ADVERTISEMENT

ಸಂಗತ: ಕಾಂಗ್ರೆಸ್‌ ಪಕ್ಷಕ್ಕೆ ಕಿವಿಮಾತು– ದೇವನೂರ ಮಹಾದೇವ ಅವರ ಬರಹ

ಮಾನವೀಯ ಅಂತಃಕರಣದ ಸಂಗತಿಗಳ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು

ದೇವನೂರ ಮಹಾದೇವ
Published 24 ಜೂನ್ 2024, 22:51 IST
Last Updated 24 ಜೂನ್ 2024, 22:51 IST
<div class="paragraphs"><p>ಸಂಗತ: ಕಾಂಗ್ರೆಸ್‌ ಪಕ್ಷಕ್ಕೆ ಕಿವಿಮಾತು– ದೇವನೂರ ಮಹಾದೇವ ಅವರ ಬರಹ</p></div>

ಸಂಗತ: ಕಾಂಗ್ರೆಸ್‌ ಪಕ್ಷಕ್ಕೆ ಕಿವಿಮಾತು– ದೇವನೂರ ಮಹಾದೇವ ಅವರ ಬರಹ

   

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿವಿಧ ಅಕಾಡೆಮಿಗಳ ಅಧ್ಯಕ್ಷರನ್ನು ಕಾಂಗ್ರೆಸ್ ಕಚೇರಿಗೆ ಕರೆಸಿಕೊಂಡದ್ದು, ಅಲ್ಲಿ ಅವರನ್ನು ಉದ್ದೇಶಿಸಿ ಆಡಿದ ಮಾತುಗಳು, ನಡೆದುಕೊಂಡ ವೈಖರಿ ನಾಗರಿಕ ಸಮಾಜಕ್ಕೆ ಇರಿಸುಮುರಿಸು ಉಂಟುಮಾಡಿ, ಕಹಿ ಅನುಭವವನ್ನು ಉಳಿಸಿದೆ. ಇದನ್ನು ಪ್ರತಿರೋಧಿಸಿ ಹೇಳಿಕೆ ನೀಡಿದ ಲೇಖಕರು, ಕಲಾವಿದರು, ಪ್ರಜ್ಞಾ ವಂತರು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ನಡುವೆ, ಸಾಮಾನ್ಯವಾಗಿ ಸಮತೋಲನದಿಂದ ಮಾತನಾಡುತ್ತಿದ್ದ ಕಾಂಗ್ರೆಸ್ ವಕ್ತಾರರಾದ ರಮೇಶ್ ಬಾಬು ಅವರು ಸಚಿವರ ನಡೆನುಡಿಗಳನ್ನು ಸಮರ್ಥಿಸಿ ಕೊಳ್ಳುತ್ತಾ ಸಮತೋಲನ ತಪ್ಪಿದ್ದಾರೆ. ಜೊತೆಗೆ ನನ್ನ ಹೆಸರನ್ನು ಪ್ರಸ್ತಾಪಿಸಿ, ದೇವನೂರ ಮಹಾದೇವ ಅವರಿಗೆ ಮಾತ್ರ ಸರ್ಕಾರವನ್ನು, ರಾಜಕಾರಣಿಗಳನ್ನು
ಟೀಕಿಸುವ ನೈತಿಕತೆ ಇದೆ ಎಂದಿದ್ದಾರೆ. ಈ ಮೂಲಕ ನನ್ನನ್ನು ಉಳಿದ ಸಾಹಿತಿಗಳಿಂದ ಬೇರ್ಪಡಿಸಿ ಮುಜು ಗರಕ್ಕೆ ಈಡು ಮಾಡಿದ್ದಾರೆ. ಹಾಗಾಗಿ ಈ ಸ್ಪಷ್ಟನೆ:

ADVERTISEMENT

ಲೇಖಕರು ಪ್ರತಿರೋಧದ ಹೇಳಿಕೆ ನೀಡುವ ಬಗ್ಗೆ ನನ್ನೊಡನೆ ಪ್ರಸ್ತಾಪಿಸಿದ್ದರು. ಹೇಳಿಕೆಯ ಪ್ರತಿಯನ್ನು ಕಳುಹಿಸಿಕೊಡಿ ಎಂದಿದ್ದೆ. ಅವರೇನಾದರೂ ಕಳುಹಿಸಿ ದ್ದಿದ್ದರೆ ಆ ಹೇಳಿಕೆಗೆ ನಾನೂ ರುಜು ಮಾಡುತ್ತಿದ್ದೆ. ತದನಂತರ ಬಂದ ಬರಗೂರು ರಾಮಚಂದ್ರಪ್ಪ ಅವರ ಹೇಳಿಕೆ ಅತ್ಯಂತ ಸೂಕ್ತವಾಗಿತ್ತು. ಹಾಗಾಗಿ ಸುಮ್ಮನಾದೆ.

ಈ ಸಂದರ್ಭದಲ್ಲೇ ಒಂದು ಮಾತನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಗಮನಕ್ಕೆ ತರಲು ಬಯಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಚರಿತ್ರೆಯ ಏರಿಳಿತದ ಕಾರಣವಾಗಿ, ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟಿದ್ದ ಬಿಜೆಪಿಯನ್ನು ಕೆಲವು ಹೋರಾಟದ ಸಂಘಟನೆಗಳು, ಝರಿ ಮತ್ತು ಹೊಳೆ ರೀತಿಯ ಮಾಧ್ಯಮಗಳು ಹಾಗೂ ನಾಗರಿಕ ಸಮಾಜಗಳು ಜೊತೆಗೂಡಿ ತಮ್ಮ ಅಳಿವು-ಉಳಿವು ಎಂಬಂತೆ ವಿರೋಧಿಸಿವೆ. ಇದು, ಪರೋಕ್ಷವಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದಂತೆ ಆಗಿದೆ.

ಹೀಗೆ ಬೆಂಬಲಿಸಿದವರಲ್ಲಿ ಈ ಹಿಂದೆ ಕಾಂಗ್ರೆಸ್ ವಿರೋಧಿಗಳಾಗಿದ್ದವರೂ ಇದ್ದಾರೆ. ಅಷ್ಟೇಕೆ, ಜೆಡಿಎಸ್ ಪಕ್ಷವು ಬಿಜೆಪಿ ಸಖ್ಯ ಬೆಳೆಸಿದ್ದನ್ನು ಸಹಿಸದ, ಈ ಮೊದಲು ಜೆಡಿಎಸ್ ಅನ್ನು ಬೆಂಬಲಿಸುತ್ತಿದ್ದ ಪ್ರಗತಿಪರರೂ ಇವರಲ್ಲಿ ಇದ್ದಾರೆ. ಈ ವಿದ್ಯಮಾನವನ್ನು ಕಾಂಗ್ರೆಸ್ ಪಕ್ಷದೊಳಗೇ ಪರಸ್ಪರ ಸೋಲಿಸಿಕೊಳ್ಳುವ ಕ್ಷುಲ್ಲಕ ರಾಜಕಾರಣವೂ ಇರುವುದರೊಡನೆ ಹೋಲಿಕೆ ಮಾಡಿದರೆ– ಎಚ್ಚೆತ್ತ ಮಾಧ್ಯಮಗಳು, ನಾಗರಿಕ ಸಮಾಜ ಹಾಗೂ ಜನಮುಖಿ ಸಂಘಟನೆಗಳ ಮಹತ್ವ ಅರ್ಥವಾಗುತ್ತದೆ. ಇವೆಲ್ಲವೂ ಸಂವಿಧಾನ, ಒಕ್ಕೂಟ ವ್ಯವಸ್ಥೆ, ಸ್ವಾಯತ್ತ ಸಂಸ್ಥೆಗಳ ಅಸ್ತಿತ್ವ ಉಳಿಸಿ ಕೊಳ್ಳಲೋಸುಗ ತಮ್ಮ ಶಕ್ತಿ ಮೀರಿ ಕ್ರಿಯಾಶೀಲ
ವಾದ್ದರಿಂದಲೂ ಕಾಂಗ್ರೆಸ್‍ಗೆ ಇಷ್ಟಾದರೂ ಫಲ ಸಿಕ್ಕಿದೆ.

ಬಹಳ ಮುಖ್ಯವಾಗಿ, ನಾಗರಿಕ ಸಮಾಜದ ಈ ಎಲ್ಲ ಕಾರ್ಯಚಟುವಟಿಕೆಯ ಕಾರಣವಾಗಿ ಕಾಂಗ್ರೆಸ್‍ಗೆ ನೈತಿಕ ಮುಖ ಬಂದಂತೆ ಆಗಿರುವುದನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಂಡರೆ ಅವರಿಗೂ ಕ್ಷೇಮ, ಸಮಾಜಕ್ಕೂ ಕ್ಷೇಮ.

ಹಾಗೇ ಕಾಂಗ್ರೆಸ್ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳಬೇಕು- ಕೆಳಮನೆಯಲ್ಲಿ ಸಂಖ್ಯಾಬಲದಿಂದ ಪ್ರಾತಿನಿಧ್ಯ ಪಡೆಯುವ ಸಮುದಾಯಗಳು ಮೇಲ್ಮನೆಯಲ್ಲೂ ಪ್ರಾತಿನಿಧ್ಯ ಪಡೆದುಕೊಳ್ಳುವುದಾದರೆ, ಹೇಳುವವರು ಕೇಳುವವರು ಇಲ್ಲದ ಬುಡಕಟ್ಟು, ಅಲೆಮಾರಿ, ದೇವದಾಸಿ, ಪೌರಕಾರ್ಮಿಕ, ಅಗಸ, ಕುಂಬಾರ, ಕ್ಷೌರಿಕ, ಅಕ್ಕಸಾಲಿಗದಂತಹ ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರಾತಿನಿಧ್ಯ ಇಲ್ಲದಿದ್ದರೆ, ಕರ್ನಾಟಕ ಹೇಗೆ ತಾನೇ ಸರ್ವಜನಾಂಗದ ಶಾಂತಿಯ ತೋಟವಾಗುತ್ತದೆ? ಎಲ್ಲರ ಒಳಗೊಳ್ಳುವಿಕೆಯೂ ಇಲ್ಲದಿದ್ದರೆ ಅದು ಹೇಗೆ ಒಳ್ಳೆಯ ಸರ್ಕಾರವಾಗುತ್ತದೆ? ಇದನ್ನು ಈ ಸರ್ಕಾರದಿಂದ ನಿರೀಕ್ಷಿಸುವುದು ತಪ್ಪಲ್ಲ ಎಂದುಕೊಂಡಿದ್ದೇನೆ.

ದಲಿತರಿಗೆ ಹೊರಗುತ್ತಿಗೆಯ ನೇಮಕಾತಿಯಲ್ಲಿ ಮೀಸಲಾತಿಯನ್ನು ಅನ್ವಯ ಮಾಡುವ ಸರ್ಕಾರದ ನಿರ್ಧಾರ ಖಂಡಿತ ಸ್ವಾಗತಾರ್ಹ. ಆದರೂ ಮೊದಲನೆಯ ಷರತ್ತಿನಲ್ಲಿ, ಹೊರಗುತ್ತಿಗೆ ಮೀಸಲಾತಿ ನೀತಿಯು 45 ದಿನಗಳಷ್ಟು ಕಡಿಮೆ ಅವಧಿಯ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ ಎಂದಿರುವುದರಿಂದ, ಹೀಗೆಯೇ 6ನೇ ಷರತ್ತಿನಲ್ಲಿ ‘ಯಾವುದೇ ಇಲಾಖೆಯಲ್ಲಿ ಕನಿಷ್ಠ 20 ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವ ಸಂದರ್ಭದಲ್ಲಿ ಮಾತ್ರ ಮೀಸಲಾತಿ ನೀತಿಯನ್ನು ಜಾರಿಗೊಳಿಸತಕ್ಕದ್ದು ಎಂದಿರುವುದರಿಂದ ಪರಿಣಾಮ ಏನಾಗುತ್ತದೆ? ಇದರಿಂದ, ಘೋಷಣೆಯಲ್ಲಿ ಇಂತಹ ಅವಕಾಶ ನೀಡುತ್ತೇವೆ, ಆದರೆ ವಾಸ್ತವದಲ್ಲಿ ಅಲ್ಲ ಎಂದಂತೆ ಆಗುವುದಿಲ್ಲವೇ?

ಇದು ಹೇಗೆ ಕಾಣುತ್ತದೆ ಎಂದರೆ, ದಲಿತನ ಬಾಯಿಗೆ ತುತ್ತು ಹಾಕುವಂತೆ ನಟಿಸಿ, ಆತ ತುತ್ತಿಗೆ ಬಾಯಿ ತೆರೆದಾಗ ಅದನ್ನು ಬೇರೆಯವರಿಗೆ ತಿನ್ನಿಸಿದಂತೆ ಕಾಣಿಸುತ್ತದೆ. ವಂಚಿತರಿಗೆ ಮೊದಲ ಆದ್ಯತೆ ಎಂದು ಇರಬೇಕಿತ್ತು ಅಥವಾ ರೋಸ್ಟರ್ ಪದ್ಧತಿಯನ್ನು
ಅಳವಡಿಸಬೇಕಿತ್ತು. ಇದಾಗದಿದ್ದರೆ, ನೋವಿನ ಮೇಲೆ ಬರೆ ಎಳೆದಂತೆ ಆಗುತ್ತದೆ.

ಮಾನವೀಯ ಅಂತಃಕರಣದ ಇಂತಹ ಸಂಗತಿಗಳ ಬಗ್ಗೆ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಅದು ಈಗ ಪಡೆದುಕೊಂಡಿರುವ ಜನಾಭಿಪ್ರಾಯವನ್ನು ಕಳೆದುಕೊಳ್ಳುತ್ತಾ ಹೋಗಬೇಕಾಗುತ್ತದೆ.

ಕೊನೆಯದಾಗಿ- ಸಾಹಿತ್ಯ, ಭಾಷೆ, ಸಾಂಸ್ಕೃತಿಕ ಅಕಾಡೆಮಿಗಳಿಗೆ ಸರ್ಕಾರವು ನಾಮಿನೇಷನ್ ಮೂಲಕ ನೇಮಕಾತಿ ಮಾಡುವ ಪದ್ಧತಿಯ ಬದಲು ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾದರಿಯಂತೆ ಚುನಾವಣಾ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ. ಈ ಮೂಲಕ, ಆಯ್ಕೆ ಪದ್ಧತಿಯನ್ನು ಇನ್ನಷ್ಟು ಉತ್ತಮಗೊಳಿಸಿಕೊಂಡು ಅಕಾಡೆಮಿಯ ಪದಾಧಿಕಾರಿಗಳನ್ನು ಚುನಾಯಿಸಿಕೊಳ್ಳುವುದು ಆರೋಗ್ಯಕರ ಎಂದೆನ್ನಿಸುತ್ತದೆ. ಈ ದಿಕ್ಕಿನಲ್ಲೂ ನಾವು ಆಲೋಚಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.