ADVERTISEMENT

ಸಂಗತ | ಫಲವತ್ತತೆಯಲ್ಲಿದೆ ನಮ್ಮ ಹಿತ

ಬಸವರಾಜ ಶಿವಪ್ಪ ಗಿರಗಾಂವಿ
Published 13 ಜುಲೈ 2024, 0:52 IST
Last Updated 13 ಜುಲೈ 2024, 0:52 IST
   

ರಾಜ್ಯದಲ್ಲಿ ಮಣ್ಣಿನ ಫಲವತ್ತತೆ ಕುಸಿದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗೆ ಸಭೆಯೊಂದರಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರವು ಮಣ್ಣಿನ ಸಂರಕ್ಷಣೆ ಕುರಿತು ಗಮನ ಹರಿಸಿರುವುದು ಸಂತೋಷದ ವಿಷಯ. ಸಭೆಯಲ್ಲಿ, ಮುಖ್ಯಮಂತ್ರಿಯವರಿಗೆ ಲಭ್ಯವಾದ ಅಂಕಿ-ಅಂಶಗಳು, ಇನ್ನು ಕೆಲವು ವರ್ಷಗಳಲ್ಲಿ ಸಾಗುವಳಿ ಜಮೀನು ಬರಡಾಗುವ ಸಂಭವವಿದೆ ಎಂಬುದನ್ನು ಹೇಳಿವೆ.

ಆದರೆ ಮಣ್ಣಿನ ಸಂರಕ್ಷಣೆಯು ಸರ್ಕಾರದ ಕರ್ತವ್ಯ ಮಾತ್ರವಲ್ಲ; ಪ್ರತಿ ನಾಗರಿಕರ ಪ್ರಮುಖ ಕರ್ತವ್ಯ. ಕೃಷಿ ಚಟುವಟಿಕೆಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುತ್ತಿರುವ ನೀರು ಮತ್ತು ರಾಸಾಯನಿಕಗಳು ಮಣ್ಣನ್ನು ಮಾತ್ರವಲ್ಲದೆ ಇಡೀ ಮನುಕುಲದ ಆರೋಗ್ಯವನ್ನು ಹಾಳುಗೆಡವುತ್ತಿವೆ. ನೀರು ಮತ್ತು ರಾಸಾಯನಿಕಗಳ ಅವೈಜ್ಞಾನಿಕ ಬಳಕೆಗೆ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕು. ಇಂದು ಕೃಷಿಕರು ಸ್ಪರ್ಧೆಗಿಳಿದಂತೆ ನೀರು ಮತ್ತು ರಾಸಾಯನಿಕಗಳ ಬಳಕೆ ಮಾಡುತ್ತಿದ್ದಾರೆ. ಅಂದರೆ ರೈತನೊಬ್ಬ 10 ಚೀಲ ರಸಗೊಬ್ಬರ ಬಳಸಿದರೆ ಪಕ್ಕದ ರೈತ 15 ಚೀಲ ರಸಗೊಬ್ಬರ ಬಳಸುತ್ತಾನೆ. ರೈತರಿಗೆ ಯಾವುದೇ ನಿಯಮ ಮತ್ತು ಕಟ್ಟುಪಾಡು ಇಲ್ಲದಿರುವುದು ಇಂದು ಜಮೀನು ಹಾಳಾಗಲು ಪ್ರಮುಖ ಕಾರಣ.

ಈಗಿನ ಪರಿಸ್ಥಿತಿಯಲ್ಲಿ ರಸಗೊಬ್ಬರ ಬಳಕೆ ನಿಲ್ಲಿಸಲು ಕಷ್ಟಸಾಧ್ಯ. ಹಾಳಾಗುತ್ತಿರುವ ಮಣ್ಣಿನ ಆರೋಗ್ಯವನ್ನು ಸಂರಕ್ಷಿಸುವ ದೃಷ್ಟಿಯಿಂದ ನೆರೆಯ ಶ್ರೀಲಂಕಾ, ಕೃಷಿಯಲ್ಲಿ ರಾಸಾಯನಿಕ ಬಳಸದಂತೆ ಕಠಿಣ ಕಾನೂನನ್ನು ಜಾರಿಗೊಳಿಸಿತು. ಈ ಕ್ರಮವು ಕೆಲವೇ ದಿನಗಳಲ್ಲಿ ಆಹಾರದ ಕೊರತೆ ಮತ್ತು ಆರ್ಥಿಕ ದಿವಾಳಿತನಕ್ಕೆ ದಾರಿಮಾಡಿಕೊಟ್ಟಿತು. ಆ ಕಠಿಣ ನಿರ್ಧಾರದ ಹೊಡೆತದಿಂದ ಶ್ರೀಲಂಕಾ ಇಂದಿಗೂ ಚೇತರಿಸಿಕೊಂಡಂತಿಲ್ಲ. ನೆರೆಯ ಭೂತಾನ್, ಕೃಷಿ ಚಟುವಟಿಕೆಗಳಲ್ಲಿ ರಾಸಾಯನಿಕಗಳನ್ನು ಬಳಸದ ವಿಶ್ವದ ಏಕೈಕ ದೇಶ. ಚೀನಾ, ಇಸ್ರೇಲ್ ದೇಶಗಳು ಸಾವಯವ ಮತ್ತು ರಾಸಾಯನಿಕಗಳ ನಿಯಮಿತ ಬಳಕೆಯಿಂದ ಕೃಷಿಯಲ್ಲಿ ಅಗಾಧ ಸಾಧನೆ ಮಾಡಿವೆ.

ADVERTISEMENT

ಅವೈಜ್ಞಾನಿಕವಾಗಿ ರಾಸಾಯನಿಕ ಮತ್ತು ನೀರನ್ನು ಬಳಸುವುದರಿಂದ ಮಣ್ಣು ಫಲವತ್ತತೆ
ಯನ್ನು ಕಳೆದುಕೊಳ್ಳುತ್ತಿರುವುದು ಸುಳ್ಳೇನಲ್ಲ. ಆದರೂ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಕಷ್ಟಸಾಧ್ಯ. ಹಿಂದಿನವರು ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಮಣ್ಣಿನ ಫಲವ
ತ್ತತೆಯನ್ನು ಕಾಪಾಡಿಕೊಳ್ಳುವ ವಿಶೇಷ ನೈಪುಣ್ಯ ಕಂಡುಕೊಂಡಿದ್ದರು. ಅಂದು ಹೊಟ್ಟೆಪಾಡಿಗಾಗಿ ನಡೆಯುತ್ತಿದ್ದ ಕೃಷಿ ಕಾರ್ಯವು ಇಂದು ವಾಣಿಜ್ಯ ಚಟುವಟಿಕೆಯೂ ಆಗಿದೆ.

ಕೃಷಿಯಲ್ಲಿ ಈ ನಿಯಮಗಳು ಜಾರಿಯಾಗಬೇಕು:

1. ರೈತರು ರಾಸುಗಳನ್ನು ಸಾಕಬೇಕು. ಈ ರಾಸುಗಳ ಗಂಜಲ ಮತ್ತು ಸಗಣಿ ನಿಯಮಿತವಾಗಿ ಮಣ್ಣಿನಲ್ಲಿ ಸೇರಬೇಕು.

2. ಮಣ್ಣು ಮತ್ತು ನೀರು ಪರೀಕ್ಷೆಯ ಆಧಾರದ ಮೇಲೆ ರಸಗೊಬ್ಬರ ವಿತರಣೆಯಾಗಬೇಕು. ಅವೈಜ್ಞಾನಿಕ ಬಳಕೆಯ ಸ್ಪರ್ಧೆಯು ಕೊನೆಯಾಗಬೇಕು.

3. ಕೃಷಿ ಸಮಸ್ಯೆಗಳಿಗೆಲ್ಲ ರಾಸಾಯನಿಕಗಳೇ ಪರಿಹಾರ ಆಗಬಾರದು.

4. ಹಿಂದಿನ ಕಾಲದಲ್ಲಿ ಅಂದಾಜು ಐದು ಕ್ವಿಂಟಲ್‌ ಆಹಾರಧಾನ್ಯ ಪಡೆಯಲು ಐದು ಟನ್‌ ತಿಪ್ಪೆಗೊಬ್ಬರ ಬಳಸುತ್ತಿದ್ದರು. ಆದ್ದರಿಂದ ಇಂದು ಭೂಮಿಯಿಂದ ಪಡೆದ ಬೆಳೆಯ ತೂಕದಷ್ಟು ಸಾವಯವ ವಸ್ತುಗಳನ್ನು ಮರಳಿ ಭೂಮಿಗೆ ಸೇರಿಸಬೇಕು.

5. ಬೆಳೆಯುಳಿಕೆಗಳ ಸುಡುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇದರಿಂದ ಅಸಂಖ್ಯಾತ ಜೀವಜಂತುಗಳ ನಾಶ ತಪ್ಪುತ್ತದೆ. ಯಾವುದೇ ಬೆಳೆಯ ಫಲವನ್ನು ಮಾತ್ರ ಪಡೆಯಬೇಕು, ಬೆಳೆಯುಳಿಕೆಗಳು ಕಡ್ಡಾಯವಾಗಿ ಮಣ್ಣಿನಲ್ಲಿ ಸೇರಬೇಕು.

6. ಸ್ಥಳೀಯ ಹವಾಮಾನಕ್ಕೆ ಸೂಕ್ತವಾದ ಬೆಳೆಯನ್ನು ಬೆಳೆಯುವ ಪದ್ಧತಿ ಜಾರಿಯಾಗಬೇಕು.

7. ಜಮೀನಿನಲ್ಲಿ ಸಮರ್ಪಕವಾದ ಹಾಗೂ ಸೂಕ್ತ ಸ್ಥಳದಲ್ಲಿ ಒಡ್ಡುಗಳು, ಬಸಿಗಾಲುವೆಗಳು ಹಾಗೂ ಹಳ್ಳ-ಕೊಳ್ಳಗಳು ಇರಬೇಕು.

8. ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಕಡಿಮೆಯಾಗಿ ಮಾನವ ಶ್ರಮದ ಬಳಕೆ ಹೆಚ್ಚಬೇಕು.

9. ದೇಶಿ ಬೀಜಗಳ ಬಳಕೆಯಾಗಬೇಕು.

10. ಮಳೆನೀರು ಸಂಗ್ರಹ ಹೆಚ್ಚಬೇಕು, ಅದು ಕೃಷಿಗೆ ಬಳಕೆಯಾಗಬೇಕು.

11. ರೈತರ ಒಟ್ಟು ಜಮೀನು ಒಂದೇ ಬೆಳೆಯ ಮೇಲೆ ಅವಲಂಬಿತವಾಗಬಾರದು. ಮಣ್ಣಿಗೆ ಸೂಕ್ತವಾದ ಎಲ್ಲ ಬೆಳೆಗಳನ್ನು ಬೆಳೆಯಬೇಕು.

12. ಅಂತರ್‌ಬೇಸಾಯ ಮತ್ತು ಅಂತರ್‌ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು.

ಆಧುನಿಕ ಕೃಷಿ ಪದ್ಧತಿಯ ಹೆಸರಿನಲ್ಲಿ ಇಂದು ಹಿಂದಿನ ಪದ್ಧತಿಗಳನ್ನು ಎಳ್ಳಷ್ಟೂ ಅನುಸರಿಸದೆ ಇರುವುದು ಆರೋಗ್ಯ ಮತ್ತು ಇಳುವರಿಯ ಮೇಲೆ ಪೆಟ್ಟುಕೊಟ್ಟಿದೆ. ಅರಣ್ಯದ ವ್ಯಾಪ್ತಿ ಕುಗ್ಗಿದೆ. ಇದರಿಂದ ಮಳೆಯ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆಯಲ್ಲದೆ ಪ್ರಕೃತಿಯಲ್ಲಿನ ಸಮತೋಲನ ತಪ್ಪಿದೆ. ಕೆಲವೊಮ್ಮೆ ಅತಿವೃಷ್ಟಿ ಹಾಗೂ ಪ್ರವಾಹ ಉಂಟಾದರೆ, ಇನ್ನು ಕೆಲವೊಮ್ಮೆ ತೀವ್ರ ಬರಗಾಲ ಎದುರಾಗುತ್ತಿದೆ.

ನೈಸರ್ಗಿಕವಾಗಿ ಸಮತಟ್ಟಾಗಿರುವ ಜಮೀನಿನಲ್ಲಿ ಮಾತ್ರ ಇಂದು ಕೃಷಿ ಚಟುವಟಿಕೆ ಕೈಗೊಳ್ಳುತ್ತಿಲ್ಲ. ಏರಿಳಿತವಿರುವ ಜಮೀನು ಸಮಗೊಳಿಸಿ ಅಲ್ಲಿಯೂ ಕೃಷಿ ಮಾಡಲಾಗುತ್ತದೆ. ಮಣ್ಣಿನ ಮೇಲ್ಪದರು ಬದಲಾದಲ್ಲಿ ಅಲ್ಲಿನ ಫಲವತ್ತತೆ ಮರುಸೃಷ್ಟಿಗೆ ನೂರಾರು ವರ್ಷಗಳು ಬೇಕು.

ಲೇಖಕ: ಸಹಾಯಕ ಮಹಾಪ್ರಬಂಧಕ (ಎಜಿಎಂ)– ಕೃಷಿ ವಿಭಾಗ, ಜಮಖಂಡಿ ಸಕ್ಕರೆ ಕಾರ್ಖಾನೆ ನಿಯಮಿತ, ಹಿರೇಪಡಸಲಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.