ADVERTISEMENT

ಸಂಗತ | ದುಬಾರಿ ಆಯಿತು ಗಳಿಕೆಯ ಆಸೆ

ಯಶಸ್ಸು ಕಂಡ ನಿದರ್ಶನಗಳನ್ನೇ ಮುನ್ನೆಲೆಗೆ ತಂದು ಹಣ ಹೂಡಿಕೆಗೆ ಪ್ರೇರೇಪಿಸುವ ಕಸರತ್ತು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಜಾರಿಯಲ್ಲಿದೆ

ಎಚ್.ಕೆ.ಶರತ್
Published 7 ಜುಲೈ 2024, 22:58 IST
Last Updated 7 ಜುಲೈ 2024, 22:58 IST
   

ತರಗತಿಗಳಿಗೆ ನಿಯಮಿತವಾಗಿ ಹಾಜರಾಗದೆ ಇದ್ದ ವಿದ್ಯಾರ್ಥಿಯೊಬ್ಬ ಒಂದು ದಿನ ತರಗತಿ ಮುಗಿದ ನಂತರ ನನ್ನ ಬಳಿ ಬಂದು, ‘ನಿಮಗೆ ಒಂದು ವಿಷಯ ಹೇಳಬಹುದಾ ಸರ್’ ಅಂತ ಕೇಳಿದ. ‘ಹೇಳು ಪರ್ವಾಗಿಲ್ಲ’ ಅಂದೆ. ‘ನಂಗೆ ಬೆಳಗ್ಗೆ ಎಂಟೂವರೆಗೆ ಇರೋ ಕ್ಲಾಸ್ ಅಟೆಂಡ್‌ ಮಾಡೋಕೆ ಆಗ್ತಿಲ್ಲ ಸರ್’ ಎಂದು ತಿಳಿಸಿದ. ‘ಯಾಕೆ? ಏನು ಸಮಸ್ಯೆ?’ ಅಂತ ನಾನು ವಿಚಾರಿಸಿದೆ. ‘ನಾನು ಕೆಲಸಕ್ಕೆ ಹೋಗ್ತಿದ್ದೀನಿ ಸರ್. ಸಂಜೆ ಆರು ಗಂಟೆಗೆ ಕೆಲಸ ಶುರುವಾದ್ರೆ ಮುಗಿಯೋದು ಬೆಳಗ್ಗೆ ಆರಕ್ಕೆ. ರಾತ್ರಿ ಪೂರಾ ನಿದ್ರೆ ಮಾಡಿರಲ್ಲ. ಹೀಗಾಗಿ ಎಂಟೂವರೆಯ ಕ್ಲಾಸಿಗೆ ಬಂದು ಕೂರೋದು ಕಷ್ಟ’ ಎಂದು ಆತ ಹೇಳಿದ.

‘ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಅಂದ್ರೆ ಯಾವುದಾದ್ರೂ ಪಾರ್ಟ್ ಟೈಮ್ ಕೆಲಸಕ್ಕೆ ಹೋಗೋ ಬದಲು ಹನ್ನೆರಡು ಗಂಟೆ ದುಡಿಯಬೇಕಿರೋ ಫ್ಯಾಕ್ಟರಿ ಕೆಲಸಕ್ಕೆ ಯಾಕೆ ಸೇರಿಕೊಂಡೆ’ ಅಂತ ನಾನು ಪ್ರಶ್ನಿಸಿದೆ. ‘ನನಗಿರೋ ಸಾಲ ಮತ್ತು ಖರ್ಚಿಗೆ ಈ ಕೆಲಸ ಮಾಡೋದು ಅನಿವಾರ್ಯ ಸರ್. ತಪ್ಪೆಲ್ಲ ನಂದೇ. ಷೇರ್ ಮಾರ್ಕೆಟ್, ಬೆಟ್ಟಿಂಗ್ ಅಂತ ಬಹಳಷ್ಟು ಹಣ ಕಳೆದೆ. ಸಿಕ್ಕ ಸಿಕ್ಕ ಕಡೆಯಿಂದೆಲ್ಲ ಸಾಲ ಪಡೆದು ಕೊನೆಗೆ ಊರು ಬಿಡೋ ಪರಿಸ್ಥಿತಿ ಬಂತು. ಓದೋದು ಬಿಟ್ಟು ಬೇರೆ ರಾಜ್ಯಕ್ಕೆ ಹೋಗಿ ಅಲ್ಲೇ ಸಣ್ಣ ಪುಟ್ಟ ಕೆಲಸ ಮಾಡ್ಕೊಂಡಿದ್ದೆ. ವಿಷಯ ಗೊತ್ತಾಗಿ ಅಪ್ಪ ನಾನು ಮಾಡಿದ್ದ ಎರಡು ಲಕ್ಷ ರೂಪಾಯಿ ಸಾಲದಲ್ಲಿ ಒಂದೂವರೆ ಲಕ್ಷ ತೀರಿಸಿ, ಇಷ್ಟೇ ನನ್ನಿಂದ ಆಗೋದು, ಇನ್ಮೇಲೆ ನೀನುಂಟು ನಿನ್ನ ಜೀವನ ಉಂಟು. ಏನಾದರೂ ಮಾಡ್ಕೋ ಅಂತ ದೂರ ತಳ್ಳಿದ್ರು. ಇಷ್ಟೆಲ್ಲಾ ಆದ್ಮೇಲೆ ನಂಗೆ ನನ್ನ ತಪ್ಪಿನ ಅರಿವಾಯ್ತು. ಈಗ ಉಳಿದಿರೋ ಸಾಲ ತೀರಿಸೋಕಲ್ದೆ ನನ್ನ ಖರ್ಚಿಗೆ ಬೇಕಿರೋ ಹಣನೂ ನಾನೇ ಹೊಂದಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಕೆಲಸ ಮಾಡ್ಕೊಂಡೇ ಓದು ಮುಂದುವರೆಸಬೇಕಾದ ಅನಿವಾರ್ಯ ಇದೆ’ ಎಂದು ಅಳಲು ತೋಡಿಕೊಂಡ.

ವಿದ್ಯಾರ್ಥಿಯ ಮಾತು ಕೇಳಿ ಕಸಿವಿಸಿ ಉಂಟಾಯಿತು. ‘ಕಡಿಮೆ ಕೆಲಸದ ಅವಧಿ ಇರುವ ಬೇರೆ ಕೆಲಸ ಮಾಡೋದು ಸೂಕ್ತ ಅನ್ಸುತ್ತೆ. ಯೋಚ್ನೆ ಮಾಡು’ ಅಂತ ಸಲಹೆ ನೀಡಿದೆ. ಐಪಿಎಲ್ ಬೆಟ್ಟಿಂಗ್ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೂಲಕ ಕಡಿಮೆ ಅವಧಿಯಲ್ಲಿ ಹಣ ಗಳಿಸಬಹುದು ಎಂದು ಭಾವಿಸಿ, ಕೊನೆಗೆ ಸಾಲದ ಸುಳಿಯಲ್ಲಿ ಸಿಲುಕಿ ಕೆಲವು ವಿದ್ಯಾರ್ಥಿಗಳು ತಮ್ಮ ಬದುಕನ್ನೇ ಅಸಹನೀಯ ಮಾಡಿಕೊಂಡಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವಂತೆ ಪ್ರೇರೇಪಿಸುವ ಜಾಹೀರಾತುಗಳು, ಸಲಹೆ–ಸೂಚನೆ ನೀಡುವ ಮಾರುಕಟ್ಟೆ ತಜ್ಞರ ವಿಡಿಯೊಗಳು ಬೆರಳ ತುದಿಯಲ್ಲಿ ಲಭ್ಯವಿರುವುದರಿಂದ ‘ನಾವೇಕೆ ಒಮ್ಮೆ ಪ್ರಯತ್ನಿಸಿ ನೋಡಬಾರದು’ ಎಂದು ಶುರುವಾಗುವ ಹೂಡಿಕೆ ಹಂತಹಂತವಾಗಿ ಗೀಳಾಗಿ ಪರಿಣಮಿಸುತ್ತದೆ. ಅವರು ಬಹಳಷ್ಟು ಹಣ ಕಳೆದುಕೊಳ್ಳುವುದೂ ಇದೆ.

ADVERTISEMENT

ಅದರಲ್ಲೂ ತಮ್ಮೊಂದಿಗೆ ಓದುತ್ತಿರುವ ಇತರ ವಿದ್ಯಾರ್ಥಿಗಳ ಪೈಕಿ ಯಾರಾದರೂ ಷೇರು
ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿದ ನಿದರ್ಶನ ಕಂಡರೆ, ಅವರಿಂದ ಪ್ರೇರೇಪಿತರಾಗಿ ಇತರರು ಕೂಡ ಹಣ ಹೂಡಲು ಉತ್ಸಾಹ ತೋರುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದರ ಸಾಧಕ-ಬಾಧಕಗಳ ಕುರಿತು ವಾಸ್ತವಿಕ ನೆಲಗಟ್ಟಿನಲ್ಲಿ ತಿಳಿವಳಿಕೆ ಮೂಡಿಸುವ ಬದಲು, ಯಶಸ್ಸು ಕಂಡ ಕೆಲವು
ನಿದರ್ಶನಗಳನ್ನೇ ಮುನ್ನೆಲೆಗೆ ತಂದು ಹಣ ಹೂಡಿಕೆಗೆ ಪ್ರೇರೇಪಿಸುವ ಕಸರತ್ತು ಕೆಲವು ಸಾಮಾಜಿಕ
ಜಾಲತಾಣಗಳಲ್ಲಿ ಹಾಗೂ ಇತರ ಕೆಲವೆಡೆಗಳಲ್ಲಿ ಜಾರಿಯಲ್ಲಿದೆ.

ಐಪಿಎಲ್ ಕ್ರಿಕೆಟ್ ಟೂರ್ನಿ ಭಾರಿ ಜನಪ್ರಿಯತೆ ಗಳಿಸಿರುವುದರಿಂದ ಪ್ರತಿ ಋತುವಿನಲ್ಲೂ ಆಟಗಾರರ ಹರಾಜಿನಿಂದ ಹಿಡಿದು, ಯಾರು ಕಪ್ ಗೆಲ್ಲಬಹುದು, ಪ್ರತಿ ತಂಡದ ಸೋಲು-ಗೆಲುವಿಗೆ ಕಾರಣಗಳೇನು
ಎನ್ನುವುದರವರೆಗೆ ಎಲ್ಲದರ ಕುರಿತೂ ಚರ್ಚೆ ನಡೆಯುತ್ತದೆ.

ಆದರೆ, ಇಲ್ಲಿ ಚರ್ಚೆಯಾಗದೆ ಇರುವ ಮತ್ತೊಂದು ಪ್ರಮುಖ ಅಂಶ: ‘ಈ ಸೀಸನ್‌ನಲ್ಲಿ ಬೆಟ್ಟಿಂಗ್ ಆಡಿ ಎಷ್ಟು ಜನ ತಮ್ಮ ಬದುಕು ಹಾಳು ಮಾಡಿಕೊಂಡರು’ ಎಂಬುದು. ಬೆಟ್ಟಿಂಗ್ ಚಟಕ್ಕೆ ಸಿಲುಕಿ ಭಾರಿ ಪ್ರಮಾಣದಲ್ಲಿ ಹಣ ಕಳೆದುಕೊಂಡು ಪೇಚಿಗೆ ಸಿಲುಕುವ ವಿದ್ಯಾರ್ಥಿಗಳು ಹಾಗೂ ಯುವ ಜನರನ್ನು ಹತ್ತಿರದಿಂದ ಗಮನಿಸುತ್ತಿರುವ ಯಾರಿಗೇ ಆದರೂ, ಐಪಿಎಲ್ ಟೂರ್ನಿಯನ್ನು ಮನರಂಜಿಸುವ, ಕ್ರೀಡಾ ಸ್ಫೂರ್ತಿ ಬಿತ್ತುವ ಪಂದ್ಯಾವಳಿಯಾಗಿ ಮಾತ್ರ ನೋಡಲು ಸಾಧ್ಯವಿಲ್ಲ.

ಕಡಿಮೆ ಅವಧಿಯಲ್ಲಿ ಸುಲಭವಾಗಿ ಹಣ ಸಂಪಾದಿಸುವ ಉಮೇದಿನೊಂದಿಗೆ ಷೇರು ಮಾರುಕಟ್ಟೆ ವಹಿವಾಟು ಮತ್ತು ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಹಣ ತೊಡಗಿಸುತ್ತಿರುವ ವಿದ್ಯಾರ್ಥಿ ಸಮೂಹವನ್ನು ಎಚ್ಚರಿಸುವ, ಅರಿಯದೆ ಹಣ ತೊಡಗಿಸುವುದರಿಂದ ಹಾಗೂ ಬೆಟ್ಟಿಂಗ್ ಮಾಡುವುದರಿಂದ ಎದುರಾಗಬಹುದಾದ ಅಪಾಯಗಳ ಕುರಿತು ತಿಳಿವಳಿಕೆ ಮೂಡಿಸುವ ದಿಸೆಯಲ್ಲಿ ಸಮಾಜ ಮತ್ತು ಶೈಕ್ಷಣಿಕ ವಲಯ ಚಿಂತಿಸಬೇಕಾದ ಜರೂರತ್ತು ಈಗ ಬಹಳ ಇದೆ. ಹಣ ಕಳೆದುಕೊಂಡು ಹತಾಶೆಗೆ ಜಾರುವವರನ್ನು ತಿರಸ್ಕರಿಸಿ, ದೂರ ತಳ್ಳುವ ಬದಲಿಗೆ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿ, ಬದುಕನ್ನು ಸರಿಯಾದ ರೀತಿಯಲ್ಲಿ ಮರುರೂಪಿಸಿಕೊಳ್ಳಲು ಅವಕಾಶ ಕಲ್ಪಿಸುವುದು ಆದ್ಯತೆಯಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.