ಬಾಡಿಗೆ ಮನೆ ಬಿಡುವಾಗ ಅದರ ಮಾಲೀಕ ಸಣ್ಣಪುಟ್ಟ ರಿಪೇರಿ ಮಾಡಿಸಿ, ಮೊದಲಿದ್ದಂತೆ ಮನೆ ನಾಜೂಕಾಗಿಸಿ ಹೋಗಿ ಅಂತ ತಾಕೀತು ಮಾಡುವುದಿದೆ. ಮುಂದೆ ಬಾಡಿಗೆಗೆ ಬರುವವರಿಗೆ ಬರುತ್ತಲೇ ಮುಜುಗರವಾಗ ಬಾರದು, ಅವರೂ ತಂಗಿರುವಷ್ಟು ಕಾಲ ಕನಿಷ್ಠತಮ ಅಂದ ಚಂದ, ಅಚ್ಚುಕಟ್ಟುತನ ಆಸ್ವಾದಿಸಬೇಕೆನ್ನು ವುದು ಉದ್ದೇಶ. ಹೇಗೂ ಭೂಮಿ ನಮ್ಮ ಬಾಡಿಗೆ ಮನೆ! ಭಾವೀ ಪೀಳಿಗೆಯವರು ನಮ್ಮ ನಂತರದ ಬಾಡಿಗೆದಾರರು. ಜಗತ್ತಿನ 192 ದೇಶಗಳು ಒಗ್ಗೂಡಿ ‘ಭೂಮಿ ದಿನ ಜಾಲ’ದ (earth day network) ಅಡಿಯಲ್ಲಿ ಪ್ರತಿವರ್ಷ ಏಪ್ರಿಲ್ 22ರಂದು ‘ಜಾಗತಿಕ ಭೂಮಿ ದಿನ’ ಹಮ್ಮಿಕೊಳ್ಳುತ್ತವೆ.
‘ಭೂಮಿ ದಿನ’ ಆಚರಣೆಯ ಕಥೆ ರೋಚಕ. ಇಸವಿ 1962. ಅಮೆರಿಕದ ವಿಸ್ಕಾನ್‍ಸಿನ್ ಪ್ರಾಂತ್ಯದ ಸೆನೆಟರ್ ಆಗಿದ್ದ ಗೆಲಾರ್ಡ್ ನೆಲ್ಸನ್ ರಾಜಕಾರಣಿ ಗಿಂತಲೂ ಮೂಲತಃ ಸಮರ್ಥ ಪರಿಸರವಾದಿ. ಭೂಗ್ರಹ ಅತೀವ ಮಾಲಿನ್ಯಕ್ಕೊಳಪಡುತ್ತಿದೆ ಎಂಬ ತಥ್ಯವನ್ನು ಅಮೆರಿಕ ಸರ್ಕಾರದ ಗಮನಕ್ಕೆ ತಂದರು. 1969ರಲ್ಲಿ ಸಿಯಾಟಲ್‍ನಲ್ಲಿ ನಡೆದ ಪರಿಸರ ರಕ್ಷಣೆ ಕುರಿತ ಸಮ್ಮೇಳನದಲ್ಲಿ ನೆಲ್ಸನ್ ಮಂಡಿಸಿದ ವಿಚಾರಧಾರೆಗಳು ವಿಶ್ವಮಟ್ಟದ ವಿಜ್ಞಾನಿಗಳನ್ನೂ ಪ್ರಭಾವಿಸಿದವು. ವರ್ಷಕ್ಕೊಂದು ದಿನವಾದರೂ ಗಂಭೀರವಾಗಿ ಭೂಮಿಯ ಹಿರಿಮೆ, ಅದನ್ನು ಜೋಪಾನ ಮಾಡುವ ಬಗ್ಗೆ ಚಿಂತಿಸೋಣ ಎಂದವರು ಸಲಹೆಯಿತ್ತರು. ಹಾಗಾಗಿ ಏಪ್ರಿಲ್ 22 ಭೂಮಿ ದಿನವಾಯಿತು. 1970ರಿಂದಲೂ ನಮ್ಮ ಭೂಮಿಯ ಅನನ್ಯತೆ, ಅದರ ಅಚ್ಚರಿಯ ಜೀವವೈವಿಧ್ಯ ಮೆಚ್ಚುವ ದಿಸೆಯಲ್ಲಿ ಈ ವಿಶಿಷ್ಟ ವಾರ್ಷಿಕ ಹಬ್ಬವನ್ನು ಸಂಭ್ರಮಿಸ ಲಾಗುತ್ತಿದೆ. ಮನೆ ಮಂದಿಯೆಲ್ಲ ಸೇರಿ ಸಡಗರಿಸ
ಬೇಕಾದ ಸಂದರ್ಭವಿದು.
ಭೂಮಿ ನಮ್ಮ ಏಕೈಕ ಮನೆ. ಮನೆಗಿಂತ ಪ್ರಶಸ್ತ ಸ್ಥಳವಿಲ್ಲ. ಈ ಬಾರಿಯ ಅಭಿಯಾನದ ಧ್ಯೇಯವಾಕ್ಯ ‘ನಮ್ಮ ಭೂಮಿ ಮರಳಿಪಡೆಯೋಣ. ನಾವು ಉಸಿರಾಡೋಣ’. ಈ ಸಂದರ್ಭದಲ್ಲಿ, ಅಲ್ಲಲ್ಲಿ ವಾಯುಗುಣ ಮತ್ತು ಪರಿಸರ ನ್ಯಾಯ, ವಾಯುಗುಣ ವೈಪರೀತ್ಯದಿಂದ ಉಲ್ಬಣಗೊಳ್ಳುವ ಮಾಲಿನ್ಯ, ಬಡತನ, ಆರ್ಥಿಕ ಹಿನ್ನಡೆ, ರಾಜಕೀಯ ಅಸ್ಥಿರತೆ, ಖಂಡಾಂತರ ವ್ಯಾಧಿಗಳಂತಹ ತೊಡಕುಗಳ ಕುರಿತು ವ್ಯಾಪಕ ಚರ್ಚೆ, ಸಂವಾದಗಳು ಏರ್ಪಡಲಿವೆ.
ಭೂಮಿ ಹಿಂಪಡೆಯಬೇಕಾದದ್ದು ನೈಸರ್ಗಿಕ ಜಗತ್ತನ್ನು ಸಲಹುವುದಕ್ಕಷ್ಟೇ ಅಲ್ಲ, ನಾವು ಅದರ ನಿವಾಸಿಗಳೆಂಬ ಕಾರಣಕ್ಕೆ. ಮಹಾತ್ಮ ಗಾಂಧಿ‘ಉತ್ತಮ ಮನುಷ್ಯ ಸಕಲ ಚರಾಚರ ವಸ್ತುಗಳಿಗೂ ಗೆಳೆಯನೆ’ ಎಂದರು. ಮದರ್ ತೆರೆಸಾ ಉದ್ಗರಿಸುತ್ತಿದ್ದರು: ‘ಉಪಯೋಗಿಸಬಹುದಾದ ಪದಾರ್ಥ ತ್ಯಾಜ್ಯವೆಂದು ಬಿಸಾಡಿದಾಗ ಮಾತ್ರ ನನಗೆ ಸಿಟ್ಟು ಬರುತ್ತದೆ’. ಗಮನಿಸ ಬೇಕಾದ್ದೇನೆಂದರೆ, ಭೂ ಪ್ರದೇಶದ ಜೀವಿಗಳ ಪೈಕಿ ಶೇ 20ರಷ್ಟು ಮಾತ್ರವೆ ಕಾಂಕ್ರೀಟುಮುಕ್ತ. ಅವು ರಸ್ತೆ, ಸೇತುವೆ, ಸಂಕೀರ್ಣ, ಮಾಲ್‍ಗಳ ಗೊಡವೆಯಿಲ್ಲದೆ ಬಿಡುಬೀಸನ್ನು ಆನಂದಿಸುತ್ತಿವೆ.
ವೇದಗಳಲ್ಲಿ ‘ದೇವತೆಗಳು’ ಕೂಡ ನಿಸರ್ಗ ನಿಯಮಗಳಿಗೆ ಅನುಸಾರ ವರ್ತಿಸಬೇಕೆನ್ನುವ ನಿಷ್ಠುರ ಕಟ್ಟುಪಾಡಿದೆ. ರೋಗಮುಕ್ತ, ಶುದ್ಧ ಮತ್ತು ಶಕ್ತಿಯುತ ಪರ್ಯಾವರಣಕ್ಕೆ ಶ್ರಮಿಸಿದಾಗಲೇ ವ್ಯಕ್ತಿಗೂ ಸಮಾಜಕ್ಕೂ ಶ್ರೇಯಸ್ಸು, ಅದೇ ಯಜ್ಞ. ಅಂದಹಾಗೆ ಕೊರೊನಾ ಖಂಡಾಂತರ ವ್ಯಾಧಿಯು ಭೂಮಿ ಜಾಗತಿಕ ಮಟ್ಟದ ಆತಂಕದಲ್ಲಿದೆ ಎನ್ನುವುದಕ್ಕೆ ಪ್ರಕೃತಿಯೇ ಹೊರಡಿಸಿರುವ ಫತ್ವಾ.
ಒಂದು ಮರ ಅನಾರೋಗ್ಯಪೀಡಿತವಾದರೆ ಗಮನಿಸಬೇಕಾದದ್ದು ಅದರ ಕಾಂಡ ಅಥವಾ ಕೊಂಬೆ ಗಳನ್ನಲ್ಲ, ಅದರ ಬೇರುಗಳನ್ನು. ಮಹಾಭಾರತದ ಕರ್ತೃ ಮಹರ್ಷಿ ವೇದವ್ಯಾಸರು ಭೂಮಿ ಎಲ್ಲಕ್ಕೂ ದೊಡ್ಡದು ಎನ್ನುತ್ತಾರೆ. ಜನಪದರಿಗೋ ಪ್ರತಿದಿನ ಬೆಳಿಗ್ಗೆ ಎದ್ದೊಡನೆ ಎಳ್ಳು, ಜೀರಿಗೆ, ಕಬ್ಬು ಬೆಳೆಯುವ ಭೂಮಿ ನೆನಪಿಸಿಕೊಳ್ಳುವ ಮಮಕಾರ. 1880ರ ಲಾಗಾಯ್ತಿನಿಂದ ಭೂಮಿಯ ಸರಾಸರಿ ತಾಪಮಾನ 0.8 ಸೆಲ್ಸಿಯಸ್ ಏರಿದೆ. ಇದರ ಪರಿಣಾಮ ಗೊತ್ತೇ ಇದೆ. ಹಿಮಮುಕುಟಗಳು ಸೂರ್ಯನಿಂದ ಬರುವ ಹೆಚ್ಚುವರಿ ವಿಕಿರಣಗಳನ್ನು ಪ್ರತಿಫಲಿಸಿ ಭೂಮಿಯ ತಾಪವನ್ನು ನಿಯಂತ್ರಿಸುತ್ತವೆ. ನಮ್ಮಿಂದ ಕೈಯಾರೆ ಹಿಮಪ್ರದೇಶಗಳು ಕರಗಿ ಸಾಗರದ ಮಟ್ಟ ಹೆಚ್ಚಿ ಚಂಡ ಮಾರುತ, ಸುನಾಮಿ, ತೀರ ಪ್ರದೇಶಗಳು ಜಲಾವೃತವಾಗಬೇಕೇ?
ಮನುಷ್ಯೇತರ ಪ್ರಾಣಿಗಳಿಂದಂತೂ ಪರಿಸರಕ್ಕೆ ಧಕ್ಕೆಯಾಗಿಲ್ಲ. ಅವು ಎಲ್ಲ ಆಯಾಮಗಳಲ್ಲೂ ಅತಿಯಾಸೆ, ಅತಿಕ್ರಮಣವಿಲ್ಲದೆ ಜೀವಿಸುತ್ತ ತಮ್ಮ ಹೊಣೆ ಮೆರೆದಿವೆ. ಇನ್ನು ಸಸ್ಯಗಳಾದರೋ ಪ್ರಾಣಿಗಳಿಗೂ ಮುನ್ನವೆ ಈ ಗ್ರಹದಲ್ಲಿ ಉಗಮಿಸಿವೆ. ಅಕ್ಷರಶಃ ಮೂಲನಿವಾಸಿಗಳಾದ ಅವು ಮನುಷ್ಯ ಮತ್ತು ಪ್ರಾಣಿಗಳನ್ನು ಪೋಷಿಸುತ್ತ ಬಂದಿವೆ.
ನಾವಿರದ ನಾಳೆಗಳು ನಾವಿಂದು ನಿಭಾಯಿಸುವ ನಮ್ಮ ಜವಾಬ್ದಾರಿಯನ್ನು ಮೆಚ್ಚುವಂತಿರಬೇಕು. ನಮ್ಮ ದಿನನಿತ್ಯದ ಅಗತ್ಯಗಳಿಗೆ ಸಾಧ್ಯವಾದಷ್ಟು ಪರಿಸರಸ್ನೇಹಿ ಘಟಕಗಳುಳ್ಳ ಉತ್ಪನ್ನಗಳ ಬಳಕೆ, ಮರುಬಳಕೆ, ಸೌರಶಕ್ತಿ ಹಾಗೂ ಸ್ನಾಯುಶಕ್ತಿ ಅವಲಂಬನೆಯಂತಹ ದಿಟ್ಟ ಹೆಜ್ಜೆಗಳನ್ನಿಡುವುದೇ ಜಾಣ್ಮೆ. ಇಂಗಾಲಮುಕ್ತ ಭವಿತವ್ಯ ಕೈಗೂಡಲು ಕಟ್ಟಿಗೆ, ಕಲ್ಲಿದ್ದಲು, ಪೆಟ್ರೋಲು, ನೈಸರ್ಗಿಕ ಅನಿಲಗಳ ಮಿತವ್ಯಯದ ಹೊರತಾಗಿ ಪರಿಸರ ರಕ್ಷಣೆ ಅಸಂಭವ. ರಾಸಾಯನಿಕಗಳ ಉಪಯೋಗ ನಿಯಂತ್ರಿಸಿದರೆ ಭೂಮಿಯ ಆರೋಗ್ಯಕ್ಕೆ ಆನೆಬಲವೇ ಹೌದು.
ಒಂದು ತಪ್ಪು ಅದನ್ನು ತಿದ್ದಿಕೊಳ್ಳುವುದಕ್ಕೆ ವಿಮುಖರಾಗದ ತನಕ ಅದು ಗುರುತರ ಲೋಪ ವಾಗದು. ಇಳೆಗೆ ಮೊದಲಿನ ಕಳೆ ಮೂಡಿಸುವುದು ಹೊಣೆಗೂ ಮೀರಿ ಅಪೂರ್ವ ಅವಕಾಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.