ಭೂಮಿಯನ್ನು ಕೊಳೆ ಮಾಡುವ ಪಳೆಯುಳಿಕೆ (ಫಾಸಿಲ್) ಇಂಧನಗಳ ಬಳಕೆ ನಿಲ್ಲಿಸಿ, ಎಂದೆಂದಿಗೂ ಕ್ಷಯಿಸದ ಸೂರ್ಯನ ಬಿಸಿಲು, ಗಾಳಿ, ನೀರು, ಜೀವಿಶ್ಯೇಷ, ಸಮುದ್ರದ ಅಲೆಗಳಿಂದಲೇ ನಮಗೆ ಬೇಕಾದ ಎಲ್ಲ ವಿದ್ಯುತ್ತನ್ನು ಪಡೆಯಬೇಕು ಎಂಬ ಒತ್ತಾಯ ಎಲ್ಲೆಡೆ ಜೋರಾಗಿದೆ. ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿಯ (ಐಇಎ) ಪ್ರಕಾರ, ಇಡೀ ವಿಶ್ವದಲ್ಲಿ ಈಗ ಶೇ 11ರಷ್ಟು ಶಕ್ತಿಯು ಅಕ್ಷಯ ಮೂಲಗಳಿಂದ ಸಿಗುತ್ತಿದೆ.
ನಮ್ಮಲ್ಲಿ ಫಾಸಿಲ್ ಇಂಧನ ಮೂಲಗಳಿಂದ ಶೇ 80ರಷ್ಟು ಶಕ್ತಿ ದೊರೆತರೆ, ಉಳಿದ 20 ಭಾಗ ಅಕ್ಷಯ ಮೂಲಗಳಿಂದ ದೊರಕುತ್ತಿದೆ. ಸ್ಥಾಪಿತ ಸಾಮರ್ಥ್ಯ 384 ಗಿಗಾವಾಟ್‍ನಷ್ಟಿದ್ದು, ಬೇಡಿಕೆಯ ಮುಕ್ಕಾಲು ಭಾಗವನ್ನು ಉಷ್ಣ ವಿದ್ಯುತ್ ಸ್ಥಾವರಗಳಿಂದಲೇ ಪಡೆಯುತ್ತಿದ್ದೇವೆ. ಶೇ 8ರಷ್ಟು ಕೊರತೆ ಇದೆ. ಉತ್ಪಾದನೆಯ ಶೇ 21ರಷ್ಟು ಭಾಗ ಸರಬರಾಜು ಮತ್ತು ವಿತರಣೆಯಲ್ಲೇ ಸೋರಿಹೋಗುತ್ತಿದೆ. ಪ್ರಸ್ತುತ 75 ಗಿಗಾವಾಟ್‍ನಷ್ಟು ಸೌರ ಹಾಗೂ ಗಾಳಿ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವಿದೆ. ಇನ್ನು ಮೂರು ವರ್ಷಗಳಲ್ಲಿ ಸೂರ್ಯನಿಂದ ನೂರು, ಗಾಳಿಯಿಂದ ಅರವತ್ತು, ಬಯೊಮಾಸ್‌ನಿಂದ ಹತ್ತು ಹಾಗೂ ನೀರಿನಿಂದ ಐದು ಹೀಗೆ ಒಟ್ಟು 175 ಗಿಗಾವಾಟ್‌ಗಳಷ್ಟು ಹೆಚ್ಚುವರಿ ಶಕ್ತಿ ಉತ್ಪಾದನೆಯ ಕೆಲಸ ಪ್ರಾರಂಭವಾಗಿದೆ. ಬೇಡಿಕೆ 2030ಕ್ಕೆ 817 ಗಿಗಾವಾಟ್ ಆಗಲಿದೆ.
ಮಳೆಗಾಲದಲ್ಲಿ ನೀರು ಹಾಗೂ ಗಾಳಿಯಿಂದ, ಬೇಸಿಗೆಯಲ್ಲಿ ಬಿಸಿಲು ಹಾಗೂ ಜೈವಿಕ ಅನಿಲದಿಂದ ಪರಿಸರಕ್ಕೆ ಹಾನಿಯಾಗದಂತೆ ಯಥೇಚ್ಛ ವಿದ್ಯುತ್ ಉತ್ಪಾದನೆ ಸಾಧ್ಯವಿದೆ. ಮನೆ, ಹಾಸ್ಟೆಲ್, ಹೋಟೆಲ್, ಛತ್ರಗಳಿಂದ ಹೊಮ್ಮುವ ತ್ಯಾಜ್ಯದಿಂದಲೂ ಇಂಧನ ಪಡೆಯುವ ತಂತ್ರಜ್ಞಾನ ಅಭಿವೃದ್ಧಿಗೊಂಡಿದೆ. ಪರಿಸರಕ್ಕೆ ಮಾರಕವೆಂದು ಗೊತ್ತಿದ್ದರೂ ಕಡಿಮೆ ಉತ್ಪಾದನೆ ವೆಚ್ಚ ಮತ್ತು ಹೆಚ್ಚಿನ ಸಬ್ಸಿಡಿಯಿಂದಾಗಿ ಕಲ್ಲಿದ್ದಲನ್ನೇ ಬಳಸಿ ಭೂಮಿಯ ಬಿಸಿ ಮತ್ತು ಮಾಲಿನ್ಯ ಎರಡನ್ನೂ ಏರಿಸುತ್ತಿದ್ದೇವೆ. ಜಲವಿದ್ಯುತ್ ಯೋಜನೆಗಳು ಅರಣ್ಯಗಳನ್ನು ನುಂಗಿವೆ. ಪರಮಾಣು ಸ್ಥಾವರಗಳು ವಿಕಿರಣ ಹೊಮ್ಮಿಸಿ ಜನರ ಆರೋಗ್ಯವನ್ನು ಶಾಶ್ವತವಾಗಿ ಹಾಳುಮಾಡುತ್ತಿವೆ. ಆದ್ದರಿಂದ ನವೀಕರಿಸಬಹುದಾದ ಇಂಧನಕ್ಕೆ ಮೊರೆ ಹೋಗಲೇಬೇಕಾಗಿದೆ.
ಭಾರತದ ಬಹುಭಾಗ ಬಿಸಿಲಿನ ಭಂಡಾರವಾಗಿದ್ದು, ಪ್ರತಿದಿನ ಚದರ ಮೀಟರ್ ಜಾಗದಲ್ಲಿ ಸರಾಸರಿ 500 ವಾಟ್ ಶಕ್ತಿ ಬಿಸಿಲಿನ ರೂಪದಲ್ಲಿ ಬೀಳುತ್ತದೆ. ಉನ್ನತ ತಂತ್ರಜ್ಞಾನ ಬಳಸಿ ಅದರ ಶೇ 20ರಷ್ಟನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಿದರೂ ಸಾಕು ಶೇ 40ರಷ್ಟು ವಿದ್ಯುತ್ ಬೇಡಿಕೆ ಪೂರೈಕೆಯಾಗುತ್ತದೆ. ತಜ್ಞರ ಪ್ರಕಾರ, ಇಡೀ ಮನುಕುಲ ವರ್ಷವಿಡೀ ಬಳಸುವ ಶಕ್ತಿಯನ್ನು ಸೂರ್ಯ ನಮಗೆ ಒಂದೇ ಒಂದು ಗಂಟೆಯಲ್ಲಿ ಕೊಡುತ್ತಾನೆ! ಇದರ ಬಹುಭಾಗ ವ್ಯರ್ಥವಾಗಿ ಪೋಲಾಗುತ್ತಿದೆ.
ಹಗಲಿನಲ್ಲಿ ಉತ್ಪಾದಿಸಿದ ಶಕ್ತಿಯನ್ನು ಫೋಟೊ ವೋಲ್ಟಾಯಿಕ್ ಕೋಶಗಳಲ್ಲಿ ಸಂಗ್ರಹಿಸಿ ರಾತ್ರಿ ವೇಳೆ ಬಳಸಬಹುದು. ಅಡುಗೆಗೆ, ಸ್ನಾನಕ್ಕೆ ಬೇಕಾದ ಬಿಸಿನೀರನ್ನು ಮಾಳಿಗೆಯ ಸೌರ ಫಲಕಗಳಿಂದ ಪಡೆಯಬಹುದು. ಇದನ್ನು ಸ್ಥಳೀಯ ಮಟ್ಟದಲ್ಲೇ ಉತ್ಪಾದಿಸಬಹುದಾದ್ದರಿಂದ ಉತ್ಪಾದನಾ ವೆಚ್ಚ, ಸೋರಿಕೆ ಹಾಗೂ ವಿದ್ಯುತ್ ಯುನಿಟ್‌ನ ದರ ಸಾಮಾನ್ಯಕ್ಕಿಂತ ಶೇ 40ರಷ್ಟು ಕಡಿಮೆ. ಬೆಂಗಳೂರಿನ ಬಹುತೇಕ ಮಾಳಿಗೆಗಳ ಮೇಲೆ ಸೌರ ಹೀಟರ್‌ಗಳಿವೆ. ಬಿಸಿಲು ಪುಕ್ಕಟೆಯಾಗಿ ಸಿಗುವುದರಿಂದ ಮತ್ತು ಎಲ್ಲೆಂದರಲ್ಲಿಗೆ ಮಡಚಿ ಒಯ್ಯಬಹುದಾದ ಜಮಖಾನೆಯಂತಹ ಸ್ಥಾವರಗಳೂ ಇರುವುದರಿಂದ ಬಿಸಿಲಿರುವಲ್ಲೆಲ್ಲಾ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ.
ಪಾವಗಡದಲ್ಲಿ 2,000 ಮೆ.ವಾ. ಸಾಮರ್ಥ್ಯದ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಮತ್ತು ತಮಿಳುನಾಡಿನ ರಾಮನಾಥಪುರಂನ ಕಮುತಿ ಸೌರ ವಿದ್ಯುತ್ ಸ್ಥಾವರಗಳು 1,500 ಮೆಗಾವಾಟ್‌ಗೂ ಹೆಚ್ಚು ವಿದ್ಯುತ್ ನೀಡುತ್ತಿವೆ. ಚಿತ್ರದುರ್ಗ ಬಳಿಯ ತುಪ್ಪದಹಳ್ಳಿ, ಗದಗಿನ ಕಪ್ಪತಗುಡ್ಡ, ಮುಂಡರಗಿ ಹಾಗೂ ಶಿರಹಟ್ಟಿ ತಾಲ್ಲೂಕುಗಳಲ್ಲಿ ಸ್ಥಾಪಿಸಲಾಗಿರುವ ಪವನ ವಿದ್ಯುತ್ ಸ್ಥಾವರಗಳು ನಾಡಿನ ಹಲವು ಮನೆಗಳಿಗೆ ಬೆಳಕು ನೀಡುತ್ತ ದಶಕಗಳೇ ಆಗಿವೆ. ತುಮಕೂರು, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಹಲವು ಸೌರ ವಿದ್ಯುತ್ ಉತ್ಪಾದನಾ ಘಟಕಗಳಿವೆ.
ವರ್ಲ್ಡ್ ಎಕನಾಮಿಕ್ ಫೋರಮ್ ಪ್ರಕಾರ, ಭಾರತ ತನ್ನ ಶಕ್ತಿ ಆಮದಿನಲ್ಲಿ ಸಾವಿರಾರು ಕೋಟಿ ರೂಪಾಯಿ ಉಳಿಸಬಹುದು. ಚೀನಾ ಮತ್ತು ಮಲೇಷ್ಯಾದಿಂದ ಸೌರ ಪರಿಕರ ಮತ್ತು ಸೆಲ್‍ಗಳ ಆಮದು ನಿಲ್ಲಿಸಿ ಸ್ಥಳೀಯ ಉತ್ಪಾದನೆಗೆ ಪ್ರೋತ್ಸಾಹ ನೀಡಲು, ಬರುವ ಏಪ್ರಿಲ್‍ನಿಂದ ಮಾಡ್ಯೂಲ್‍ಗಳ ಮೇಲೆ ಶೇ 40 ಮತ್ತು ಸೆಲ್‍ಗಳ ಮೇಲೆ ಶೇ 25 ಕಸ್ಟಮ್ಸ್ ಸುಂಕ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಜೊತೆಗೆ ಸರ್ಕಾರ ಕಲ್ಲಿದ್ದಲಿಗೆ ನೀಡುತ್ತಿರುವ ಹೆಚ್ಚಿನ ಸಬ್ಸಿಡಿಯನ್ನು ನಿಲ್ಲಿಸಿ, ಹೊಸ ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನಿರಾಕರಿಸಿ, ಪಿವಿಸಿ ವಿದ್ಯುತ್ತಿನ ಮೇಲಿನ ಜಿಎಸ್‍ಟಿ (ಶೇ 5) ಮತ್ತು ಅಕ್ಷಯ ಶಕ್ತಿ ಸ್ಥಾವರಗಳ ಮೇಲಿನ ಸೇಫ್‍ಗಾರ್ಡ್ ಟ್ಯಾಕ್ಸ್ ಕಡಿಮೆ ಮಾಡಬೇಕು. ತಾರಸಿ ಸ್ಥಾವರಗಳಿಂದ ಉತ್ಪಾದಿಸಿದ ಕರೆಂಟನ್ನು ಸರ್ಕಾರ ಹೆಚ್ಚಿನ ಬೆಲೆ ನೀಡಿ ಖರೀದಿಸಬೇಕು. ಅಕ್ಷಯ ಶಕ್ತಿ ದಿನದ (ಆ. 20) ಈ ಸಂದರ್ಭದಲ್ಲಿ, ಈ ಶಕ್ತಿಯ ಮಹತ್ವದ ಅರಿವು ಎಲ್ಲರಿಗೂ ಆಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.