ಒಂದು ಕಾಲದಲ್ಲಿ ಮುಂಗಾರು ಮತ್ತು ಶಾಲೆಗಳು ಒಟ್ಟಿಗೆ ಶುರುವಾಗುತ್ತಿದ್ದವು. ಈಗ ಎರಡರ ಲಯ ಕೊಂಚ ಬದಲಾಗಿದೆ. ಮುಂಗಾರು ತಡವಾಗಿಯೂ ಶಾಲೆಗಳು ಬೇಗನೇ ಶುರುವಾಗುತ್ತವೆ. ಮುಂಗಾರು ತಡವಾಗುವುದಕ್ಕೆ ಕಾರಣಗಳಿರುವಂತೆ, ಶಾಲೆಗಳು ಬೇಗ ಬಾಗಿಲು ತೆರೆಯುವುದಕ್ಕೂ ಕಾರಣಗಳಿರಬಹುದು.
ಮಗುವಿಗೆ ಕೊಡಬೇಕಾದ ಶಿಕ್ಷಣದ ಬಗ್ಗೆ ಸಮಾಜ ಈಗ ಹೆಚ್ಚು ಆಸಕ್ತಿದಾಯಕವಾಗಿದೆ. ಸರ್ಕಾರವೂ ಶಿಕ್ಷಣವನ್ನು ಆದ್ಯತೆಯಾಗಿ ಸ್ವೀಕರಿಸಿದೆ. ಪೋಷಕರು, ಶಿಕ್ಷಕರು ಮತ್ತು ಮಗು ಕಲಿಯಬೇಕಾದ ಪಠ್ಯಕ್ರಮ ಈ ಮೂರರ ಮೇಲೆ ಮಗುವಿನ ಓದಿನ ಸೌಧ ಎದ್ದೇಳಬೇಕು. ಕಲಿಕೆಯನ್ನು ಹೆಚ್ಚು ಹೆಚ್ಚು ಮಕ್ಕಳಸ್ನೇಹಿ ಆಗಿಸುವಲ್ಲಿ ವ್ಯವಸ್ಥೆ ಸತತ ಪ್ರಯತ್ನದಲ್ಲಿದೆ.
ಆದರೆ ಶಿಕ್ಷಣ ಕ್ರಮದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಬಂದಷ್ಟು ದೂರುಗಳು ಎಂದೂ ಬಂದಿರಲಿಲ್ಲ ಅನ್ನಿಸುತ್ತದೆ. ಕನಿಷ್ಠ ಕಲಿಕಾ ಸಾಮರ್ಥ್ಯ ರೂಢಿಸಿಕೊಳ್ಳಲು ಮಕ್ಕಳಿಗೆ ಆಗದಿರುವುದು, ವರ್ತನೆಯಲ್ಲಿನ ಲೋಪ, ಕಲಿತ ಮಕ್ಕಳು ಸಮಾಜದಲ್ಲಿ ನಡೆದುಕೊಳ್ಳುತ್ತಿರುವ ರೀತಿ, ಕಲಿತ ಮಕ್ಕಳೇ ಸವಾಲಾಗಿರುವ ಪರಿ, ಓದಿಗೂ ಬದುಕಿಗೂ ನಡುವೆ ದೊಡ್ಡ ಕಂದಕ ಇರುವುದು, ಮಕ್ಕಳ ಮೇಲಿನ ಸತತ ಒತ್ತಡದಂತಹ ಸಂಗತಿಗಳು ನಮ್ಮನ್ನು ಗಂಭೀರವಾಗಿ ಯೋಚಿಸುವಂತೆ ಮಾಡಿವೆ.
ಹೆಚ್ಚು ದುಡ್ಡು ಕೇಳುವ ಶಾಲೆಯಲ್ಲಿ ಸೀಟು, ಚೆಂದದ ಮಣಭಾರದ ಬ್ಯಾಗು, ಒಂದು ಹಳದಿ ಬಸ್ಸು, ಸತತ ಹೋಮ್‌ವರ್ಕ್, ಅಂಕಪಟ್ಟಿಯಲ್ಲಿ ‘ಎ’ ಪ್ಲಸ್– ಇವಿಷ್ಟನ್ನು ನಾವು ಶಿಕ್ಷಣವೆಂದು ವ್ಯಾಖ್ಯಾನಿಸುವ ಕಾಲದಲ್ಲಿ ಇದ್ದೇವೆ. ಪೋಷಕರು ಮತ್ತು ಶಿಕ್ಷಕರು ಇಬ್ಬರೂ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕಾದ ಕಾಲವೊಂದು ಎಂದೋ ಬರಬೇಕಿತ್ತು. ಶಿಕ್ಷಣ ಕ್ರಮದ ಹೆಗಲು ಸೋಲಲು ಇಬ್ಬರೂ ಕಾರಣರೆ.
‘ನನ್ನ ಮಗುವನ್ನು ನಾನೇಕೆ ಶಾಲೆಗೆ ಕಳುಹಿಸುತ್ತಿದ್ದೇನೆ? ನೌಕರಿಯ ಕಾರಣಕ್ಕಾ? ನೌಕರಿ ಸಿಗದೇಹೋದರೆ ಅವನ ಬದುಕು ಮುಗಿದು ಹೋಗುವುದೇ? ಮಗುವಿನ ಕಲಿಕೆಯ ಪ್ರಗತಿ ಹೇಗಿದೆ? ಮನೆಯ ಆಚೆ ಅದರ ವರ್ತನೆಗಳು ಹೇಗಿವೆ? ಕಲಿಕೆಯಲ್ಲಿ ಮಗು ಯಾಕೆ ಹಿಂದುಳಿದಿದೆ? ಶಾಲೆ, ಓದು, ಬರಹ ಅಲ್ಲದೆ ನಾನು ನನ್ನ ಮಗುವಿಗೆ ಬೇರೆ ಏನು ಕಲಿಸುತ್ತಿದ್ದೇನೆ? ನಾಳಿನ ಪ್ರಜೆಯಾದ ಈ ಮಗು ಮುಂದೆ ಗೌರವಯುತವಾಗಿ ಬದುಕು ನಡೆಸುವುದಕ್ಕೆ ಪೂರಕವಾಗಿ ನಾನೇನು ಕೊಡುಗೆ ನೀಡುತ್ತಿದ್ದೇನೆ? ಇಂತಹ ಪ್ರಶ್ನೆಗಳನ್ನು
ಪೋಷಕರು ಆಗಾಗ ಕೇಳಿಕೊಂಡು ಉತ್ತರ ಕಂಡುಕೊಳ್ಳಬೇಕು.
ಮಗು ಹುಟ್ಟಿದ ದಿನ ಅಪ್ಪನೂ ಹುಟ್ಟುತ್ತಾನೆ, ಅಮ್ಮನೂ ಹುಟ್ಟುತ್ತಾಳೆ. ಹಾಗೇ ಮಗು ಬೆಳೆದಂತೆ ಅಪ್ಪ ಅಮ್ಮ ಇಬ್ಬರೂ ಬೆಳೆಯುತ್ತಾ ಹೋಗಬೇಕು. ಮಕ್ಕಳನ್ನು ಬೆಳೆಸುತ್ತಾ ನಾವು ಮಾತ್ರ ದಂಪತಿಯಾಗಷ್ಟೇ ಉಳಿದುಹೋಗಬಾರದು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವಲ್ಲಿ ಎಡವಿದರೆ ನಮ್ಮ ಮಕ್ಕಳನ್ನು ನಾವೇ ಹಾಳುಗೆಡವಿದಂತೆ. ನೆನಪಿರಲಿ, ಒಳ್ಳೆಯ ಶಿಕ್ಷಣ ಅಂದರೆ ಅಂಕಪಟ್ಟಿಯಲ್ಲಿರುವ ‘ಎ’ ಪ್ಲಸ್ ಗ್ರೇಡ್ ಅಲ್ಲ.
ಮನೆಯಿಂದ ಹೊರಬೀಳುವ ಮಗು ಶಾಲೆಯಲ್ಲಿ ತನ್ನ ಬದುಕಿನ ಕಾಲು ಭಾಗವನ್ನು ಕಳೆದುಬಿಡುತ್ತದೆ. ಪೋಷಕರ ನಂತರ ಶಿಕ್ಷಕರೇ ಮಗುವನ್ನು ಹೆಚ್ಚು ಆವರಿಸಿಕೊಳ್ಳುವವರು. ಅವರ ಜವಾಬ್ದಾರಿ ದೊಡ್ಡದು. ಆದರೆ ಈಗೀಗ ಶಿಕ್ಷಕರ ಬಗ್ಗೆ ಸಮಾಜದಲ್ಲಿ ಒಂದು ಬಗೆಯ ಅಸಹನೆ ಮೂಡತೊಡಗಿದೆ. ಅವರ ಬಗ್ಗೆ ದೂರುಗಳು ಕೇಳಿಬರುತ್ತಿವೆ.
ಈ ದಿಸೆಯಲ್ಲಿ ಶಿಕ್ಷಕರು ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕಾದದ್ದು ಸೂಕ್ತ. ‘ಕಲಿಸುವ ನಾನು ದಿನಕ್ಕೆ ಎಷ್ಟು ಗಂಟೆ ಓದಿ ಹೊಸದು ಕಲಿಯುತ್ತಿದ್ದೇನೆ? ನಾನು ನನ್ನ ವೃತ್ತಿಗೆ ಎಷ್ಟು ನಿಷ್ಠನಾಗಿದ್ದೇನೆ? ಪಡೆಯುವ ಸಂಬಳಕ್ಕೆ ನಾನು ಮಾಡುತ್ತಿರುವ ಕೆಲಸ ತೃಪ್ತಿ ತರುವಂತೆ ಇದೆಯೇ? ಕಲಿಸಬೇಕಾದದ್ದನ್ನು ಕಲಿಸಿದ್ದೇನೆಯೇ? ನನ್ನ ಮಕ್ಕಳಿಗೆ ನಾನೆಷ್ಟು ಮಾದರಿ? ಪುಸ್ತಕದ ಹೊರತಾಗಿ ಮತ್ತೇನು ಕಲಿಸಿದೆ? ಬರೀ ಅಂಕ ತೆಗೆಸುವ ಯಂತ್ರವೇ ನಾನು?’ ಹೀಗೆ ಆಗಾಗ್ಗೆ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಸಜ್ಜುಗೊಳ್ಳಬೇಕು.
ಶಿಕ್ಷಕರಿಗೂ ಸಮಸ್ಯೆಗಳು ಇರುತ್ತವೆ. ಹೊರಲಾರದಷ್ಟು ಒತ್ತಡ, ನೋವು ಎಲ್ಲಾ ಇರುತ್ತವೆ. ಎಷ್ಟೋ ಬಾರಿ ತಾನೇನು ಮಾಡಬೇಕು ಎಂದು ಗೊತ್ತಾಗದಷ್ಟು ಆತ ಕಂಗಾಲಾಗುತ್ತಾನೆ. ನಿಜಕ್ಕೂ ನಮ್ಮ ವ್ಯವಸ್ಥೆ ಶಿಕ್ಷಕರನ್ನು ಸತತವಾಗಿ ನಿಯಂತ್ರಿಸುವುದನ್ನು ನಿಲ್ಲಿಸಬೇಕು. ಒಳ್ಳೆಯ ಶಿಕ್ಷಕರಿಂದ ಮಾತ್ರ ಒಳ್ಳೆಯ ನಾಡು. ಶಿಕ್ಷಕನನ್ನು ಬಲವಂತವಾಗಿ ತರಗತಿಯವರೆಗೂ ಕಳಿಸಬಹುದು. ಒಳಗೆ ಪಾಠ ಮಾಡುವವನು ಅವನೇ ಆಗಿರುತ್ತಾನೆ. ಶಿಕ್ಷಕ ನೆಮ್ಮದಿಯಿಂದ ಕಲಿಸಿದರೆ ಮಕ್ಕಳೂ ನೆಮ್ಮದಿಯಿಂದ ಕಲಿಯುತ್ತಾರೆ.
ಶಾಲೆಯು ಸಮುದಾಯದೊಳಗೆ ಬಂದು, ಸಮುದಾಯವು ಶಾಲೆಯೊಳಗೆ ಧಾವಿಸಿ, ಎರಡೂ ಸೇರಿ ಮಕ್ಕಳನ್ನು ನಾಳೆಗೆ ಕೈ ಹಿಡಿದು ನಡೆಸಬೇಕಾಗಿದೆ. ನಮ್ಮ ಈ ಕಾಲದ ಎಲ್ಲ ಸಮಸ್ಯೆಗಳಿಗೂ ನಾವು ಕೊಡುವ ಶಿಕ್ಷಣದಲ್ಲಿ ಉತ್ತರವಿದೆ. ಅಂಬೇಡ್ಕರ್ ಕೂಡ ಅದನ್ನೇ ಪ್ರತಿಪಾದಿಸುತ್ತಿದ್ದರು.
ಶಾಲಾಂಗಣವು ಗಂಟೆಯ ಸದ್ದಿಗೆ ಸಿದ್ಧವಾಗಬೇಕಾಗಿದೆ. ಆ ಸದ್ದು, ಅರೆಮಂಪರಿನಲ್ಲಿ ಕಳೆದುಹೋಗಿರುವ ನಮ್ಮೆಲ್ಲರನ್ನೂ ಎಚ್ಚರಿಸಬೇಕಾಗಿದೆ. ಮಗುವಿನ ಕಲಿಕೆಗಾಗಿ ನಾವೆಲ್ಲಾ ಹೊಸತಾಗಿ ಸಿದ್ಧರಾಗಬೇಕು. ಶಿಕ್ಷಣದ ಮೂಲಕ ಆಸ್ತಿ ಮಾಡುವ ಯೋಚನೆ ಹೊಂದಿರುವ ನಾವು, ಶಿಕ್ಷಣವನ್ನೇ ಪ್ರತಿ ಮಗುವಿನ ಆಸ್ತಿಯನ್ನಾಗಿ ಮಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.