ಇದೇ 26ರಂದುಪ್ರಕೃತಿಯಲ್ಲಿ ಅಪರೂಪದ ಘಟನೆ ಸಂಭವಿಸಲಿದೆ. ಅದೇ ಕಂಕಣ ಸೂರ್ಯಗ್ರಹಣ. ಅಂದು ಬೆಳಿಗ್ಗೆ 8.06ಕ್ಕೆ ಪ್ರಾರಂಭವಾಗುವ ಗ್ರಹಣ, 9.29ಕ್ಕೆ ಗರಿಷ್ಠ ಪ್ರಮಾಣ ತಲುಪಿ, ಬೆಳಿಗ್ಗೆ 11.11 ಗಂಟೆಗೆ ಮುಕ್ತಾಯವಾಗಲಿದೆ. ಇದೊಂದು ಅಪರೂಪದಲ್ಲಿ ಅಪರೂಪದ ಘಟನೆ. ಏಕೆಂದರೆ, ಕರ್ನಾಟಕದಲ್ಲಿ ಮುಂದೆ ಈ ಕಂಕಣ ಸೂರ್ಯಗ್ರಹಣ ಸಂಭವಿಸುವುದು 2064ರಲ್ಲಿ! ಹಾಗೆಂದರೆ ಅಲ್ಲಿಯವರೆಗೆ ಭೂಮಿಯ ಮೇಲೆ ಸೂರ್ಯಗ್ರಹಣ ಸಂಭವಿಸುವುದೇ ಇಲ್ಲ ಎಂದಲ್ಲ. ಪ್ರಪಂಚದ ಇತರ ಭೂಭಾಗದಲ್ಲಿ ಗ್ರಹಣವಾಗುತ್ತದೆ.
2010ರಲ್ಲಿ ಕೇರಳದ ತಿರುವನಂತಪುರದಲ್ಲಿ ಪೂರ್ಣ ಕಂಕಣ ಸೂರ್ಯಗ್ರಹಣ ಮತ್ತು ಕರ್ನಾಟಕದಲ್ಲಿ ಪಾರ್ಶ್ವ ಕಂಕಣ ಸೂರ್ಯಗ್ರಹಣ ಗೋಚರಿಸಿದ್ದವು. ರಾಜ್ಯದಲ್ಲಿ ಪಾರ್ಶ್ವ ಗ್ರಹಣ ಇದ್ದರೂ ಅಂದು ಮಧ್ಯಾಹ್ನ 2 ಗಂಟೆಯಲ್ಲೇ ಸಂಜೆ 6 ಗಂಟೆಯಾದ ಅನುಭವವನ್ನು ಜನ ಪಡೆದಿದ್ದರು.
ಪ್ರಕೃತಿಯ ಎಲ್ಲ ಸ್ವಾಭಾವಿಕ ವಿದ್ಯಮಾನಗಳಲ್ಲಿ ಹೆಚ್ಚು ಗಮನ ಸೆಳೆಯುವುದು ಗ್ರಹಣಗಳು. ಅದರಲ್ಲಿಯೂ ಚಂದ್ರಗ್ರಹಣಕ್ಕೆ ಹೋಲಿಸಿದರೆ ಸೂರ್ಯಗ್ರಹಣ ಹೆಚ್ಚಿನ ಗಮನ ಸೆಳೆಯುತ್ತದೆ. ಇದರಲ್ಲಿ ಖಗ್ರಾಸ ಅಥವಾ ಸಂಪೂರ್ಣ ಸೂರ್ಯಗ್ರಹಣ ಮತ್ತು ಕಂಕಣ ಸೂರ್ಯಗ್ರಹಣ ಎಂಬ ಎರಡು ವಿಧಗಳನ್ನು ಕಾಣುತ್ತೇವೆ. ಸೂರ್ಯ ಬಿಂಬವನ್ನು ಸಂಪೂರ್ಣವಾಗಿ ಚಂದ್ರ ಮರೆ ಮಾಡಿದಾಗ ಸಂಭವಿಸುವುದು ಖಗ್ರಾಸ ಸೂರ್ಯಗ್ರಹಣವಾದರೆ, ಸೂರ್ಯನ ಕೇಂದ್ರ ಭಾಗವನ್ನು ಆವರಿಸಿಕೊಂಡು ಅಂಚಿನ ಭಾಗವನ್ನು ಉಳಿಸುವುದು ಕಂಕಣ ಸೂರ್ಯಗ್ರಹಣ.
1980ರಲ್ಲಿ ಕಾರವಾರದಲ್ಲಿ ಸಂಪೂರ್ಣ ಖಗ್ರಾಸ ಸೂರ್ಯಗ್ರಹಣ ಸಂಭವಿಸಿತ್ತು. ಆದರೆ, ಗ್ರಹಣ ವೀಕ್ಷಣೆ ಅಪಾಯಕಾರಿ ಎಂಬ ಭಯ ಆ ದಿನಗಳಲ್ಲಿ ಮನೆಮಾಡಿದ್ದ ಕಾರಣ, ಬಹುತೇಕರು ಕಿಟಕಿ, ಬಾಗಿಲು ಮುಚ್ಚಿಕೊಂಡು ಮನೆಯೊಳಗೆ ಆಶ್ರಯ ಪಡೆದಿದ್ದರು. 1994ರಲ್ಲಿ ಉತ್ತರ ಭಾರತದಲ್ಲಿ ಖಗ್ರಾಸ ಸೂರ್ಯಗ್ರಹಣ ಸಂಭವಿಸಿ, ಕರ್ನಾಟಕದಲ್ಲಿ ಪಾರ್ಶ್ವ ಗ್ರಹಣವಾಗಿತ್ತು. ಆಗ ಹೆಚ್ಚಿನ ಜನರಲ್ಲಿ ಅರಿವು ಮೂಡಿಸಿ, ಅವರು ಸುರಕ್ಷಿತವಾಗಿ ಗ್ರಹಣ ನೋಡುವ ಅವಕಾಶವನ್ನು ವಿಜ್ಞಾನ ಸಂಘಟನೆಗಳು ಮಾಡಿದ್ದವು. ಗ್ರಹಣ ಕಾಲದಲ್ಲಿ ಆಹಾರವು ವಿಷವಾಗುತ್ತದೆ ಎಂಬ ತಪ್ಪು ನಂಬಿಕೆಯನ್ನು ಹೋಗಲಾಡಿಸಲು ಡಾ. ಎಚ್.ನರಸಿಂಹಯ್ಯ ಅವರು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಡಲೆಪುರಿ ಸೇವಿಸುತ್ತಾ ಎಲ್ಲರೊಂದಿಗೆ ಗ್ರಹಣ ವೀಕ್ಷಿಸಿದ್ದರು.
ಇದನ್ನೂ ಓದಿ:ಕಾಸರಗೋಡು: ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ
ಬರಲಿರುವ ಕಂಕಣ ಸೂರ್ಯಗ್ರಹಣದ ವಿಶೇಷವೆಂದರೆ, ಕರಾವಳಿಯಲ್ಲಿ ಪೂರ್ಣ ಕಂಕಣ ಗ್ರಹಣ ಕಾಣಿಸಲಿದ್ದು, ರಾಜ್ಯದ ಉಳಿದ ಭಾಗಗಳಲ್ಲಿ ಶೇ 90ರಷ್ಟು ಕಂಡುಬರಲಿದೆ. ಈ ನೆರಳು ಬೆಳಕಿನಾಟವನ್ನು ವೀಕ್ಷಿಸಿ, ವಿಜ್ಞಾನದ ಕುತೂಹಲವನ್ನು ತಣಿಸಿಕೊಳ್ಳುವ ಅವಕಾಶ ರಾಜ್ಯದ ಜನರಿಗೆ ದೊರೆಯಲಿದೆ.
ಸೂರ್ಯನ ಸುತ್ತಲೂ ಸುತ್ತುವ ಭೂಮಿ ಮತ್ತು ಭೂಮಿಯ ಸುತ್ತಲೂ ಸುತ್ತುವ ಚಂದ್ರನ ಚಲನೆಯ ಸಂದರ್ಭದಲ್ಲಿ ಭೂಮಿ, ಸೂರ್ಯನ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣವಾಗುತ್ತದೆ. ಹಾಗೆ ನೋಡಿದರೆ, ಪ್ರತಿ ಅಮಾವಾಸ್ಯೆಯಂದು ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬರುತ್ತಾನಾದರೂ ಅವುಗಳ ಚಲನೆಯ ಪಥವು ನಿರ್ದಿಷ್ಟ ಕೇಂದ್ರದಲ್ಲಿ ಸಂಧಿಸಿದಾಗ ಮಾತ್ರ ಗ್ರಹಣವಾಗುತ್ತದೆ. ಅಂಥ ಸಂದರ್ಭ ಈಗ ಕರ್ನಾಟಕ, ಕೇರಳ, ತಮಿಳುನಾಡಿನವರಿಗೆ ಒದಗಿ ಬರಲಿದೆ.
ನಮ್ಮ ಸೌರವ್ಯೂಹದ ವ್ಯವಸ್ಥೆ ಅಚ್ಚರಿದಾಯಕ. ಸೂರ್ಯನಿಗಿಂತ 400 ಪಟ್ಟು ಚಿಕ್ಕವನಾದ ಚಂದ್ರ, ಸೂರ್ಯಗ್ರಹಣದ ದಿನ ಭೂಮಿಯಿಂದ ನೋಡಿದರೆ ಸೂರ್ಯ ಬಿಂಬವನ್ನು ಸಂಪೂರ್ಣ ಮರೆಮಾಡುತ್ತಾನೆ. ಸೂರ್ಯ ಮತ್ತು ಚಂದ್ರ ಒಂದೇ ಅಳತೆಯಲ್ಲಿ ಕಾಣುತ್ತಾರೆ. ಭೂಮಿಯ ಕಾಲುಭಾಗದಷ್ಟಿರುವ ಚಂದ್ರನನ್ನು ಭೂಮಿಯು ಚಂದ್ರಗ್ರಹಣದ ಸಂದರ್ಭದಲ್ಲಿ ಸರಿಯಾಗಿ ಮರೆಮಾಡುತ್ತದೆ. ಮೂರರ ಗಾತ್ರಗಳಲ್ಲಿ ಅಗಾಧ ವ್ಯತ್ಯಾಸವಿದ್ದರೂ ನಮಗೆ ಮೂರೂ ಆಕಾಶಕಾಯಗಳು ಒಂದೇ ಗಾತ್ರದಲ್ಲಿ ಕಾಣುವುದಕ್ಕೆ ಅವುಗಳ ನಡುವಿನ ಅಂತರವೇ ಕಾರಣ.
ಇದನ್ನೂ ಓದಿ:ಸೂರ್ಯಗ್ರಹಣ ವೀಕ್ಷಣೆಗೆ ‘ಕುಟ್ಟ’ದಲ್ಲಿ ಸಿದ್ಧತೆ
ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು. ಆದರೆ ಸೂರ್ಯಗ್ರಹಣವನ್ನು ಹಾಗೆ ನೋಡಬಾರದು. ಗ್ರಹಣಕಾಲದಲ್ಲಿ ಮಾತ್ರವಲ್ಲ, ಮುಂಜಾನೆ ಮತ್ತು ಸಂಜೆಯ ಸಮಯ ಹೊರತುಪಡಿಸಿ ಬೇರೆ ಯಾವ ಸಮಯದಲ್ಲೂ ಸೂರ್ಯನನ್ನು ನೇರವಾಗಿನೋಡಲು ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ಗ್ರಹಣವಾಗುವುದನ್ನು ನೇರವಾಗಿ ನೋಡಲು ಪ್ರಯತ್ನಿಸಿದರೆ ಕಣ್ಣಿಗೆ ಅಪಾಯ. ಸುರಕ್ಷಿತ ಕನ್ನಡಕಗಳ ಮೂಲಕ, ಬಾಲ್ ಮಿರರ್, ಪಿನ್ ಹೋಲ್ ಕ್ಯಾಮೆರಾ ಮೂಲಕಸೂರ್ಯನ ಬೆಳಕನ್ನು ಪರದೆ ಅಥವಾ ಗೋಡೆಯ ಮೇಲೆ ಮೂಡಿಸಿ ಗ್ರಹಣವನ್ನು ವೀಕ್ಷಿಸಬಹುದು.
ಗ್ರಹಣ ಕಾಲದಲ್ಲಿ ಆಹಾರವಾಗಲೀ ನೀರಾಗಲೀ ಯಾವುದೂ ವಿಷವಾಗದು. ಈ ಭಯವನ್ನು ಹೋಗಲಾಡಿಸಲು ಗ್ರಹಣವನ್ನು ಸುರಕ್ಷಿತವಾಗಿ ತೋರಿಸುವುದರ ಜೊತೆಗೆ, ಸಾಮೂಹಿಕವಾಗಿ ಆಹಾರ ಸೇವಿಸುವ ವ್ಯವಸ್ಥೆಯನ್ನು ಹಿಂದೆ ಮಾಡಲಾಗಿತ್ತು ಮತ್ತು 26ರಂದೂ ರಾಜ್ಯದ ಕನಿಷ್ಠ 1,000 ಕೇಂದ್ರಗಳಲ್ಲಿ ಮಾಡಲಾಗುತ್ತಿದೆ. ಕೇರಳದಲ್ಲಂತೂ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿ, ಎಲ್ಲ ಶಾಲೆಗಳಲ್ಲಿಯೂ ಪೋಷಕರ ಸಮಿತಿಗಳನ್ನೊಳಗೊಂಡು ‘ಸೂರ್ಯೋತ್ಸವ’ ನಡೆಸಿ, ಗ್ರಹಣ ವೀಕ್ಷಣೆ ಜೊತೆಗೆ ಆಹಾರ ಸೇವಿಸಿ ಸಂಭ್ರಮಿಸಲು ಕರೆ ನೀಡಿದೆ. ರಾಜ್ಯದಲ್ಲಿಯೂ ಇಂಥ ಕ್ರಮಕ್ಕೆ ಸರ್ಕಾರ ಮುಂದಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.