ADVERTISEMENT

ಕನ್ನಡದಲ್ಲಿ ತಾಂತ್ರಿಕ ಶಿಕ್ಷಣ: ಆಗಿದ್ದೇನು?

ತಾಂತ್ರಿಕ ಶಿಕ್ಷಣವನ್ನು ಕನ್ನಡದ ಮೂಲಕ ಪಡೆದುಕೊಳ್ಳಲು ಪೂರಕ ಸಂಪನ್ಮೂಲಗಳನ್ನು ಸೃಷ್ಟಿಸುವತ್ತ ಗಮನಹರಿಸಬೇಕಿದೆ

ಎಚ್.ಕೆ.ಶರತ್
Published 2 ಜನವರಿ 2022, 19:31 IST
Last Updated 2 ಜನವರಿ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಶಿಕ್ಷಣ ನೀಡುವ ರಾಜ್ಯ ಸರ್ಕಾರದ ಪ್ರಯೋಗಕ್ಕೆ ಒಳಪಡಲು ವಿದ್ಯಾರ್ಥಿಗಳು ಮುಂದೆ ಬಾರದ ಕಾರಣ, ಹಲವರು ಈ ಮೊದಲೇ ನಿರೀಕ್ಷಿಸಿದ್ದು ನಿಜವಾಗಿದೆ. ಕನ್ನಡ ಮಾಧ್ಯಮದಲ್ಲಿ ತಾಂತ್ರಿಕ ಶಿಕ್ಷಣವೆಂಬುದು ಆಶಯವಾಗಿಯೇ ಉಳಿದಿದೆ.

ಸೂಕ್ತ ಪೂರ್ವಸಿದ್ಧತೆ ನಡೆಸದೆ, ವಿದ್ಯಾರ್ಥಿಗಳಲ್ಲಿ ಭರವಸೆ ತುಂಬುವ ಪ್ರಯತ್ನವನ್ನೂ ಮಾಡದೆ ತರಾತುರಿಯಲ್ಲಿ ಎಂಜಿನಿಯರಿಂಗ್ ಶಿಕ್ಷಣವನ್ನು ಸಂಪೂರ್ಣವಾಗಿ ಕನ್ನಡದಲ್ಲಿ ನೀಡಲು ಹೊರಟಿದ್ದು ಇಲ್ಲಿ ಮುಳುವಾಗಿದೆ ಎನ್ನಲು ಸಕಾರಣಗಳಿವೆ.

ಎಂಜಿನಿಯರಿಂಗ್ ಪಠ್ಯ ಪದೇಪದೇ ಬದಲಾವಣೆಗೆ ಒಳಪಡುವುದರಿಂದ ಹಾಗೂ ಯಾವುದೇ ವಿಷಯಕ್ಕಾದರೂ ವಿವಿಧ ಪುಸ್ತಕಗಳನ್ನು ಆಧರಿಸಿ ಪಠ್ಯಕ್ರಮ ರೂಪಿಸುವುದರಿಂದ ಎಲ್ಲವನ್ನೂ ಕನ್ನಡದಲ್ಲಿ ಲಭ್ಯವಾಗಿಸುವುದು ಕಷ್ಟಸಾಧ್ಯ. ಬಹುತೇಕ ಎಂಜಿನಿಯರಿಂಗ್ ಪುಸ್ತಕಗಳು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುವುದರಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಪಠ್ಯ ಪರಿಷ್ಕರಣೆ ಮತ್ತು ಹೊಸ ವಿಷಯಗಳ ಸೇರ್ಪಡೆ ಸುಲಭ ಮತ್ತು ಸರಳ. ಅದೇ ಕನ್ನಡ ಮಾಧ್ಯಮದಲ್ಲಿ ಅಗತ್ಯಕ್ಕೆ ತಕ್ಕಂತೆ ಪಠ್ಯ ಪರಿಷ್ಕರಣೆ ಮಾಡಲು ಮತ್ತು ಹೊಸ ವಿಷಯಗಳನ್ನು ಸೇರಿಸುವ ಮೊದಲು ಕನ್ನಡದಲ್ಲಿ ಅದನ್ನು ಲಭ್ಯವಾಗಿಸುವ ಸವಾಲೂ ಎದುರಾಗಲಿದೆ.

ADVERTISEMENT

ಇಂಗ್ಲಿಷ್‍ನಲ್ಲಿ ಒಂದೇ ವಿಷಯಕ್ಕೆ ಸಂಬಂಧಿಸಿದ ವಿವಿಧ ಲೇಖಕರ ಪುಸ್ತಕಗಳು ಲಭ್ಯವಿರುವುದರಿಂದ ವಿದ್ಯಾರ್ಥಿಗಳ ಎದುರು ಹತ್ತು ಹಲವು ಆಯ್ಕೆಗಳಿವೆ. ಆದರೆ ಕನ್ನಡದಲ್ಲಿ ಇಂತಹ ಆಯ್ಕೆಗಳು ಸದ್ಯಕ್ಕಂತೂ ಅಸಾಧ್ಯವೇ ಸರಿ. ತಾಂತ್ರಿಕ ವಿಷಯಗಳ ಕುರಿತು ಕನ್ನಡದಲ್ಲಿ ಮೂಡಿಬರಲಿರುವ ಪಠ್ಯಪುಸ್ತಕಗಳ ಗುಣಮಟ್ಟವೂ ಪ್ರಶ್ನಾರ್ಹವೇ. ವಿದ್ಯಾರ್ಥಿಗಳ ಮುಂದೆ ಆಯ್ಕೆಗಳು ಇಲ್ಲದೇ ಹೋದರೆ, ಕನ್ನಡ ಮಾಧ್ಯಮವನ್ನು ಆರಿಸಿಕೊಂಡ ತಪ್ಪಿಗೆ ಕಳಪೆ ಗುಣಮಟ್ಟದ ಪಠ್ಯಪುಸ್ತಕವನ್ನೇ ಆಶ್ರಯಿಸಬೇಕಾದ ಅನಿವಾರ್ಯ ಎದುರಾಗುವ ಸಾಧ್ಯತೆಯೂ ಇದೆ. ಈ ಸವಾಲುಗಳ ಕುರಿತು ಮೊದಲೇ ಚಿಂತಿಸಿ ಸಂಪೂರ್ಣ ಪದವಿ ಕೋರ್ಸನ್ನೇ ಕನ್ನಡದಲ್ಲಿ ಬೋಧಿಸುವ ನಿರ್ಧಾರ ಕೈಗೊಳ್ಳುವ ಬದಲು, ಎಂಜಿನಿಯರಿಂಗ್ ಶಿಕ್ಷಣದಲ್ಲಿ ಹಂತಹಂತವಾಗಿ ಕನ್ನಡ ಬಳಕೆಯನ್ನು ಉತ್ತೇಜಿಸುವ ಕ್ರಮಗಳನ್ನು ಕೈಗೊಂಡಿದ್ದರೆ ಈ ರೀತಿ ಮುಗ್ಗರಿಸುವ ಪ್ರಮೇಯ ಉದ್ಭವಿಸುತ್ತಿರಲಿಲ್ಲ.

ರಾಜ್ಯ ಸರ್ಕಾರ ಇನ್ನು ಮುಂದಾದರೂ ಸಂಪೂರ್ಣ ಕನ್ನಡ ಮಾಧ್ಯಮದ ಬದಲಿಗೆ, ತಾಂತ್ರಿಕ ಶಿಕ್ಷಣವನ್ನು ಕೊಂಚಮಟ್ಟಿಗಾದರೂ ಕನ್ನಡದ ಮೂಲಕ ಪಡೆದು ಕೊಳ್ಳಲು ಪೂರಕ ಸಂಪನ್ಮೂಲಗಳನ್ನು ಸೃಷ್ಟಿಸುವತ್ತ ಗಮನಹರಿಸಬೇಕಿದೆ. ಆ ದಿಸೆಯಲ್ಲಿ ಈ ಬಾರಿ ಕನ್ನಡ ಮಾಧ್ಯಮದಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಸಲುವಾಗಿ ಸಿದ್ಧಪಡಿಸಿರುವ ಸಂಪನ್ಮೂಲಗಳೆಲ್ಲವೂ ಮುಕ್ತವಾಗಿ ಸದಾಕಾಲ ಎಲ್ಲರಿಗೂ ಕೈಗೆಟಕುವಂತೆ ಮಾಡಬೇಕಿದೆ.

ಇಡೀ ಪದವಿಯನ್ನೇ ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಬದಲು, ವಿದ್ಯಾರ್ಥಿ ಇಚ್ಛಿಸಿದರೆ ತನಗೆ ಬೇಕಾದ ಕೆಲ ವಿಷಯಗಳನ್ನು ಕನ್ನಡದಲ್ಲಿ ಕಲಿಯುವ ಮತ್ತು ಪರೀಕ್ಷೆ ಬರೆಯುವ ಅವಕಾಶ ನೀಡಬೇಕಾಗಿದೆ. ಹೀಗೆ ಮಾಡಲು ಮೊದಲಿಗೆ ಕನ್ನಡಕ್ಕೆ ಅನುವಾದಗೊಂಡಿರುವ ಮತ್ತು ಮುಂದೆ ಅನುವಾದಗೊಳ್ಳಲಿರುವ ಅಥವಾ ಕನ್ನಡದಲ್ಲೇ ಬರೆದಿರುವ ತಾಂತ್ರಿಕ ಶಿಕ್ಷಣ ಪಠ್ಯಗಳೆಲ್ಲವೂ ಸುಲಭವಾಗಿ ಲಭ್ಯವಾಗುವಂತಿರಬೇಕು. ತಾಂತ್ರಿಕ ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿ ಕಲಿಸುವ ವಿಡಿಯೊ ಸಂಪನ್ಮೂಲದ ಸೃಷ್ಟಿಗೆ ವಿಶೇಷ ಒತ್ತು ನೀಡಬೇಕಿದೆ. ಒಂದುವೇಳೆ ಕ್ಲಿಷ್ಟ ವಿಷಯಗಳನ್ನು ತಾಯಿನುಡಿಯಲ್ಲಿ ಅರಿತು ಕೊಳ್ಳಬಹುದಾದ ಆಯ್ಕೆ ಸಿಕ್ಕರೆ, ಅದರ ಸದುಪಯೋಗ ಪಡಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ವಿದ್ಯಾರ್ಥಿ ಸಮೂಹವೇ ನಮ್ಮಲ್ಲಿದೆ.

ಕನ್ನಡ ಬಲ್ಲ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ತರಗತಿಗಳಲ್ಲಿ ಕೆಲ ಕ್ಲಿಷ್ಟ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಸರಳವಾಗಿ ತಿಳಿಸಿಕೊಡುವ ಸಲುವಾಗಿ ಅಧ್ಯಾಪ ಕರು ಕನ್ನಡದಲ್ಲೂ ಒಮ್ಮೆ ವಿವರಿಸುವ ಪರಿಪಾಟ ರಾಜ್ಯದ ಬಹುತೇಕ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಮೊದಲಿನಿಂದಲೂ ಇದೆ. ಹೀಗೆ ವಿವರಿಸುವಾಗ ತಾಂತ್ರಿಕ ಪದಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಗೋಜಿಗೆ ಯಾರೂ ಹೋಗುವುದಿಲ್ಲ. ಹಾಗೆ ಮಾಡಿದರೆ ವಿದ್ಯಾರ್ಥಿಗಳಿಗೆ ಏನೊಂದೂ ಅರ್ಥವಾಗುವುದಿಲ್ಲವೆಂಬ ವಾಸ್ತವ ಬೋಧಿಸುವವರಿಗೆ ತಿಳಿದಿದೆ. ಹಾಗಾಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈಗ ಅನೌಪಚಾರಿಕವಾಗಿ ನಡೆಯುವ ಕನ್ನಡ ಬೋಧನೆಯ ಬದಲಿಗೆ, ನಿಯಮಾನುಸಾರವಾಗಿಯೇ ಸಾಧ್ಯವಿರುವೆಡೆ ಅಗತ್ಯ ವಿರುವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಬೋಧಿಸಲು ಅನುವು ಮಾಡಿಕೊಡಬೇಕಿದೆ. ವಿದ್ಯಾರ್ಥಿಗಳು ಬಯಸಿದರೆ ಅವರ ಇಚ್ಛೆಗನುಗುಣವಾಗಿ ಮಿಶ್ರ ಮಾಧ್ಯಮದಲ್ಲಿ ಉತ್ತರಿಸುವ ಆಯ್ಕೆಯನ್ನೂ ಅವರ ಮುಂದೆ ಇರಿಸಬಹುದು.

ಹೀಗೆ ಪ್ರಯೋಗಾತ್ಮಕವಾಗಿ ಕನ್ನಡ ಬಳಕೆಯನ್ನು ಪ್ರೋತ್ಸಾಹಿಸಿ, ಸಾಧಕ-ಬಾಧಕ ಕುರಿತು ವಾಸ್ತವಿಕ ನೆಲೆಗಟ್ಟಿನಲ್ಲಿ ಪರಾಮರ್ಶಿಸುತ್ತ ಹೋದಲ್ಲಿ ಎಂಜಿನಿ ಯರಿಂಗ್ ಶಿಕ್ಷಣವನ್ನು ಕನ್ನಡದಲ್ಲಿ ನೀಡಲು ಇರುವ ಸಾಧ್ಯತೆಗಳು ತೆರೆದುಕೊಳ್ಳುತ್ತ ಹೋಗಲಿವೆ. ವಾಸ್ತವಕ್ಕೆ ಬೆನ್ನು ತೋರಿ ಅತಿ ಉತ್ಸಾಹದಿಂದ ಮುನ್ನುಗ್ಗಿದರೆ ಅಂತಿಮವಾಗಿ ಸಾಧಿಸಲು ಸಾಧ್ಯವಾಗುವುದಾದರೂ ಏನು ಎಂಬ ಪ್ರಶ್ನೆಗೆ ಉತ್ತರವೀಗ ಕಣ್ಣೆದುರೇ ಇದೆ.

ಕನ್ನಡ ಮಾಧ್ಯಮ ಪ್ರಯೋಗಕ್ಕೆ ಈ ಕ್ಷಣಕ್ಕೆ ಸರಿಯಾದ ಸ್ಪಂದನ ದೊರೆತಿಲ್ಲ ಎಂಬ ಕಾರಣಕ್ಕೆ ತಾಂತ್ರಿಕ ಶಿಕ್ಷಣದಲ್ಲಿ ಕನ್ನಡದ ಬಳಕೆಯನ್ನು ಉತ್ತೇಜಿಸುವ ಪ್ರಯತ್ನ ಹಿನ್ನೆಲೆಗೆ ಸರಿಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.