ಪ್ರಸಿದ್ಧ ಲೇಖಕರೊಬ್ಬರು ಒಮ್ಮೆ ಹೇಳಿದಂತೆ ಭೂತಕಾಲ ಎಂಬುದು ಪರರಾಜ್ಯ. ಅಲ್ಪಾವಧಿಯ ವಿದೇಶ ಪ್ರವಾಸ ಮುಗಿಸಿಕೊಂಡು ಡಿಸೆಂಬರ್ 18ರಂದು ದೆಹಲಿಯ ಮನೆಗೆ ಹಿಂದಿರುಗಿದೆ. ಆದರೆ,ಕೆಲವೇ ತಾಸುಗಳಲ್ಲಿ ಸಜ್ಜನ್ ಕುಮಾರ್‌ಗೆ ಶಿಕ್ಷೆಯಾದ ಸುದ್ದಿಯ ತಲೆಬರಹಗಳು ಮತ್ತೆ ನನ್ನನ್ನು ಪರರಾಜ್ಯವೊಂದಕ್ಕೆ ಅಟ್ಟಿದವು.
ಇಂದಿರಾ ಗಾಂಧಿ ಹತ್ಯೆಯಾದ ಆ ದಿನ, ಸಂಜೆ ಹಿಂಸಾಚಾರ ಆರಂಭವಾದ ನಂತರ ರಾತ್ರಿ ಒಂಬತ್ತರ ಹೊತ್ತಿಗೆ ನಾನು ದಕ್ಷಿಣ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೊನಿಯಲ್ಲಿರುವ ಮನೆಗೆ ಹೋಗಲು ಸೌತ್ ಎಕ್ಸ್‌ಟೆನ್ಶನ್‌ನಲ್ಲಿ ಬಸ್‍ಗಾಗಿ ಕಾಯುತ್ತಿದ್ದೆ. ವಿಶಾಲ ರಸ್ತೆಯ ಆಚೆ ಬದಿಯಲ್ಲಿ ಮಧ್ಯಮ ವಯಸ್ಕ ಸಿಖ್ ವ್ಯಕ್ತಿಯೊಬ್ಬರು ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದರು. ಪಕ್ಕದಲ್ಲಿ ಅವರ ಸ್ಕೂಟರ್ ಬಿದ್ದಿತ್ತು. ಅವರ ಉದ್ದ ಕೂದಲು ರಸ್ತೆಯಲ್ಲಿ ಉದ್ದಕ್ಕೆ ಚಾಚಿಕೊಂಡು ಬಿದ್ದಿತ್ತು.
ಆ ದಿನಗಳಲ್ಲಿ ನಾನೂ ಉದ್ದ ಕೂದಲು ಬಿಟ್ಟಿದ್ದೆ. ಬಿಟ್ಟಿದ್ದ ಗಡ್ಡವನ್ನು ಒಪ್ಪವೂ ಮಾಡಿರಲಿಲ್ಲ. ವಯಸ್ಕನಾದ ಮೇಲೆ ನಾನು ಭೀತಿ ಅನುಭವಿಸಿದ ಮೊದಲ ಕ್ಷಣಗಳು ಅವು. ಕೈತೋರಿ ನಿಲ್ಲಿಸಿದ್ದ ಎರಡು ಬಸ್‍ಗಳಿಂದ ನನ್ನನ್ನು ಹೊರಗೆ ತಳ್ಳಿದ್ದರು. ‘ಆತ ಸರ್ದಾರ್, ಒಳಗೆ ಬರಲು ಬಿಡಬೇಡಿ’ ಎಂದು ಬಸ್‍ನಲ್ಲಿದ್ದವರು ಕೂಗಿದ್ದರು. ಆ ಆಘಾತಕರ ಸಂದರ್ಭದಲ್ಲಿ ನನ್ನ ಮೊದಲ ಪ್ರತಿಕ್ರಿಯೆಯನ್ನು ಮರೆಯಲು ಸಾಧ್ಯವೇ ಇಲ್ಲ. ನಾನು ಸರ್ದಾರ್ ಅಲ್ಲ ಎಂಬುದನ್ನು ಹೇಳಲೇಬೇಕಿತ್ತು. ಹೇಗೋ, ಬೇರೊಂದು ಬಸ್ ಹಿಡಿದು ಮನೆಗೆ ತಲುಪುವುದಕ್ಕೆ ನನಗೆ ಸಾಧ್ಯವಾಯಿತು.
ಬೇಟೆಗೆ ಒಳಗಾಗಿಬಿಡುತ್ತೇನೆ ಎಂಬ ಕೆಲ ನಿಮಿಷಗಳ ಭೀತಿಯೇ ನನ್ನನ್ನು ಅಲ್ಲಾಡಿಸಿಬಿಟ್ಟಿತ್ತು. ಹಾಗಿರುವಾಗ, ದೆಹಲಿಯಲ್ಲಿದ್ದ ಸಿಖ್ಖರು ಮುಂದಿನ ಮೂರು ದಿನ ಅನುಭವಿಸಿದ ಭಯಾನಕ ಸ್ಥಿತಿಯನ್ನು ಊಹಿಸುವುದೇ ಕಷ್ಟ. ಬಳಿಕ, ಅಲ್ಲಿನವರು ಸೇರಿಕೊಂಡು ಸ್ವಯಂಪ್ರೇರಿತರಾಗಿ ಗುಂಪೊಂದನ್ನು ರಚಿಸಿದರು. ನಗರದಾದ್ಯಂತ ತೆರೆಯಲಾಗಿದ್ದ ಪರಿಹಾರ ಶಿಬಿರಗಳಿಗೆ ಹೋಗಿ ಅಲ್ಲಿನ ಅಗತ್ಯಗಳೇನು ಎಂಬುದನ್ನು ತಿಳಿದುಕೊಳ್ಳುವ ಕೆಲಸವನ್ನು ಈ ಗುಂಪು ನನಗೆ ಮತ್ತು ನನ್ನ ಮೂವರು ಸಹೋದ್ಯೋಗಿಗಳಿಗೆ ವಹಿಸಿತು. ಜೀವ ಉಳಿಸಿಕೊಂಡರೂ ಆಘಾತದಿಂದ ಜರ್ಜರಿತರಾಗಿದ್ದ ಆ ಜನರ ನಡುವೆ ಓಡಾಡಿದಾಗ ಕೇಳಿ ಬಂದ ಮೂರು ಹೆಸರುಗಳಲ್ಲಿ ಸಜ್ಜನ್ ಹೆಸರೂ ಒಂದು.
ಹತ್ಯೆಗಳು ಮತ್ತು ಬೆಂಕಿ ಹಚ್ಚುವ ಕುಕೃತ್ಯಗಳಿಗೆ ಕುಮ್ಮಕ್ಕು ನೀಡಿದವರು ಇವರು ಎಂದು ಆ ಜನರು ಮಾತನಾಡಿಕೊಳ್ಳುತ್ತಿದ್ದರು. ಶಿಬಿರವೊಂದಕ್ಕೆ ಆಹಾರ ಕಳುಹಿಸಿದವರು ಸಜ್ಜನ್ ಎಂಬುದು ತಿಳಿದಾಗ ಅಲ್ಲಿದ್ದವರು ಆಕ್ರೋಶಗೊಂಡದ್ದನ್ನೂ ನಾನು ಕಂಡಿದ್ದೇನೆ. ‘ಇದು ನಮಗೆ ವಿಷ’ ಎಂದು ಆಹಾರದ ಪಾತ್ರೆಯನ್ನು ನೆಲಕ್ಕೆ ಎಸೆಯಲು ಯತ್ನಿಸುತ್ತಾ ಒಬ್ಬ ಮಹಿಳೆ ಕೂಗುತ್ತಿದ್ದರು.
ನ್ಯಾಯ ತೀರ್ಮಾನ ಒಂದು ತಲೆಮಾರಿನ ಬಳಿಕ ಆಗಿದೆ. ವಿಳಂಬವಾಗಿದ್ದರೂ ಇದೂ ಒಂದು ರೀತಿಯ ನ್ಯಾಯದಾನವೇ. ನ್ಯಾಯ ತೀರ್ಮಾನದ ವಿಳಂಬ ಮತ್ತು ಪ್ರತೀಕಾರದ ವಿಳಂಬದ ನಡುವೆ ವ್ಯತ್ಯಾಸ ಇದೆ. ಪ್ರತೀಕಾರ ವಿಳಂಬವಾದಷ್ಟು ಅದರಿಂದ ಸಿಗುವ ತೃಪ್ತಿಯ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ನ್ಯಾಯ ತೀರ್ಮಾನ ವಿಳಂಬವಾದರೆ ಅದರಿಂದ ಹೆಚ್ಚುವರಿಯಾಗಿ ಏನೂ ಸಿಗದು.
ಬದಲಿಗೆ ನ್ಯಾಯಕ್ಕಾಗಿ ಹೋರಾಡುವವರು ದೊಡ್ಡ ಬೆಲೆ ತೆರಬೇಕಾಗುತ್ತದೆ. 1984ರಲ್ಲಿ ನಡೆದ ಬ್ಲೂಸ್ಟಾರ್ ಕಾರ್ಯಾಚರಣೆಗೆ ಪ್ರತೀಕಾರವಾಗಿ ಇಂದಿರಾ ಗಾಂಧಿ ಹತ್ಯೆ ನಡೆಯಿತೇ? ಬ್ಲೂಸ್ಟಾರ್ ಕಾರ್ಯಾಚರಣೆಯಾಗಿ ಐದು ತಿಂಗಳ ಬಳಿಕ ಇಂದಿರಾ ಹತ್ಯೆಯಾದರು. ಆದರೆ, ಗಂಡ ಮತ್ತು ಮಗನನ್ನು ಸಿಖ್ ಮಾರಣಹೋಮದಲ್ಲಿ ಕಳೆದುಕೊಂಡ ಜಗದೀಶ್ ಕೌರ್ ಅವರು ನ್ಯಾಯದಂತಹ ಏನೋ ಒಂದನ್ನು ಪಡೆದುಕೊಳ್ಳಲು ಸುದೀರ್ಘ 34 ವರ್ಷ ಕಾದಿದ್ದಾರೆ.
ಕಪೋಲಕಲ್ಪಿತ ಅಪರಾಧಗಳಿಗೂ ತಕ್ಷಣವೇ ಪ್ರತೀಕಾರ ಕೈಗೊಳ್ಳಬೇಕು ಎಂದು ಹಿಂಸಾತ್ಮಕ ಗುಂಪುಗಳು ಆಗ್ರಹಿಸುವ ದಿನಗಳಲ್ಲಿ ನಾವು ಈಗ ಬದುಕುತ್ತಿದ್ದೇವೆ. ಅಧಿಕಾರದಲ್ಲಿ ಇರುವವರು ಇಂತಹ ಪ್ರತೀಕಾರ ಮನೋಭಾವಕ್ಕೆ ಪ್ರೋತ್ಸಾಹವನ್ನೂ ನೀಡುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಜಗದೀಶ್ ಕೌರ್, ನಿರ್‌ಪ್ರೀತ್ ಕೌರ್ ಮತ್ತು ಅವರಂತಹ ಇತರ ಹಲವರ ದಿಟ್ಟತನಕ್ಕೆ ನಾವು ತಲೆಬಾಗಬೇಕು. ನ್ಯಾಯಕ್ಕಾಗಿ ಆರಂಭಿಸಿದ ಹೋರಾಟವನ್ನು ಅವರು ಎಲ್ಲಿಯೂ ಕೈಬಿಡಲಿಲ್ಲ ಅಥವಾ ಪ್ರತೀಕಾರಕ್ಕಾಗಿ ಹಾತೊರೆಯಲಿಲ್ಲ. ಇಂತಹ ಅಸಾಧಾರಣ ತೀರ್ಪು ಕೊಟ್ಟ, ಬದ್ಧತೆ ಮತ್ತು ನೈತಿಕತೆಯನ್ನು ಹೊಂದಿರುವ ಇಬ್ಬರು ನ್ಯಾಯಮೂರ್ತಿಗಳಿಗೂ ನಾವು ತಲೆಬಾಗಬೇಕು. ನಮ್ಮ ಭೂತಕಾಲದಲ್ಲಿ ಆಗಾಗ ಕಾಣಿಸಿಕೊಂಡ ಹಿಂಸಾತ್ಮಕ ಗಲಭೆಗಳನ್ನು ಅವರು ಸರಿಯಾಗಿಯೇ ಬಣ್ಣಿಸಿದ್ದಾರೆ.
ದೆಹಲಿಯಲ್ಲಿ 1984ರಲ್ಲಿ ನಡೆದ ಸಿಖ್ ವಿರೋಧಿ ಗಲಭೆ, 2002ರಲ್ಲಿ ಗುಜರಾತ್‍ನಲ್ಲಿ ಮತ್ತು 2013ರಲ್ಲಿ ಮುಜಫ್ಫರ್‌ನಗರದಲ್ಲಿ ನಡೆದ ಗಲಭೆಗಳು ಮಾನವೀಯತೆಯ ಮೇಲಿನ ಕ್ರೌರ್ಯ ಎಂದು ಈ ಇಬ್ಬರು ನ್ಯಾಯಮೂರ್ತಿಗಳು ಹೇಳಿದ್ದಾರೆ. 207 ಪುಟಗಳ ಈ ತೀರ್ಪು ನಮ್ಮ ಭೂತಕಾಲವೆಂಬ ಪರರಾಜ್ಯದ ಬಗೆಗಿನ ನೈತಿಕತೆಯ ನಕ್ಷೆ. ಅದನ್ನು ಓದಿ.
ಲೇಖಕ: ಸಮಾಜಶಾಸ್ತ್ರ ಪ್ರಾಧ್ಯಾಪಕ ದೆಹಲಿ ಯೂನಿವರ್ಸಿಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.