ಹಿಟ್ಟಿನ ಗಿರಣಿ ಬಳಿ ಶತಪಥ ಹಾಕುತ್ತಿದ್ದವರೊಬ್ಬರನ್ನು ಕುತೂಹಲದಿಂದ ‘ಯಾರ ವಿಳಾಸ ಬೇಕಿದೆ’ ಎಂದು ವಿಚಾರಿಸಿದೆ. ‘ನೋಡಿ, ಸಾಂಬಾರು ಪುಡಿಯೆಂದರೆ ಇದು. ಎಂತಹ ಅದ್ಭುತ ಪರಿಮಳ!’ ಅಂತ ಆತ ತಮಗೊದಗಿದ ಹಿಗ್ಗನ್ನು ಹಂಚಿಕೊಂಡಿದ್ದರು. ಪದೇಪದೇ ವಿಮಾನವೇರಿ ಹತ್ತಾರು ದೇಶಗಳನ್ನು ಸುತ್ತುವವರಿದ್ದಾರೆ. ಆದರೂ ಅವರಿಗೆ ಮೂಲೆ ಹಿಡಿದ ಬೈಸಿಕಲ್ಲಿನ ದೂಳು ಒರೆಸಿ, ಗಾಳಿ ತುಂಬಿಸಿ ಐದಾರು ಕಿ.ಮೀ. ಸವಾರಿ ಹೊರಡುವುದೇ ಪರಮಾನಂದ. ಬಿಸಿ ಹಾಲು ಆರಿಸಿಕೊಳ್ಳಲೆಂದು ಪೋರನಿಗೆ ಇನ್ನೊಂದು ಲೋಟ ಕೊಡಲಾಯಿತು. ಬಾಲಕ ಹಾಲು ಕುಡಿಯಲೇ ಇಲ್ಲ. ಲೋಟದಿಂದ ಲೋಟಕ್ಕೆ ಹಾಲು ಸುರಿಯುವಾಗಿನ ಸದ್ದೇ ಹಾಲಿಗಿಂತ ಅವನಿಗೆ ಪ್ರಿಯವಾಗಿತ್ತು.
ನಾವು ನೆಮ್ಮದಿಯ ಮೂಲಗಳೆಂದು ಭಾವಿಸುವ ಅವೆಷ್ಟೋ ವಾಸ್ತವದಲ್ಲಿ ಅಂತಿರದೆ ತೀರಾ ಭಿನ್ನವಾಗಿರು
ತ್ತವೆ. ಸುಖವಿಲ್ಲ, ಸಂತೋಷವಿಲ್ಲ ಎಂದು ಕೊರಗಿದರೆ ಮತ್ತೂ ಬಾಧೆಯೆ ವಿನಾ ಯಾವುದೇ ಲಾಭವಿಲ್ಲ. ಸಂತೋಷವಾಗಿರಲು ಸಕಾರಾತ್ಮಕ ಮನಃಸ್ಥಿತಿ ಯೊಂದಿಗೆ ಸಕಾರಾತ್ಮಕ ಕ್ರಮವೂ ಅಗತ್ಯ. ಸಂತುಷ್ಟ
ವಾಗಿರುವ ಕಲೆಯೆಂದರೆ ಸಾಮಾನ್ಯ ಸಂಗತಿಗಳ ನಡುವೆಯೇ ಆನಂದದ ಹುಡುಕಾಟದ ಸಾಮರ್ಥ್ಯ. ಹೊರಗೆ ಅಡ್ಡಾಟ, ಪರಿಚಿತರೊಡನೆ ಲಘು ಹರಟೆ, ಮುಗುಳ್ನಗು- ಒತ್ತಡವನ್ನು ತಗ್ಗಿಸುವ ಪರಿಣಾಮಕಾರಿ ಕ್ರಮಗಳು. ಇವಕ್ಕೆ ಕಾಸು ತೆರಬೇಕಾ ದ್ದಿಲ್ಲ. ಸಮಾಜಜೀವಿಯಾದ ಮನುಷ್ಯ ಜನರೊಟ್ಟಿಗಿದ್ದಾಗ ಮಾತ್ರ ತಾನು ಸುಖವಾಗಿದ್ದು ಪರರನ್ನೂ ಸುಖವಾಗಿಡಲು ಸಾಧ್ಯ. ಸಂತೋಷ ಒಂದು ತಲುಪುವ ತಾಣವಲ್ಲ, ಅದೊಂದು ಪ್ರಯಾಣದ ಮಾರ್ಗ.
ವಿಶ್ವಸಂಸ್ಥೆಯು ಮಾರ್ಚ್ 20ನೇ ತೇದಿಯನ್ನು ‘ಅಂತರರಾಷ್ಟ್ರೀಯ ಸಂತೋಷದ ದಿನ’ ಎಂದು ಘೋಷಿಸಿದೆ. ‘ಸಂತೋಷವತ್ ನ ಕಿಮಪಿ ಸುಖಂ ಅಸ್ತಿ’ ಎನ್ನುವುದು ಸುಭಾಷಿತ.
ಸಂತಸ ನಮ್ಮ ಗ್ರಹಿಕೆಗೆ ಸಿಗದಷ್ಟು ಸೂಕ್ಷ್ಮ. ಅದು ಬಯಸಿದಷ್ಟೂ ದೂರವಾಗುತ್ತದೆ, ಕರ್ತವ್ಯದ ತನ್ಮಯಕ್ಕೆ ಧುತ್ತನೆ ಒಲಿಯುತ್ತದೆ. ಬಣ್ಣದ ಚಿಟ್ಟೆಯ ಬೆನ್ನೇರಿದಷ್ಟೂ ಅದು ನಮ್ಮಿಂದ ದೂರ ಸರಿದಿರುತ್ತದೆ. ಪ್ರಕೃತಿ ನಿರ್ದೇಶಿಸಿದಂತೆ ಸಂತೋಷವನ್ನು ಹೊಂದುವುದು ನಮಗೆ ಸಾಧ್ಯವಾಗಬೇಕಿದೆ. ಅದರಿಂದ ಹೆಚ್ಚೆಚ್ಚು
ನಿರೀಕ್ಷಿಸಿದಷ್ಟೂ ನಿರಾಸೆ ಕಟ್ಟಿಟ್ಟ ಬುತ್ತಿ. ಓಡಾಡ ಲೊಂದು ಕಾರಿದ್ದರೆ ಅನುಕೂಲವೆನ್ನಿಸುವುದು. ಆದರೆ ಕಾರು ಪಾರ್ಕಿಂಗ್, ಸಂಚಾರ ದಟ್ಟಣೆ, ನಿಭಾವಣೆ, ನಿರ್ವಹಣೆಯಂಥ ಹಲವು ಸವಾಲುಗಳ ಸಮೇತವೇ ಬರುವುದು! ಕೊಂಡ ಕಾರು ಸದ್ಯದಲ್ಲೇ ಅದಕ್ಕಿಂತ ಹೆಚ್ಚಿನ ಗುಣಮಟ್ಟದ ಕಾರೊಂದನ್ನು ಕೊಳ್ಳಲು ಸ್ಫೂರ್ತಿಯಾದರೆ ಅಚ್ಚರಿಯೇನಿಲ್ಲ! ಸೋಜಿಗವೆಂದರೆ, ಇಲ್ಲದಿರುವ ವೈಭೋಗದತ್ತಲೆ ನಮ್ಮ ದೃಷ್ಟಿಯೇ ವಿನಾ ಇರುವುದರ ಕಿಮ್ಮತ್ತಿನ ಕುರಿತಲ್ಲ. ಸಾಧುವೊಬ್ಬ ತನ್ನ ದಿರಿಸನ್ನು ಇಲಿಗಳಿಂದ ಕಾಪಾಡಿಕೊಳ್ಳಲು ಬೆಕ್ಕು, ಹಸು, ಎತ್ತು ಸಾಕಿಕೊಂಡ ಕಥೆ ನೆನಪಾಗುವುದು.
ಹಣವು ಸಂತಸದ ಒಂದು ಭಾಗವಷ್ಟೆ. ಸಿರಿವಂತರೆಲ್ಲ ಸಂತುಷ್ಟರೆನ್ನಲಾಗದು. ಬಡತನವು ನೆಮ್ಮದಿಗೆ ಗ್ರಹಣವನ್ನೇನೂ ಹಿಡಿಸದು. ಅಂತೆಯೇ ನಿಶ್ಶಬ್ದದಲ್ಲಿ ಕರ್ತವ್ಯನಿರತರಾಗಿ, ನಿಮ್ಮ ಯಶಸ್ಸೇ ನಿಮ್ಮ ಶಬ್ದವಾಗಲಿ ಎನ್ನುತ್ತಾರೆ ಪ್ರಸಿದ್ಧ ಯುವ ಸಂಗೀತ ಸಂಯೋಜಕ ಫ್ರ್ಯಾಂಕ್ ಓಶನ್.
ಸೇಡನ್ನು ಪ್ರಚೋದಿಸುವ ಕೋಪ ತಾಪಗಳು ಸಾಂಕ್ರಾಮಿಕ. ಸಿಟ್ಟಿನ ಮೂಲದ ಬಗ್ಗೆ ಜಾಗೃತರಾದರೆ ಪರಸ್ಪರ ಸೌಹಾರ್ದ ಹೂವು ಎತ್ತಿಟ್ಟಂತೆ ಹಗುರವಾಗುವುದು. ಮುಖ್ಯ ರಸ್ತೆಯಲ್ಲಿರುವ ಮನೆ ಬಹಳಷ್ಟು ದೊಡ್ಡದಿದೆ. ಅದು ಪಾದಚಾರಿ ಹಾದಿಯತ್ತ ತುಸು ಒತ್ತುವರಿಯಾಗಿದೆ! ಎಲ್ಲ ಮನೆಗಳೂ ಹೀಗೆ ಹೊರಗಿಣುಕಿದರೆ ಊರಿನಾದ್ಯಂತ ಪಾದಚಾರಿ ಮಾರ್ಗವೇ ಇರದು. ನಮ್ಮ ಆತ್ಮಸಾಕ್ಷಿ ನಮ್ಮನ್ನು ಎಚ್ಚರಿಸಬೇಕಿದೆ. ನಡೆದಾಡುವ ಹಾದಿಯಲ್ಲಿ ಮುಳ್ಳು ಹಾಕದಿರಲು, ನಾವೇ ಆ ಹಾದಿಯಲ್ಲಿ ಓಡಾಡುತ್ತೇವಲ್ಲ ಎನ್ನುವ ಇರಾದೆಯೇ ಪರಮೌಷಧಿ.
ನಮ್ಮ ಆಯ್ಕೆಗಳು ಹೆಚ್ಚಿದಂತೆ ನಮ್ಮ ಸಂತಸಕ್ಕೆ ಅವೇ ಅಡೆತಡೆಗಳಾಗಬಲ್ಲವು. ಸರಾಸರಿ ಹನ್ನೆರಡು ನಿಮಿಷಗಳಿಗೊಮ್ಮೆ ನಾವು ನಮ್ಮ ಮೊಬೈಲ್ ನೋಡುತ್ತೇವೆ. ಅಂದರೆ ದಿನಕ್ಕೆ ಎಂಬತ್ತು ಬಾರಿ! ಅಂತರ್ಜಾಲ, ಜಿ.ಪಿ.ಎಸ್., ಟಿ.ವಿ. ಲೆಕ್ಕ ಬೇರೆ. 8 ತಾಸುಗಳು ನಿದ್ರೆ ಅನ್ನಿ. ಎಚ್ಚರವಿರುವ 16 ತಾಸುಗಳ ಪೈಕಿ 5 ತಾಸುಗಳು ಮಾತ್ರವೇ ನಮಗೆ ಪರದೆಯಿಂದ ಬಿಡುವು! ಸುನಾಮಿಯೋಪಾದಿಯ ಮಾಹಿತಿ ಬಹುತೇಕ ಅನಿವಾರ್ಯವೇನಲ್ಲ. ಅದರಿಂದ ನೆಮ್ಮದಿಗಿಂತಲೂ ಹೆಚ್ಚಾಗಿ ಆತಂಕವೇ. ಇದು ಗೊತ್ತಿದ್ದೂ ಖುಷಿ, ಹಿಗ್ಗಿಗೆ ಸಲ್ಲಬೇಕಾದ ವ್ಯವಧಾನವನ್ನು ಅನಗತ್ಯ ಸುದ್ದಿ, ಅಂಕಿ ಅಂಶಗಳಿಗೆ ಒಪ್ಪಿಸಿರುತ್ತೇವೆ.
ಬದುಕು ನಶ್ವರವೆಂಬ ಅರಿವು ಸಮಯವನ್ನು ವ್ಯರ್ಥಗೊಳಿಸದಂತೆ ಪ್ರೇರಿಸುತ್ತದೆ, ಒಂದರ್ಥದಲ್ಲಿ ಮರುಜೀವಿಸುವುದನ್ನು ಕಲಿಸುತ್ತದೆ. ನಮ್ಮ ಪರಿಸರದಲ್ಲಿ ಅಧಿಕ ಸ್ಥಳಾವಕಾಶ ಸೃಜಿಸಿಕೊಂಡರೆ ನಮ್ಮ ಮನಸ್ಸಿನಲ್ಲೂ ಹೆಚ್ಚಿನ ಸ್ಥಳಾವಕಾಶ ಲಭಿಸುತ್ತದೆ. ಗೌತಮ ಬುದ್ಧ ‘ಯಶಸ್ಸು ಸಂತೋಷದ ಕೀಲಿಕೈ ಅಲ್ಲ. ಸಂತೋಷವು ಯಶಸ್ಸಿನ ಕೀಲಿಕೈ’ ಎಂದ. ಟಿ.ಎಸ್.ನಾಗಾಭರಣ ಅವರ ನಿರ್ದೇಶನದ ‘ಬ್ಯಾಂಕರ್ ಮಾರ್ಗಯ್ಯ’ ಸಿನಿಮಾದ ಕ್ಲೈಮ್ಯಾಕ್ಸ್ ಮನಮಿಡಿಯು ವಂತಿದೆ. ಸ್ಥಾಪಿಸಿದ ಬ್ಯಾಂಕ್ ದಿವಾಳಿಯಾಗಿರುತ್ತದೆ. ಸ್ವಲ್ಪವೂ ವಿಚಲಿತನಾಗದ ಮಾರ್ಗಯ್ಯ ‘ನಾವೇನೂ ಕಳೆದುಕೊಂಡಿಲ್ಲ. ನಿಮಗಿಂತ ಆಸ್ತಿಯಿಲ್ಲ’ ಅಂತ ಮಗ, ಸೊಸೆ, ಮೊಮ್ಮಗನನ್ನು ಹತ್ತಿರ ಕರೆಯುತ್ತಾನೆ. ಪತ್ನಿ ನೀಡಿದ ಸಪ್ಪೆ ಕಾಫಿಯೇ ಅವನಿಗೆ ಅಮೃತವಾಗಿರುತ್ತದೆ.
ನಮ್ಮ ಮನಃಸ್ಥಿತಿಯನ್ನು ಹದವಾಗಿ ಇಟ್ಟುಕೊಂಡರೆ ಏತರ ಖಿನ್ನತೆ, ದುಃಖದ ಭಯ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.