ಸೆಕ್ಯುಲರ್‌ವಾದಿಗಳಿಗೆ ಸಂಬಂಧಿಸಿದ ಅತ್ಯಂತ ಸಾಮಯಿಕವಾದ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿರುವ ಸುಧೀಂದ್ರ ಕುಲಕರ್ಣಿ ಅವರು (ಪ್ರ.ವಾ., ಮೇ 28), ಅರ್ಥಪೂರ್ಣವಾದ ಚರ್ಚೆಗೆ ನಾಂದಿ ಹಾಡಿದ್ದಾರೆ. ಭಾರತದ ಸಂದರ್ಭದಲ್ಲಿ ‘ಸೆಕ್ಯುಲರಿಸ್ಟರು’ ಎನ್ನುವ ಪದ ಪ್ರಯೋಗವೇ ಅಷ್ಟು ಸರಿಯಲ್ಲ. ಕಾರಣ, ‘ಸರ್ವಧರ್ಮ ಸಮಭಾವವು ನಮ್ಮ ಸಂಸ್ಕೃತಿಯ ಉಸಿರು ಮತ್ತು ನಮ್ಮ ಸಂವಿಧಾನದ ಪ್ರಾಣ’ ಎಂಬ ಅವರ ಮಾತೇ ಅಂಥದ್ದೊಂದು ವರ್ಗದ ಪ್ರಸ್ತಾಪಕ್ಕೆ ಅವಕಾಶ ನೀಡುವುದಿಲ್ಲ ಎನಿಸುತ್ತದೆ.
ನಮ್ಮ ದೇಶದ ಬಹುಸಂಖ್ಯಾತ ಜನಸಮುದಾಯದಲ್ಲಿ ಆಗಿಂದಾಗ್ಗೆ ಜಾತಿ ಜಾತಿಗಳ ನಡುವೆ ಸಣ್ಣಪುಟ್ಟ ಒಳಜಗಳಗಳು ನಡೆಯುತ್ತ ಬಂದಿದ್ದರೂ ಒಟ್ಟಾರೆ ಎಲ್ಲರೂ ಎಲ್ಲರ ಜೊತೆ ಸೌಹಾರ್ದಯುತವಾಗಿ ಬದುಕುತ್ತ ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಇನ್ನು ಜಾತ್ಯತೀತತೆಯನ್ನು ಸಂವಿಧಾನ ಅಂಗೀಕರಿಸಿರುವುದು ಕೂಡ ಬಹುಸಂಖ್ಯಾತ ಜನರ ಸ್ವಇಚ್ಛೆಯ ಮೇರೆಗೇ.
ಆದರ್ಶದ ಸ್ಥಿತಿಯಲ್ಲಿ ಈ ದೇಶದ ನಾಗರಿಕರೆಲ್ಲರೂ ಜಾತ್ಯತೀತರೆಂದೇ ಪರಿಗಣಿಸಲ್ಪಡಬೇಕು ಮತ್ತು ಅದನ್ನು ನಂಬಬೇಕು. ಯಾರನ್ನೋ ಕೆಲವರನ್ನು ಸೆಕ್ಯುಲರ್‌ವಾದಿಗಳೆಂದರೆ ಅವರದೊಂದು ಗುಂಪಿಗೆ ಮಾತ್ರ ಸೆಕ್ಯುಲರಿಸಂನಲ್ಲಿ ನಂಬಿಕೆ ಎಂದಾಗುತ್ತದೆ. ಸೆಕ್ಯುಲರಿಸಂ ಈ ದೇಶಕ್ಕೆ ಬೇಕೇ ಬೇಕು. ಆದರೆ ‘ಉಗ್ರ ಸೆಕ್ಯುಲರಿಸಂ’ ಬೇಡ ಎಂಬುದಷ್ಟೇ ದೇಶದ ಕೋಟಿಕೋಟಿ ಧರ್ಮನಿರಪೇಕ್ಷ ಜನರ ಸದಾಶಯ. ಕುಲಕರ್ಣಿ ಅವರು ಪ್ರಸ್ತಾಪಿಸಿರುವವರನ್ನು ಸೆಕ್ಯುಲರಿಸಂ ಅನ್ನು ಸದಾ ಗುತ್ತಿಗೆ ತೆಗೆದುಕೊಂಡವರಂತೆ ಮಾತಾಡುವ, ಹಿಂದೂ ಧರ್ಮದ ಕುರಿತೋ ಅಲ್ಪಸಂಖ್ಯಾತರ ಕುರಿತೋ ಬಹುಸಂಖ್ಯಾತ ಸಮುದಾಯದವರ ಆಕ್ಷೇಪಣಾಪೂರ್ವಕವಾದ ಅಭಿಪ್ರಾಯ, ವಾದ, ಚರ್ಚೆಗಳು ಸಕಾರಣವಾಗಿದ್ದಾಗಲೂ ಅದನ್ನು ಎಂದೂ ಕಂಡಹಾಗೆಯೇ ಸಮರ್ಥಿಸದ ಅಥವಾ ಸಮರ್ಥಿಸಲು ಸಂಕೋಚಪಡುವ, ಇಲ್ಲವೇ ಅಂಜುವ, ಆದರೆ ಹೊರಗಿನಿಂದ ಬಂದ ಧರ್ಮವನ್ನು ಅನುಸರಿಸುತ್ತಿರುವವರಿಗೆ ಕೊಂಚ ಮಟ್ಟಿನ ಇರುಸುಮುರುಸು ಬಹುಸಂಖ್ಯಾತರಿಂದ ಆಯಿತೆಂದರೆ ಸಾಕು ಅದನ್ನು ಖಂಡಿಸುವುದಕ್ಕೆಂದೇ ಕಾದು ಕುಳಿತವರಂತೆ ಎರಗಿ ಬೀಳುವವರನ್ನು ಕೇವಲ ಸೆಕ್ಯುಲರ್‌ವಾದಿಗಳೆಂದು ವರ್ಣಿಸುವುದು ಸರಿಹೋಗುವುದಿಲ್ಲ. ಅವರನ್ನು ‘ಉಗ್ರ ಸೆಕ್ಯುಲರ್‌ವಾದಿ’ಗಳೆಂದು ಕರೆಯುವುದೇ ಬಹುಶಃ ಸರಿಯೆನಿಸುತ್ತದೆ. ನಮ್ಮ ದೇಶದ ಜಾತ್ಯತೀತತೆಯ ಅತಿ ಎಂದರೆ ಇದೇ ಆಗಿದೆ. ಇಂಗ್ಲಿಷಿನಲ್ಲಿ ಹೇಳುವ ‘More loyal than the king’ ಎನ್ನುವುದಕ್ಕೆ ಸಮನಾದ್ದು. ಇದಕ್ಕೆ ಕಾರಣಗಳೇನೆಂದು ಕಂಡುಕೊಳ್ಳುವುದೂ ಮುಖ್ಯ.
ಸ್ವಾತಂತ್ರ್ಯ ಬಂದಾಗಿನಿಂದ ಈಚಿನವರೆಗೂ ಆಡಳಿತ ನಡೆಸಿದ ಪಕ್ಷದಿಂದ ಮುಸ್ಲಿಂ ತುಷ್ಟೀಕರಣ ನಿರಂತರವಾಗಿ ನಡೆಯುತ್ತ ಬಂದಿರುವುದೂ ನಿಜ ಮತ್ತು ಅದನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡು ಈಗ ಆಡಳಿತದಲ್ಲಿರುವ ಪಕ್ಷ ಹಿಂದೂ ತುಷ್ಟೀಕರಣಕ್ಕೆ ಹೊರಟಿರುವುದೂ ನಿಜ. ವೋಟಿಗಾಗಿ ಇದುವರೆಗೆ ನಡೆದ ಮತ್ತು ಈಗಲೂ ನಡೆಯುತ್ತಿರುವ ಮುಸ್ಲಿಂ ತುಷ್ಟೀಕರಣ ಒಂದು ಕಡೆಯಾದರೆ, ಈಗ ಆಡಳಿತದಲ್ಲಿರುವ ಪಕ್ಷದ ಕಡೆಯಿಂದ ಅದಕ್ಕೆ ಪ್ರತಿಯಾಗಿ ನಡೆಯುತ್ತಿರುವ ಹಿಂದೂ ತುಷ್ಟೀಕರಣವೆಂಬಂಥ ನಡೆ ಈ ಎರಡೂ ತಪ್ಪು. ಈ ಎರಡರ ಅತಿಗಳ ದುಷ್ಪರಿಣಾಮವನ್ನು ಇಡೀ ದೇಶ ಅನುಭವಿಸಬೇಕಾಗಿ ಬಂದಿರುವುದು ನಿಜಕ್ಕೂ ದುರ್ದೈವವೇ ಸರಿ.
ಸೆಕ್ಯುಲರ್ ಪಕ್ಷ ಎಂದು ಬಿಂಬಿಸಿಕೊಂಡಿರುವ ಕಾರಣಕ್ಕೆ ಒಂದು ಪಕ್ಷದ ಜೊತೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಗುರುತಿಸಿಕೊಂಡಿರುವವರು ಹೀಗೆ ಅದರ ಒಳಪ್ರವಾಹವಾಗಿ ಹರಿಯುತ್ತಿರುವ ಒಂದು ಕೋಮಿನ ತುಷ್ಟೀಕರಣದ ನಡೆಗೆ ಜಾಣ ಕುರುಡರೂ ಜಾಣ ಕಿವುಡರೂ ಆಗಿರುವ ಕಾರಣಕ್ಕೆ, ಕುಲಕರ್ಣಿ ಅವರು ಹೇಳುವಂತೆ ‘ಹಿಂದೂ ಸಮಾಜದ ಒಂದು ದೊಡ್ಡ ವರ್ಗ ಮುಸ್ಲಿಂ ವಿರೋಧಿ ಪ್ರಚಾರದಿಂದ ಪ್ರಭಾವಿತಗೊಂಡಿರಲು’ ಸಾಕು.
ಇನ್ನು ಸೆಕ್ಯುಲರ್‌ವಾದಿಗಳು ಮುಸ್ಲಿಂ ಧರ್ಮಾಂಧತೆಯ ವಿರುದ್ಧ ದನಿ ಎತ್ತುತ್ತಿಲ್ಲವೇಕೆ ಎಂದು ಅವರು ಅತ್ಯಂತ ವ್ಯಗ್ರರಾಗಿದ್ದಾರೆ. ಅದಕ್ಕೆ ಕಾರಣ ಅತ್ಯಂತ ಸ್ಪಷ್ಟವೇ ಇದೆ. ಹಿಂದೂ ಧರ್ಮದಲ್ಲಿ ಅದರ ಬಗೆಗೆ ಮುಕ್ತ ಚರ್ಚೆಗೆ ಯಾವತ್ತೂ ಅವಕಾಶವಿರುವ ಹಾಗೆ ಮುಸ್ಲಿಂ ಧರ್ಮದಲ್ಲಿ ಇಲ್ಲವೆಂಬುದು.
ಒಳಗಿನವರಿರಲಿ ಹೊರಗಿನವರು ಕೂಡ ಕೆಲವು ವರ್ಷಗಳ ಹಿಂದಿನವರೆಗೂ ಹಿಂದೂ ಕಂದಾಚಾರ, ಮೌಢ್ಯಗಳ ಬಗೆಗೆ ಖಂಡನೆಯ ಮಾತುಗಳನ್ನಾಡಬಹುದಿತ್ತು. ಅದಕ್ಕೆ ಉಗ್ರ ಪ್ರತಿರೋಧ ಇರುತ್ತಿರಲಿಲ್ಲ. ಈಚಿನ ವರ್ಷಗಳಲ್ಲಿ ಈ ಬಗೆಯ ವಿರೋಧ ಸ್ವಲ್ಪ ಹೆಚ್ಚಾಗಿದೆ. ಇನ್ನು ಅದೇ ಮುಸ್ಲಿಂ ಧರ್ಮದಲ್ಲಿ ಒಳಗಿನವರಿಗೂ ಅದರ ಬಗೆಗೆ ಮುಕ್ತವಾಗಿ ಚರ್ಚಿಸಲೋ ಮೃದುವಾಗಿ ಖಂಡಿಸುವಂಥದ್ದಿದ್ದರೆ ಖಂಡಿಸಲೋ ಸಾಧ್ಯವೇ ಇಲ್ಲದಂಥ ಪರಿಸ್ಥಿತಿ ಇದೆ.
ಇದನ್ನು ಕವಿ ಕುವೆಂಪು ಬಹಳ ಹಿಂದೆಯೇ- ‘ಹಿಂದೂ ಧರ್ಮ ‘ಓಪನ್ ರಿಲಿಜನ್’ ಆದರೆ ಅದೇ ಮುಸ್ಲಿಂ ಧರ್ಮ ‘ಕ್ಲೋಸ್ಡ್ ರಿಲಿಜನ್’ ಎಂದು ವರ್ಣಿಸಿದ್ದರು. ಆ ಕಾರಣದಿಂದಲೋ ಏನೋ ಮುಸ್ಲಿಂ ಸಜ್ಜನ ಬಂಧುಗಳು, ವಿಚಾರವಾದಿಗಳು ಅದರಲ್ಲಿನ ಕೆಲವರ ಉಗ್ರ ನಡೆಯ ಬಗ್ಗೆ ದನಿ ಎತ್ತಲು ಯಾವತ್ತೂ ಅಂಜುತ್ತಾರೆಂಬುದು ಗುಟ್ಟೇನಲ್ಲ. ಒಳಗಿನವರ ಪರಿಸ್ಥಿತಿಯೇ ಹೀಗಿರುವಾಗ ಇನ್ನು ಹೊರಗಿನವರು ಅಂಥದ್ದನ್ನು ಊಹಿಸಲೂ ಆರರು. ಅದಕ್ಕೇ ಉಗ್ರ ಸೆಕ್ಯುಲರ್‌ವಾದಿಗಳು ಬಂಗಾರ ಮೌನ ತಾಳಿರುವುದು ಎನ್ನುವುದು ಸೂರ್ಯ ಸ್ಪಷ್ಟ. ಇದಕ್ಕೆ ಹೆಚ್ಚಿನ ಸಂಶೋಧನೆಯೇನೂ ಬೇಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.