ಲಿಂಗ ತಾರತಮ್ಯಗಳಿಗೆ ಪುರುಷರ ಪಾಲುದಾರಿಕೆ ಇರುವುದು ಸಾಬೀತಾಗಿದೆ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯನ್ನು ಬೌದ್ಧಿಕವಾಗಿ ಮತ್ತು ಸಾಮಾಜಿಕವಾಗಿ ವಿಕಸನಗೊಂಡ ವ್ಯಕ್ತಿಯನ್ನಾಗಿಸಲು ಕೈಸೇರಿಸದ ಪುರುಷ ಆಕೆಯನ್ನು ತನ್ನ ಅಧೀನ
ದಲ್ಲಿರುವಂತೆ ನೋಡಿಕೊಂಡಿದ್ದಾನೆ. ಇಂದಿಗೂ ಗ್ರಾಮೀಣ ಭಾರತದ ಕೆಳಜಾತಿ-ದಲಿತ ಮಹಿಳೆಯರ ವಾಸ್ತವ ಕಹಿಯಾಗಿದೆ. ಭಾರತೀಯ ಸ್ತ್ರೀವಾದದ ಪ್ರಸ್ತುತತೆ ಇಲ್ಲಿ ಅತ್ಯಂತ ಮುಖ್ಯವಾಗಿದೆ.
ಮಧ್ಯಮ ಮತ್ತು ಕಲಿತ ಮೇಲ್ವರ್ಗದ ಸಮಾಜದಲ್ಲಿ ಮಹಿಳಾ ಹಕ್ಕುಗಳ ಹೋರಾಟದ ವಿಭಿನ್ನ ಆಯಾಮಗಳನ್ನು ಈಗ ಗಮನಿಸುತ್ತಿದ್ದೇವೆ. ಶಿಕ್ಷಣದ ಅರಿವು ಈಗ ನಮ್ಮಲ್ಲಿದ್ದರೂ ಹೆಣ್ಣು ಮಗುವಿನ ಜನನ, ವಿದ್ಯಾವಂತ ಕುಟುಂಬದಲ್ಲಿಯೂ ಸಾಂಸಾರಿಕ ಹೊರೆಯಾಗಿ ಮಾರ್ಪಟ್ಟಿದೆ. ವರದಕ್ಷಿಣೆಯ ಪಿಡುಗು ಶಿಕ್ಷಿತ ಮಹಿಳೆಯರನ್ನೂ ಬಿಟ್ಟಿಲ್ಲ. ವರದಕ್ಷಿಣೆ ಪದ್ಧತಿ ಇಂದಿಗೂ ಪ್ರಚಲಿತವಾಗಿರುವುದು, ಕಲಿತ ಮಹಿಳೆಯರು ವಿದ್ಯೆಯ ಅರಿವಿನಲ್ಲಿ ಗಟ್ಟಿಯಾದ ವ್ಯಕ್ತಿತ್ವವನ್ನು ಮೂಡಿಸಿಕೊಳ್ಳುವಲ್ಲಿ ಎಡವಿದ್ದಾರೆ ಎಂಬುದಕ್ಕೆ ಸಾಕ್ಷಿ. ಪುರುಷ ಪಡೆಯುವ ವರದಕ್ಷಿಣೆ ಕೇವಲ ಆತನೊಬ್ಬನ ನಿರ್ಧಾರವಾಗಿರದೆ ಆತನ ತಂದೆ ತಾಯಿ ಮತ್ತು ಸ್ವತಃ ವಧು, ವಧುವಿನ ತಂದೆ ತಾಯಂದಿರ ಪರೋಕ್ಷವಾದ ಸಮ್ಮತಿ ಆಗಿರುತ್ತದೆ. ವರದಕ್ಷಿಣೆಗೆ ಒಪ್ಪುವ ಕಲಿತ ಮಹಿಳೆಯರು ಮೊದಲು ತಮ್ಮ ಪಾಲುದಾರಿಕೆಯನ್ನು ಸ್ವವಿಮರ್ಶೆಗೆ ಒಳಪಡಿಸಿಕೊಳ್ಳಬೇಕೇ ಹೊರತು ನಿರಂತರವಾಗಿ ಪುರುಷರನ್ನು ಆರೋಪಿಸುತ್ತಿದ್ದರೆ ಪರಿಹಾರ ಸಿಗದು.
ವರದಕ್ಷಿಣೆಯಿಂದ ಹಿಂಸೆ ಅನುಭವಿಸುತ್ತಿದ್ದ ಭಾರತೀಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹತ್ಯೆಯಾಗುತ್ತಿದ್ದನ್ನು ಮನಗಂಡು 1983ರಲ್ಲಿ ಭಾರತ ಸರ್ಕಾರ ವರದಕ್ಷಿಣೆ ಪ್ರತಿರೋಧಕ ಕಾಯ್ದೆಯನ್ನು ಜಾರಿಗೆ ತಂದಿತು. ನಮ್ಮ ದೇಶದ ವರದಕ್ಷಿಣೆ ಪ್ರತಿರೋಧಕ ಕಾಯ್ದೆಯು ಬಿಗಿಯಾಗಿದ್ದು ಮಹಿಳೆಗೆ ರಕ್ಷಣೆಯನ್ನು ಕೊಡುತ್ತದೆ. ಆದರೆ ಕಾಲ ಕಳೆದಂತೆ ಇದರ ದುರುಪಯೋಗವನ್ನು ಮಹಿಳೆಯರೂ ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ 2014ರ ತೀರ್ಪಿನಲ್ಲಿ ಹೇಳಿತು. ನಂತರ ವರದಕ್ಷಿಣೆಯ ಕೇಸು ದಾಖಲಾದ ತಕ್ಷಣ ವಿಚಾರಣೆಯಿಲ್ಲದೆ ಗಂಡ ಮತ್ತು ಆತನ ವೃದ್ಧ ತಂದೆತಾಯಿಯನ್ನು ಬಂಧಿಸಲಾಗುತ್ತಿದ್ದ ಅವಕಾಶವನ್ನು ಕುಂಠಿತಗೊಳಿಸಿತು. ಈಗ ಕೇಸು ದಾಖಲಾಗುವ ಮೊದಲು ‘ಫ್ಯಾಮಿಲಿ ವೆಲ್ಫೇರ್ ಕಮಿಟಿ’ಯಿಂದ ಪರಿಶೀಲನೆಗೆ ಒಳಪಡಬೇಕಾಗುತ್ತದೆ. ಭಾರತದ ಎಲ್ಲಾ ಸ್ತ್ರೀವಾದಿ ಸಂಘ ಸಂಸ್ಥೆಗಳು ಸುಪ್ರೀಂ ಕೋರ್ಟಿನ ಈ ನಿಲುವನ್ನು ಖಂಡಿಸಿದವು.
ದೇಶದಾದ್ಯಂತ ನ್ಯಾಯಾಧೀಶರು, ವರದಕ್ಷಿಣೆಯ ಕಾಯ್ದೆ (ಸೆಕ್ಷನ್ 498 ಎ) ಮತ್ತು ಅತ್ಯಾಚಾರ ಪ್ರತಿರೋಧಕ ಕಾಯ್ದೆಯ (ಸೆಕ್ಷನ್ 376) ದುರುಪಯೋಗದ ಬಗ್ಗೆ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ದೆಹಲಿಯ ಮಹಿಳಾ ಆಯೋಗವರದಿಯು ಹೇಳುವ ಪ್ರಕಾರ ಭಾರತದಲ್ಲಿ ಏಪ್ರಿಲ್ 2013ರಿಂದ ಜುಲೈ 2014ರವರೆಗೆ ದಾಖಲಾಗಿರುವ ಅತ್ಯಾಚಾರದ ಕೇಸುಗಳಲ್ಲಿ ಶೇಕಡ 53.2ರಷ್ಟು ಕೇಸುಗಳು ಸುಳ್ಳೆಂದು ಸಾಬೀತಾಗಿವೆ. ಹಾಗೆಯೇ ಮಹಿಳಾ ಸಹಾಯವಾಣಿಗಳಿಗೆ ಬರುವ ಆತಂಕದ ಕರೆಗಳಲ್ಲಿ ಶೇಕಡ 24ರಷ್ಟು ಗಂಡಸರದ್ದೇ ಆಗಿರುತ್ತವೆ ಎಂಬುದೂ ದಾಖಲಾಗಿದೆ. ವರದಕ್ಷಿಣೆ ಕಾಯ್ದೆಯ ದುರುಪಯೋಗದಿಂದ ಬೇಸತ್ತ ಗಂಡಂದಿರು ಆತ್ಮಹತ್ಯೆಗೆ ಮೊರೆಹೋಗಿರುವುದೂ ದಾಖಲಾಗಿದೆ. ಇವುಗಳ ಪ್ರಮಾಣ ಅಲ್ಪವಾಗಿದ್ದರೂ ಈ ವಿದ್ಯಮಾನದ ಅಸ್ತಿತ್ವವನ್ನು ನಿರ್ಲಕ್ಷಿಸುವುದು ನ್ಯಾಯಸಮ್ಮತವಲ್ಲ. ಯಾವುದೇ ಕಾನೂನು ದುರ್ಬಳಕೆಯಾದಾಗ ಅದರ ಪರವಾಗಿ ನಿಂತ ನೈಜ ಹೋರಾಟಗಾರರ ಬಗ್ಗೆ ಸಮಾಜವು ನಂಬಿಕೆ ಕಳೆದುಕೊಳ್ಳಬಹುದು. ಇದು ಸ್ತ್ರೀವಾದದ ಹೋರಾಟಕ್ಕೆ
ಹಿನ್ನಡೆಯಾಗಬಹುದು.
‘ಸ್ತ್ರೀವಾದವು ಪರಿಪೂರ್ಣವಾಗಬೇಕಾದರೆ ಪುರುಷರ ವಿಮೋಚನೆಯೂ ಆಗಬೇಕು’ ಎಂದು ಅಮೆರಿಕಾದ ಸ್ತ್ರೀವಾದಿ ಲೇಖಕಿ ಬೆಲ್ ಹುಕ್ಸ್ ಅಭಿಪ್ರಾಯಪಡುತ್ತಾರೆ. ಪುರುಷರ ವಿಮೋಚನೆಯನ್ನು ಅರ್ಥೈಸಿಕೊಳ್ಳುವುದರಲ್ಲಿ ಈ ಪ್ರತಿಪಾದನೆಯಲ್ಲಿನ ನ್ಯಾಯ ಅಡಗಿದೆ. ಹೇಗೆ ಪಿತೃಪಧಾನ ಸಮಾಜವು ಸ್ತ್ರೀಯು ‘ಹೆಣ್ಣಾಗಿ’ ನಡೆದುಕೊಳ್ಳಬೇಕು ಎಂದು ’ಹೆಣ್ತನದ’ ವ್ಯಕ್ತಿತ್ವವನ್ನು ಆಕೆಗೆ ಆರೋಪಿಸಿ ಆಕೆಯ ಇತರ ಸಹಜ ಗುಣಗಳನ್ನು ಗೌಣಗೊಳಿಸುವುದೋ, ಹಾಗೆಯೇ ಗಂಡಿಗೆ ’ಗಂಡಸುತನ’ದ ಆರೋಪಿತ ವ್ಯಕ್ತಿತ್ವವನ್ನು ಹೇರುತ್ತದೆ. ಇದರಿಂದ ಪುರುಷನು ಸಾರ್ವಜನಿಕವಾಗಿ ಭಾವನಾತ್ಮಕ ಅಭಿವ್ಯಕ್ತಿಯಾದ ಕಣ್ಣೀರಿಡುವುದು, ಅಡುಗೆ ಮಾಡುವುದು, ಮಕ್ಕಳ ಲಾಲನೆ ಪಾಲನೆ ಮಾಡುವುದು ಮತ್ತು ಗೃಹ ಕೃತ್ಯಗಳನ್ನು ಮಾಡುವುದನ್ನು ಅಲಿಖಿತವಾಗಿ ನಿಷೇಧಿಸಿದಂತಾಗಿದೆ. ತಂದೆಗೆ ಮಕ್ಕಳ ಪಾಲನೆ ಮಾಡಲು ಬರುವುದಿಲ್ಲವೆಂಬ ಕಾರಣವನ್ನು ಒಡ್ಡುತ್ತಾ ವಿಚ್ಛೇದಿತ ಕೇಸುಗಳಲ್ಲಿ ಮಕ್ಕಳ ಕಸ್ಟಡಿಯನ್ನು ತಂದೆಗೆ ನೀಡದಿರುವುದು ಆತನ ತಾಯ್ತನದ ನಿರಾಕರಣೆಯಾಗುತ್ತದೆ. ತನ್ನ ಮಕ್ಕಳಿಂದ ಬೇರ್ಪಟ್ಟು ಆತ ಅನುಭವಿಸುವ ನೋವು ಪ್ರಾಮಾಣಿಕವಾದದ್ದೇ. ಹಾಗೆಯೇ ವಿಭಕ್ತ ಕುಟುಂಬದ ನಿರ್ವಹಣೆಗೆ ಪುರುಷನೇ ಆರ್ಥಿಕ ಜವಾಬ್ದಾರಿಯನ್ನು ಹೊರಬೇಕು ಎಂಬ ಸಾಮಾಜಿಕ ಹೇರಿಕೆಯೂ ಆತನನ್ನು ನಿತ್ರಾಣ ಮಾಡಬಹುದು.
ಒಬ್ಬ ಪುರುಷನೂ ಭಾವನಾತ್ಮಕ ಮೃದು ವ್ಯಕ್ತಿತ್ವದ ಜೀವಿಯಾಗಿರಬಹುದು. ತಾಯಿ ಹೃದಯ, ಉದಾರತೆ, ಸಹಿಷ್ಣುತೆ, ತಾಳ್ಮೆ, ಸಹನೆ ಮುಂತಾದ ಗುಣಸಂಪನ್ನಗಳುಳ್ಳ ಪುರುಷರು ಇದ್ದಾರೆ. ಒಬ್ಬ ಮಹಿಳೆಯೂ ಒರಟುತನದ ವ್ಯಕ್ತಿತ್ವದ ಸರ್ವಾಧಿಕಾರಿಯೂ ಆಗಿರಬಹುದು. ಮಹಿಳೆಯರಲ್ಲೂ ಮನುಷ್ಯ ಸಹಜ ಗುಣಗಳೆಲ್ಲವನ್ನೂ ನಾವು ನೋಡುತ್ತೇವೆ. ಆಕೆ ಅನೇಕ ಬಾರಿ ಮುಂಗೋಪ, ಅಹಂಕಾರ, ಅಸೂಯೆ, ಒರಟುತನ, ಅಶಿಸ್ತು, ಅಸಹಿಷ್ಣುತೆ ಮುಂತಾದ ಅವಗುಣಗಳನ್ನೂ ಹೊಂದಿರುತ್ತಾಳೆ. ಅತ್ಯಂತ ಕಳಪೆ ಕಾರ್ಯಕ್ಷಮತೆಯುಳ್ಳ ವೃತ್ತಿನಿರತ ಮಹಿಳೆಯರೂ ಇದ್ದಾರೆ. ತಾಯ್ತನದ ಯಾವುದೇ ಲಕ್ಷಣಗಳನ್ನು ಹೊಂದಿರದ ಕೇವಲ ಜನ್ಮ ನೀಡುವ ವ್ಯಕ್ತಿಯಾಗಷ್ಟೇ ಉಳಿದಿರುವ ಮಹಿಳೆಯರೂ ಇದ್ದಾರೆ.
ಹಾಗಾಗಿ ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆಯ ಆರೋಪಿತ ವ್ಯಕ್ತಿತ್ವ ಮತ್ತು ತರಬೇತಿ ಏನೇ ಇದ್ದರೂ ಮನುಷ್ಯ ಸಹಜ ಗುಣಗಳು ವಿವಿಧ ರೂಪಗಳಲ್ಲಿ ಮುನ್ನೆಲೆಗೆ ಬರುತ್ತವೆ. ಸ್ತ್ರೀವಾದವು ಗಂಡು ಅಥವಾ ಹೆಣ್ಣು ಎನ್ನದೆ ನ್ಯಾಯಸಮ್ಮತವಾದ ನಿಲುವನ್ನು ಇಬ್ಬರಿಗೂ ತೋರಿಸಬೇಕು. ಈ ಅರ್ಥದಲ್ಲಿ ಸ್ತ್ರೀವಾದವು ಪುರುಷರ ವಿಮೋಚನೆಗೆ ಬೆನ್ನೆಲುಬಾಗಬೇಕು. ಪುರುಷ ಪ್ರಧಾನ ಸಮಾಜವಾಗಿರುವ ಭಾರತದಲ್ಲಿ ಈ ನಿಲುವನ್ನು ಬಹು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾದ ಅನಿವಾರ್ಯ ಸ್ತ್ರೀವಾದಕ್ಕಿದೆ. ಕೂದಲೆಳೆಯ ಅಂತರದಲ್ಲಿ ಪುರುಷ ವಿಮೋಚನೆಯು ಪಿತೃಪ್ರಧಾನ ವ್ಯವಸ್ಥೆಯ ಪ್ರತಿಪಾದನೆಗೆ ಪೂರಕವಾಗಬಹುದು.
ಪುರುಷನಾಗಿದ್ದರೂ ಸ್ತ್ರೀವಾದಿಯಾಗಿರುವುದು ಅತ್ಯಂತ ಸಹಜವಾದ ನಿಲುವು. ಕೆಲವು ಸ್ತ್ರೀವಾದಿ ಮಹಿಳೆಯರು ಪುರುಷರನ್ನು ಸ್ತ್ರೀವಾದಿಯನ್ನಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಸಿಮೋನ್ ಡಿ ಬುವಾ ತನ್ನ ’ಸೆಕೆಂಡ್ ಸೆಕ್ಸ್’ ಪುಸ್ತಕದಲ್ಲಿ ಪುರುಷನು ಎಂದಿಗೂ ನಿಜವಾದ ಅರ್ಥದಲ್ಲಿ ಸ್ತ್ರೀವಾದಿಯಾಗಿರಲು ಸಾಧ್ಯವಿಲ್ಲವೆಂದು ಪ್ರತಿಪಾದಿಸುತ್ತಾರೆ. ಪುರುಷನು ದೈಹಿಕವಾಗಿ ಮಹಿಳೆಗಿಂತ ಭಿನ್ನವಾದ್ದರಿಂದ ಮತ್ತು ಆತನ ಸಾಮಾಜಿಕ-ಸಾಂಸ್ಕೃತಿಕ ಬೆಳವಣಿಗೆಯು ಭಿನ್ನವಾದ್ದರಿಂದ ಆತನಿಗೆ ಮಹಿಳೆಯ ನೋವು, ಸಮಸ್ಯೆಗಳು ಅರ್ಥವಾಗುವುದಿಲ್ಲವೆಂದು ಇಂದಿಗೂ ಕೆಲ ಸ್ತ್ರೀವಾದಿ ಗುಂಪುಗಳು ಪ್ರತಿಪಾದಿಸುತ್ತವೆ. ಮಹಿಳೆಯ ನೋವನ್ನು ಅರಿಯಲು ಸಾಧ್ಯವಾಗದ ಪುರುಷನನ್ನು ತಮ್ಮ ಹೋರಾಟಗಳಿಂದ ದೂರವಿಡಲು ಬಯಸುತ್ತಾರೆ. ಬಹುಪಾಲು ಮಹಿಳಾ ಹೋರಾಟದ ಆರೋಪಿಯು ಪುರುಷನೇ ಆದ್ದರಿಂದ ಸ್ತ್ರೀವಾದಕ್ಕೆ ಪುರುಷನೇ ಶತ್ರುವೆಂದು ಜನಸಾಮಾನ್ಯರು ಗ್ರಹಿಸುತ್ತಾರೆ. ಈ ಗ್ರಹಿಕೆಗೆ ಕಟ್ಟಾ ಸ್ತ್ರೀವಾದಿಗಳ ಪುರುಷ ದ್ವೇಷವೂ ಕಾರಣವಾಗಿದೆ.
ಇಪ್ಪತ್ತೊಂದನೇ ಶತಮಾನದ ಈ ಕಾಲಘಟ್ಟದಲ್ಲಿ ಪುರುಷ ಮೊದಲಿಗಿಂತಲೂ ಹೆಚ್ಚು ಸುಶಿಕ್ಷಿತನೂ, ನಾಗರಿಕನೂ ಆಗಿರುವ ಸ್ತ್ರೀಪರ ವ್ಯಕ್ತಿಯಾಗಿದ್ದಾನೆ. ಗ್ಲೋಬಲ್ ರಿಸರ್ಚ್ ಕಂಪನಿ, ಪ್ರಪಂಚದ ಮುಂದುವರೆದ 15 ರಾಷ್ಟ್ರಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಪುರುಷರು ಮಹಿಳೆಯನ್ನು ತಮ್ಮ ಜೀವನದ ಸಮಪಾಲುದಾರಳು ಎಂದು ಹೆಚ್ಚಿನ ಸಂಖ್ಯೆಯಲ್ಲಿ ಒಪ್ಪಿಕೊಂಡಿದ್ದಾರೆ. ಇಪ್ಸಾಸ್ ಪಬ್ಲಿಕ್ ಅಫೇರ್ಸ್ ಸಂಸ್ಥೆಯ ಗ್ಲೋಬಲ್ ಅಡ್ವೈಸರ್ ಪ್ರಪಂಚದಾದ್ಯಂತ ಸ್ತ್ರೀವಾದ ಮತ್ತು ಲಿಂಗ ಸಮಾನತೆಯ ನಿಲುವುಗಳ ಬಗ್ಗೆ 2017ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಸುಮಾರು 88% ಪುರುಷರು ಸಮಾನ ಅವಕಾಶಗಳು ಮಹಿಳೆಗೆ ಸಿಗಬೇಕೆಂದು ಒಪ್ಪಿದರೂ ಸುಮಾರು 70% ಮಹಿಳೆಯರು ಲಿಂಗ ತಾರತಮ್ಯವನ್ನು ಇನ್ನೂ ಅನುಭವಿಸುತ್ತಿದ್ದೇವೆ ಎಂದು ನಮೂದಿಸಿದ್ದಾರೆ.
ಪ್ರಪಂಚದ ಮುಂದುವರೆದ ಮತ್ತು ಹಿಂದುಳಿದ ದೇಶಗಳ ಇಂತಹ ಸಮೀಕ್ಷೆಗಳು ಬೆಳಕು ಚೆಲ್ಲುತ್ತಿರುವುದು ಹೆಚ್ಚಾಗಿ ಮಧ್ಯಮ ಮತ್ತು ಮೇಲ್ವರ್ಗದ ಕಲಿತ ಸಮಾಜಗಳಲ್ಲಿ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಬೇಕು.ತನ್ನ ಹಕ್ಕುಗಳನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಕೆಲವು ಕಲಿತ ಮಹಿಳೆಯರ ಕಾನೂನಿನ ದುರ್ಬಳಕೆ ಮೇಲ್ನೋಟಕ್ಕೆ ಪುರುಷನ ಶೋಷಣೆಯಂತೆ ಕಾಣಬಹುದು. ಕೆಲವೊಮ್ಮೆ ಕಲಿತ ಮಹಿಳೆ ಸ್ತ್ರೀವಾದವನ್ನು ಅತಿರೇಕಕ್ಕೆ ಒಯ್ಯುತ್ತಿರಲೂಬಹುದು. ಆದರೆ ಶೋಷಣೆಗೊಳಗಾಗಿರುವ ಮಹಿಳೆಗೆ ಸ್ತ್ರೀವಾದ ಪ್ರಬಲ ಅಸ್ತ್ರ. ಪುರುಷ ಮತ್ತು ಸ್ತ್ರೀವಾದ ಇನ್ನೂ ಕ್ರಮಿಸಬೇಕಾದ ಹಾದಿಯು ಬಹಳಷ್ಟಿದೆ. ಈ ಹಾದಿಯಲ್ಲಿ ಪುರುಷ-ಮಹಿಳೆ ಪರಸ್ಪರ ಪ್ರೀತಿ ಮತ್ತು ಸಹನೆ ತೋರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.