ADVERTISEMENT

ಸಂಗತ| ಪುಟ್ಟ ಮರಿಗೆ ಜಾಗ ಕೊಡಿ

ಗುಬ್ಬಿಗಳು ನಮ್ಮ ಜೀವಿ ಪರಿಸರದ ಅವಿಭಾಜ್ಯ ಘಟಕಗಳು ಎಂಬುದರ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಕೆಲಸ ಹೆಚ್ಚಾಗಬೇ

ಗುರುರಾಜ್ ಎಸ್.ದಾವಣಗೆರೆ
Published 20 ಮಾರ್ಚ್ 2023, 21:00 IST
Last Updated 20 ಮಾರ್ಚ್ 2023, 21:00 IST
   

ಚೀನಾದಲ್ಲಿ ಆಗ ಕ್ರಾಂತಿಕಾರಿ ನಾಯಕ ಮಾವೊ ಅವರ ಆಡಳಿತವಿತ್ತು. ವಾರ್ಷಿಕ ಸರ್ಕಾರಿ ಪ್ರತಿನಿಧಿ ಸಭೆಯಲ್ಲಿ ಕೃಷಿ ಸಚಿವಾಲಯದವರು, ಆ ವರ್ಷ ಆಹಾರೋತ್ಪಾದನೆಯ ಪ್ರಮಾಣ ಭಾರಿ ಪ್ರಮಾಣದಲ್ಲಿ ಕುಂಠಿತಗೊಂಡಿದೆ, ಅದಕ್ಕೆ ಕಾರಣ ಮಿತಿಮೀರಿರುವ ಗುಬ್ಬಚ್ಚಿಗಳ ಸಂಖ್ಯೆ ಎಂದು ವರದಿ ಮಂಡಿಸಿದರು. ‘ಪರಿಹಾರವೇನು?’ ಎಂಬ ಮಾವೊ ಅವರ ಪ್ರಶ್ನೆಗೆ, ನಿಯಂತ್ರಣ ತುಂಬಾ ಸವಾಲಿನ ಕೆಲಸ, ಸಾಮೂಹಿಕ ವಧೆಯೇ ಔಷಧ ಎಂಬ ಉತ್ತರ ಬಂತು. ಅದರಂತೆ ಕಾರ್ಯಪ್ರವೃತ್ತರಾದ ಸಚಿವಾಲಯದ ಸಿಬ್ಬಂದಿಯು ಬೆಳೆ ಖಾಲಿ ಮಾಡುತ್ತಿದ್ದ ಗುಬ್ಬಚ್ಚಿಗಳನ್ನು ಕೋಟಿಗಟ್ಟಲೆ ಸಂಖ್ಯೆಯಲ್ಲಿ ವಧೆ ಮಾಡಿಬಿಟ್ಟಿತು.

ಆ ವರ್ಷದ ಇಳುವರಿಯಲ್ಲಿ ತಕ್ಕಮಟ್ಟಿನ ದಾಸ್ತಾನು ಶೇಖರಗೊಂಡಿತು. ಮುಂದಿನ ಹಂಗಾಮಿನಲ್ಲಿ ಹೊಲ, ಗದ್ದೆಗಳ ಹಸಿರು ಗೋದಾಮು ತುಂಬುವ ಸೂಚನೆ ನೀಡಿತ್ತು. ಇದ್ದಕ್ಕಿದ್ದಂತೆ ರಾತ್ರಿ ಕಳೆದು ಬೆಳಗಾಗುವ ಷ್ಟರಲ್ಲಿ ಮಿಡತೆಗಳು ದಾಳಿ ಇಟ್ಟು ನೋಡ ನೋಡುತ್ತಿದ್ದಂತೆ ಬೆಳೆಯನ್ನೆಲ್ಲಾ ಖಾಲಿ ಮಾಡಿ ನಾಲ್ಕು ವರ್ಷಗಳ ಸುದೀರ್ಘ ಆಹಾರ ಕ್ಷಾಮಕ್ಕೆ ಮುನ್ನುಡಿ ಬರೆದಿದ್ದವು. ಕಂಗಾಲಾಗಿಹೋಗಿದ್ದ ಮಾವೊ, ತಜ್ಞರ ಸಲಹೆ ಕೇಳಿದರು. ‘ಗುಬ್ಬಿಗಳು ಇಷ್ಟೊಂದು ಧ್ವಂಸ ಮಾಡುತ್ತಿರಲಿಲ್ಲ. ತಾವೂ ತಿಂದು ನಮಗೂ ಉಳಿಸುತ್ತಿದ್ದವು, ಇವು ಗುಡಿಸಿಗುಂಡಾಂತರ ಮಾಡುತ್ತಿವೆ, ಇವುಗಳ ನಾಶ ಕಷ್ಟಸಾಧ್ಯ, ನಿಯಂತ್ರಿಸಲು ಗುಬ್ಬಿಗಳೇ ಬೇಕು’ ಎಂದರು. ದೊಡ್ಡ ಜನಸಂಖ್ಯೆಯ ಹಸಿವು ನೀಗಿಸುವ ಜವಾಬ್ದಾರಿ ಹೊತ್ತಿದ್ದ ನಾಯಕ ರಷ್ಯಾದಿಂದ ಎರಡು ಕೋಟಿ, ನಮ್ಮಿಂದ ಎಪ್ಪತ್ತೈದು ಲಕ್ಷ ಗುಬ್ಬಚ್ಚಿಗಳನ್ನು ಆಮದು ಮಾಡಿಕೊಂಡು ಬೆಳೆಗಳನ್ನು ಸಹಜ ಸ್ಥಿತಿಗೆ ತಂದುಕೊಂಡರು.

ಅಂದಿನಿಂದ ಇಂದಿನವರೆಗೆ ವಿಶ್ವದಾದ್ಯಂತ ಗುಬ್ಬಚ್ಚಿಗಳು ಸುದ್ದಿಯಲ್ಲಿವೆ. ‘ನಮ್ಮ ಮನೆಯ ಪಕ್ಷಿ’ ಎಂಬ ಆಪ್ತ ಭಾವದೊಂದಿಗೆ ನೆನಪಾಗುವ ಚಿಕ್ಕ ಗಾತ್ರದ ಗುಬ್ಬಚ್ಚಿಯ ಆವಾಸ ಛಿದ್ರಗೊಂಡಿದೆ. ಪ್ರತಿವರ್ಷ ಮಾರ್ಚ್ 20ರಂದು ‘ಗುಬ್ಬಿಗಳ ದಿನಾಚರಣೆ’ ನಡೆಯುತ್ತದೆ. ಗುಬ್ಬಿ ಉಳಿಸುವ, ಸಂರಕ್ಷಿಸುವ ಕುರಿತ ಮಾತು ಎಲ್ಲೆಲ್ಲೂ ಕೇಳಿಬರುತ್ತದೆ.

ADVERTISEMENT

ನಗರಗಳಿಂದ ಗುಬ್ಬಿಗಳ ಕಣ್ಮರೆಗೆ ಹಲವು ಕಾರಣಗಳಿವೆ. ಹಿಂದಿನಂತಲ್ಲದೆ ಈಗ ರಾಸಾಯನಿಕ ಯುಕ್ತ ಪೇಂಟ್ ಬಳಸಿ ಮನೆಯನ್ನು ಅಂದ ಗೊಳಿಸಿಕೊಳ್ಳುತ್ತೇವೆ. ಪೇಂಟ್‍ನ ಘಾಟು ಗುಬ್ಬಚ್ಚಿ ಗಳಿಗೆ ಪ್ರಾಣಕಂಟಕವಾಗುತ್ತಿದೆ. ಗುಬ್ಬಚ್ಚಿಗಳು ನೆಲೆಸಲು ಬಯಸುತ್ತಿದ್ದ ದೇಶಿ ಮರಗಳು, ಗುಡಿಸಲು, ಹೆಂಚಿನ ಮನೆಗಳು ಕಡಿಮೆಯಾಗುತ್ತಿರುವುದು, ಮೊಬೈಲ್‌ ಟವರ್‌ಗಳ ವಿಕಿರಣಗಳು ಗುಬ್ಬಚ್ಚಿಗಳ
ಸಹಜ ಜೀವನಕ್ಕೆ ಅಡ್ಡಿಯಾಗುತ್ತಿವೆ. ಬೆಳೆಗೆ ಸಿಂಪಡಿಸುವ ಕಳೆ– ಕೀಟನಾಶಕಗಳಿಂದಾಗಿ,ಗುಬ್ಬಚ್ಚಿಗಳು ಅತಿ ಆಸೆಪಟ್ಟು ತಿನ್ನುವ ಪ್ರೋಟೀನ್‍ಯುಕ್ತ ಕೀಟಗಳು ದೊರಕುತ್ತಿಲ್ಲ. ಸಿರಿಧಾನ್ಯ, ಹೊಲ- ಗದ್ದೆಗಳ ಬದುವಿನ ಮರ, ನೀರಿನ ತಾಣಗಳು ಕಡಿಮೆಯಾಗಿದ್ದು ಗುಬ್ಬಚ್ಚಿಗಳ ಇಷ್ಟದ ಆಹಾರ ಸಿಗುತ್ತಿಲ್ಲ. ಹಿಂದೆಲ್ಲ ಕಾಳು ಕಡಿಗಳನ್ನೆಲ್ಲ ಮನೆಯ ಮುಂಜಗುಲಿಯಲ್ಲಿ, ತಾರಸಿಯ ಮೇಲೆ ಹರವಿಕೊಂಡಿರುತ್ತಿದ್ದರು. ಸುಲಭವಾಗಿ ಆಹಾರ ಸಿಗುತ್ತಿತ್ತು. ಈಗ ಪ್ಯಾಕೆಟ್‍ಗಳಲ್ಲಿ ಆಹಾರ ಬರುವುದರಿಂದ ಗುಬ್ಬಿಗಳಿಗೆ ಅರೆಹೊಟ್ಟೆಯಾಗಿದೆ.

ಹಿಂದಿನ ನಾಲ್ಕು ದಶಕಗಳಲ್ಲಿ ಗುಬ್ಬಚ್ಚಿಗಳ ಸಂಖ್ಯೆ ಶೇ 75ರಷ್ಟು ಕಡಿಮೆಯಾಗಿದೆ. ಗುಬ್ಬಚ್ಚಿಗಳ ಜಾಗದಲ್ಲಿ ಮೈನಾ ಮತ್ತು ಪಾರಿವಾಳಗಳು ಬಂದು ನೆಲೆಸಿವೆ. ಆದರೂ ಗುಬ್ಬಚ್ಚಿಗಳನ್ನು ಪ್ರೀತಿಸುವ, ಸಂರಕ್ಷಿಸುವ ತಂಡಗಳು ದಿನದಿಂದ ದಿನಕ್ಕೆ ಕ್ರಿಯಾಶೀಲವಾಗುತ್ತಿವೆ. ಪ್ರತಿಸಲದಂತೆ ಈ ವರ್ಷವೂ ನಾಸಿಕ್‍ನ ನೇಚರ್ ಫಾರ್‌ಎವರ್ ಸೊಸೈಟಿ (ಎನ್‌ಎಫ್‌ಎಸ್‌) ಗುಬ್ಬಿ ಗಣತಿ ಮಾಡುತ್ತಿದೆ. ಬರ್ಡ್‌ಕೌಂಟ್‌ ಇಂಡಿಯಾ (ಬಿಸಿಐ) ವಿವಿಧ ನಗರಗಳಲ್ಲಿ ಗಣತಿ ಕಾರ್ಯ ಹಮ್ಮಿಕೊಂಡಿದೆ. ಪುಣೆಯ ‘ಆರಂಭ್ ಫೌಂಡೇಷನ್’ ಹತ್ತು ವರ್ಷಗಳಿಂದ ಗುಬ್ಬಿ ರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಗುಬ್ಬಿಗಳಿಗಾಗಿ ನಿಮ್ಮ ಮನೆಯ ಸ್ವಲ್ಪ ಜಾಗವನ್ನು ಬಿಟ್ಟುಕೊಡಿ ಎಂದು ಕೇಳಿಕೊಳ್ಳುವ ಆರಂಭ್‌ನ ಡಾ. ಪಂಕಜ್ ಕೋಪರ್ಡೆ, ಈ ವರ್ಷ 5,000 ‘ಹಕ್ಕಿ ರಕ್ಷಣಾ ಕಿಟ್’ ಕೊಡುತ್ತೇವೆ ಎಂದಿದ್ದಾರೆ. ಕಿಟ್‍ನಲ್ಲಿ ಹಕ್ಕಿಗೆ ಊಟ ತಿನ್ನಿಸುವ ನಳಿಕೆ, ಕಟ್ಟಿಗೆಯ ಆಕರ್ಷಕ ಗೂಡು, ನೀರಿನ ಬಟ್ಟಲು ಮತ್ತು ಕೆಲ ದೇಶಿ ಮರಗಳ ಬೀಜಗಳಿರಲಿವೆ. ಬಳ್ಳಾರಿಯ ಸಂತೋಷ್ ಮಾರ್ಟಿನ್, ಮುಂಬೈನ ಮೊಹಮದ್ ದಿಲಾವರ್, ಬುರ್ಹಾನಿ ಫೌಂಡೇಷನ್, ಮೈಸೂರಿನ ಜೀವ್ ದಯಾ ಜೈನ್ ಚಾರಿಟಿ (ಜೆಡಿಜೆಸಿ), ಪೀಪಲ್ ಫಾರ್ ಅನಿಮಲ್ಸ್, ವೈಲ್ಡ್‌ಲೈಫ್ ವೆಲ್‍ಫೇರ್ ಸೊಸೈಟಿಯ ಮಂಜುನಾಥ ನಾಯಕ, ಚಿಕ್ಕೋಡಿಯ ವಿಠೊಬಾ, ಝೆಡ್ ಪ್ರತಿಷ್ಠಾನ, ಗುಬ್ಬಿ ಲ್ಯಾಬ್‍ಗಳು ಗುಬ್ಬಚ್ಚಿ ಸಂರಕ್ಷಣೆಗೆ ಕೈಜೋಡಿಸಿವೆ.

ಗುಬ್ಬಿಗಳು ನಮ್ಮ ಜೀವಿ ಪರಿಸರದ ಅವಿಭಾಜ್ಯ ಘಟಕಗಳು ಎಂಬುದರ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಕೆಲಸ ಹೆಚ್ಚಾಗಬೇಕಿದೆ. ದೆಹಲಿಯು ಗುಬ್ಬಚ್ಚಿಯನ್ನು ತನ್ನ ರಾಜ್ಯಪಕ್ಷಿ ಎಂದು ಗುರುತಿಸಿದೆ. ಗುಬ್ಬಿ ಎಷ್ಟು ಚಿಕ್ಕದೋ ಅದರ ಗೂಡೂ ಅಷ್ಟೇ ಚಿಕ್ಕದು. ಸ್ವಲ್ಪ ಜಾಗ ಕೊಟ್ಟು ಪ್ರೀತಿ ನೀಡಿದರೆ ನಾವು ಕಳೆದುಕೊಳ್ಳುವುದು ಏನೂ ಇಲ್ಲ ಅಲ್ಲವೆ? ಅಂದಹಾಗೆ ಈ ಬಾರಿಯ ಗುಬ್ಬಚ್ಚಿ ದಿನದ ಹೇಳಿಕೆ ‘ಐ ಲವ್ ಸ್ಪ್ಯಾರೋಸ್’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.