ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ, ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಟ ಸುದೀಪ್ ಮತ್ತು ದರ್ಶನ್ ಅವರ ಅಭಿಮಾನಿಗಳ ಅಥವಾ ‘ಅಭಿಮಾನಿಗಳು’ ಎಂದು ಕರೆದುಕೊಳ್ಳುತ್ತಿರುವವರ ರೋಷಾವೇಶ, ಆರ್ಭಟ, ಪರಸ್ಪರ ಬೈಗುಳ ಇವುಗಳದೇ ಸುದ್ದಿ.
ಒಂದೆಡೆ ‘ಕೆಜಿಎಫ್’, ‘ಕುರುಕ್ಷೇತ್ರ’, ‘ಪೈಲ್ವಾನ್’ ಮುಂತಾದ ಚಿತ್ರಗಳು, ಕನ್ನಡ ಚಿತ್ರರಂಗವೇನೂ ಕಮ್ಮಿ ಇಲ್ಲ ಎಂಬಂತೆ ಗಳಿಕೆಯಲ್ಲಿ ದಾಂಗುಡಿ ಇಟ್ಟು, ಹಿಂದಿ ಸೇರಿದಂತೆ ಎಲ್ಲ ಭಾಷೆಯ ಚಿತ್ರೋದ್ಯಮಗಳು ನಮ್ಮ ಕಡೆ ಅಚ್ಚರಿಯ ನೋಟ ಬೀರುವಂತಾಗಿದೆ. ಇಂತಹ ಹೆಮ್ಮೆಯ ಕ್ಷಣಗಳ ನಡುವೆಯೇ ಮತ್ತೆ ‘ಸ್ಟಾರ್‌ವಾರ್’ ಎಂಬ ಅನಿಷ್ಟ ಕಾಲಿಟ್ಟಿರುವ ಸಂದರ್ಭಕ್ಕೆ ನಮ್ಮ ಚಿತ್ರರಂಗ ಸಾಕ್ಷಿಯಾಗುತ್ತಿರುವುದು ವಿಷಾದನೀಯ.
ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಟ ಪುನೀತ್ ರಾಜ್‌ಕುಮಾರ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಕೆಲ ಕಿಡಿಗೇಡಿಗಳು ‘ಡಿ ಬಾಸ್ , ಡಿ ಬಾಸ್’ ಎಂದು ಕೂಗಿರುವುದು, ನಟ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಎಂದು ಕರೆದುಕೊಳ್ಳುತ್ತಿರುವವರು ಆ ನಟರ ವೈಯಕ್ತಿಕ ವಿಚಾರಗಳನ್ನು ಎಳೆದಾಡಿ ಪೋಸ್ಟ್ ಮಾಡುತ್ತಾ ಬೈದಾಡಿಕೊಳ್ಳುತ್ತಾ ವಿಕೃತಿ ಮೆರೆಯುತ್ತಿರುವುದರ ಪರಿಣಾಮ ಏನಾಗಬಹುದು ಎಂಬ ವಿವೇಚನೆಯೇ ಇಲ್ಲದಿರುವುದು ಶೋಚನೀಯ.
‘ಗುರು ಶಿಷ್ಯರು’ ಚಿತ್ರದಲ್ಲಿ ಒಂದು ಹಾಸ್ಯ ಸನ್ನಿವೇಶ ಬರುತ್ತದೆ. ಗುರುಗಳ ಕಾಲು ಒತ್ತುತ್ತಾ ದಡ್ಡ ಶಿಷ್ಯರು, ‘ಈ ಕಾಲು ನಿಂದು, ಆ ಕಾಲು ನಂದು’ ಎನ್ನುತ್ತಾ ‘ನನ್ನ ಕಾಲಿಗೆ ಹೊಡಿತೀಯಾ, ನಿನ್ನ ಕಾಲಿಗೆ ಹೊಡಿತೀನಿ’ ಎಂದು ಗುರುಗಳ ಕಾಲಿಗೆ ಹೊಡೆಯುತ್ತ, ಕೊನೆಗೆ ಒನಕೆ, ಕೊಡಲಿಯಲ್ಲಿ ಹೊಡೆಯಲು ಮುಂದಾಗುತ್ತಾರೆ! ಈಗ ಅಭಿಮಾನಿಗಳ ಹೆಸರಿನಲ್ಲಿ ಕಚ್ಚಾಡುತ್ತಾ ಇರುವವರನ್ನು ನೋಡಿದರೆ ‘ಗುರು ಶಿಷ್ಯರು’ ಚಿತ್ರದ ಸನ್ನಿವೇಶವೇ ನೆನಪಿಗೆ ಬರುವಂತಿದೆ. ಹೀಗೆ ಈ ‘ಅಭಿಮಾನಿಗಳು’ ತಮ್ಮ ನಟನೇ ಮೇಲು ಎಂದುಕೊಂಡು ಉಳಿದವರ ಸಿನಿಮಾಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದರೆ ಅದರ ಪರಿಣಾಮವಾಗುವುದು ನಮ್ಮ ಕನ್ನಡ ಚಿತ್ರರಂಗದ ಮೇಲೆಯೇ. ಕನ್ನಡ ಚಿತ್ರವು ಪೈರಸಿಯಾದರೆ ಅದರ ವಿರುದ್ಧ ಒಟ್ಟಾಗಿ ಹೋರಾಡುವುದನ್ನು ಬಿಟ್ಟು, ಪರಸ್ಪರ ಆರೋಪಗಳಲ್ಲಿ ನಿರತರಾಗಿರುವುದು ಏನು ಸಂದೇಶ ನೀಡುತ್ತದೆ?
ಯಾವುದೇ ಒಂದು ಕ್ಷೇತ್ರದಲ್ಲಿ ಅಲ್ಲಿನ ವ್ಯಕ್ತಿಗಳ ಮಧ್ಯೆ ಒಂದಲ್ಲ ಒಂದು ಕಾರಣಕ್ಕೆ ಭಿನ್ನಾಭಿಪ್ರಾಯ ಇರುವುದು ಸಹಜ. ಅದಕ್ಕೆ ಚಿತ್ರರಂಗವೂ ಹೊರತಲ್ಲ. ತಮ್ಮನ್ನು ಅಭಿಮಾನಿಗಳೆಂದು ಕರೆದುಕೊಳ್ಳುವವರು ತಮ್ಮ ನಟರು ಪರಸ್ಪರ ಭಿನ್ನಾಭಿಪ್ರಾಯ ಮರೆತು ಒಂದಾಗುವ ನಿಟ್ಟಿನಲ್ಲಿ ಪ್ರಯತ್ನಿಸಲಿ ಅಥವಾ ಸುಮ್ಮನಿರಲಿ. ಅದು ಬಿಟ್ಟು ಅವರ ಹೆಸರಿನಲ್ಲಿ ಕಿತ್ತಾಡಿಕೊಂಡು ಆ ನಟರನ್ನೂ ಇಕ್ಕಟ್ಟಿಗೆ ಸಿಲುಕಿಸಿ, ಅವರ ಮಧ್ಯೆ ಭಿನ್ನಾಭಿಪ್ರಾಯ, ಬಿರುಕನ್ನು ಮತ್ತಷ್ಟು ಹೆಚ್ಚಿಸುವುದು ತರವಲ್ಲ.
ಚಿತ್ರರಂಗದ ಇತಿಹಾಸವನ್ನೊಮ್ಮೆ ಅವಲೋಕಿ ಸೋಣ.ಕನ್ನಡ ಚಿತ್ರರಂಗದ ಮೇರು ನಟರಾದ ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅಭಿನಯದ ‘ಗಂಧದ ಗುಡಿ’ ಸಿನಿಮಾ ಚಿತ್ರೀಕರಣದಲ್ಲಿ ಆಕಸ್ಮಿಕ ವಾಗಿ ನಡೆದ ಘಟನೆಯೊಂದು ಕಿಡಿಯಾಗಿ, ಕಾಳ್ಗಿಚ್ಚಾಗಿ ಕಾಣದ ಕೈಗಳ ಕೈವಾಡ ಹಾಗೂ ‘ಅಭಿಮಾನಿ’ಗಳೆಂದು ಕರೆದುಕೊಂಡವರ ಅತಿರೇಕಗಳಿಂದಾಗಿ, ಮುಂದೆಂದೂ ಆ ನಟರು ಒಟ್ಟಾಗಿ ನಟಿಸುವುದು ಸಾಧ್ಯ ವಾಗದಂತಾಗಿ ಹೋಯಿತು. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ (ಬಾಬು), ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗುತ್ತಿದ್ದ ತಮ್ಮ ಲೇಖನ ಮಾಲಿಕೆಯಲ್ಲಿ ಹಳೆಯ ನೆನಪೊಂದನ್ನು ದಾಖಲಿಸುತ್ತ, ತೆಲುಗು ಚಿತ್ರರಂಗದಲ್ಲಿ ಎನ್.ಟಿ. ರಾಮರಾವ್ ಮತ್ತು ಅಕ್ಕಿನೇನಿ ನಾಗೇಶ್ವರರಾವ್ ತಮ್ಮ ಸ್ಟಾರ್‌ಗಿರಿಯನ್ನು ಪಕ್ಕಕ್ಕಿಟ್ಟು ನಟಿಸಿದ, ತೆಲುಗು ಚಿತ್ರರಂಗದಲ್ಲಿ ಮೈಲುಗಲ್ಲಾದ ‘ಚಾಣಕ್ಯ ಚಂದ್ರಗುಪ್ತ’ ಚಿತ್ರವನ್ನು ಉಲ್ಲೇಖಿಸಿದ್ದರು. ಆ ಚಿತ್ರವನ್ನು ಕನ್ನಡದಲ್ಲೂ ನಿರ್ದೇಶಿಸಬೇಕು, ಅದರಲ್ಲಿ ಚಂದ್ರಗುಪ್ತನಾಗಿ ರಾಜ್‌ಕುಮಾರ್ ಹಾಗೂ ಚಾಣಕ್ಯ ನಾಗಿ ವಿಷ್ಣುವರ್ಧನ್ ಅಭಿನಯಿಸಬೇಕೆಂದು ಬಾಬು ಕನಸು ಕಂಡಿದ್ದರಂತೆ. ಆದರೆ ಇದೇ ಸ್ಟಾರ್‌ವಾರ್ ಎಂಬ ಪಿಡುಗು ಹಾಗೂ ಕಾಣದ ಕೈಗಳ ಕೈವಾಡದಿಂದ ಆ ಚಿತ್ರ ಕನಸಾಗಿಯೇ ಉಳಿಯಿತು ಎಂದು ನೋವಿನಿಂದ ಬರೆದಿದ್ದರು.
ಸುಮ್ಮನೆ ಕಲ್ಪಿಸಿಕೊಳ್ಳಿ, ಅಣ್ಣಾವ್ರು ಹಾಗೂ ವಿಷ್ಣು ‘ಚಂದ್ರಗುಪ್ತ- ಚಾಣಕ್ಯ’ರಾಗಿ ನಟಿಸಿದ್ದರೆ ಹೇಗಿ ರುತ್ತಿತ್ತು? ಆ ಚಿತ್ರ ನಿಸ್ಸಂಶಯವಾಗಿ ಕನ್ನಡ ಚಿತ್ರ ರಂಗದಲ್ಲೇ ಒಂದು ಮೈಲುಗಲ್ಲಾಗಿರುತ್ತಿತ್ತು. ಆದರೆ ನಮ್ಮ ದೌರ್ಭಾಗ್ಯ ಅದು ಕನಸಾಗಿಯೇ ಉಳಿಯಿತು.
ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರು ಹೇಳಿ ದಂತೆ ‘ಮನುಷ್ಯ ಚರಿತ್ರೆಯಿಂದ ಪಾಠ ಕಲಿಯುವುದಿಲ್ಲ ಎಂಬುದೇ ಚರಿತ್ರೆ ನಮಗೆ ಕಲಿಸುವ ಪಾಠ’ ಎಂಬಂತೆ ಇತಿಹಾಸ, ಘಟನೆಗಳಿಂದ ಪಾಠ ಕಲಿಯದಿದ್ದರೆ ನಷ್ಟ ನಮಗೇ ಹೊರತು ಬೇರೆಯವರಿಗಲ್ಲ. ಆದ್ದರಿಂದ ನಿಜವಾದ ಅಭಿಮಾನಿಗಳು ಇಂತಹ ‘ಅತಿರೇಕದ ಅಭಿ ಮಾನಿಗಳ’ ಬಗ್ಗೆ ಜಾಗೃತರಾಗಿರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ನಟರ ಹೆಸರಿನಲ್ಲಿ ಅಪಸವ್ಯಗಳನ್ನು ಮಾಡುವವರ ವಿರುದ್ಧ ಕ್ರಮ ಜರುಗಬೇಕು. ನಟರ ಮಧ್ಯೆ ಒಂದು ಆರೋಗ್ಯಕರ ಸ್ಪರ್ಧೆ ಇರಲಿ. ಅದು ಅವರ ಚಿತ್ರದ ಗುಣಮಟ್ಟ ಹಾಗೂ ಅಭಿನಯದಲ್ಲಿ ಕಾಣುವಂತಿರಲಿ. ಅದಕ್ಕೆ ಪೂರಕವಾದ ಸೌಹಾರ್ದ ವಾತಾವರಣವನ್ನು ಅಭಿಮಾನಿಗಳು ರೂಪಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.