ವಿಶ್ವ ಆಹಾರ ದಿನವನ್ನು ಶುಕ್ರವಾರ (ಅ. 16) ಆಚರಿಸಿದ್ದೇವೆ. ಹಸಿವಿನ ವಿರುದ್ಧ ಹೋರಾಡಲು ಇರುವ ದಿನ ಇದು. ಹಸಿವಿನಿಂದ ನರಳುತ್ತಿರುವವರಿಗೆ ಅಗತ್ಯ ಆಹಾರವನ್ನು ನೀಡುವುದು, ಆಹಾರದ ಕೊರತೆ ನೀಗಿಸುವುದು, ಅಪೌಷ್ಟಿಕತೆ ವಿರುದ್ಧ ಹೋರಾಡುವುದು, ಆಹಾರ ಭದ್ರತೆ ಸಾಧಿಸುವುದು, ದವಸಧಾನ್ಯಗಳ ಉತ್ಪಾದನೆ ಹೆಚ್ಚಿಸುವುದರೊಂದಿಗೆ ಯಾವೊಬ್ಬ ವ್ಯಕ್ತಿಯೂ ಹಸಿವಿನಿಂದ ಸಾಯಬಾರದು ಎಂಬಂತಹ ಘನ ಉದ್ದೇಶ ಈ ದಿನಾಚರಣೆಯ ಹಿಂದಿದೆ.
ಮಾನವನಿಗೆ ಬದುಕಲು ಆಹಾರ ಅತ್ಯಂತ ಅವಶ್ಯಕ. ಆದರೆ ಇಂದು ಹಸಿವಿನ ಕೂಗು ಜಗತ್ತಿನೆಲ್ಲೆಡೆ ಮೊಳಗುತ್ತಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಸಮೀಕ್ಷೆಯೊಂದರ ಪ್ರಕಾರ, ಜಗತ್ತಿನಲ್ಲಿ ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಮಕ್ಕಳು ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆ, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಅಗತ್ಯವಿರುವಷ್ಟು ಆಹಾರ ಸಿಗದೆ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.
2019ರ ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ, 117 ರಾಷ್ಟ್ರಗಳ ಪೈಕಿ ಭಾರತ 102ನೇ ಸ್ಥಾನದಲ್ಲಿದೆ. ನಿತ್ಯ ಇಪ್ಪತ್ತು ಕೋಟಿ ಭಾರತೀಯರು ಹಸಿವನ್ನು ಅದುಮಿಟ್ಟುಕೊಂಡೇ ಮಲಗುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಕ್ಕಳು ಪೌಷ್ಟಿಕಾಂಶದ ಕೊರತೆ ಎದುರಿಸುತ್ತಿದ್ದಾರೆ. ಇದರೊಟ್ಟಿಗೆ ಕಡಿಮೆ ತೂಕದವರು, ಬೆಳವಣಿಗೆ ದೋಷವಿರುವವರು, ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಅಗಾಧ ಪ್ರಮಾಣದಲ್ಲಿ ಏರಿಕೆಯಾಗಿರುವುದು ವರದಿಯಾಗಿದೆ.
ಆಹಾರ ಉತ್ಪಾದನೆಯ ಪ್ರಮುಖ ಕ್ಷೇತ್ರವಾದ ಕೃಷಿಯು ನಾನಾ ಸವಾಲುಗಳನ್ನು ಎದುರಿಸುತ್ತಿದೆ. ಒಂದೆಡೆ ಅತಿವೃಷ್ಟಿ, ಅಕಾಲಿಕ ಮಳೆಯಿಂದ ಬೆಳೆಹಾನಿ, ಮತ್ತೊಂದೆಡೆ ಮಳೆಗಾಗಿ ಜನ ಕಾದು ಕುಳಿತುಕೊಳ್ಳುವಂತಹ ಸ್ಥಿತಿ. ಬೆಳೆಗಳಿಗೆ ರೋಗರುಜಿನಗಳ ಕಾಟ. ಇದರಿಂದ ರೈತರು ನಿರಂತರವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಇಷ್ಟೆಲ್ಲ ಸವಾಲುಗಳ ನಡುವೆ ಒಂದೊಮ್ಮೆ ಒಳ್ಳೆಯ ಫಸಲು ಬಂದರೂ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಹಾಕಿದ ಬಂಡವಾಳವೂ ಮರಳಿ ಬಾರದಂತಾಗಿದೆ. ಇವೆಲ್ಲದರಿಂದ ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೃಷಿ ವಿಮುಖತೆ ಆರಂಭವಾಗಿದ್ದು, ರೈತರಿಗಷ್ಟೇ ಅಲ್ಲ ರೈತರ ಮಕ್ಕಳಿಗೂ ಕೃಷಿಯ ಬಗ್ಗೆ ನಿರಾಸಕ್ತಿ ಮೂಡುತ್ತಿದೆ. ಗ್ರಾಮೀಣ ಭಾಗದ ಜನ ನಗರಗಳತ್ತ ವಲಸೆ ಹೋಗುತ್ತಿದ್ದಾರೆ.
ಇಂತಹ ಸ್ಥಿತಿಯಲ್ಲಿ ಕೃಷಿಯನ್ನು ಲಾಭದಾಯಕವಾಗಿಸಬೇಕಿದೆ. ಆ ಮೂಲಕ ಆಹಾರ ಪದಾರ್ಥಗಳ ಉತ್ಪಾದನೆಯನ್ನು ಹೆಚ್ಚಿಸುವ ಸವಾಲನ್ನು ಸ್ವೀಕರಿಸಬೇಕಾಗಿದೆ. ಇಲ್ಲದೇಇದ್ದರೆ ಮುಂದಿನ ದಿನಗಳಲ್ಲಿ ಹಸಿವಿನ ಸಂಕಟ ಮತ್ತಷ್ಟು ಹೆಚ್ಚಾಗಲಿದೆ.
ಉತ್ಪಾದನೆ ಹೆಚ್ಚಾದ ಮಾತ್ರಕ್ಕೆ ಹಸಿವುಮುಕ್ತ ಜಗತ್ತು ರೂಪುಗೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಇಂದು ವಿಶ್ವದಾದ್ಯಂತ ಆಹಾರ ಪದಾರ್ಥಗಳುಅಪಾರ ಪ್ರಮಾಣದಲ್ಲಿ ವ್ಯರ್ಥವಾಗುತ್ತಿರುವುದು ಬೆಳಕಿಗೆ ಬಂದಿದೆ. ಬೆಳೆದ ಮೂರನೇ ಒಂದು ಭಾಗದಷ್ಟು ಆಹಾರ ಪದಾರ್ಥ ಸರಿಯಾಗಿ ಬಳಕೆಯಾಗದೆ ಹಾಳಾಗುತ್ತಿದೆ ಎಂದು ವರದಿಗಳು ಹೇಳುತ್ತವೆ. ಆಹಾರ ಪದಾರ್ಥಗಳ ರಕ್ಷಣೆ, ಪೂರೈಕೆ ಹಾಗೂ ಬಳಕೆಯಲ್ಲಿ ಸಹ ಶಿಸ್ತು, ಸಂಯಮವನ್ನು ಕಾಯ್ದುಕೊಳ್ಳಬೇಕಾದ ಅಗತ್ಯ ಇದೆ.
ಹಸಿವು ನೀಗಿಸಲು ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು, ಸಂಘ ಸಂಸ್ಥೆಗಳು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿವೆ. ನಮ್ಮ ಸರ್ಕಾರವು ಅನ್ನಭಾಗ್ಯದಂತಹ ಯೋಜನೆಯನ್ನು ಜಾರಿಗೆ ತಂದಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸುವ ಕೆಲಸ ಮಾಡುತ್ತಿದೆ. ಅಕ್ಷರ ದಾಸೋಹದ ಮೂಲಕ ಶಾಲಾ ಮಕ್ಕಳ ಹಸಿವನ್ನು ನೀಗಿಸುವ ಪ್ರಯತ್ನ ನಡೆದಿದೆ. ಅದರೊಟ್ಟಿಗೆ ದಕ್ಷಿಣ ಭಾರತದ ಹಲವಾರು ದೇವಾಲಯಗಳಲ್ಲಿ ಪ್ರತಿದಿನ ಅನ್ನಸಂತರ್ಪಣೆಯಂತಹ ಕಾರ್ಯಕ್ರಮಗಳು ನಡೆಯುತ್ತವೆ. ಹಲವು ಸಂಘ ಸಂಸ್ಥೆಗಳು ಸಹ ಬಡವರ ಹಸಿವನ್ನು ನೀಗಿಸುವ ಸಲುವಾಗಿ ಕೆಲಸ ಮಾಡುತ್ತಿವೆ.
ಆಹಾರ ಪದಾರ್ಥಗಳ ಪೋಲು ತಪ್ಪಿಸುವ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಬೇಕು. ಹಸಿವು ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕನೂ ಕಾರ್ಯೋನ್ಮುಖವಾಗಬೇಕಿದೆ. ಕೃಷಿಯಲ್ಲಿ ತೊಡಗಲು ಯುವಕರಿಗೆ ಉತ್ತೇಜನ, ರೈತರಿಗೆ ಅಗತ್ಯ ಆರ್ಥಿಕ ಸಹಾಯ ದೊರೆಯಬೇಕಿದೆ. ತಂತ್ರಜ್ಞಾನ ಬಳಕೆ, ಸಮಗ್ರ ಕೀಟ ನಿರ್ವಹಣೆ ಮೂಲಕ ಅಧಿಕ ಇಳುವರಿಗೆ ಕ್ರಮ ಕೈಗೊಳ್ಳಬೇಕಿದೆ. ಸಣ್ಣ ರೈತರಿಗೆ ನೆರವಾಗಲು ಸೂಕ್ತ ಯೋಜನೆಗಳನ್ನು ರೂಪಿಸಬೇಕಾದ ಅಗತ್ಯವೂ ಇದೆ.
ರೈತರಲ್ಲಿ ಉಪಕಸುಬನ್ನು ಹೆಚ್ಚಾಗಿ ಪ್ರೋತ್ಸಾಹಿಸಬೇಕು. ಕೃಷಿ ಯಂತ್ರೋಪಕರಣಗಳನ್ನು ಕೃಷಿಯೇತರ ಚಟುವಟಿಕೆಗೂ ಬಳಸುವುದನ್ನು ಕಲಿಸಬೇಕು. ಕೃಷಿ ಕ್ಷೇತ್ರದಲ್ಲಿನ ಆವಿಷ್ಕಾರ ಮತ್ತು ಸಂಶೋಧನೆಗಳು ರೈತರಿಗೆ ಪ್ರಯೋಜನಕಾರಿಯಾಗಿರಬೇಕು. ಕೃಷಿಯನ್ನು ಉನ್ನತ ಶಿಕ್ಷಣವೆಂದು ಪರಿಗಣಿಸಬೇಕು. ಜತೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲೂ ಕೃಷಿಯ ಬಗ್ಗೆ ಮಾಹಿತಿ ಅಳವಡಿಸಬೇಕು. ಒಟ್ಟಾರೆ, ಕೃಷಿಯ ಬಗೆಗಿನ ಆಕರ್ಷಣೆ ಹೆಚ್ಚಿಸಬೇಕು. ಆಗ ಮಾತ್ರ ಕೃಷಿ ಲಾಭದಾಯಕವಾಗಲು ಸಾಧ್ಯ. ಉತ್ಪಾದನೆ ಅಧಿಕವಾಗಿ, ಹಸಿವಿನ ಸಂಕಟ ನಿವಾರಣೆಯಾಗಲು ಸಾಧ್ಯ.
ಲೇಖಕ: ಶಿಕ್ಷಣ ಸಂಯೋಜಕ, ಚನ್ನಪಟ್ಟಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.