ADVERTISEMENT

ಸಂಗತ | ಆಟವಲ್ಲ ಇದು ಮೋಸದ ಕೂಟ

ಆನ್‌ಲೈನ್ ಗೇಮ್ ಮಾಯೆಗೆ ಸಿಲುಕಿದ ಕೆಲವು ಯುವಕ–ಯುವತಿಯರ ಬದುಕು ಮೂರಾಬಟ್ಟೆಯಾಗಿದೆ

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 15 ಅಕ್ಟೋಬರ್ 2024, 23:00 IST
Last Updated 15 ಅಕ್ಟೋಬರ್ 2024, 23:00 IST
   

ವಿದ್ಯಾರ್ಥಿಗಳಿಗೆ ಮಾದಕವಸ್ತು ವ್ಯಸನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯು ಅಂದು ಕೈಜೋಡಿಸಿದ್ದವು. ‘ವ್ಯಸನಮುಕ್ತ ಸಮಾಜ’ದ ಕುರಿತು ಮಾಹಿತಿ ನೀಡುತ್ತಿದ್ದ ಸಂದರ್ಭ. ಹುರುಪಿನಿಂದ ಸಂವಾದಿಸುತ್ತಿದ್ದ ಸಂಪನ್ಮೂಲ ವ್ಯಕ್ತಿಗಳು ಕಡೆಯಲ್ಲಿ ಒಬ್ಬ ವಿದ್ಯಾರ್ಥಿನಿ ಪ್ರಶ್ನೆಗೆ ತಬ್ಬಿಬ್ಬಾಗಿ ನಿರುತ್ತರರಾದರು! ಆಕೆ ದೃಢವಾಗಿ ‘ಮಾದಕವಸ್ತುಗಳನ್ನು ಉಪಯೋಗಿಸಬೇಡಿ ಅಂತ ವಿದ್ಯಾರ್ಥಿಗಳಿಗೋ ಸಾರ್ವಜನಿಕರಿಗೋ ಹೀಗೆಲ್ಲಾ ಮನವರಿಕೆ ಮಾಡುವ ಬದಲು ಅವುಗಳ ತಯಾರಿಕೆ, ಸಾಗಣೆ ಮತ್ತು ಮಾರಾಟಕ್ಕೆ ಅವಕಾಶವೇ ಆಗದಂತೆ ಕಟ್ಟುನಿಟ್ಟಾಗಿ ಮೂಲದಲ್ಲಿಯೇ ನಿರ್ಬಂಧಿಸ
ಬಹುದಲ್ಲವೇ?’ ಎಂದಳು. ಉಳಿದ ವಿದ್ಯಾರ್ಥಿಗಳೂ ದನಿಗೂಡಿಸಿ ‘ಕಲಬೆರಕೆ ಪದಾರ್ಥಗಳು, ಮಾಲಿನ್ಯ
ಕಾರಕಗಳು, ಪುನರ್ಬಳಕೆ ಮಾಡಲಾಗದ ಪ್ಲಾಸ್ಟಿಕ್, ಅಸಭ್ಯ ವಿಡಿಯೊ ದೃಶ್ಯಗಳು, ಆನ್‌ಲೈನ್ ಗೇಮ್, ಕ್ರಿಪ್ಟೊಕರೆನ್ಸಿ... ಇಂಥವುಗಳನ್ನು ಮೂಲದಲ್ಲಿಯೇ ನಿರ್ಬಂಧಿಸಿದರೆ ಜನ ನೆಮ್ಮದಿಯಿಂದ ಬದುಕ ಬಹುದಲ್ಲವೇ?’ ಎಂದರು.

ನಾಡಿನ ಶಕ್ತಿಯಾಗಬೇಕಾದ ಎಳೆಯರು ನಡೆ ಯುವ ಹಾದಿಯಲ್ಲಿ ಬೆಳಕಿರಬೇಕು. ಆದರೆ ಕೆಲವೆಡೆ ಕಿರಾಣಿ ಅಂಗಡಿಗಳಲ್ಲೂ ಲಭ್ಯವಾಗುತ್ತಿರುವ ಮಾದಕವಸ್ತುಗಳು ಪ್ರೌಢಶಾಲಾ ಮಕ್ಕಳನ್ನು ಸಹ ಸೆಳೆಯುತ್ತಿರುವುದು ಪೋಷಕರನ್ನು ಬೆಚ್ಚಿಬೀಳಿಸುತ್ತಿದೆ. ಇದೀಗ ಎಲ್ಲಕ್ಕಿಂತಲೂ ಅಪಾಯಕಾರಿಯಾದ ಆನ್‌ಲೈನ್ ಗೇಮ್‌ಗಳ ಮಾಯೆಗೆ ಹದಿಹರೆಯ ದವರ ಬದುಕು-ಭವಿಷ್ಯ ಬಲಿಯಾಗುತ್ತಿದೆ.  ಈಚಿನ ದಿನಗಳಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ನಡೆದ ಕೆಲವು ಅಧಿಕೃತ, ನೈಜ ಘಟನೆಗಳಿವು:

ಉತ್ತಮ ಶ್ರೇಣಿಯಲ್ಲಿ ಅಂಕ ಗಳಿಸುತ್ತಿದ್ದ ಶಿಸ್ತಿನ ವಿದ್ಯಾರ್ಥಿಯೊಬ್ಬ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದ. ಇದನ್ನು ಕೇಳಿದವರಿಗೆ ನಂಬಲೇ ಆಗಲಿಲ್ಲ. ಕಳಪೆ ಫಲಿತಾಂಶಕ್ಕಿದ್ದ ಕಾರಣವನ್ನು ಅವನ ತಂದೆ ಬಿಚ್ಚಿಟ್ಟ ಪರಿ, ಅವನ ಬಗ್ಗೆ ಕಾಳಜಿ ವಹಿಸುತ್ತಿದ್ದ ಉಪನ್ಯಾಸಕರಿಗೂ ಅಚ್ಚರಿ ತಂದಿತ್ತು. ಪರೀಕ್ಷೆಯ ಹೊಸ್ತಿಲಲ್ಲಿ ಗೇಮ್ ಆಡುವ ಗೀಳಿಗೆ ಮಗ ಜಾರಿಬಿಟ್ಟಿದ್ದ. ಎರಡು ಗಂಟೆಯ ತಡರಾತ್ರಿಯಲ್ಲೂ ಬೆಡ್‌ಶೀಟ್ ಒಳಗಡೆ ಮೊಬೈಲ್ ಆನ್ ಇರುತ್ತಿತ್ತು! ‘ನಿದ್ದೆಗೆಟ್ಟು ಅಸ್ವಸ್ಥನಾಗಿದ್ದ ಮಗನ ಫಲಿತಾಂಶ ನಿರೀಕ್ಷಿತವೇ, ಸದ್ಯ ಅವನುಳಿದರೆ ಅಷ್ಟೇ ಸಾಕು!’ ಎಂದರು ತಂದೆ.

ADVERTISEMENT

ಪದವಿ ಕಾಲೇಜಿನಲ್ಲಿ ಓದುತ್ತಿದ್ದ ಬುದ್ಧಿವಂತ ವಿದ್ಯಾರ್ಥಿಯೊಬ್ಬ ಆನ್‌ಲೈನ್ ಆಟದ ಬೆನ್ನುಬಿದ್ದು ಮೊನ್ನೆ ತುಂಗಾ ನದಿಯಲ್ಲಿ ಶವವಾಗಿ ತೇಲುತ್ತಿದ್ದ. ‘ಸಾಲ ತೀರಿಸಲು ಈ ಜನ್ಮ ಸಾಲದೆಂದು ಸಾವಿನ ಮೊರೆ ಹೋಗುತ್ತಿದ್ದೇನೆ’ ಎಂದಿತ್ತು ಅವನ ಡೆತ್‌ನೋಟ್! ಆನ್‌ಲೈನ್ ಗೇಮ್‌ಗಾಗಿ ಇದೇ ಕೊನೆಯ ಸಾವಾಗಲಿ ಎಂದು ಹಿರಿಯರು ರೋದಿಸಿದ್ದರು, ಹಾಗಾಗಲಿಲ್ಲ.

ದೊಡ್ಡಮೊತ್ತದ ಡೊನೇಷನ್ ತೆತ್ತು ಡಿಪ್ಲೊಮಾ ಓದಲು ಹೋಗುತ್ತಿದ್ದ ಇನ್ನೊಬ್ಬ ಹಳ್ಳಿಹುಡುಗ ಕೂಡ ಲಕ್ಷಗಟ್ಟಲೆ ಸಾಲ ಮಾಡಿಕೊಂಡು, ಮನೆಗೇ ಬಾರದೆ ಕಣ್ತಪ್ಪಿಸಿ ಅಲೆಯುತ್ತಾ ಹೆತ್ತವರನ್ನು ಕಣ್ಣೀರಿನಲ್ಲಿ ಕೆಡವಿದ್ದಾನೆ. ಮತ್ತೊಬ್ಬ ಯುವಕ ತನ್ನ ಕಾಲೇಜು ದಿನಗಳಲ್ಲಿ ತುಂಬಾ ಜವಾಬ್ದಾರಿಯುತ ವಿದ್ಯಾರ್ಥಿ. ಕಡುಕಷ್ಟವನ್ನು ಗೆದ್ದು ಸಣ್ಣ ಪ್ರಾಯದಲ್ಲೇ ಬ್ಯಾಂಕ್ ಉದ್ಯೋಗ ಪಡೆದು ಯಶಸ್ವಿಯಾಗಿ ಬದುಕು ಕಟ್ಟಿಕೊಂಡಿದ್ದವ. ಆದರೆ ಆನ್‌ಲೈನ್ ಗೇಮ್ ಗೀಳು ಶುರುವಾಗುತ್ತಿದ್ದಂತೆ ಬ್ಯಾಂಕ್‌ನ ಸುಮಾರು ಒಂದು ಕೋಟಿ ರೂಪಾಯಿಯಷ್ಟು ಅವ್ಯವಹಾರದಲ್ಲಿ ಭಾಗಿಯಾಗಿ ಜೈಲು ಸೇರಿದ್ದ, ಜಾಮೀನು ಪಡೆಯುತ್ತಲೇ ಸಾವಿಗೆ ಶರಣಾದ. ಹಾಗೆಯೇ ಸಾತ್ವಿಕ ಕುಟುಂಬಕ್ಕೆ ಸೇರಿದ ಯುವತಿಯೊಬ್ಬಳು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದವಳು ದೊಡ್ಡಪ್ರಮಾಣದ ಸಾಲದಲ್ಲಿ ಬೀಳುತ್ತಿದ್ದಂತೆ ನೇಣಿಗೆ ಗೋಣೊಡ್ಡಿದಳು. ಹೀಗೊಬ್ಬ ಸಣ್ಣ ಉದ್ದಿಮೆಯಲ್ಲಿ ಯಶಸ್ವಿಯಾಗಿ ನೆಮ್ಮದಿಯಲ್ಲಿ ಮುನ್ನಡೆದಿದ್ದ ಸಂಸಾರಸ್ಥನೂ ಜೀವನಾ ಧಾರಕ್ಕೆ ಇದ್ದ ಆಸ್ತಿಯನ್ನು ಮಾರಿಕೊಂಡು ಅಪಾರ ಪ್ರಮಾಣದ ಸಾಲಕ್ಕೆ ತುತ್ತಾಗಿ, ಬರಿಗೈ ದಾಸನಾಗಿಬಿಟ್ಟ.

ಈ ಎಲ್ಲಾ ಪ್ರಕರಣಗಳ ಹಿಂದೆಯೂ ಆನ್‌ಲೈನ್ ಗೇಮ್‌ಗಳ ಮಾಯಾಜಾಲ ಎಷ್ಟರಮಟ್ಟಿಗೆ ಪ್ರಭಾವ ಬೀರಿದೆ ಮತ್ತು ಅದು ಎಷ್ಟು ಗಂಭೀರವಾಗಿದೆ ಎಂಬುದು ಅರಿವಾಗುತ್ತದೆ.

ಡಿಜಿಟಲ್ ಕಾಲಘಟ್ಟದಲ್ಲಿ ಹಣಕಾಸು ವ್ಯವಹಾರ ಮಾಡಿದಾಗ ಅಥವಾ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದಾಗ ಉತ್ತೇಜಕವಾಗಿ ಸಿಗುವ ಗಿಫ್ಟ್ ವೋಚರ್‌ಗಳೆಂದರೆ, ಆನ್‌ಲೈನ್ ಗೇಮ್‌ಗಳ ಉಚಿತ ಆಫರ್ ಕೂಪನ್! ಮಕ್ಕಳು-ಯುವಕರು ದಾರಿ ತಪ್ಪಲು, ಹಣ ಕಳೆದುಕೊಳ್ಳಲು, ಸಂಕಷ್ಟದಲ್ಲಿ ಸಿಲುಕಲು ಇಷ್ಟು ಸಾಕು. ಆನ್‌ಲೈನ್ ಪೋರ್ಟಲ್‌ಗಳಲ್ಲಿ ಆನ್‌ಲೈನ್ ಗೇಮ್‌ ಜಾಹೀರಾತುಗಳದೇ ಹಾವಳಿ.

ಮೊಬೈಲ್‌ ಫೋನ್‌ ಹಿಡಿದ ಯುವಕರನ್ನು ಏಕಾಂತದ ಕತ್ತಲಿಗೆ ತಳ್ಳಿ ರಮ್ಮಿ, ಪಬ್ಜಿ, ಫೋರ್ಟ್‌ನೈಟ್ ಬ್ಯಾಟಲ್, ಮೈನ್‌ಕ್ರಾಫ್ಟ್, ಕಾಲ್ ಆಫ್ ಲೆಜೆಂಡ್ಸ್... ಹೀಗೆ ಸಾಲುಸಾಲು ಗೇಮ್‌ಗಳ ಅಡ್ಡಾದಲ್ಲಿ ದಿನವಿಡೀ ಕೆಡಹುವ ಮೋಸದ ಜಾಲವದು. ಜನಜಾಗೃತಿ ಮೂಡಿಸಬೇಕಾದವರು, ಜನಹಿತ ಕಾಯಬೇಕಾದವರು ಯಾರು? ವಿದ್ಯಾರ್ಥಿಗಳ ನೈತಿಕತೆ ಕುರಿತ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ. ಪ್ರಜೆಗಳನ್ನು ಮೋಸ, ವಂಚನೆ, ದುರಾಚಾರದಿಂದ ಮುಕ್ತಗೊಳಿಸಿ ಸನ್ನಡತೆಯತ್ತ ನಡೆಸಬೇಕಾದದ್ದು ತಾಯ್ತನದ ಆಡಳಿತದ ಹೊಣೆ ಗಾರಿಕೆಯೂ ಹೌದು.

ವ್ಯವಸ್ಥೆಯು ತೆರಿಗೆ, ವರಮಾನದ ಆದ್ಯತೆಯಾಚೆಗೂ ಗಮನಹರಿಸಿ, ಮೋಸದ ದಂಧೆಗಳಿಗೆ ಕಡಿವಾಣ ಹಾಕಬೇಕು, ಜನರ ಆರೋಗ್ಯ ಮತ್ತು ನೆಮ್ಮದಿಗೂ ದಾರಿ ತೋರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.