್ಷಿಕ ಬಜೆಟ್‌ನಲ್ಲಿ ‘ಶಕ್ತಿ’ಗಾಗಿ ವ್ಯಯಿಸುವ ಹಣ ದೊಡ್ಡದೇನಲ್ಲ. ಇದರಿಂದ ಮಹಿಳಾ ಕಾರ್ಮಿಕ ಭಾಗಿದಾರಿಕೆ ಶೇ 5ರಷ್ಟು ಹೆಚ್ಚಾಗಿದೆ. ಜಿಎಸ್‌ಟಿ ಸಂಗ್ರಹವೂ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ನಾನು ವಾಸಿಸುವ ಫ್ಲ್ಯಾಟ್‌ನಲ್ಲಿ ಕಸ ಗುಡಿಸಲು ಈ ಮೊದಲು ತನ್ನ ಮನೆಯಿಂದ ನಡೆದುಕೊಂಡು ಬರುತ್ತಿದ್ದ ಮಹಿಳೆ, ಈಗ ಬಸ್‌ನಲ್ಲಿ ಬರುತ್ತಾಳೆ. ಇದರಿಂದ ಆಕೆಗೆ ದಿನಕ್ಕೆ ಎರಡು ಗಂಟೆ ಸಮಯ ಉಳಿತಾಯವಾಗುತ್ತಿದೆ. ನಡೆದುಕೊಂಡು ಬರುವುದರಿಂದ ಆಗುವ ಆಯಾಸ ತಪ್ಪಿರುವುದರಿಂದ, ಹತ್ತಿರದ ಅಂಗಡಿಯೊಂದರಲ್ಲಿ ಆಕೆ ಹೊಸದಾಗಿ ಪಾರ್ಟ್‌ಟೈಮ್ ಕೆಲಸಕ್ಕೆ ಸೇರಿದ್ದಾಳೆ. ಇದರಿಂದ ತಿಂಗಳಿಗೆ ₹ 1,250 ಹೆಚ್ಚುವರಿ ಆದಾಯ
ಗಳಿಸುತ್ತಿದ್ದಾಳೆ.

ಬೆಂಗಳೂರು ನಗರದಲ್ಲಿ ಬಡ ಕುಟುಂಬವೊಂದರ ತಿಂಗಳ ಖರ್ಚಿಗೆ ಸರಾಸರಿ ಅಂದಾಜು ₹ 12,497 ಬೇಕು ಎಂದು ವರದಿಗಳು ಹೇಳುತ್ತವೆ. ಹೀಗಿರುವಾಗ, ತಿಂಗಳಿಗೆ ಬಸ್‌ ಸಂಚಾರಕ್ಕೆ ವ್ಯಯಿಸಬೇಕಾದ ಹಣ ಉಳಿತಾಯವಾಗುವುದು ಅವರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲದು.

ಮಹಿಳೆಯರು ಪ್ರಯಾಣಿಸುವಾಗ ಮಾಡುವ ಖರ್ಚು ವೆಚ್ಚದಿಂದ ಸರ್ಕಾರಕ್ಕೆ ಸ್ವಲ್ಪಮಟ್ಟಿಗೆ ಪರೋಕ್ಷ ತೆರಿಗೆಯ ಆದಾಯ ಇದೆ. ಸರ್ಕಾರ ಭರಿಸುವ ಮಹಿಳಾ ಟಿಕೆಟ್ ವೆಚ್ಚದಲ್ಲೂ ಜಿಎಸ್‌ಟಿ ಸೇರಿರುತ್ತದೆ. ಹಾಗಾಗಿ, ಇದು ಸರ್ಕಾರಕ್ಕೆ ತೀರಾ ಶೂನ್ಯ ವರಮಾನದ ಖರ್ಚೇನಲ್ಲ.

ಯಾವುದೇ ಸರ್ಕಾರ ಕೃಷಿ, ಕೈಗಾರಿಕೆ, ನಗರೀಕರಣ, ರೈಲು, ರಸ್ತೆ, ಮೆಟ್ರೊ, ಶಿಕ್ಷಣ, ಆರೋಗ್ಯದಂತಹ ಕ್ಷೇತ್ರಗಳಿಗೆ ಮಾಡುವ ಹೂಡಿಕೆಯು ಆರ್ಥಿಕ ಲಾಭದ ಉದ್ದೇಶವನ್ನು ಪ್ರಧಾನವಾಗಿ ಹೊಂದಿರುವುದಿಲ್ಲ. ಸಮಾಜದ ಸಮಗ್ರ ಅಭಿವೃದ್ಧಿಗಾಗಿ, ಸುಗಮ ಸಂಚಾರಕ್ಕಾಗಿ ಅಂತಹ ಯೋಜನೆಗಳು ಬೇಕು. ಹಾಗೆಯೇ ಮಾನವ ಸಂಪನ್ಮೂಲದ ಸಮಗ್ರ ಪ್ರಗತಿಗಾಗಿ ಮಹಿಳಾ ಸಬಲೀಕರಣ ಹಾಗೂ ಅದಕ್ಕೆ ಪೂರಕವಾದ ಯೋಜನೆಗಳು ಅತ್ಯಗತ್ಯವಾಗಿ ಇರಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.