‘ಲಾಕ್‌ಡೌನ್ ಸಡಿಲವಾಗಿ, ಸೆರೆ ಅಂಗ್ಡಿ ಓಪನ್ ಆಗ್ಯಾವ್. ಇನ್ನಾ ಗುಡಿಗೋಳ್ ಓಪನ್ ಆಗುದಿಲ್ಲನ? ದೇವ್ರೂ ಹನಿ ನೀರು, ಮುಕ್ಕ ಎಣ್ಣಿ ಕಾಣ್ದ ಒಣಗಿ ಹೋಗ್ಯಾವ್. ದೇವ್ರ ನೆತ್ತಿ ಒಣಗಿಸಬಾರ್ದ್. ಹಂಗೇನರ ಆದ್ರ ಲೋಕಾನ್ ಒಣಗಿ ಸುಕ್ಕೆದ್ದು ಹೊಕೈತಿ’ ಎಂದು ಗೊಣಗುತ್ತ ಮಲ್ಲೇಶಿ ಜಳ್ಕಾ ಮಾಡಿ ಮಡಿಹುಡಿಲೇ ಗುಡಿಗೆ ಹೊಂಟ್.
ನಡು ದಾರ್ಯಾಗ ಪೊಲೀಸ್ ‘ಹ್ಞಾಂ... ಎಲ್ಗೆ?’ ಎಂದು ಹುಬ್ಬು ಹಾರಿಸಿದ. ‘ಗುಡಿಗುಂಡಾರ ತೊಳ್ದು, ದೇವ್ರ ಪೂಜಾ ಮಾಡಿ ಬರ್ತೈನ್ರಿಯಪ್ಪಾ’ ಎಂದು ಲಗುಬಗೆಯಿಂದ ಹೆಜ್ಜೆ ಹಾಕಿದ. ಲಾಠಿ ಅಡ್ಡ ಹಿಡಿದ ಪೊಲೀಸ್, ‘ಈಗ ಗುಡಿಗೆ ಹೋಗುವಂಗಿಲ್ಲ. ಅಲ್ಲೇ ಮನ್ಯಾಗ್ ಕುಂತು ಆನ್‌ಲೈನ್‌ನಲ್ಲಿ ಪೂಜೆ, ದರ್ಶನ ಮಾಡಬೇಕು. ಇದು ಕೊರೊನಾ ನಿಯಮ’ ಎಂದ.
ದೇವರನ್ನು ಕ್ವಾರಂಟೈನ್ ಮಾಡಿ ಸಾಫ್ಟ್‌ವೇರ್ ಮಾಡಿದ್ದು ಕೇಳಿ ಮಲ್ಲೇಶಿ ಹೌಹಾರಿದ. ‘ಅಲ್ರೀ ಸಾಹೇಬ್ರಾ..., ನಮ್ಮ ಹನ್ಮಂತದೇವ್ರು ಹಾರ್ಡ್ ಅದಾನ್ರಿ. ಅವಂಗ ಯಾವ್ ಸಾಫ್ಟವೇರ್ ಇಲ್ಲರೀ’ ಅಂದ.
‘ಮುಜರಾಯಿ ಇಲಾಖೆ ವೆಬ್‌ಸೈಟ್‌ನ್ಯಾಗ ಹನ್ಮಂತ ಅಂತ ಟೈಪ್ ಮಾಡು. ಪೂಜಾ ಪ್ರಕಾರಗಳ ಪಟ್ಟಿ ಓಪನ್ ಅಕೈತಿ, ನಿನ್ಗ ಯಾವ ರೀತಿ ಪೂಜೆ ಮಾಡ್ಬೇಕೋ ಅದರ್ರ್ ಮ್ಯಾಲ್ ಕ್ಲಿಕ್ ಮಾಡಿದ್ರ ಪೂಜಾ ರೇಟ್ ತೋರಿಸ್ತೈತಿ, ಫೋನ್ ಪೇ, ಯೋನೋ, ಗೂಗಲ್ ಪೇ ಯಾವದ್ರ್ ಮುಖಾಂತ್ರ ಹುಂಡಿಗೆ ರೊಕ್ಕ ಟ್ರಾನ್ಸಫರ್ ಮಾಡು. ತಕ್ಷಣ ಹನುಮಂತ ಪ್ರತ್ಯಕ್ಷ! ಆಡಿಯೊ ಬಟನ್ ಕ್ಲಿಕ್ ಮಾಡಿದ್ರ ಹನುಮಾನ್ ಚಾಲೀಸ್ ಮಂತ್ರ ಶುರುವಕೈತಿ. ಮನ್ಯಾಗ ಕುಂತು ಸ್ಮಾರ್ಟ್ ಆಗಿ ಪೂಜೆ ಮಾಡು. ಫ್ಲಿಪ್‌ಕಾರ್ಟ್‌ನ್ಯಾಗ ಟೇಸ್ಟಿಯಾದ ಪ್ರಸಾದ ಮನಿಗೆ ಬರ್ತೈತಿ’ ಎಂದ.
ಲಾಕ್‌ಡೌನ್ ಅವಧೀಲೂ ದೂರದಿಂದ್ಲೇ ದೇವ್ರ ಪೂಜೆ ಮಾಡೋ ಐಡಿಯಾ ಮಸ್ತೈತಿ ಎಂದು ಅನ್ನಿಸಿದರೂ, ಪ್ರಸಾದ ಹೆಂಗಿರತೈತೋ, ಅವ್ರಿವ್ರ ಕೈ ದಾಟಿ ಬರೋತನ್ಕ ಅದ್ಕೆ ಮಡಿಮೈಲಿಗೆ ಏನೂ ಆಗೋದಿಲ್ಲೇನ್ ಅನ್ನೋ ಪ್ರಶ್ನೆ, ಪೊಲೀಸಪ್ಪನ ಉರಿ ಮುಖ ನೋಡ್ತಿದ್ದಂತೆ ಮಲ್ಲೇಶಿಯ ಗಂಟಲಲ್ಲೇ ಉಳಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.